Tuesday, 26th November 2024

Eknath Shinde: ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ ಏಕನಾಥ್‌ ಶಿಂಧೆ ರಾಜೀನಾಮೆ; ಮಿತ್ರ ಪಕ್ಷಗಳ ಮುಂದಿನ ನಡೆ ಇನ್ನೂ ನಿಗೂಢ

Eknath Shinde

ಮುಂಬೈ: ಮಹಾರಾಷ್ಟ್ರದಲ್ಲಿ(Maharashtra Politics) ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರ ಅಭೂತಪೂರ್ವ ಗೆಲುವು ಸಾಧಿಸಿದ ನಂತರ ಇದೀಗ ಮಿತ್ರಪಕ್ಷಗಳಲ್ಲಿ ಸಿಎಂ ಸ್ಥಾನಕ್ಕಾಗಿ ಹಗ್ಗ ಜಗ್ಗಾಟ ಮುಂದುವರಿದಿದೆ. ಈ ನಡುವೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ(Eknath Shinde) ಅವರು ಮಂಗಳವಾರ ನವೆಂಬರ್ 26 ರಂದು ರಾಜೀನಾಮೆ ನೀಡಿದ್ದಾರೆ. ಆದರೆ, ಹೊಸ ನಾಯಕ ಅಧಿಕಾರ ವಹಿಸಿಕೊಳ್ಳುವವರೆಗೂ ಅವರು ಹಂಗಾಮಿ ಸಿಎಂ ಆಗಿ ಮುಂದುವರಿಯಲಿದ್ದಾರೆ. ಶಿವಸೇನೆ (ಶಿಂಧೆ ಬಣ)ದ ಮೂಲಗಳು ಶಿಂಧೆ ಅವರು ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ದು, ಹೊಸ ಸಚಿವ ಸಂಪುಟ ಪ್ರಮಾಣ ವಚನ ಸ್ವೀಕರಿಸುವವರೆಗೆ ಪರಿವರ್ತನೆಯ ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಮುಂಬೈನ ರಾಜಭವನದಲ್ಲಿ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರಿಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಉಪ ಮುಖ್ಯಮಂತ್ರಿಗಳಾದ ಅಜಿತ್ ಪವಾರ್ ಮತ್ತು ದೇವೇಂದ್ರ ಫಡ್ನವಿಸ್ ಕೂಡ ಈ ವೇಳೆ ಉಪಸ್ಥಿತರಿದ್ದರು.

ಬಿಜೆಪಿ, ಶಿವಸೇನೆ (ಶಿಂಧೆ) ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಒಳಗೊಂಡ ಮಹಾಯುತಿ ಮೈತ್ರಿಕೂಟವು ಇತ್ತೀಚಿನ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದೆ. ಮೈತ್ರಿಕೂಟವು 288 ಸ್ಥಾನಗಳಲ್ಲಿ 235 ಸ್ಥಾನಗಳನ್ನು ಗಳಿಸಿತು, ಬಿಜೆಪಿ 132 ಸ್ಥಾನಗಳನ್ನು ಗೆಲ್ಲುವ ಮೂಲಕ ಮುನ್ನಡೆ ಸಾಧಿಸಿದೆ. ಶಿಂಧೆ ಸೇನೆ 57 ಸ್ಥಾನಗಳನ್ನು ಗೆದ್ದರೆ, ಅಜಿತ್ ಪವಾರ್ ಅವರ ಎನ್‌ಸಿಪಿ 41 ಸ್ಥಾನಗಳನ್ನು ಪಡೆದುಕೊಂಡಿದೆ.

ದೆಹಲಿಯಲ್ಲಿ ಮೈತ್ರಿಕೂಟದ ನಾಯಕರ ಮಹತ್ವದ ಸಭೆ ನಡೆದಿದ್ದು, ಮುಂದಿನ ಸಿಎಂ ಆಯ್ಕೆಯಲ್ಲಿ ಗೃಹ ಸಚಿವ ಅಮಿತ್ ಶಾ ಪ್ರಮುಖ ಪಾತ್ರ ವಹಿಸಿದ್ದಾರೆ. ವರದಿಗಳ ಪ್ರಕಾರ ಬಿಜೆಪಿಯು ದೇವೇಂದ್ರ ಫಡ್ನವೀಸ್‌ ಸಿಎಂ ಸ್ಥಾನ ನೀಡಲು ಉತ್ಸುಕವಾಗಿದೆ. ಆದರೆ ಶಿವಸೇನೆಯ ಶಾಸಕರು ಶಿಂಧೆ ಅವರನ್ನು ಉಳಿಸಿಕೊಳ್ಳಲು ಲಾಬಿ ಮಾಡುತ್ತಿದ್ದಾರೆ. ಅದೂ ಅಲ್ಲದೇ ಅವರ ನಾಯಕತ್ವದಲ್ಲೇ ಈ ಚುನಾವಣೆಯನ್ನು ಎದುರಿಸಲಾಯಿತು.

2019ರ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಮತ್ತು ಆಗಿನ ಅವಿಭಜಿತ ಶಿವಸೇನೆ ಬಹುಮತ ಗಳಿಸಿತ್ತು. ಆದರೆ, ಮೈತ್ರಿ ಮುರಿದುಬಿದ್ದು ರಾಜ್ಯವನ್ನು ರಾಜಕೀಯ ಅಸ್ಥಿರತೆಗೆ ದೂಡಿದೆ. ಕಳೆದ ಐದು ವರ್ಷಗಳಲ್ಲಿ ಮಹಾರಾಷ್ಟ್ರ ಬಿಜೆಪಿಯ ದೇವೇಂದ್ರ ಫಡ್ನವಿಸ್, ಶಿವಸೇನೆಯ (ಯುಬಿಟಿ) ಉದ್ಧವ್ ಠಾಕ್ರೆ ಮತ್ತು ಶಿವಸೇನೆಯ (ಶಿಂಧೆ) ಏಕನಾಥ್ ಶಿಂಧೆ ಹೀಗೆ ಒಟ್ಟು ಮೂರು ಮುಖ್ಯಮಂತ್ರಿಗಳನ್ನು ಕಂಡಿದೆ: ಮಹಾರಾಷ್ಟ್ರದ ರಾಜಕೀಯ ನಾಯಕತ್ವವನ್ನು ರೂಪಿಸುವಲ್ಲಿ ಮುಂದಿನ ಕೆಲವು ದಿನಗಳು ನಿರ್ಣಾಯಕವಾಗಿವೆ.

ಈ ಸುದ್ದಿಯನ್ನೂ ಓದಿ: Ajit Pawar: ಮಹಾರಾಷ್ಟ್ರದ ಮುಂದಿನ ಸಿಎಂ ಅಜಿತ್‌ ಪವಾರ್‌? ರಿಸಲ್ಟ್‌ಗೂ ಮುನ್ನ ರಾರಾಜಿಸಿದ ಪೋಸ್ಟರ್‌