ಬೆಂಗಳೂರು: ಜಾತಿ ವ್ಯವಸ್ಥೆಯಿಂದಲೇ ಅಸಮಾನತೆ-ಮನುಷ್ಯ ತಾರತಮ್ಯ ಸೃಷ್ಟಿಯಾಗಿದೆ. ಸಂವಿಧಾನ ವಿರೋಧಿಗಳು ಮತ್ತು ಮನುಸ್ಮೃತಿ ಬಗ್ಗೆ ಎಚ್ಚರವಹಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಕರೆ ನೀಡಿದರು. ಸಮಾಜ ಕಲ್ಯಾಣ ಇಲಾಖೆ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ 75ನೇ ವರ್ಷದ ಸಂವಿಧಾನ ಅಂಗೀಕರಣ ದಿನೋತ್ಸವವನ್ನು ಉದ್ಘಾಟಿಸಿ, ಪ್ರಜಾಪ್ರಭುತ್ವ ದಿನದ ಯಶಸ್ಸಿಗೆ ಶ್ರಮಿಸಿದ ಜಿಲ್ಲಾಧಿಕಾರಿಗಳು ಮತ್ತು ನಾಗರಿಕ ಸಂಘಟನೆಗಳ ಮುಖಂಡರಿಗೆ ಪ್ರಶಸ್ತಿ ಪತ್ರವನ್ನು ವಿತರಿಸಿ ಅವರು ಮಾತನಾಡಿದರು.
ನಾನು ಮುಖ್ಯಮಂತ್ರಿ ಆಗಿದ್ದೇ ಈ ಸಂವಿಧಾನ ಬಲದಿಂದ ಎಂದು ತಿಳಿಸಿದ ಸಿಎಂ ಸಿದ್ದರಾಮಯ್ಯ ಅವರು, ವಿಶ್ವದಲ್ಲಿ ಅತೀ ದೀರ್ಘಕಾಲ ಜಾರಿಯಲ್ಲಿರುವ ಸಂವಿಧಾನ ನಮ್ಮದಾಗಿದೆ. ಸಂವಿಧಾನ ಜಾರಿ ಸಭೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಎಚ್ಚರಿಕೆಯನ್ನು ನಾವ್ಯಾರೂ ಮರೆಯಬಾರದು ಎಂದರು.
ಎಷ್ಟೇ ಒಳ್ಳೆ ಸಂವಿಧಾನ ನಮ್ಮದಾಗಿದ್ದರೂ ಅದು ಕೆಟ್ಟವರ ಕೈಗೆ ಹೋದರೆ ಪರಿಣಾಮವೂ ಕೆಟ್ಟದಾಗಿರುತ್ತದೆ ಎನ್ನುವ ಎಚ್ಚರಿಕೆ ನೀಡಿದ್ದಾರೆ. ಸಂವಿಧಾನದ ಮೌಲ್ಯಗಳನ್ನು ಪಾಲಿಸುವವರ ಕೈಯಲ್ಲಿ ಈ ಸಂವಿಧಾನ ಇದ್ದಾಗ ಮಾತ್ರ ಸಾರ್ಥಕತೆ ಬರುತ್ತದೆ ಎಂದು ಬಾಬಾ ಸಾಹೇಬರು ಹೇಳಿದ್ದರು. ಆದ್ದರಿಂದ ಈ ಸಂವಿಧಾನದ ಮೌಲ್ಯಗಳನ್ನು ವಿರೋಧಿಸುವವರ ಕೈಗೆ ಅಧಿಕಾರ ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Credit Card: ಕ್ರೆಡಿಟ್ ಕಾರ್ಡ್ ಪಡೆಯುವ ಮೊದಲು ಈ ಸಂಗತಿ ತಿಳಿದಿರಲಿ!
ಆರ್ಥಿಕ ಅಸಮಾನತೆ, ಸಾಮಾಜಿಕ ಅಸಮಾನತೆ ಇರುವ ಸಮಾಜಕ್ಕೆ ನಾವು ಕಾಲಿಡುತ್ತಿದ್ದೇವೆ. ಆದ್ದರಿಂದ ರಾಜಕೀಯ ಸ್ವಾತಂತ್ರ್ಯದ ಜತೆಗೆ ಆರ್ಥಿಕ ಸ್ವಾತಂತ್ರ್ಯವನ್ನೂ ಒದಗಿಸಿಕೊಳ್ಳಬೇಕಿದೆ. ಸಂವಿಧಾನವನ್ನು ಅರ್ಥ ಮಾಡಿಕೊಳ್ಳುವುದು, ಪಾಲಿಸುವುದು ಎಂದರೆ ಸಾಮಾಜಿಕ ನ್ಯಾಯ, ಸಮಾನತೆ, ಬ್ರಾತೃತ್ವವನ್ನು ಪಾಲಿಸಬೇಕು ಎಂದರು.
ನಮ್ಮ ದೇಶದಲ್ಲಿ ಸಂವಿಧಾನ ವಿರೋಧಿಗಳೂ ಇದ್ದಾರೆ
ನಮ್ಮ ದೇಶದಲ್ಲಿ ಸಂವಿಧಾನ ವಿರೋಧಿಗಳೂ ಇದ್ದಾರೆ. ಈ ಎಚ್ಚರಿಕೆ ನಮಗೆ ಇರಬೇಕು. ಸಂವಿಧಾನ ಜಾರಿಗೆ ಹಿಂದೂ ಮಹಾಸಭಾದ ಸಾವರ್ಕರ್, ಗೋಳ್ವಾಳ್ಕರ್ ಕೂಡ ವಿರೋಧಿಸಿದ್ದರು. ಬಿಜೆಪಿಯ ಮಾತೃಪಕ್ಷ ಆರ್‌ಎಸ್‌ಎಸ್ (RSS) ಕೂಡ ನಮ್ಮ ಸಂವಿಧಾನ ಜಾರಿಯನ್ನು ವಿರೋಧಿಸಿದ್ದರು ಎಂದು ಆರೋಪಿಸಿದರು.
ಬಾಬಾ ಸಾಹೇಬರ ಸಂವಿಧಾನ ಜಾರಿಗೂ ಮೊದಲು ಮನುಷ್ಯ-ಮನುಷ್ಯರನ್ನು ತಾರತಮ್ಯದಿಂದ ಶೋಷಿಸುವ, ಅಸಮಾನತೆಯನ್ನು ಆಚರಿಸುವ ಅನಾಗರಿಕ ವ್ಯವಸ್ಥೆ ಮತ್ತು ಶೂದ್ರರು-ದಲಿತರು-ಮಹಿಳೆಯರಿಗೆ ಶಿಕ್ಷಣವನ್ನು ವಿರೋಧಿಸುವ ಅಲಿಖಿತವಾದ ಮನುಸ್ಮೃತಿಯ ಪದ್ಧತಿಗಳು ಭಾರತದಲ್ಲಿ ಜಾರಿಯಲ್ಲಿತ್ತು. ಸಂವಿಧಾನ ವಿರೋಧಿಗಳು ಮತ್ತೆ ಮನುಸ್ಮೃತಿ ಜಾರಿಗೆ ಹುನ್ನಾರ ನಡೆಸುತ್ತಿದ್ದಾರೆ ಎಂದು ಹೇಳಿದರು.
ಈ ಚರಿತ್ರೆಯನ್ನು, ಇತಿಹಾಸವನ್ನು ನಾವು ಮರೆಯಬಾರದು. ನಮಗೆ ಬಂದಿರುವ ಸ್ವಾತಂತ್ರ್ಯ ಸಫಲ ಆಗಬೇಕಾದರೆ ಎಲ್ಲರಿಗೂ ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ಸಾಧ್ಯ ಎಂದು ಅಂಬೇಡ್ಕರ್ ಅವರು ಹೇಳಿದ್ದರು. ವಿಶ್ವದ ಎಲ್ಲಾ ಸಂವಿಧಾನಗಳನ್ನು ಅಧ್ಯಯನ ಮಾಡಿದ ಬಳಿಕ ಅಂಬೇಡ್ಕರ್ ಅವರು ನಮ್ಮ ಅತ್ಯುನ್ನತವಾದ ಸಂವಿಧಾನವನ್ನು ರಚಿಸಿದ್ದಾರೆ ಎಂದರು.
ಮೋದಿ ಮಂತ್ರಿ ಮಂಡಲದಲ್ಲಿ ಮಂತ್ರಿ ಆಗಿದ್ದ ಅನಂತ ಕುಮಾರ ಹೆಗ್ಡೆ ಅವರು, “ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ಸಾರ್ವಜನಿಕವಾಗಿ ಒಪ್ಪಿಕೊಂಡರು. ಆದರೆ ಮೋದಿಯವರಾಗಲಿ, ಬಿಜೆಪಿಯವರಾಗಲಿ ಇದನ್ನು ವಿರೋಧಿಸಲಿಲ್ಲ. ಅವರನ್ನು ಮಂತ್ರಿ ಸ್ಥಾನದಿಂದ ಇಳಿಸಲಿಲ್ಲ. ಆದ್ದರಿಂದ ಅನಂತ ಕುಮಾರ ಹೆಗ್ಡೆ ಅವರ ಮಾತಿಗೆ ಅವರೆಲ್ಲರ ಸಮ್ಮತಿ ಇತ್ತು ಅಂತಲೇ ಅರ್ಥ ಎಂದು ದೂರಿದ ಅವರು, ಇದನ್ನು ದೇಶದ ಜನತೆ ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸಂವಿಧಾನದ ಧ್ಯೇಯೋದ್ದೇಶಗಳನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು
ಸಂವಿಧಾನದ ಧ್ಯೇಯೋದ್ದೇಶಗಳನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಯಾವುದೇ ಸರ್ಕಾರ, ಯಾವುದೇ ಪಕ್ಷ ಅಧಿಕಾರಕ್ಕೆ ಬಂದಾಗ ಸಂವಿಧಾನದ ಪ್ರಕಾರವೇ ನಡೆದುಕೊಳ್ಳಬೇಕು. ನಮ್ಮ ಸರ್ಕಾರ ಕೂಡ ಸಂವಿಧಾನದ ಆಶಯಗಳನ್ನು ಈಡೇರಿಸುವ ದಿಕ್ಕಿನಲ್ಲಿ ಹತ್ತು ಹಲವು ಭಾಗ್ಯಗಳನ್ನು ಜಾರಿ ಮಾಡಿದೆವು. ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ನೀಡುವ ಕಾರ್ಯಕ್ರಮಗಳನ್ನು ನಾವು ರೂಪಿಸಿ, ಜಾರಿ ಮಾಡಿದ್ದೇವೆ ಎಂದರು.
ಈ ಸುದ್ದಿಯನ್ನೂ ಓದಿ | KPSC Recruitment 2024: 750 ಭೂ ಮಾಪಕರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಿದ KPSC; ಹೀಗೆ ಅಪ್ಲೈ ಮಾಡಿ
ಬಸವಣ್ಣನವರು 850 ವರ್ಷಗಳ ಹಿಂದೆಯೇ ಜಾತಿ ವ್ಯವಸ್ಥೆ ವಿರುದ್ಧ ಕರೆ ನೀಡಿದ್ದರು. ಆದರೆ ಇವತ್ತಿಗೂ ಜಾತಿ ಹೋಗಿಲ್ಲ. ಆರ್ಥಿಕ, ಸಾಮಾಜಿಕ ಸಮಾನತೆ ಬರದೆ ಜಾತಿ ವ್ಯವಸ್ಥೆ ಹೋಗಲು ಸಾಧ್ಯವಿಲ್ಲ. ಜಾತಿ ವ್ಯವಸ್ಥೆಯಿಂದಲೇ ಅಸಮಾನತೆ-ಮನುಷ್ಯ ತಾರತಮ್ಯ ಸೃಷ್ಟಿಯಾಗಿದೆ. ಆದ್ದರಿಂದ ಜಾತ್ಯಾತೀತರಾಗಿ ಮಕ್ಕಳನ್ನು ಬೆಳೆಸುವುದೇ ಸಂವಿಧಾನಕ್ಕೆ ನಾವು ಸಲ್ಲಿಸುವ ಅತ್ಯುನ್ನತ ಗೌರವ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.