Tuesday, 26th November 2024

Ivory Coast: ಕೇವಲ 7 ರನ್​​ಗೆ ಆಲೌಟ್; ಇದು ಟಿ20 ಇತಿಹಾಸದ ಲೋವೆಸ್ಟ್‌ ಸ್ಕೋರ್‌

ನವದೆಹಲಿ: ಕ್ರಿಕೆಟ್ ಜಂಟಲ್ ಮೆನ್ ಗೇಮ್ ಎನ್ನಲಾಗುತ್ತದೆ. ಕ್ರಿಕೆಟ್‌ನಲ್ಲಿ ಅಸಾಧ್ಯ ಎಂಬುದಿಲ್ಲ. ಕೆಲವೊಮ್ಮೆ ಬ್ಯಾಟರ್‌ಗಳು 6 ಎಸೆತಕ್ಕೆ 6 ಸಿಕ್ಸರ್‌ ಬಾರಿಸಿ ಮೆರೆದಾಡುತ್ತಾರೆ. ಕೆಲವೊಮ್ಮೆ ಬೌಲರ್‌ಗಳೂ ಇನ್ನಿಲ್ಲದಂತೆ ಅಧಿಪತ್ಯ ಸ್ಥಾಪಿಸುತ್ತಾರೆ. ಇಂತಹದ್ದೇ ಘಟನೆಯೊಂದು ಇದೀಗ ಕ್ರಿಕೆಟ್‌ ವಲಯದಲ್ಲಿ ಭಾರೀ ವೈರಲ್‌ ಆಗಿದೆ. ಐವರಿ ಕೋಸ್ಟ್(Ivory Coast) ತಂಡವು ಕೇವಲ 7 ರನ್​ಗೆ ಆಲೌಟ್ ಆಗಿ ಕೆಟ್ಟ ದಾಖಲೆಯೊಂದನ್ನು ಬರೆದಿದೆ. ಇದು ಟಿ20 ಕ್ರಿಕೆಟ್ ಇತಿಹಾಸದಲ್ಲೇ ತಂಡವೊಂದು ಗಳಿಸಿದ ಅತಿ ಕಡಿಮೆ ಮೊತ್ತ.

ಲಾಗೋಸ್​ನಲ್ಲಿ ನಡೆದ ಈ ಪಂದ್ಯದಲ್ಲಿ ಆತಿಥೇಯ ನೈಜಿರೀಯಾ(Nigeria) ಹಾಗೂ ಐವರಿ ಕೋಸ್ಟ್ ತಂಡಗಳು ಮುಖಾಮುಖಿಯಾಗಿದ್ದವು. ಟಿ20 ವಿಶ್ವಕಪ್ ಉಪ-ಪ್ರಾದೇಶಿಕ ಆಫ್ರಿಕಾ ಕ್ವಾಲಿಫೈಯರ್ ಗುಂಪಿನ ಸಿ ವಿಭಾಗದ ಪಂದ್ಯ ಇದಾಗಿತ್ತು. ಮೊದಲು ಬ್ಯಾಟಿಂಗ್‌ ನಡೆಸಿದ ನೈಜೀರಿಯಾ ಬಿರುಸಿನ ಬ್ಯಾಟಿಂಗ್‌ ನಡೆಸಿ 4 ವಿಕೆಟ್‌ಗೆ 271 ರನ್‌ ಬಾರಿಸಿತು. ಬೃಹತ್‌ ಮೊತ್ತವನ್ನು ಬೆನ್ನಟ್ಟಿದ ಐವರಿ ಕೋಸ್ಟ್ ತಂಡ ಕೇವಲ 7 ರನ್‌ಗೆ ಸರ್ವಪತನ ಕಂಡು 264 ರನ್‌ ಸೋಲಿಗೆ ತುತ್ತಾಯಿತು. ತಂಡದ ಪರ 6 ಬ್ಯಾಟರ್​​ಗಳು ಸೊನ್ನೆ ಸುತ್ತಿದ್ದರು. ನೈಜೀರಿಯಾ ಪರ ಸೆಲಿಮ್ ಸಲಾವು ಕೇವಲ 53 ಎಸೆತಗಳಲ್ಲಿ 13 ಬೌಂಡರಿ ಮತ್ತು ಎರಡು ಸಿಕ್ಸರ್‌ ನೆರವಿನಿಂದ 112 ರನ್‌ ಬಾರಿಸಿ ಮಿಂಚಿದರು.

ಇದನ್ನೂ ಓದಿ Vaibhav Suryavanshi: ವಯಸ್ಸಿನ ವಿವಾದಕ್ಕೆ ಸಿಲುಕಿದ ವೈಭವ್ ಸೂರ್ಯವಂಶಿ

ಇದುವರೆಗೂ ಟಿ20 ಯಲ್ಲಿ ಅತಿ ಕಡಿಮೆ ಮೊತ್ತಕ್ಕೆ ಆಲೌಟ್‌ ಆದ ಕೆಟ್ಟ ದಾಖಲೆ ಮಂಗೋಲಿಯಾ ತಂಡದ ಹೆಸರಿನಲ್ಲಿತ್ತು. ಸಿಂಗಾಪುರ ವಿರುದ್ಧದ ಪಂದ್ಯದಲ್ಲಿ ಮಂಗೋಲಿಯಾ ತಂಡ ಕೇವಲ 10 ರನ್​​ಗೆ ಆಲೌಟ್ ಆಗಿತ್ತು. ಇದೀಗ ಈ ದಾಖಲೆಯನ್ನು ಐವರಿ ಕೋಸ್ಟ್ ತಂಡ ಹಿಂದಿಕ್ಕಿದೆ.

ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ಮೊತ್ತ ಪೇರಿಸಿದ ದಾಖಲೆ ಜಿಂಬಾಬ್ವೆ ತಂಡದ ಹೆಸರಿನಲ್ಲಿದೆ. ಇದೇ ವರ್ಷ ನಡೆದಿದ್ದ ಗ್ಯಾಂಬಿಯಾ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್‌ಗೆ 344 ರನ್‌ ಬಾರಿಸಿತ್ತು. ಈ ಯಾದಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ ವಿರುದ್ಧದ ತವರಿನ ಪಂದ್ಯದಲ್ಲಿ 6 ವಿಕೆಟ್‌ಗೆ 297 ರನ್‌ ಬಾರಿಸಿತ್ತು.