Tuesday, 26th November 2024

Rahul Gandhi: ರಾಷ್ಟ್ರಪತಿ ಬುಡಕಟ್ಟು ಮಹಿಳೆ ಎಂಬ ಕಾರಣಕ್ಕೆ ರಾಹುಲ್‌ ಗಾಂಧಿಯಿಂದ ಅಗೌರವ? ಬಿಜೆಪಿ ಶೇರ್‌ ಮಾಡಿರೋ ವಿಡಿಯೊದಲ್ಲೇನಿದೆ?

Rahul Gandhi

ನವದೆಹಲಿ: ಸದಾ ಒಂದಿಲ್ಲೊಂದು ವಿವಾದದ ಸುಳಿಯಲ್ಲಿ ಸಿಲುಕುವ ವಿಪಕ್ಷ ನಾಯಕ ರಾಹುಲ್‌ ಗಾಂಧಿ ವಿರುದ್ಧ ಇದೀಗ ಬಿಜೆಪಿ ನಾಯಕರಿಂದ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಇಂದು ಸಂಸತ್ತಿನಲ್ಲಿ ನಡೆದ ಸಂವಿಧಾನ ದಿನಾಚರಣೆಯಲ್ಲಿ (Constitution Day) ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅಗೌರವ ತೋರಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿದೆ. ಇಷ್ಟೇ ಅಲ್ಲದೆ ರಾಷ್ಟ್ರಗೀತೆಯ ವೇಳೆ ರಾಹುಲ್‌ ವಿಚಲಿತರಾದರು ಎಂದು ಆರೋಪಿಸಿದೆ. ಈ ಬಗ್ಗೆ ತಮ್ಮ ಎಕ್ಸ್‌ನಲ್ಲಿ ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್ ಮಾಳವಿಯಾ ( Amit Malviya) ವಿಡಿಯೋ ಹಂಚಿಕೊಂಡಿದ್ದಾರೆ.

ರಾಹುಲ್‌ ಗಾಂಧಿ ವಿರುದ್ಧ ಕಿಡಿ ಕಾರಿದ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಒಬ್ಬ ಬುಡಕಟ್ಟು ಮಹಿಳೆ ಆದ್ದರಿಂದ ವಿಪಕ್ಷ ನಾಯಕ ಅವರಿಗೆ ಗೌರವ ಸೂಚಿಸಿಲ್ಲ. ಯಾಕೆ ಇಷ್ಟೊಂದು ಕಳಪೆ ಮನಸ್ಥಿತಿಯನ್ನು ಹೊಂದಿರುವಿರಿ? ಎಂದು ಪ್ರಶ್ನೆ ಮಾಡಿದ್ದಾರೆ.

ಅವರು ಹಂಚಿಕೊಂಡ ವಿಡಿಯೋದಲ್ಲಿ ಕಾರ್ಯಕ್ರಮ ಮುಗಿದ ನಂತರ ರಾಹುಲ್‌ ಯಾವುದೇ ರೀತಿಯ ಗೌರವ ಸಲ್ಲಿಸದೆ ಮೆಟ್ಟಿಲುಗಳತ್ತ ಸಾಗುತ್ತಿರುವುದು ಕಾಣಬಹುದು. ಪ್ರಧಾನಿ ಮೋದಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರಪತಿಗೆ ವಂದಿಸಿ ತೆರಳುತ್ತಿರುವುದನ್ನು ಕಾಣಬಹುದಾಗಿದೆ. ರಾಷ್ಟ್ರಗೀತೆ ಹೇಳುತ್ತಿರುವ ಮತ್ತೊಂದು ವಿಡಿಯೋ ಪೋಸ್ಟ್‌ ಮಾಡಿರುವ ಮಾಳವಿಯಾ ವಿಪಕ್ಷ ನಾಯಕನಿಗೆ  50 ಸೆಕೆಂಡುಗಳ ಕಾಲ ಕೂಡ ತಮ್ಮ ಗಮನವನ್ನು ಹಿಡಿದಿಡಲು ಸಾಧ್ಯವಿಲ್ಲ, ಅವರು ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷರ ಬಗ್ಗೆ ಅಸಹ್ಯಕರವಾದ ಕಾಮೆಂಟ್ ಮಾಡುವ ಧೈರ್ಯವನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಅಮಿತ್‌ ಮಾಳವಿಯಾ ಹಂಚಿಕೊಂಡಿದ್ದ ಪೋಸ್ಟನ್ನು ಮರು ಹಂಚಿಕೊಂಡ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ ಅಹಂಕಾರಿ ವಂಶ ಎಂದು ಬರೆದಿದ್ದಾರೆ. ಬಿಜೆಪಿಯ ಈ ಆರೋಪಕ್ಕೆ ಕಾಂಗ್ರೆಸ್‌ನ ಯಾವೊಬ್ಬ ನಾಯಕರು ಈವರೆಗೆ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ : Droupadi Murmu : ವಿಶ್ವದ ಅತ್ಯಂತ ಎತ್ತರದ ಯುದ್ಧಭೂಮಿ ಸಿಯಾಚಿನ್‌ ಬೇಸ್‌ಕ್ಯಾಂಪ್‌ಗೆ ಭೇಟಿ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು