ಪರ್ತ್: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ನ ದ್ವಿತೀಯ ಇನಿಂಗ್ಸ್ನಲ್ಲಿ ವಿರಾಟ್ ಕೊಹ್ಲಿ(Virat Kohli) ಶತಕ ಬಾರಿಸಿ ಸಂಭ್ರಮಿಸಿದರು. ಕಳೆದ 15 ತಿಂಗಳ ಬಳಿಕ ಟೆಸ್ಟ್ನಲ್ಲಿ ಕೊಹ್ಲಿ ಬಾರಿಸಿದ ಶತಕ ಇದಾಗಿತ್ತು. ಶತಕ ಪೂರ್ತಿಗೊಳಿಸುತ್ತಿದ್ದಂತೆ ಕೊಹ್ಲಿ ಗ್ಯಾಲರಿಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಪತ್ನಿ ಅನುಷ್ಕಾ ಶರ್ಮಾಗೆ(Anushka Sharma) ಮೈದಾನದಿಂದಲೇ ಪ್ಲೇಯಿಂಗ್ ಕಿಸ್ ನೀಡಿ ಸಂಭ್ರಮಿಸಿದರು.
ಶತಕದ ಬಳಿಕ ಮಾತನಾಡಿದ ಕೊಹ್ಲಿ, ಪ್ರತಿಯೊಂದು ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ಅನುಷ್ಕಾ ನನ್ನ ಪಕ್ಕದಲ್ಲಿರುತ್ತಾಳೆ. ನನ್ನ ಮನಸ್ಸಿನಲ್ಲಿ ಏನಾಗುತ್ತಿದೆ? ಅಥವಾ ನಾನು ಕೆಲವು ತಪ್ಪುಗಳನ್ನು ಮಾಡಿದಾಗ ತೆರೆಮರೆಯಲ್ಲಿ ನಡೆಯುವ ಎಲ್ಲವನ್ನೂ ಆಕೆ ಗಮನಿಸುತ್ತಾಳೆ. ನಾನು ತಂಡದ ಕಾರಣಕ್ಕೆ ಕೊಡುಗೆ ನೀಡಲು ಬಯಸುತ್ತೇನೆ. ನನ್ನ ದೇಶಕ್ಕಾಗಿ ಸಾಧನೆ ಮಾಡಲು ನನಗೆ ಹೆಮ್ಮೆಯಾಗುತ್ತಿದೆʼ ಎಂದು ಹೇಳಿದ್ದರು.
ಪತ್ನಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಕೊಹ್ಲಿಯ ಬಗ್ಗೆ ಮಾಜಿ ಕೋಚ್ ರವಿಶಾಸ್ತ್ರಿ(Ravi Shastri) ಅವರು ವಿರಾಟ್ ಮತ್ತು ಅನುಷ್ಕಾಗೆ ಸಂಬಂಧಿಸಿದ ಸೀಕ್ರೆಟ್ ಒಂದನ್ನು ಬಹಿರಂಗಪಡಿಸಿದ್ದಾರೆ. ಆಸೀಸ್ ಮಾಜಿ ವೇಗಿ ಬ್ರೆಟ್ ಲೀ ಸೇರಿ ಕೆಲವು ಕಾಮೆಂಟೇಟರ್ ಜತೆ ಪಂದ್ಯದ ಬಗ್ಗೆ ಚರ್ಚೆ ನಡೆಸುತ್ತಿದ್ದ ರವಿಶಾಸ್ತ್ರಿ, ಕೊಹ್ಲಿಯ ಯಶಸ್ಸಿನ ಹಿಂದೆ ಅನುಷ್ಕಾ ಶರ್ಮ ಮಹತ್ತರ ಪಾತ್ರ ನಿರ್ವಹಿದ್ದಾರೆ ಎಂದರು.
ʼ2015ರಲ್ಲಿ ನಾನು ಕೋಚ್ ಆಗಿದ್ದಾಗ ವಿರಾಟ್ ಮದುವೆಯಾಗಿರಲಿಲ್ಲ.ಅನುಷ್ಕಾ ಜತೆ ಡೇಟಿಂಗ್ ಮಾಡುತ್ತಿದ್ದರು. ಆಗ ಅವರು, ನನ್ನ ಗರ್ಲ್ಫ್ರೆಂಡ್ ಅನುಷ್ಕಾಳನ್ನು ವಿದೇಶಿ ಪ್ರವಾಸಕ್ಕೆ ಕರೆದುಕೊಂಡು ಬರಲೇ ಎಂದು ಕೇಳಿದ್ದರು. ನಾನು ಓಕೆ ಎಂದೆ. ಬಿಸಿಸಿಐ ನಿಯಮದ ಪ್ರಕಾರ ಆಟಗಾರರು ಪತ್ನಿಯನ್ನು ಮಾತ್ರ ವಿದೇಶಿ ಪ್ರವಾಸದ ವೇಳೆ ಕರೆದುಕೊಂಡು ಹೋಗಲು ನಿಯಮವಿತ್ತು. ಹೀಗಾಗಿ ನಾನು ಬಿಸಿಸಿಐಯಿಂದ ವಿಶೇಷ ಅನುಮತಿ ಪಡೆದು ಅಂದು ಕೊಹ್ಲಿಗೆ ಅನುಷ್ಕಾ ಶರ್ಮಾ ಅವರನ್ನು ಜತೆಯಾಗಿ ಆಸ್ಟ್ರೇಲಿಯಾಕ್ಕೆ ಬರುವಂತೆ ಮಾಡಿದೆ. ಬಾಕ್ಸಿಂಗ್ ಡೇ ಟೆಸ್ಟ್ನ ಮೊದಲ ಪಂದ್ಯದಲ್ಲಿ ಕೊಹ್ಲಿ 165 ರನ್ ಸಿಡಿಸಿ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಅನುಷ್ಕಾಗೆ ಪ್ಲೇಯಿಂಗ್ ಕಿಸ್ ನೀಡಿ ಸಂಭ್ರಮಿಸಿದ್ದರು. ಈ ಬಾರಿಯ ಪ್ರವಾಸದಲ್ಲಿಯೂ ಅದು ಮರುಕಳಿಸಿದೆ. ಕೊಹ್ಲಿ ಶತಕ ಬಾರಿಸಿ ಅಂದು ಸಂಭ್ರಮಿಸಿದಂತೆ ಮತ್ತೆ ಶತಕ ಬಾರಿಸಿ ಪತ್ನಿಗೆ ಮೈದಾನದಿಂದಲೇ ಪ್ಲೇಯಿಂಗ್ ಕಿಸ್ ನೀಡಿದ್ದಾರೆ. ಇಂದಿಗೂ ಕೊಹ್ಲಿಯ ದೊಡ್ಡ ಸಪೋರ್ಟ್ ಎಂದರೆ ಅದು ಅನುಷ್ಕಾ ಶರ್ಮಾʼ ಎಂದು ರವಿಶಾಸ್ತ್ರಿ ಅಂದಿನ ಘಟನೆಯನ್ನು ನೆನಪಿಸಿಕೊಂಡರು.