ಬೆಂಗಳೂರು: ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾದ ಹಿಂದುಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಈ ರಾಜಕೀಯದವರು ಮಾಡುತ್ತಿರುವುದು ಎಲ್ಲಾ ಓಟಿಗೋಸ್ಕರ. ಹೀಗಾಗಿ ನಮ್ಮ ದೇಶದಲ್ಲಿ ಮುಸ್ಲಿಮರಿಗೆ ಓಟಿನ ಹಕ್ಕು ಇಲ್ಲದಂತೆ (Waqf row) ಕಾನೂನು ಮಾಡಬೇಕು ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ (Chandrashekhara Swamiji) ಹೇಳಿದರು.
ವಕ್ಫ್ ಕಾಯ್ದೆ ವಿರೋಧಿಸಿ, ರೈತರು, ದಲಿತರು, ಶೋಷಿತರ ಭೂಮಿ ಉಳಿಸಲು ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ನಗರದ ಫ್ರೀಡಂ ಪಾರ್ಕ್ನಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಯಾರದೋ ವಸ್ತುವನ್ನು ಯಾರೋ ಕಿತ್ತುಕೊಳ್ಳುವುದು ಧರ್ಮವಲ್ಲ. ಹೀಗಾಗಿ ಎಲ್ಲರೂ ಹೋರಾಟ ಮಾಡಿ ರೈತರ ಜಮೀನುಗಳನ್ನು ಉಳಿಸಬೇಕು. ಪ್ರಪಂಚದಲ್ಲಿ ಇರುವ ಎಲ್ಲ ಜನರಿಗೆ ಅನ್ನ ನೀಡುವ ಕೆಲಸ ಮಾಡುತ್ತಿರುವುದು ರೈತ. ಆದ್ದರಿಂದ ರೈತನಿಗೆ ಬೆಂಬಲವಾಗಿ ನಿಲ್ಲಬೇಕು. ಯಾವ ಕಾನೂನೂ ಇಲ್ಲದೇ ಹೇಗೆ ರೈತರ ಜಮೀನನ್ನು ವಕ್ಫ್ ಬೋರ್ಡ್ ಕಿತ್ತುಕೊಳ್ಳುತ್ತದೆ ಎಂದು ಪ್ರಶ್ನಿಸಿದರು.
ಇನ್ನು ದೇಶದಲ್ಲಿ ವಕ್ಫ್ ಮಂಡಳಿಯೇ ಇಲ್ಲದಂತೆ ಮಾಡಬೇಕು. ಆಗ, ಭಾರತೀಯರೆಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯ ಆಗಲಿದೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | Muda Case: ಮುಡಾ ಹಗರಣ; ಸಿಎಂ ವಿರುದ್ಧದ ಕೇಸ್ ಸಿಬಿಐಗೆ ವಹಿಸಲು ಕೋರಿದ್ದ ಅರ್ಜಿ ವಿಚಾರಣೆ ಡಿ.10ಕ್ಕೆ ನಿಗದಿ
ಸಚಿವ ಜಮೀರ್ ಅಹ್ಮದ್ರನ್ನು ವಜಾಗೊಳಿಸಿ
ನಾಡಿನ ಅನ್ನದಾತರಿಗೆ ಸಂಕಟ ತಂದೊಡ್ಡಿರುವ ವಕ್ಫ್ ಕಾಯ್ದೆ ರದ್ದುಗೊಳಿಸಿ, ರಾಜ್ಯಾದ್ಯಂತ ಗೊಂದಲ ಸೃಷ್ಟಿಗೆ ಕಾರಣವಾಗಿರುವ ಸಚಿವ ಜಮೀರ್ ಅಹ್ಮದ್ ಅವರನ್ನು ಈ ಕೂಡಲೇ ವಜಾಗೊಳಿಸಬೇಕೆಂದು ರಾಜ್ಯ ಸರ್ಕಾರವನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿರುವುದನ್ನು ವಿರೋಧಿಸಿ ಫ್ರೀಡಂ ಪಾರ್ಕ್ನಲ್ಲಿ ಆಯೋಜಿಸಿದ್ದ ‘ರೈತ ಗರ್ಜನೆ ರ್ಯಾಲಿಯಲ್ಲಿ ಮಾತನಾಡಿ, ನೆಲದ ಮಣ್ಣಿನ ಮಕ್ಕಳ ಭೂಮಿಯ ಹಕ್ಕು ಕಸಿಯುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂದು ಕಿಡಿಕಾರಿದ್ದಾರೆ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷ ನಾಯಕರಾದ ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ್ಯದ ಉಪಾಧ್ಯಕ್ಷ ಎಚ್.ಪಿ.ನಾರಾಯಣರೆಡ್ಡಿ, ಬೆಂಗಳೂರು ದಕ್ಷಿಣ ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ಶಾಸಕರಾದ ಸಿ.ಕೆ ರಾಮಮೂರ್ತಿ, ಉತ್ತರ ಜಿಲ್ಲಾಧ್ಯಕ್ಷರಾದ ಎಸ್.ಹರೀಶ್, ಕೇಂದ್ರ ಜಿಲ್ಲಾಧ್ಯಕ್ಷರಾದ ಸಪ್ತಗಿರಿ ಗೌಡ, ವಿವಿಧ ಮಠಗಳ ಶ್ರೀಗಳು, ಕಿಸಾನ್ ಸಂಘದ ಪ್ರಮುಖರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರೈತರು ಉಪಸ್ಥಿತರಿದ್ದರು.