ಮುಂಬಯಿ: ದೇಶೀಯ ಕ್ರಿಕೆಟ್ ಮತ್ತು ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್ನಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದಿರುವ ಮುಂಬೈಯ ಸರ್ಫರಾಜ್ ಖಾನ್(Sarfaraz Khan Unsold) ಮುಂದಿನ ಆವೃತಿಯ ಐಪಿಎಲ್(IPL 2025) ಆಡಲು ಭಾರೀ ನಿರೀಕ್ಷೆಯಲ್ಲಿದ್ದರು. ಆದರೆ ಅವರನ್ನು ಮೆಗಾ ಹರಾಜಿನಲ್ಲಿ ಯಾವುದೇ ಫ್ರಾಂಚೈಸಿಗಳು ಖರೀದಿ ಮಾಡಿಲ್ಲ. ಹೀಗಾಗಿ ಅವರ ನಿರೀಕ್ಷೆಗಳೆಲ್ಲ ಹುಸಿಯಾಗಿದೆ. ಆದರೆ ಅವರ ಕಿರಿಯ ಸಹೋದರ ಮುಶೀರ್ ಖಾನ್ 30 ಲಕ್ಷ ರೂ. ಮೂಲಬೆಲೆಗೆ ಪಂಜಾಬ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ.
ಸರ್ಫರಾಜ್ ಖಾನ್ ಇದುವರೆಗೆ 50 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಆದರೆ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಒಟ್ಟು 585 ರನ್ ಬಾರಿಸಿದ್ದಾರೆ. ಕೊನೆಯ ಬಾರಿಗೆ ಅವರು ಐಪಿಎಲ್ ಆಡಿದ್ದು 2023ರಲ್ಲಿ. ಕಳೆದ ಆವೃತಿಯ ಮಿನಿ ಹರಾಜಿನಲ್ಲಿಯೂ ಅನ್ಸೋಲ್ಡ್ ಆಗಿದ್ದರು. ಆದರೆ ಈ ಬಾರಿ ಟೀಮ್ ಇಂಡಿಯಾ ಪರ ಉತ್ತಮ ಪ್ರದರ್ಶನ ತೋರಿದ ಕಾರಣ ಮತ್ತೆ ಐಪಿಎಲ್ ಆಡುವ ಅವಕಾಶ ಸಿಗಬಹುದೆಂದು ನಿರೀಕ್ಷೆ ಮಾಡಿದ್ದರು. ಆದರೆ ಈ ಬಾರಿಯೂ ಅನ್ಸೋಲ್ಡ್ ಆಗಿದ್ದಾರೆ.
ಇದನ್ನೂ ಓದಿ IPL 2025: ಹರಾಜಿನಲ್ಲಿ ಸೋಲ್ಡ್, ಅನ್ಸೋಲ್ಡ್ ಆದ ಕರ್ನಾಟಕದ ಆಟಗಾರರಿವರು
19 ವರ್ಷದ ಬ್ಯಾಟರ್, ಮುಶೀರ್ ಖಾನ್ ಮುಂಬೈ ತಂಡದ ಪರ 9 ಪ್ರಥಮ ದರ್ಜೆ ಪಂದ್ಯವನ್ನಾಡಿ 716 ರನ್ ಗಳಿಸಿದ್ದಾರೆ. ಈ ವೇಳೆ 3 ಶತಕ ಮತ್ತು ಒಂದು ಅರ್ಧಶತಕ ಬಾರಿಸಿದ್ದಾರೆ. ಬೌಲಿಂಗ್ನಲ್ಲಿ 8 ವಿಕೆಟ್ ಕಿತ್ತಿದ್ದಾರೆ. ಕಳೆದ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಮುಶೀರ್ ಖಾನ್ ಒಟ್ಟು 360 ರನ್ ಬಾರಿಸಿ ಮಿಂಚಿದ್ದರು. ಕಳೆದ ಬಾರಿ ರಣಜಿ ಟ್ರೋಫಿಯಲ್ಲಿ ಮುಂಬೈ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಮುಶೀರ್ ಪ್ರಮುಖ ಪಾತ್ರವಹಿಸಿದ್ದರು. ಇತ್ತೀಚೆಗೆ ಇರಾನಿ ಕಪ್ ಟೂರ್ನಿಯನ್ನಾಡಲು ಅಜಂಗಢ್ಗೆ ತೆರೆಳುತ್ತಿದ್ದ ವೇಳೆ ಕಾರು ಅಪಘಾತದಲ್ಲಿ ಮುಶೀರ್ ಖಾನ್ ಗಾಯಗೊಂಡಿದ್ದರು. ಹೀಗಾಗಿ ಈ ಬಾರಿಯ ರಣಜಿ ಟೂರ್ನಿಯಿಂದ ಹೊರಗುಳಿದಿದ್ದರು. ಇದು ಇವರ ಚೊಚ್ಚಲ ಐಪಿಎಲ್ ಕರೆ.
ಅನ್ಸೋಲ್ಡ್ ಆದ ಆಟಗಾರರಿಗೆ ಇನ್ನು ಕೂಡ ಐಪಿಎಲ್ ತಂಡ ಸೇರುವ ಅವಕಾಶವಿದೆ. ಇದು ಹೇಗೆ ಎನ್ನುವ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡುವುದು ಸಹಜ. ಐಪಿಎಲ್ ತಂಡ ಸೇರಿದ ಯಾವುದೇ ಆಟಗಾರ ಗಾಯಗೊಂಡು ಅಥವಾ ಇತರ ಕಾರಣಗಳಿಂದ ಟೂರ್ನಿಗೆ ಅಲಭ್ಯರಾದರೆ ಆಗ ಅನ್ಸೋಲ್ಡ್ ಆಟಗಾರರಿಗೆ ಅದೃಷ್ಟ ಖುಲಾಯಿಸಲಿದೆ. ಹೀಗಾಗಿ ಸರ್ಫರಾಜ್ ಖಾನ್ಗೆ ಮತ್ತೊಂದು ಅವಕಾಶ ಸಿಕ್ಕರೂ ಸಿಗಬಹುದು.