ನವದೆಹಲಿ: ಇವಿಎಂ(EVM) ಬದಲು ಬ್ಯಾಲೆಟ್ ಪೇಪರ್(Ballot Paper) ನಲ್ಲಿ ಚುನಾವಣೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್(Supreme Court) ಇಂದು ವಜಾಗೊಳಿಸಿದೆ. ಚುನಾವಣೆಗಳಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಮತದಾನ ವ್ಯವಸ್ಥೆಯನ್ನು ಮತ್ತೆ ಜಾರಿಗೊಳಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಚಂದ್ರಬಾಬು ನಾಯ್ಡು ಮತ್ತು ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರಂತಹ ನಾಯಕರು ಸಹ ವಿದ್ಯುನ್ಮಾನ ಮತದಾನ ಯಂತ್ರ (ಇವಿಎಂ) ತಿರುಚುವಿಕೆಯನ್ನು ಪ್ರಶ್ನಿಸಿದ್ದಾರೆ ಎಂಬ ಅರ್ಜಿದಾರರ ವಾದದಲ್ಲಿ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಪಿ.ಬಿ.ವರಲೆ ಅವರ ನ್ಯಾಯಪೀಠವು ಹೆಚ್ಚಿನ ಮಹತ್ವವನ್ನು ಕಂಡುಕೊಂಡಿಲ್ಲ.
ಅರ್ಜಿದಾರರಾದ ಇವ್ಯಾಂಜಲಿಸ್ಟ್ ಡಾ.ಕೆ.ಎ.ಪಾಲ್ ಅವರು ಇವಿಎಂಗಳನ್ನು ತಿರುಚಬಹುದು ಎಂದು ವಾದಿಸಿದರು ಅಮೆರಿಕದಂತಹ ರಾಷ್ಟ್ರಗಳೇ ಬ್ಯಾಲೆಟ್ ಪೇಪರ್ಗಳನ್ನು ಬಳಸುತ್ತಿವೆ. ಹೀಗಿರುವಾಗ ಭಾರತದಲ್ಲೂ ಇಂತಹದ್ದೇ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಸಲಹೆ ನೀಡಿದರು. ಇವಿಎಂಗಳು ಪ್ರಜಾಪ್ರಭುತ್ವಕ್ಕೆ ಅಪಾಯವನ್ನುಂಟುಮಾಡುತ್ತವೆ ಎಂದು ವಾದಿಸಿದ ಅವರು, ಎಲೋನ್ ಮಸ್ಕ್ ಅವರಂತಹ ಪ್ರಮುಖ ವ್ಯಕ್ತಿಗಳು ಸಹ ಇವಿಎಂ ತಿರುಚುವಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಆರೋಪಿಸಿದರು. ಚಂದ್ರಬಾಬು ನಾಯ್ಡು ಮತ್ತು ಜಗನ್ ಮೋಹನ್ ರೆಡ್ಡಿ ಸೇರಿದಂತೆ ಅನೇಕ ರಾಜಕೀಯ ಪಕ್ಷಗಳು ಮತ್ತು ನಾಯಕರು ತಮ್ಮ ನಿಲುವನ್ನು ಬೆಂಬಲಿಸಿದ್ದಾರೆ ಎಂದು ಅರ್ಜಿದಾರರು ಹೇಳಿದ್ದಾರೆ.
ಕೋರ್ಟ್ ಹೇಳಿದ್ದೇನು?
ಚಂದ್ರಬಾಬು ನಾಯ್ಡು ಅಥವಾ ಜಗನ್ ಮೋಹನ್ ರೆಡ್ಡಿ ಸೋತಾಗ ಇವಿಎಂಗಳನ್ನು ಟ್ಯಾಂಪರಿಂಗ್ ಮಾಡಲಾಗಿದೆ ಎಂದು ಹೇಳುತ್ತಾರೆ ಮತ್ತು ಅವರು ಗೆದ್ದಾಗ ಏನನ್ನೂ ಹೇಳುವುದಿಲ್ಲ. ನಾವು ಇದನ್ನು ಏನೆಂದು ಭಾವಿಸಬೇಕು? ನಾವು ಇದನ್ನು ವಜಾಗೊಳಿಸುತ್ತಿದ್ದೇವೆ. ಇದೆಲ್ಲವನ್ನೂ ನೀವು ವಾದಿಸುವ ಸ್ಥಳ ಇದು ಅಲ್ಲ, ”ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಪಿಬಿ ವರಾಳೆ ಅವರ ಪೀಠ ಖಡಕ್ ತೀರ್ಪನ್ನು ನೀಡಿದೆ.
ಈ ಸುದ್ದಿಯನ್ನೂ ಓದಿ: Beant Singh killer: ಮಾಜಿ ಸಿಎಂ ಹತ್ಯೆ ಕೇಸ್; ಹಂತಕನ ಕ್ಷಮಾದಾನ ಅರ್ಜಿ ಬಗ್ಗೆ 2 ವಾರಗಳಲ್ಲಿ ನಿರ್ಧಾರ! ರಾಷ್ಟ್ರಪತಿ ಕಚೇರಿಗೆ ಸುಪ್ರೀಂ ಕೋರ್ಟ್ ಸೂಚನೆ
ಈ ಹಿಂದೆಯೂ ಒಮ್ಮೆ ಬ್ಯಾಲೆಟ್ ಪೇಪರ್ ವಿಚಾರವಾಗಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಚಾಟಿ ಬೀಸಿತ್ತು. ಇವಿಎಂಗಳಲ್ಲಿ ಚಲಾವಣೆಯ ಮತಗಳನ್ನು ವಿವಿಪ್ಯಾಟ್ ಸ್ಲಿಪ್ಗಳೊಂದಿಗೆ ಕ್ರಾಸ್ ಚೆಕ್ ಮಾಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಬ್ಯಾಲೆಟ್ ಪೇಪರ್ ಮತದಾನ ಪದ್ಧತಿಯಲ್ಲಿರುವ ಸಮಸ್ಯೆಗಳನ್ನು ಎತ್ತಿ ತೋರಿಸಿತು. ನಾವು ಯಾರನ್ನಾದರೂ ಒಬ್ಬರನ್ನು ನಂಬಬೇಕು. ಈ ರೀತಿ ವ್ಯವಸ್ಥೆಯನ್ನು ಕೆಳಗೆ ತರುವ ಪ್ರಯತ್ನ ಮಾಡಬೇಡಿ. ಇಂತಹ ಉದಾಹರಣೆಗಳನ್ನು ಇಲ್ಲಿ ಕೊಡಬೇಡಿ, ಯುರೋಪ್ನ ಉದಾಹರಣೆಗಳು ಇಲ್ಲಿ ಕೆಲಸ ಮಾಡಲ್ಲ. ಬ್ಯಾಲೆಟ್ ಪೇಪರ್ ಮತದಾನ ಇದ್ದಾಗ ಏನಾಯಿತು ಎಂಬುದು ನಮಗೆ ಗೊತ್ತಿದೆ”.. ಇದು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಿಬ್ಬರು ದೇಶದಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಮತದಾನ ಪದ್ಧತಿ ಜಾರಿಗೆ ತರಬೇಕು ಎಂದು ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಖಡಕ್ ಆಗಿ ಹೇಳಿತ್ತು.