ಬೆಂಗಳೂರು: ಬ್ರಿಟೀಷರ ಅವಧಿಯಲ್ಲೇ ಹುಟ್ಟಿದ ಆರ್ಎಸ್ಎಸ್ (RSS) ಭಾರತದ ಸ್ವಾತಂತ್ರ್ಯ ಹೋರಾಟದಲ್ಲೇ ಭಾಗವಹಿಸಲಿಲ್ಲ. ಈಗ ಈ ಆರ್ಎಸ್ಎಸ್ ದೇಶಭಕ್ತಿಯ ಪಾಠ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಟೀಕಿಸಿದರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಂವಿಧಾನ ಜಾರಿಯ 75ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಮನುಸ್ಮೃತಿಯಲ್ಲಿ ನಂಬಿಕೆ ಇಟ್ಟುಕೊಂಡಿದೆ. ಕಾಂಗ್ರೆಸ್ ಸಂವಿಧಾನದಲ್ಲಿ ನಂಬಿಕೆ ಇಟ್ಟುಕೊಂಡಿದೆ. ಇದೇ ಎರಡೂ ಪಕ್ಷಕ್ಕೂ ಇರುವ ವ್ಯತ್ಯಾಸ ಎಂದು ಆರೋಪಿಸಿದರು.
ಆರ್ಎಸ್ಎಸ್ನ ಒಬ್ಬರೂ ದೇಶಕ್ಕಾಗಿ ಹೋರಾಡಿಲ್ಲ, ಒಬ್ಬನೂ ದೇಶಕ್ಕಾಗಿ ಪ್ರಾಣಕೊಟ್ಟಿಲ್ಲ. ಮನುಷ್ಯರನ್ನು ಜಾತಿ-ಧರ್ಮದ ಹೆಸರಲ್ಲಿ ವಿಂಗಡಿಸೋದು ದೇವರ ಕೆಲಸ ಅಲ್ಲ. ಎಲ್ಲ ಮಾಡಿದ್ದು ಮನುಸ್ಮೃತಿ ಎಂದು ತಿಳಿಸಿದ ಸಿಎಂ ಅವರು, ಆರ್ಎಸ್ಎಸ್ನವರು ಮನುಸ್ಮೃತಿ ಪರವಾಗಿರುವುದರಿಂದಲೇ ನಮ್ಮ ಸಂವಿಧಾನ ವಿರೋಧಿಸುತ್ತಾರೆ ಎಂದು ಆರೊಪಿಸಿದರು.
ಈ ಸುದ್ದಿಯನ್ನೂ ಓದಿ | CM Siddaramaiah: ಜಾತ್ಯತೀತರಾಗಿ ಮಕ್ಕಳನ್ನು ಬೆಳೆಸುವುದೇ ಸಂವಿಧಾನಕ್ಕೆ ನಾವು ಸಲ್ಲಿಸುವ ಅತ್ಯುನ್ನತ ಗೌರವ; ಸಿದ್ದರಾಮಯ್ಯ
ಪೇಜಾವರ ಶ್ರೀಗಳು ಸಂವಿಧಾನ ಬಗ್ಗೆ ಆಡಿದ ಮಾತನ್ನು ಪ್ರಸ್ತಾಪಿಸಿದ ಸಿಎಂ, ಆ ರೀತಿ ಹೇಳುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದರು.
ಇವತ್ತಿಗೂ ಜಾತಿ ವ್ಯವಸ್ಥೆ ಹೋಗಿಲ್ಲ
ಬಸವಣ್ಣನವರು 850 ವರ್ಷಗಳ ಹಿಂದೆ ಜಾತಿ ವ್ಯವಸ್ಥೆಯನ್ನು, ಜಾತಿ ಅಸಮಾನತೆಯನ್ನು ವಿರೋಧಿಸಿದ್ದರು. ಆದರೆ ಇವತ್ತಿಗೂ ಜಾತಿ ವ್ಯವಸ್ಥೆ ಹೋಗಿಲ್ಲ. ಬಾಯಲ್ಲಿ ಬಸವಾದಿ ಶರಣರ ವಚನ ಹೇಳೋದು. ಆಮೇಲೆ, ನೀನು ಯಾವ ಜಾತಿ ಅಂತ ಕೇಳ್ತಾರೆ. ಈಗಲೂ ಇವನಾರವ, ಇವನಾರವ ಅಂತಲೇ ಕೇಳುತ್ತಿದ್ದಾರೆ ಹೊರತು, ಇವ ನಮ್ಮವ ಅಂತ ಹೇಳುತ್ತಲೇ ಇಲ್ಲ ಎಂದು ತಿಳಿಸಿದರು.
ಸಂವಿಧಾನದ ಧ್ಯೇಯೋದ್ದೇಶಗಳು ಎಷ್ಟರ ಮಟ್ಟಿಗೆ ಜಾರಿಯಾಗಿವೆ, ಏಕಿನ್ನೂ ಸಮಾನತೆಯ ಸಮಾಜ ನಿರ್ಮಾಣ ಆಗಿಲ್ಲ ಎನ್ನುವುದನ್ನು ಅವಲೋಕನ ಮಾಡಿಕೊಳ್ಳಬೇಕಿದೆ. ಸಂವಿಧಾನ ಜಾರಿ ಸಭೆಯಲ್ಲಿ ಅಂಬೇಡ್ಕರ್ ಅವರು ಆಡಿದ ಎಚ್ಚರಿಕೆಯ ಮಾತುಗಳನ್ನು ನಾವು ಮರೆಯಬಾರದು.
ಪ್ರತಿಯೊಬ್ಬರಿಗೂ ಒಂದು ಓಟು, ಒಂದು ಮೌಲ್ಯ ಸಿಕ್ಕಿದೆ. ಆದರೆ ಎಲ್ಲರಿಗೂ ಆರ್ಥಿಕ ಸ್ವಾತಂತ್ರ್ಯ ಸಿಕ್ಕಿಲ್ಲ. ನಾವು ವೈರುದ್ಯತೆ ಇರುವ ಸಮಾಜಕ್ಕೆ ಕಾಲಿಡುತ್ತಿದ್ದೇವೆ. ಸಾಮಾಜಿಕ, ಆರ್ಥಿಕ ಅಸಮಾನತೆ ಹೋಗಲಾಡಿಸದಿದ್ದರೆ ರಾಜಕೀಯ ಪ್ರಜಾಪ್ರಭುತ್ವ ಯಶಸ್ವಿ ಆಗಲ್ಲ ಎನ್ನುವ ಎಚ್ಚರಿಕೆ ನೀಡಿದ್ದರು ಎಂದರು.
ಈ ಸುದ್ದಿಯನ್ನೂ ಓದಿ | KPSC Recruitment 2024: 750 ಭೂ ಮಾಪಕರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಿದ KPSC; ಹೀಗೆ ಅಪ್ಲೈ ಮಾಡಿ
ಅಂಬೇಡ್ಕರ್ ಅವರಿಗೆ ದೂರದೃಷ್ಟಿ ಇತ್ತು. ಆದ್ದರಿಂದಲೇ, ಸಂವಿಧಾನ ಎಷ್ಟೇ ಶ್ರೇಷ್ಠವಾಗಿದ್ದರೂ ಒಳ್ಳೆಯವರ ಕೈಯಲ್ಲಿ ಇರಬೇಕು. ಕೆಟ್ಟವರ ಕೈಗೆ ಹೋದರೆ ಮೌಲ್ಯಗಳು ಸಾಯುತ್ತವೆ ಎಂದು ಎಚ್ಚರಿಸಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.