Tuesday, 26th November 2024

Rashmi Shukla: ಮಹಾರಾಷ್ಟ್ರ ಡಿಜಿಪಿಯಾಗಿ ರಶ್ಮಿ ಶುಕ್ಲಾ ಮರು ನೇಮಕ

Rashmi Shukla

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ (Maharashtra Elections 2024) ಪೂರ್ಣಗೊಂಡ ಹಿನ್ನೆಲೆಯಲ್ಲಿ ಪೊಲೀಸ್ ಮಹಾನಿರ್ದೇಶಕಿ (DGP) ರಶ್ಮಿ ಶುಕ್ಲಾ (Rashmi Shukla) ಅವರನ್ನು ಮರುನೇಮಕಗೊಳಿಸಿ ರಾಜ್ಯ ಗೃಹ ಇಲಾಖೆ ಆದೇಶ ಹೊರಡಿಸಿದೆ. ಹಿರಿಯ ಐಪಿಎಸ್ ಅಧಿಕಾರಿ ರಶ್ಮಿ ಶುಕ್ಲಾ ಅವರು ಆಡಳಿತಾರೂಢ ಮಹಾಯುತಿ (Mahayuti) ಮೈತ್ರಿಕೂಟದ ಕಡೆಗೆ ಒಲವು ಹೊಂದಿದ್ದಾರೆ ಮತ್ತು ಅವರು ಉನ್ನತ ಹುದ್ದೆಯಲ್ಲಿದ್ದರೆ ನ್ಯಾಯಯುತ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಆರೋಪಿಸಿದ ಹಿನ್ನೆಲೆಯಲ್ಲಿ ಅವರನ್ನು ಕೆಲವು ದಿನಗಳ ಹಿಂದೆ ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿತ್ತು.

ರಶ್ಮಿ ಶುಕ್ಲಾ ಅವರು ರಜೆಯ ಮೇಲೆ ತೆರಳಿದ ಬಳಿಕ ಡಿಜಿಪಿಯಾಗಿ ಸಂಜಯ್‌ ಕುಮಾರ್‌ ವರ್ಮಾ ಅಧಿಕಾರ ವಹಿಸಿಕೊಂಡಿದ್ದರು. ಚುನಾವಣಾ ಪ್ರಕ್ರಿಯೆ ಸಂಜಯ್‌ ಕುಮಾರ್‌ ವರ್ಮಾ ಅವರ ಮೇಲ್ವಿಚಾರಣೆಯಲ್ಲಿ ನಡೆದಿತ್ತು. ಇದೀಗ ಚುನಾವಣೆ ಪೂರ್ಣಗೊಂಡು, ಫಲಿತಾಂಶವೂ ಪ್ರಕಟಗೊಂಡಿದೆ. ಹೀಗಾಗಿ ರಾಜ್ಯದಲ್ಲಿ ಜಾರಿಗೆ ತಂದಿದ್ದ ಚುನಾವಣಾ ನೀತಿ ಸಂಹಿತೆಯನ್ನು ಹಿಂಪಡೆಯಲಾಗಿದ್ದು, ರಶ್ಮಿ ಶುಕ್ಲಾ ತಮ್ಮ ಹುದ್ದೆಗೆ ಮರಳಿದ್ದಾರೆ.

ನ. 23ರಂದು ವಿಧಾನಸಭಾ ಚುನಾವಣೆಯ ಫಲಿತಾಂಶ ಘೋಷಣೆಯಾಗಿದ್ದು, ಬಿಜೆಪಿ ನೇತೃತ್ವದ ಮಹಾಯುತಿ ಒಕ್ಕೂಟ ಭರ್ಜರಿ ಬಹುಮತ ಪಡೆದು ಅಧಿಕಾರಕ್ಕೆ ಮರಳಿದೆ. ಬಿಜೆಪಿ, ಶಿವಸೇನೆ (ಶಿಂಧೆ) ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಒಳಗೊಂಡ ಮಹಾಯುತಿ ಮೈತ್ರಿಕೂಟವು 288 ಸ್ಥಾನಗಳಲ್ಲಿ 235 ಸ್ಥಾನ ಗಳಿಸಿದೆ. ಈ ಪೈಕಿ ಬಿಜೆಪಿ 132 ಸ್ಥಾನಗಳನ್ನು ಗೆಲ್ಲುವ ಮೂಲಕ ಮುನ್ನಡೆ ಸಾಧಿಸಿದೆ. ಶಿಂಧೆ ಅವರ ಶಿವ ಸೇನೆ 57 ಸ್ಥಾನಗಳನ್ನು ಗೆದ್ದರೆ, ಅಜಿತ್ ಪವಾರ್ ಅವರ ಎನ್‌ಸಿಪಿ 41 ಸ್ಥಾನಗಳನ್ನು ಪಡೆದುಕೊಂಡಿದೆ.

ರಶ್ಮಿ ಶುಕ್ಲಾ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿದ್ದ ವಿಪಕ್ಷ

ಏಕನಾಥ ಶಿಂಧೆ ನೇತೃತ್ವದ ಆಡಳಿತರೂಢ ಮಹಾಯುತಿ ಮೈತ್ರಿಯ ಕುಮ್ಮಕ್ಕಿನಿಂದ ಪೊಲೀಸ್‌ ವರಿಷ್ಠಾಧಿಕಾರಿ ಶುಕ್ಲಾ ದೂರವಾಣಿ ಕದ್ದಾಲಿಕೆ ಮಾಡಿರುವುದಾಗಿ ಕಾಂಗ್ರೆಸ್‌ ಮತ್ತು ಶಿವಸೇನಾ (ಯುಬಿಟಿ) ಆರೋಪಿಸಿದ್ದವು. “2019ರಲ್ಲಿ ನಮ್ಮ ಸರ್ಕಾರ ರಚನೆಯಾದಾಗ ಬಿಜೆಪಿಗಾಗಿ ನೇರವಾಗಿ ಕೆಲಸ ಮಾಡುತ್ತಿದ್ದ ಶುಕ್ಲಾ ನಮ್ಮ ಎಲ್ಲ ಫೋನ್‌ ಟ್ಯಾಪ್ ಮಾಡುತ್ತಿದ್ದರು ಮತ್ತು ನಮ್ಮ ಯೋಜನೆಗಳ ಬಗ್ಗೆ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರಿಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಿದ್ದರು” ಎಂದು ರಾಜ್ಯಸಭಾ ಸಂಸದ ಮತ್ತು ಶಿವಸೇನೆ (ಯುಬಿಟಿ) ಮುಖಂಡ ಸಂಜಯ್ ರಾವತ್ ದೂರಿದ್ದರು.

“ಹೀಗಿರುವಾಗ ಅವರು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುತ್ತಾರೆ ಎಂದು ನಾವು ನಿರೀಕ್ಷಿಸುವುದು ಹೇಗೆ? ಚುನಾವಣೆ ನಡೆಸುವ ಅಧಿಕಾರವನ್ನು ಅವರಿಗೆ ನೀಡಬಾರದು ಎಂದು ನಾವು ಹೇಳಿದ್ದೇವೆ. ಮಹಾರಾಷ್ಟ್ರದ ಚುನಾವಣೆಯನ್ನು ಪೊಲೀಸರ ಒತ್ತಡದ ಆಧಾರದ ಮೇಲೆ ನಡೆಸಲಾಗುತ್ತಿದೆ” ಎಂದು ಅವರು ಆರೋಪಿಸಿದ್ದರು. ಅಲ್ಲದೆ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಅವರು ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದು ಶುಕ್ಲಾ ಅವರನ್ನು ರಾಜ್ಯ ಪೊಲೀಸ್ ಮುಖ್ಯಸ್ಥ ಹುದ್ದೆಯಿಂದ ತೆಗೆದುಹಾಕುವಂತೆ ಕೋರಿದ್ದರು. ಅದರಂತೆ ನವೆಂಬರ್‌ ಮೊದಲ ವಾರದಲ್ಲಿ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿತ್ತು.

ಯಾರು ಈ ರಶ್ಮಿ ಶುಕ್ಲಾ?

1988ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ರಶ್ಮಿ ಶುಕ್ಲಾ ಅವರು ಮಹಾರಾಷ್ಟ್ರದ ಪೊಲೀಸ್ ಮುಖ್ಯಸ್ಥರಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಅವರು ಸಶಸ್ತ್ರ ಸೀಮಾ ಬಲದ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

ಈ ಸುದ್ದಿಯನ್ನೂ ಓದಿ: Maharashtra Elections 2024: ವಿಚ್ಛೇದನ..ಮದುವೆ.. ಮತ್ತೆ ಡಿವೋರ್ಸ್‌- ಇದು ಪೂಜಾ ಖೇಡ್ಕರ್‌ ತಂದೆಯ ಚುನಾವಣಾ ಅಫಿಡವಿಟ್‌ನ ಇಂಟ್ರೆಸ್ಟಿಂಗ್‌ ಸ್ಟೋರಿ!