ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿ ತೀವ್ರ ಮುಖಭಂಗ ಅನುಭವಿಸಿದ ಬೆನ್ನಲ್ಲೇ ಕಾಂಗ್ರೆಸ್ (Congress) ಮತ್ತೆ ಇವಿಎಂ (Electronic Voting Machine) ಬಗ್ಗೆ ಅಪಸ್ವರ ಎತ್ತಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಈ ಬಗ್ಗೆ ಮಾತನಾಡಿ ಚುನಾವಣೆಯಲ್ಲಿ ಇನ್ನುಮುಂದೆ ಮತಯಂತ್ರಗಳ ಬದಲು ಸಾಂಪ್ರದಾಯಿಕ ವಿಧಾನವಾದ ಬ್ಯಾಲೆಟ್ ಪೇಪರ್ ಬಳಸುವಂತೆ ಆಗ್ರಹಿಸಿದ್ದಾರೆ.
“ಈ ವಿಚಾರದಲ್ಲಿ ನಾವೆಲ್ಲರೂ ಒಗ್ಗೂಡಬೇಕು ಮತ್ತು ಒಟ್ಟಾಗಿ ಮುಂದುವರಿಯಬೇಕು. ನಾನು ಚುನಾವಣೆಯ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಆದರೆ ಎಲ್ಲ ಬಡ ಮತ್ತು ತುಳಿತಕ್ಕೊಳಗಾದ ಸಮುದಾಯಗಳ ಮತಗಳು ವ್ಯರ್ಥವಾಗುತ್ತವೆ ಎಂದು ನಾನು ಖಂಡಿತವಾಗಿಯೂ ಹೇಳುತ್ತೇನೆ. ಹೀಗಾಗಿ ಅವರೆಲ್ಲರೂ ಬ್ಯಾಲೆಟ್ ಪೇಪರ್ ಮೂಲಕ ನಡೆಸುವ ಮತದಾನಕ್ಕೆ ಒತ್ತಾಯಿಸಬೇಕು” ಎಂದು ದಿಲ್ಲಿಯಲ್ಲಿ ನಡೆದ ಸಂವಿಧಾನ ರಕ್ಷಕ ಅಭಿಯಾನದಲ್ಲಿ ಅವರು ಮಾತನಾಡಿದರು.
#WATCH | Delhi: At the Constitution Day program at Talkatora Stadium, Congress President Mallikarjun Kharge says, "…Votes of people from SC, ST, OBC, poor communities are going to waste. Set aside EVMs. We do not want EVMs, we want voting on ballot paper…Let them keep the… pic.twitter.com/MmiQj2JotO
— ANI (@ANI) November 26, 2024
ʼʼಅವರು ಇವಿಎಂ ಅನ್ನು ತಮ್ಮ ಬಳಿ ಇರಿಸಿಕೊಂಡಿದ್ದಾರೆ. ನಮಗೆ ಇವಿಎಂ ಬೇಡ, ನಾವು ಬ್ಯಾಲೆಟ್ ಪೇಪರ್ ಬಳಸುವಂತೆ ಆಗ್ರಹಿಸುತ್ತಿದ್ದೇವೆ. ಆಗ ಅವರಿಗೆ ಅವರ ಸ್ಥಾನ ಏನು ಮತ್ತು ಅವರು ಎಲ್ಲಿದ್ದಾರೆ ಎಂಬುದು ತಿಳಿಯುತ್ತದೆ” ಎಂದು ಖರ್ಗೆ ಬಿಜೆಪಿಯನ್ನು ಟೀಕಿಸಿದರು.
ಬ್ಯಾಲೆಟ್ ಪೇಪರ್ ಅನ್ನು ಮರಳಿ ಪರಿಚಯಿಸಲು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ರೀತಿಯಲ್ಲಿಯೇ ಮತ್ತೊಂದು ಅಭಿಯಾನ ನಡೆಸುವಂತೆ ಖರ್ಗೆ ಕರೆ ನೀಡಿದರು. “ಬ್ಯಾಲೆಟ್ ಪೇಪರ್ ಅನ್ನು ಮರಳಿ ತರಬೇಕು ಎಂದು ಅರಿವು ಮೂಡಿಸಲು ನಾವು ಈ ಅಭಿಯಾನವನ್ನು ಪ್ರಾರಂಭಿಸಲು ಚಿಂತನೆ ನಡೆಸಿದ್ದೇವೆ. ನಾವು ಇತರ ರಾಜಕೀಯ ಪಕ್ಷಗಳೊಂದಿಗೂ ಈ ಬಗ್ಗೆ ಮಾತನಾಡುತ್ತೇವೆ” ಎಂದು ಖರ್ಗೆ ತಿಳಿಸಿದರು. ಇದಕ್ಕೂ ಮೊದಲು ಮಹಾರಾಷ್ಟ್ರದ ಕಾಂಗ್ರೆಸ್ ನಾಯಕ ನಾನಾ ಪಟೋಲೆ ಮಾತನಾಡಿ, ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಚುನಾವಣೆಯಲ್ಲಿ ಇವಿಎಂ ಬಳಸಿ ಬಿಜೆಪಿ ಮೋಸ ಮಾಡಿದೆ ಎಂದು ಆರೋಪಿಸಿದ್ದರು.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರ 288 ಸ್ಥಾನಗಳ ಪೈಕಿ 235 ಸ್ಥಾನಗಳಲ್ಲಿ ಜಯ ಗಳಿಸಿದೆ. ಈ ಪೈಕಿ ಬಿಜೆಪಿ 132 ಸ್ಥಾನಗಳನ್ನು ಗೆಲ್ಲುವ ಮೂಲಕ ಮುನ್ನಡೆ ಸಾಧಿಸಿದೆ. ಶಿಂಧೆ ಅವರ ಶಿವ ಸೇನೆ 57 ಸ್ಥಾನಗಳನ್ನು ಗೆದ್ದರೆ, ಅಜಿತ್ ಪವಾರ್ ಅವರ ಎನ್ಸಿಪಿ 41 ಸ್ಥಾನಗಳನ್ನು ಪಡೆದುಕೊಂಡಿದೆ. ಇನ್ನು ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ 54 ಸ್ಥಾನಗಳಿಗೆ ತೃಪ್ತಿಪಟ್ಟಿದೆ. ಇದರಲ್ಲಿ ಶಿವಸೇನೆ (ಉದ್ಧವ್) 20 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 16 ಮತ್ತು ಎನ್ಸಿಪಿ (ಶರದ್) 10 ಸ್ಥಾನಗಳನ್ನು ಗೆದ್ದಿದೆ.
ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ಇವಿಎಂ ಬದಲು ಬ್ಯಾಲೆಟ್ ಪೇಪರ್ನಲ್ಲಿ ಚುನಾವಣೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ ಅದೇ ದಿನ ಮಲ್ಲಿಕಾರ್ಜುನ ಖರ್ಗೆ ಅವರು ಈ ಬೇಡಿಕೆ ಮುಂದಿಟ್ಟಿದ್ದಾರೆ. ʼʼಚಂದ್ರಬಾಬು ನಾಯ್ಡು ಅಥವಾ ಜಗನ್ ಮೋಹನ್ ರೆಡ್ಡಿ ಸೋತಾಗ ಇವಿಎಂಗಳನ್ನು ಟ್ಯಾಂಪರಿಂಗ್ ಮಾಡಲಾಗಿದೆ ಎಂದು ಹೇಳುತ್ತಾರೆ ಮತ್ತು ಅವರು ಗೆದ್ದಾಗ ಏನನ್ನೂ ಹೇಳುವುದಿಲ್ಲ. ನಾವು ಇದನ್ನು ಏನೆಂದು ಭಾವಿಸಬೇಕು? ನಾವು ಇದನ್ನು ವಜಾಗೊಳಿಸುತ್ತಿದ್ದೇವೆ. ಇದೆಲ್ಲವನ್ನೂ ನೀವು ವಾದಿಸುವ ಸ್ಥಳ ಇದು ಅಲ್ಲ” ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಪಿಬಿ ವರಾಳೆ ಅವರ ಪೀಠ ನ. 27ರಂದು ತೀರ್ಪು ನೀಡಿದೆ.
ಈ ಸುದ್ದಿಯನ್ನೂ ಓದಿ: Nana Patole: ಚುನಾವಣೆಯಲ್ಲಿ ಹೀನಾಯ ಸೋಲು; ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ರಾಜೀನಾಮೆ