Tuesday, 26th November 2024

Leopard spotted: ನೆಲಮಂಗಲ ತಾಲೂಕಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ; ಆತಂಕಗೊಂಡ ಗ್ರಾಮಸ್ಥರು 

Leopard spotted

ನೆಲಮಂಗಲ: ರೈತ ಮಹಿಳೆ ಮೇಲೆ ಚಿರತೆ ದಾಳಿ ಮಾಡಿ ರುಂಡವನ್ನು ಹೊತ್ತೊಯ್ದ ಪ್ರಕರಣ ನಡೆದ ಬೆನ್ನಲ್ಲೇ ಮತ್ತೊಮ್ಮೆ ತಾಲೂಕಿನಲ್ಲಿ ಚಿರತೆ ಕಾಣಿಸಿಕೊಂಡು, ಆತಂಕ ಸೃಷ್ಟಿಸಿದೆ. ತಾಲೂಕಿನ ಅರೇಬೊಮ್ಮನಹಳ್ಳಿ ಪಂಚಾಯಿತಿ ವ್ಯಾಪ್ತಿಯ ತಿಮ್ಮಸಂದ್ರ ಗ್ರಾಮದಲ್ಲಿ ಸೋಮವಾರ ಸಂಜೆ 4 ಗಂಟೆಗೆ  ಚಿರತೆ ಕಾಣಿಸಿಕೊಂಡಿದ್ದು (Leopard spotted), ಗ್ರಾಮಸ್ಥರು ಭಯಭೀತವಾಗಿದ್ದಾರೆ.

ನ.17ರಂದು ಗೊಲ್ಲರಹಟ್ಟಿಯ ರೈತ ಮಹಿಳೆ ಕರಿಯಮ್ಮ ಎಂಬುವರು, ಗೋವುಗಳಿಗೆ ಹುಲ್ಲು ಕಟಾವು ಮಾಡುವಾಗ ಚಿರತೆ ದಾಳಿ ಮಾಡಿ, ಮಹಿಳೆಯ ರುಂಡ ತಿಂದಿತ್ತು. ಇದಾದ ನಂತರ, ನ.18 ರಿಂದ ಕಾರ್ಯಾಚರಣೆ ಆರಂಭಿಸಿ, ನ. 25ರ ವರೆಗೆ ಎಂಟು ದಿನಗಳ ಕಾಲ ಕಾರ್ಯಾಚರಣೆ ನಡೆದು, ಅಂತಿಮವಾಗಿ ಚಿರತೆ ಬೋನಿಗೆ ಬಿದ್ದಿತ್ತು. ಇದರಿಂದ ಜನರು ನಿಟ್ಟಿಸಿರು ಬಿಡುವ ಮುನ್ನವೇ  ಶಿವಗಂಗೆ ಸಮೀಪದ  ತಿಮ್ಮಸಂದ್ರ ಗ್ರಾಮದ ರಸ್ತೆಯ ಪಕ್ಕದಲ್ಲಿ ಸೋಮವಾರ ಸಂಜೆ 4 ಗಂಟೆಗೆ ಚಿರತೆ ಕಾಣಿಸಿಕೊಂಡಿದೆ. ಚಿರತೆ ಓಡಾಡುತ್ತಿದ್ದ ದೃಶ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ವಿಡಿಯೋ ವೈರಲ್ ಆಗಿದೆ.

ಇನ್ನು ಚಿರತೆ ಕಾಣಿಸಿಕೊಂಡಿರೋದು ಇದೇ ಮೊದಲೇನಲ್ಲ. ಆದರೆ ಅದರ ವೀಡಿಯೋ ಸಿಕ್ಕಿರಲಿಲ್ಲ. ಯಾವಾಗ ಮಂಗಳವಾರ ಚಿರತೆ ಕಾಣಿಸಿಕೊಂಡಿತೋ, ಆಗ ಅದರ ವಿಡಿಯೋ ಸೆರೆ ಹಿಡಿಯಲಾಗಿದೆ. ಇದು ಸ್ಥಳೀಯರಲ್ಲಿ ಭಯ ಹುಟ್ಟಿಸಿದೆ. ತಕ್ಷಣ ಅಲರ್ಟ್ ಆದ ಸ್ಥಳೀಯರು, ನೆಲಮಂಗಲ ವಲಯ ಅರಣ್ಯಾಧಿಕಾರಿಗಳಿಗೆ ವಿಚಾರ ತಿಳಿಸಿದ್ದು, ಇಂದಿನಿಂದ ಚಿರತೆ ಸೆರೆಹಿಡಿಯೊ ಕಾರ್ಯಾಚರಣೆ ನಡೆಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ | Pavagada News: ಅನೈತಿಕ ಚಟುವಟಿಕೆ ತಾಣವಾದ 13 ಕೋಟಿ ವೆಚ್ಚದ ಸರ್ಕಾರಿ ಶಾಲಾ ಕಟ್ಟಡ; ಪಾಳು ಬಿದ್ದು ಶಿಕ್ಷಣ ಕೇಂದ್ರವಾಗುವ ಕನಸು ಭಗ್ನ!