Tuesday, 26th November 2024

Tamil Nadu Rains: ತಮಿಳುನಾಡಿಗೆ ಅಪ್ಪಳಿಸಲಿದೆ ಫೆಂಗಲ್ ಚಂಡಮಾರುತ; ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆ

Tamil Nadu Rains

ಚೆನ್ನೈ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿ ಫೆಂಗಲ್ ಚಂಡಮಾರುತ (Cyclone Fengal) ತಮಿಳುನಾಡಿಗೆ ಅಪ್ಪಳಿಸಲಿದ್ದು, ಮಂಗಳವಾರ (ನ. 26) ಭಾರಿ ಮಳೆಯಾಗಿದೆ. ಬುಧವಾರ ಮಳೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ (Meteorological Department) ಎಚ್ಚರಿಕೆ ನೀಡಿದೆ (Tamil Nadu Rains).

ಚೆನ್ನೈ ಮತ್ತು ಹತ್ತಿರದ ಪ್ರದೇಶಗಳಾದ ಚೆಂಗಲ್ಪಟ್ಟು, ಕಾಂಚೀಪುರಂ, ತಿರುವಳ್ಳೂರು, ಕಡಲೂರು ಮತ್ತು ನಾಗಪಟ್ಟಣಂ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಂಗಳವಾರ ಭಾರಿ ಮಳೆಯಾಗಿದೆ. ಪರಿಸ್ಥಿತಿ ನಿಯಂತ್ರಿಸಲು ರಾಜ್ಯದ ವಿವಿಧ ಕಡೆಗಳಲ್ಲಿ 7 ಎನ್‌ಡಿಆರ್‌ಎಫ್‌ (NDRF) ತಂಡಗಳನ್ನು ನಿಯೋಜಿಸಲಾಗಿದೆ. ಈ ಮಧ್ಯೆ ಸರ್ಕಾರಿ ಸ್ವಾಮ್ಯದ ಆವಿನ್ (Aavin) ಕಂಪೆನಿ ಜನರಿಗೆ ಯಾವುದೇ ಅಡೆತಡೆಯಿಲ್ಲದೆ ಹಾಲು ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಪಿಟಿಐ ವರದಿ ಮಾಡಿದೆ. ಚೆನ್ನೈನಲ್ಲಿರುವ ತನ್ನ 8 ಆವಿನ್ ಪಾರ್ಲರ್‌ಗಳು 24×7 ತೆರೆದಿರುತ್ತವೆ ಎಂದು ಘೋಷಿಸಿದೆ.

ಬುಧವಾರ ಚಂಡಮಾರುತ ಉತ್ತರ-ವಾಯುವ್ಯದ ಕಡೆಗೆ ಚಲಿಸಲಿದೆ. ನಂತರದ 2 ದಿನಗಳಲ್ಲಿ ಶ್ರೀಲಂಕಾ ಕರಾವಳಿಯಲ್ಲೂ ಮಳೆಯಾಗಲಿದೆ. ಹವಾಮಾನ ಇಲಾಖೆ ಮಂಗಳವಾರ ತಮಿಳುನಾಡಿನ ಮಯಿಲಾಡುತುರೈ, ಕಾರೈಕಲ್, ತಿರುವರೂರು ಮತ್ತು ನಾಗಪಟ್ಟಿಣಂನಲ್ಲಿ ರೆಡ್ ಅಲರ್ಟ್ ಘೋಷಿಸಿತ್ತು.

ಐಎಂಡಿ ನ. 27ರಂದು 2 ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಿದ್ದು, ನ. 27ರಿಂದ 29ರವರೆಗೆ ಚೆನ್ನೈಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ. ನಾಗಪಟ್ಟಣಂ, ಮಯಿಲಾಡುತುರೈ ಮತ್ತು ತಿರುವರೂರು ಸೇರಿದಂತೆ ಹಲವು ಜಿಲ್ಲೆಗಳ ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪುದುಚೇರಿಯಲ್ಲಿ ನ. 27ರಂದು ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಪುದುಚೇರಿ ಮತ್ತು ಕಾರೈಕಲ್‌ನ ಎಲ್ಲ ಸರ್ಕಾರಿ ಅನುದಾನಿತ ಶಾಲೆಗಳು ಮತ್ತು ಕಾಲೇಜುಗಳಿಗೆ ಬುಧವಾರ ರಜೆ ನೀಡಲಾಗುವುದು ಎಂದು ಪುದುಚೇರಿ ಶಿಕ್ಷಣ ಸಚಿವ ಆರ್ಮುಗಂ ನಮಸ್ಸಿವಾಯಂ ತಿಳಿಸಿದ್ದಾರೆ.

ಸಭೆ ನಡೆಸಿದ ಮುಖ್ಯಮಂತ್ರಿ ಸ್ಟಾಲಿನ್‌

ಮುನ್ನೆಚ್ಚರಿಕೆ ಕ್ರಮಗಳ ಪರಿಶೀಲನೆಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಉನ್ನತ ಮಟ್ಟದ ಸಭೆ ನಡೆಸಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಯ ತಂಡಗಳನ್ನು ನಿಯೋಜಿಸಿದ್ದಾರೆ. ಮಳೆ ಸಂಬಂಧಿತ ಕಾರ್ಯಗಳನ್ನು ಮೇಲ್ವಿಚಾರಣೆ ನಡೆಸುತ್ತಿರುವ ಮತ್ತು ಸಮನ್ವಯಗೊಳಿಸುತ್ತಿರುವ ಜಿಲ್ಲಾಧಿಕಾರಿಗಳು ಮತ್ತು ಐಎಎಸ್ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಸಾಕಷ್ಟು ಸಂಖ್ಯೆಯ ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ ಮತ್ತು ವೈದ್ಯಕೀಯ ಸಲಕರಣೆ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಸಿಎಂ ಸ್ಟಾಲಿನ್ ಅವರಿಗೆ ಮಾಹಿತಿ ನೀಡಿದ್ದಾರೆ. ಹೆಚ್ಚುವರಿಯಾಗಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ತುರ್ತು ಕಾರ್ಯಾಚರಣೆ ಕೇಂದ್ರಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿವೆ.

ಬೆಂಗಳೂರಿನಲ್ಲಿಯೂ ಮಳೆ ಸಾಧ್ಯತೆ

ಚಂಡಮಾರುತ ಪರಿಣಾಮ ಬೆಂಗಳೂರಿನ ಮೇಲೂ ಗೋಚರಿಸಲಿದ್ದು, ಮುಂದಿನ 3 ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ಸುದ್ದಿಯನ್ನೂ ಓದಿ: Sabarimala Temple: ಶಬರಿಮಲೆ ದೇಗುಲದ ಗರ್ಭಗುಡಿಗೆ ಬೆನ್ನು ಹಾಕಿ ನಿಂತು ಪೊಲೀಸರ ಪೋಸ್‌; ವಿವಾದ ಹುಟ್ಟು ಹಾಕಿದ ಫೋಟೊ