ಶುಭವಿದಾಯ
ರವೀ ಸಜಂಗದ್ದೆ
ಒಟ್ಟು 22 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಚಾಂಪಿಯನ್ ಆಗಿ ಟ್ರೋಫಿಗೆ ಮುತ್ತಿಕ್ಕಿದ್ದ 38ರ ಹರೆಯದ ಸ್ಪೇನ್‌ನ ರಾ-ಲ್ ನಡಾಲ್ ತಮ್ಮ
ವೃತ್ತಿಪರ ಟೆನಿಸ್ ಬದುಕಿಗೆ ಇತ್ತೀಚೆಗೆ ವಿದಾಯ ಹೇಳಿದರು. ಅಲ್ಲಿಗೆ ಟೆನಿಸ್ ಲೋಕದ ವರ್ಣರಂಜಿತ, ಅಭೂತಪೂರ್ವ ಆಟಗಾರನೊಬ್ಬನ ‘ಅಂಕಣ ಸಾಂಗತ್ಯ’ ಕೊನೆಗೊಂಡಂತಾಯಿತು.
ಇತ್ತೀಚೆಗೆ ಸ್ಪೇನ್‌ನಲ್ಲಿ ನಡೆದ ಡೇವಿಸ್ ಕಪ್ ಪಂದ್ಯಾವಳಿಯಲ್ಲಿ ಪರಾಭವಗೊಂಡ ಬಳಿಕ ನಡಾಲ್ ನಿವೃತ್ತಿ ಘೋಷಿಸಿದರು. ಟೆನಿಸ್ ಅಂಕಣದ ಸುತ್ತ ನೆರೆದಿದ್ದ 10 ಸಾವಿರಕ್ಕೂ ಹೆಚ್ಚು ಕ್ರೀಡಾಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, “ಮನಶ್ಶಾಂತಿ ಮತ್ತು ಒಂದಷ್ಟು ಸಾಧನೆಗಳ ನೆನಪುಗಳೊಂದಿಗೆ ಶಸ್ತ್ರತ್ಯಾಗ ಮಾಡುತ್ತಿರುವೆ. ಬಿರುದುಗಳು, ಸಾಧನೆಯ ಅಂಕಿ-ಅಂಶಗಳು, ಮುತ್ತಿಕ್ಕಿದ ಟ್ರೋಫಿಗಳು ನನ್ನ ವೃತ್ತಿ ಬದುಕಿನಲ್ಲಿ ಸಾಕಷ್ಟಿವೆ. ಕಂಡಿದ್ದ ಕನಸನ್ನು ಸಾಕಾರಗೊಳಿಸಿಕೊಂಡ ಸಂತಸ ನನ್ನಲ್ಲಿ ಕೆನೆಗಟ್ಟಿದೆ. ಇಷ್ಟು ವರ್ಷ ದೇಶಕ್ಕಾಗಿ ಆಡಿರುವ ಖುಷಿಯಿದೆ. ಒಂದು ಪರಂಪರೆಯ ಭಾಗವಾಗಿರುವ ನೆಮ್ಮದಿ ನನ್ನಲ್ಲಿದೆ. ನನಗೆ ಟೆನಿಸ್ ಆಡಿ ದಣಿವಾಗಿಲ್ಲ, ಆದರೆ ಇನ್ನಷ್ಟು ಆಡಲು ದೇಹ ಸಹಕರಿಸುತ್ತಿಲ್ಲ. ಇಷ್ಟು ದೀರ್ಘಕಾಲ ಆಡುವೆ ಎಂದು ಅಂದುಕೊಂಡಿರಲೇ ಇಲ್ಲ.
ಸದಾ ನನ್ನ ಬೆನ್ನಿಗೆ ನಿಂತ ಅಭಿಮಾನಿಗಳಿಗೆ, ಸಹಕರಿಸಿ ಪ್ರೋತ್ಸಾಹಿಸಿ ಪ್ರೀತಿ ತೋರಿದ ಎಲ್ಲರಿಗೆ ನಾನು ಚಿರಋಣಿ” ಎನ್ನುವಷ್ಟರ ಹೊತ್ತಿಗೆ ಅವರ ಕಣ್ಣಾಲಿಗಳು ತುಂಬಿಬಂದಿದ್ದವು.
ಅಲ್ಲಿ ನೆರೆದಿದ್ದವರು ಮಾತ್ರವಲ್ಲದೆ, ವಿಶ್ವಾದ್ಯಂತ ಆ ಪ್ರಸಾರವನ್ನು ವೀಕ್ಷಿಸುತ್ತಿದ್ದ ಲಕ್ಷಾಂತರ ಜನರ ಹೃದಯಗಳೂ ಭಾರವಾಗಿದ್ದವು. ಆ ನೀರವ ಮೌನದಲ್ಲಿ ನೋವಡಗಿತ್ತು! ವಿಶ್ವ ಟೆನಿಸ್ ಇತಿಹಾಸದಲ್ಲಿ ಗರಿಷ್ಠ ಗ್ರ್ಯಾಂಡ್ ಸ್ಲ್ಯಾಮ್ ಗಳನ್ನು (24) ತಮ್ಮದಾಗಿಸಿಕೊಂಡಿರುವ ಶ್ರೇಯ ಸರ್ಬಿಯಾ ದೇಶದ ನೊವಾಕ್ ಜೊಕೊವಿಕ್ ಅವರಿಗೆ ಸಲ್ಲುತ್ತದೆ. ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ (22) ರಾಫೆಲ್ ನಡಾಲ್. 3ನೇ ಸ್ಥಾನದಲ್ಲಿ (20) ಸ್ವಿಸ್ ದೇಶದ ರೋಜರ್ ಫೆಡರರ್ ಇದ್ದು, ಈ ತ್ರಿಮೂರ್ತಿಗಳನ್ನು ಟೆನಿಸ್ ಲೋಕ ಮರೆಯಲಾಗದು.
ಇಬ್ಬರು ಅಸಾಮಾನ್ಯ ಆಟಗಾರರು ಪೈಪೋಟಿಗೆ ಬಿದ್ದು ಮೊದಲ ಸ್ಥಾನ ಗಿಟ್ಟಿಸಲು, ಮತ್ತದನ್ನು ಕಾಪಾಡಿಕೊಂಡು ಬರಲು ನಿರಂತರ ಶ್ರಮಿಸು ವುದು ಟೆನಿಸ್ ಲೋಕದಲ್ಲಿ ಸಾಮಾನ್ಯವಾಗಿ ಕಾಣಬರುವ ಚಿತ್ರಣ. ಈ ಮೂವರು ತ್ರಿಕೋನ ಪೈಪೋಟಿಯ ಮೂಲಕ ಶ್ರೇಷ್ಠ ಪ್ರದರ್ಶನಗಳನ್ನು ಅಭಿಮಾನಿಗಳಿಗೆ ಉಣಬಡಿಸಿದರೆನ್ನಬೇಕು. ಇವರ ಪೈಕಿ ಫೆಡರರ್ 2 ವರ್ಷಗಳ ಹಿಂದೆ ತೆರೆಮರೆಗೆ ಸರಿದರೆ, ನಡಾಲ್ ಕಳೆದ ವಾರವಷ್ಟೇ ಟೆನಿಸ್ ರ‍್ಯಾಕೆಟ್ ಅನ್ನು ಕೆಳಗಿಟ್ಟಿದ್ದಾರೆ. ಅಲ್ಲಿಗೆ ಟೆನಿಸ್ ಲೋಕದಲ್ಲಿ ಮತ್ತೊಂದು ಮನ್ವಂತರದ ಸಮಾಪ್ತಿ.
ನಡಾಲ್ ನಿವೃತ್ತಿಯ ವಿಚಾರವಾಗಿ ಅವರ ಸಮಕಾಲೀನ ಆಟಗಾರ ಜೊಕೊವಿಕ್ ಮಾತನಾಡುತ್ತಾ, “ನಿಮ್ಮ ದೃಢತೆ, ಹೋರಾಟದ ಮನೋ ಭಾವ, ಅಂಕಣಕ್ಕೆ ಇಳಿಯುವಾಗ ತೋರುವ ಶಕ್ತಿ-ಸಾಮರ್ಥ್ಯ ಇವು ತಲೆಮಾರುಗಳಿಗೆ ಸ್ಪೂರ್ತಿಯ ವಿಷಯ. ನಿಮ್ಮ ಪ್ರತಿಸ್ಪರ್ಧಿ ಎಂದು ಕರೆಸಿಕೊಳ್ಳಲು ನನಗೆ ಹೆಮ್ಮೆ. ನಿವೃತ್ತ ಜೀವನ ಉತ್ಕೃಷ್ಟವಾಗಿರಲಿ” ಎಂದು ಹಾರೈಸಿದರೆ, ಮತ್ತೋರ್ವ ಟೆನಿಸ್ ದಂತಕಥೆ ಫೆಡರರ್, “ನಂಬಲಸಾಧ್ಯವಾದ ನಿಮ್ಮ ವೃತ್ತಿಜೀವನಕ್ಕೆ ಹೃತ್ಪೂರ್ವಕ ಅಭಿನಂದನೆಗಳು; ನಿಮಗೆದುರಾಗಿ ಆಡುವುದೇ ಒಂದು ವಿಶೇಷವಾಗಿತ್ತು. ಅಂಥ ಹಲವಾರು ಸ್ಮರಣೀಯ ಕ್ಷಣಗಳು ನನ್ನ ಸ್ಮೃತಿಪಟಲದಲ್ಲಿ ಹಸಿರಾಗಿರಲಿವೆ” ಎಂದಿದ್ದಾರೆ. ಇದು ಅಗ್ರಮಾನ್ಯ ಕ್ರೀಡಾಪಟುಗಳ ಹಿರಿಮೆ, ಹೃದಯವೈಶಾಲ್ಯ ಮತ್ತು ಕ್ರೀಡಾಸ್ಪೂರ್ತಿಗೆ ದ್ಯೋತಕ.
1986ರ ಜೂನ್ 3ರಂದು ಸ್ಪೇನ್‌ನ ಮ್ಯಾನಕೋರ್‌ನಲ್ಲಿ ಜನಿಸಿದ ನಡಾಲ್, 3 ವರ್ಷದವರಿರುವಾಗಲೇ ಟೆನಿಸ್‌ನೆಡೆಗೆ ಆಕರ್ಷಿತರಾಗಿ, 8 ವರ್ಷದವರಿರುವಾಗ ಸ್ಪೇನ್‌ನಲ್ಲಿ ನಡೆದ 12ರ ಹರೆಯದ ಕೆಳಗಿನವರ ಚಾಂಪಿಯನ್‌ಷಿಪ್ ಗೆದ್ದು ಎಲ್ಲರ ಹುಬ್ಬೇರುವಂತೆ ಮಾಡಿದರು. 14ನೇ ವಯಸ್ಸಿಗೆ, ಅಂದರೆ 2001ರಲ್ಲಿ ಜೂನಿಯರ್ ವಿಭಾಗದಲ್ಲಿ ವೃತ್ತಿಪರ ಟೆನಿಸ್‌ಗೆ ಪದಾರ್ಪಣೆ ಮಾಡಿ, ಒಂದಿಡೀ ವೃತ್ತಿಜೀವನದಲ್ಲಿ 22
ಗ್ರ್ಯಾಂಡ್ ಸ್ಲ್ಯಾಮ್, 92 ಎಟಿಪಿ ಪ್ರಶಸ್ತಿಗಳನ್ನು ಗೆದ್ದರು, ‘ಆವೆಮಣ್ಣಿನ ಅಂಕಣದ ರಾಜ’ ಎಂದು ಖ್ಯಾತರಾದರು.
2009 ಮತ್ತು 2022ರಲ್ಲಿ ಆಸ್ಟ್ರೇಲಿಯಾ ಓಪನ್, 14 ಬಾರಿ ಫ್ರೆಂಚ್ ಓಪನ್, 2008 ಮತ್ತು 2010ರಲ್ಲಿ ವಿಂಬಲ್ಡನ್, 2010, 2013, 2017 ಮತ್ತು 2019ರಲ್ಲಿ ಯುಎಸ್ ಓಪನ್ ಜಯಿಸಿದ್ದು, 2008ರ ಒಲಿಂಪಿಕ್ಸ್‌ನಲ್ಲಿ ಸಿಂಗಲ್ಸ್ ವಿಭಾಗದಲ್ಲಿ ಮತ್ತು 2016ರ ಒಲಿಂಪಿಕ್ಸ್‌ನಲ್ಲಿ ಡಬಲ್ಸ್ ವಿಭಾಗದಲ್ಲಿ ಚಿನ್ನದ ಪದಕ, 2004, 2009, 2011 ಮತ್ತು 2019ರಲ್ಲಿ ಡೇವಿಸ್ ಕಪ್ ಗೆದ್ದಿದ್ದು… ಅಬ್ಬಾ, ನಡಾಲ್ ಸಾಧನೆಯದ್ದೇ ಒಂದು ಗಮ್ಮತ್ತು! ಆವೆಮಣ್ಣಿನ ಅಂಕಣದಲ್ಲಿ ಸತತವಾಗಿ 81 ಪಂದ್ಯಗಳನ್ನು ನಡಾಲ್ ಗೆದ್ದಿರುವುದು, ಓಪನ್ ಟೆನಿಸ್ ಯುಗದಲ್ಲಿ ಸಾರ್ವಕಾಲಿಕ ದಾಖಲೆ. ಬರೋಬ್ಬರಿ 1463 ದಿನಗಳ ಕಾಲ ವಿಶ್ವ ಎಟಿಪಿ ರ‍್ಯಾಂಕಿಂಗ್‌ನಲ್ಲಿ ಅಗ್ರಶ್ರೇಣಿಯ ಆಟಗಾರನಾಗಿ ಮೆರೆದವರು, ವೃತ್ತಿಜೀವನದಲ್ಲಿ ಒಟ್ಟು 1080 ಪಂದ್ಯಗಳನ್ನು ಗೆದ್ದು 227 ಪಂದ್ಯಗಳನ್ನು ಸೋತವರು ಈ ನಡಾಲ್.
ವಿಶ್ವದ ಟೆನಿಸ್ ಆಟಗಾರರ ಪಟ್ಟಿಯಲ್ಲಿ 6ನೇ ಶ್ರೀಮಂತ ತಾರೆ ಎನಿಸಿಕೊಂಡಿರುವ ನಡಾಲ್, ಗೆಲುವಿನ ಬಹುಮಾನವಾಗಿ 135 ಮಿಲಿಯನ್ ಡಾಲರ್ (ಸುಮಾರು 1140 ಕೋಟಿ ರುಪಾಯಿ) ಹಣ ಗಳಿಸಿರುವುದಲ್ಲದೆ, ವಿವಿಧ ಕಂಪನಿಗಳ ರಾಯಭಾರಿಯಾಗುವ ಮೂಲಕ ಸುಮಾರು 23 ಮಿಲಿಯನ್ ಡಾಲರ್ (ಸುಮಾರು 194 ಕೋಟಿ ರುಪಾಯಿ) ಹಣವನ್ನು ದಕ್ಕಿಸಿಕೊಂಡಿದ್ದಾರೆ, ರಿಯಲ್ ಎಸ್ಟೇಟ್ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ್ದಾರೆ. ಪ್ರಸಕ್ತ ವರ್ಷ ಅವರ ಮೌಲ್ಯ 225 ಮಿಲಿಯನ್ ಡಾಲರ್- ಅಂದರೆ ಸುಮಾರು 1900 ಕೋಟಿ ರುಪಾಯಿಗಳು! 2008ರಲ್ಲಿ ತಾವು ಸ್ಥಾಪಿಸಿದ ‘ರಾಫೆಲ್ ನಡಾಲ್ ಫೌಂಡೇಷನ್’ ಮೂಲಕ ಸ್ಪೇನ್ ಮತ್ತು ಭಾರತದ 10000ಕ್ಕೂ ಹೆಚ್ಚಿನ ಬಡ, ಅವಕಾಶ ವಂಚಿತ ಮಕ್ಕಳ ಶಿಕ್ಷಣ ಮತ್ತು ಕ್ರೀಡಾಸಕ್ತಿ ಪೂರೈಸಲು ನೆರವಾಗುತ್ತ, ತಮ್ಮ ಹೃದಯ ಶ್ರೀಮಂತಿಕೆಯಿಂದಲೂ ಹೆಸರಾಗಿದ್ದಾರೆ.
ವಿವಿಧ ಸಮಾಜಮುಖಿ ಕಾರ್ಯಕ್ರಮಗಳಿಗೆ ಈ ಫೌಂಡೇಷನ್ ಕಳೆದ ವರ್ಷ ವ್ಯಯಿಸಿದ ಹಣ 75 ಕೋಟಿ ರುಪಾಯಿಗಳು. ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಎನ್ನುವಂತೆ ಸಮಾಜದಿಂದ ಗಳಿಸಿದ್ದನ್ನು ಸಮಾಜದ ಅಶಕ್ತರಿಗೆ, ಅವಕಾಶ ವಂಚಿತರಿಗೆ ಹಂಚುತ್ತಿರುವ ನಡಾಲ್ ನಿಜಾರ್ಥದಲ್ಲಿ
ಜನಾನುರಾಗಿ, ಜನರ ಹೃದಯಸಾಮ್ರಾಟ! ಸುದೀರ್ಘ 22 ವರ್ಷಗಳವರೆಗಿನ ನಡಾಲ್‌ರ ಟೆನಿಸ್ ವೃತ್ತಿಜೀವನವು ಹತಾಶೆ, ನೋವು, ಅನೇಕ ಏಳು- ಬೀಳುಗಳಿಂದ ಕೂಡಿತ್ತು ಎಂಬುದೂ ಕಟುಸತ್ಯವೇ. ಆಗೀಗ ಎದುರಾದ ಗಾಯದ ಸಮಸ್ಯೆಯಿಂದಾಗಿ ಅವರು ಹಲವಾರು ಪ್ರತಿಷ್ಠಿತ
ಟೂರ್ನಿಗಳಿಂದ ಹೊರಗುಳಿಯಬೇಕಾಯಿತು.
2018ರಲ್ಲಾದ ಮಣಿಗಂಟಿನ ಗಾಯದ ಸಮಸ್ಯೆಯಿಂದಾಗಿ ಆಡಲಾಗಲಿಲ್ಲ, 2021ರಲ್ಲಾದ ಕಾಲಿನ ಗಾಯ ಅವರನ್ನು ಹೈರಾಣಾಗಿಸಿತ್ತು.
2023ರ ಆಸ್ಟ್ರೇಲಿಯಾ ಓಪನ್ ಸಮಯದಲ್ಲಿ ಬೆನ್ನಿನ ಕೆಳಭಾಗದ ನೋವಿಗೆ ತುತ್ತಾದರು, ಆ ವರ್ಷ ತಮ್ಮ ಅಚ್ಚುಮೆಚ್ಚಿನ ಫ್ರೆಂಚ್ ಓಪನ್ ಟೂರ್ನಿಯಲ್ಲೂ ಆಡಲಾಗಲಿಲ್ಲ. ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಗಾಯದ ಸಮಸ್ಯೆಯಿಂದಾಗಿ ಕಳೆದ 3 ತಿಂಗಳಿಂದ ಸ್ಪರ್ಧಾತ್ಮಕ ಪಂದ್ಯಗಳಿಂದ ದೂರವುಳಿದಿದ್ದ ನಡಾಲ್‌ಗೆ ಗೌರವಾರ್ಥವಾಗಿ ಸ್ಪೇನ್‌ನ ಡೆವಿಸ್ ಕಪ್ ತಂಡದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಅಷ್ಟೆಲ್ಲಾ ಗಾಯ-ಅನಾರೋಗ್ಯ-ಅಡೆತಡೆಯ ನಡುವೆ ಯೂ ಪುಟಿದೆದ್ದು ಸರ್ವಶ್ರೇಷ್ಠ ಪ್ರದರ್ಶನ ನೀಡಿದ ಕಾರಣಕ್ಕೆ ನಡಾಲ್ ವಿಶಿಷ್ಟರಾಗಿ-ವಿಭಿನ್ನರಾಗಿ ನಿಲ್ಲುತ್ತಾರೆ. ಛಲಬಿಡದ ತ್ರಿವಿಕ್ರಮನಂತೆ ಅಂಕಣದಲ್ಲಿ ಎದುರಾಳಿಯನ್ನು ಸದೆಬಡಿವ
ಅವರ ವೈಖರಿಯು ಸಾಧನೆಗೆ ಹಪಹಪಿಸುವ ಉದಯೋನ್ಮುಖ ಆಟಗಾರರಿಗೆ ಮಾದರಿ. ನಡಾಲ್‌ರ ಚುರುಕು ಆಟವನ್ನು ಟೆನಿಸ್ ಅಂಕಣ ಮತ್ತು ಕ್ರೀಡಾಭಿಮಾನಿಗಳು ಮಿಸ್ ಮಾಡಿಕೊಳ್ಳುವುದಂತೂ ಖರೆ! ಸಾರ್ಥಕ ನಿವೃತ್ತ ಜೀವನ ನಡಾಲ್‌ರಿಗೆ ಒದಗಲಿ ಎಂದು ಹಾರೈಸೋಣ.
(ಲೇಖಕರು ಸಾಫ್ಟ್ ವೇರ್ ಉದ್ಯೋಗಿ)
ಇದನ್ನೂ ಓದಿ: Ravi Sajangadde Column: ಸಂಪರ್ಕ ಸಾಧನ ಸ್ಫೋಟವೆಂಬ ಕದನ ಕುತೂಹಲ !