Wednesday, 27th November 2024

Lokesh Kayarga Column: ಮನಸ್ಸಿನ ಬಡತನಕ್ಕೆ ಪಡಿತರ ಉಂಟೇ ?

ಲೋಕಮತ

ಲೋಕೇಶ್‌ ಕಾಯರ್ಗ

kaayarga@gmail.com

ಈ ವಿಚಾರ ನಿಮಗೆ ಗೊತ್ತೇ ? ಏಳು ಕೋಟಿ ಕನ್ನಡಿಗರಲ್ಲಿ ಶೇ.65ಕ್ಕಿಂತ ಹೆಚ್ಚು ಮಂದಿ ಒಪ್ಪೊತ್ತು ಊಟಕ್ಕೆ ಪರದಾಡುತ್ತಿದ್ದಾರೆ ! ಇಷ್ಟೂ ಮಂದಿಯ ಕುಟುಂಬದ ತಿಂಗಳ ಆದಾಯ 10 ಸಾವಿರ ದಾಟಿಲ್ಲ. ವಾರ್ಷಿಕ ಆದಾಯ 1.20 ಲಕ್ಷ ಕ್ಕಿಂತ ಕಡಿಮೆ ಇರುವ ಕಾರಣದಿಂದಲೇ ಇವರು ಬಿಪಿಎಲ್ ಕಾರ್ಡ್‌ಗೆ ಅರ್ಹತೆ ಪಡೆದಿದ್ದಾರೆ. ಅಂದರೆ ಇವರು ಸರಕಾರಿ ಅನ್ನದ ಋಣದಲ್ಲಿದ್ದಾರೆ. ಇದನ್ನು ಸಾಬೀತು ಮಾಡಲು ನಮ್ಮ ಸರಕಾರದ ಬಳಿ ದಾಖಲೆಗಳಿವೆ !

ಆರ್ಥಿಕವಾಗಿ ಸಂಕಷ್ಟದಲ್ಲಿರುವವರ ವೈದ್ಯಕೀಯ ವೆಚ್ಚ ಭರಿಸಲು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನೆರವು ನೀಡುವ ಕ್ರಮವಿದೆ. ಆದರೆ ಇದಕ್ಕಿರುವ ಷರತ್ತು ಎಂದರೆ ಸಹಾಯ ಯಾಚಿಸುವ ಕುಟುಂಬಗಳ ವಾರ್ಷಿಕ ಆದಾಯ 30 ಸಾವಿರ ರು. ದಾಟುವಂತಿಲ್ಲ. ಅಂದರೆ ಈ
ಕುಟಂಬದ ದಿನಗಳಿಕೆ 83 ರು. ಒಳಗಿರಬೇಕು. ಸಿಎಂ ಸಹಿ ಬಿದ್ದು ಪರಿಹಾರಕ್ಕೆ ಆದೇಶ ನೀಡಿದ ಹೊರತಾಗಿಯೂ, ಕುಟುಂಬದ ವಾರ್ಷಿಕ ಆದಾಯ 30 ಸಾವಿರ ರು. ಒಳಗಿದೆ ಎಂದು ತಹಶೀಲ್ದಾರ್ ಆದಾಯ ಪ್ರಮಾಣ ಪತ್ರ ನೀಡದ ಹೊರತಾಗಿ ಹಣಕಾಸು ಇಲಾಖೆ ಪರಿಹಾರ
ಧನ ಮಂಜೂರು ಮಾಡುವುದಿಲ್ಲ! ಅಂದರೆ ಸರಕಾರದ ಪ್ರಕಾರ ದಿನಕ್ಕೆ ಕೇವಲ 83 ರು. ಸಂಪಾದಿಸಿದರೂ ನಾಲ್ವರು ಸದಸ್ಯರ ಕುಟುಂಬ ವೊಂದು ಈ ಸಮಾಜದಲ್ಲಿ ಬದುಕಲು ಸಾಧ್ಯವಿದೆ.

ಇನ್ನೊಂದು ವಿಷಯ ನಿಮಗೆ ಗೊತ್ತಾ? ತಮಿಳುನಾಡು ಬಳಿಕ ಕರ್ನಾಟಕ ದೇಶದ ಎರಡನೇ ಅತಿ ಶ್ರೀಮಂತ ರಾಜ್ಯ. 2022-23ರ ಸಾಲಿನಲ್ಲಿ ಕನ್ನಡಿಗರ ಸರಾಸರಿ ತಲಾ ಆದಾಯ 3.31 ಲಕ್ಷ ರು.ಗಳು. ಈಗ ಇದು ಇನ್ನಷ್ಟೂ ಹೆಚ್ಚಾಗಿರಬಹುದು. ಮುಂಬೈ (92) ಮತ್ತು ದೆಹಲಿ (68) ಬಳಿಕ ಅತಿ ಹೆಚ್ಚು ಶತಕೋಟಿಪತಿ ಗಳಿರುವುದು ಕೂಡ ನಮ್ಮ ಬೆಂಗಳೂರಿನಲ್ಲಿ (27)! ಈ ಹೇಳಿಕೆಗೂ ಅಧಿಕೃತ ದಾಖಲೆಗಳಿವೆ.

ಸರಕಾರಿ ಸಂಸ್ಥೆಗಳೇ ಕೊಟ್ಟಿರುವ ಮಾಹಿತಿ ಇದು ! ಈಗ ಇವುಗಳಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ?. ವಿಶ್ವ ಸಂಸ್ಥೆ ಬಡತನ ಸೂಚ್ಯಂಕದ ಇತ್ತೀಚಿಗಿನ ವರದಿ ಪ್ರಕಾರ ಭಾರತದಲ್ಲಿ ಕಡುಬಡವರ ಸಂಖ್ಯೆ ಈಗ ಕೇವಲ 3.44 ಕೋಟಿ. ಮುಂದಿನ ಕೆಲವೇ ವರ್ಷಗಳಲ್ಲಿ ಭಾರತ ಮಧ್ಯಮ ವರ್ಗದ ಜನರನ್ನು ಹೊಂದಿದ ದೇಶವಾಗ ಲಿದೆ. ನಮ್ಮ ನೀತಿ ಆಯೋಗದ ವರದಿ ಪ್ರಕಾರ ದೇಶದ ಕಡು ಬಡವರ ಸಂಖ್ಯೆ 7.5 ಕೋಟಿಗಿಂತ ಕಡಿಮೆ ಇದೆ. ಹಾಗಿದ್ದರೆ ನಾನಾ ರಾಜ್ಯಗಳಲ್ಲಿ ಬಿಪಿಎಲ್ ಹೆಸರಿನಲ್ಲಿ ಪಡಿತರ ಪಡೆಯುತ್ತಿರುವವರು ಯಾರು ? ವಿಶ್ವಸಂಸ್ಥೆಯ
ವರದಿ ಉತ್ಪೇಕ್ಷೆ ಇರಬಹುದು. ಆದರೆ ನಮ್ಮ ಬಡವರ ಸಂಖ್ಯೆಯೂ ಇಷ್ಟೊಂದಿಲ್ಲ ಎನ್ನುವುದು ಸ್ಪಷ್ಟ.

ದೈನೇಸಿತನ ಬಿಚ್ಚಿಟ್ಟ ಪಡಿತರ ಚೀಟಿ
ಪಡಿತರ ಚೀಟಿಯ ಅವಾಂತರಗಳನ್ನು ಬಿಚ್ಚಿಡುತ್ತಾ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ. ಎಚ್. ಮುನಿಯಪ್ಪ ನೀಡಿರುವ ಮಾಹಿತಿಗಳು ನಮ್ಮ ‘ಕಡುಬಡತನ’ವನ್ನು ಮಾತ್ರವಲ್ಲ, ಮಾನಸಿಕ ದೈನೇಸಿತನ ವನ್ನೂ ತೆರೆದಿಟ್ಟಿವೆ. ರಾಜ್ಯದಲ್ಲಿ ಅಂತ್ಯೋದಯ, ಬಿಪಿಎಲ್, ಎಪಿಎಲ್ ಕಾರ್ಡುಗಳು ಸೇರಿ ಸುಮಾರು 12574521 ಪಡಿತರ ಚೀಟಿಗಳಿವೆ. ಈ ಕಾರ್ಡುಗಳಲ್ಲಿ ಸುಮಾರು 43533099 ಕುಟುಂಬ ಸದಸ್ಯರಿದ್ದಾರೆ.

ಅಂದರೆ ರಾಜ್ಯದ ಜನಸಂಖ್ಯೆಯ ಶೇ.65ಕ್ಕಿಂತ ಹೆಚ್ಚು ಜನರ ಹೆಸರು ಈ ಕಾರ್ಡುಗಳಲ್ಲಿವೆ. ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಬಿಪಿಎಲ್ ಪಡಿತರ ಚೀಟಿ ಹೊಂದಿದ ‘ಹೆಗ್ಗಳಿಕೆ’ ನಮ್ಮದು. ಕೇರಳ (ಶೇ.45.59), ತಮಿಳುನಾಡು (ಶೇ.48.81), ತೆಲಂಗಾಣ (ಶೇ.53.93), ಆಂಧ್ರಪ್ರದೇಶ (ಶೇ 63.73) ಮಹಾರಾಷ್ಟ್ರ (ಶೇ.58.47) ಸೇರಿ ಇನ್ನೆಲ್ಲೂ ಇಷ್ಟೊಂದು ಸಂಖ್ಯೆಯ ಕಾರ್ಡುಗಳಿಲ್ಲ.

ಕಾರ್ಡ್‌ದಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಸರಕಾರ ಮತ್ತೊಮ್ಮೆ ‘ಅನರ್ಹ’ರನ್ನು ಪತ್ತೆ ಮಾಡುವ ಕಾರ‍್ಯಕ್ಕೆ ಕೈ ಹಾಕಿದೆ. ಹಾಲಿ ಪಡಿತರ ದಾರರಲ್ಲಿ ಸುಮಾರು 58,458 ಮಂದಿ ಆದಾಯ ತೆರಿಗೆ ಪಾವತಿದಾರರು. ಕುಟುಂಬ ತಂತ್ರಾಂಶದ ಪ್ರಕಾರ ಸುಮಾರು 10,09,478 ಕಾರ್ಡ್‌ದಾರರ ಆದಾಯ 1.20 ಲಕ್ಷಕ್ಕಿಂತ ಮೇಲಿದೆ. ಸುಮಾರು 275667 ಮಂದಿ ಆರು ತಿಂಗಳಿನಿಂದ ಪಡಿತರ ಅಂಗಡಿಗಳಿಗೆ ಕಾಲಿಟ್ಟಿಲ್ಲ. ಇವರೆಲ್ಲರೂ ಸೇರಿ ಸುಮಾರು 13,87,639 ಪಡಿತರ ಕಾರ್ಡ್‌ಗಳನ್ನು ರದ್ದು ಮಾಡಲು ಮುಂದಾಗುತ್ತಿದ್ದಂತೆಯೇ ಎಲ್ಲೆಡೆಯಿಂದ ‘ಬಡವರಿಗೆ’ ಅನ್ಯಾಯವಾಗುತ್ತಿದೆ ಎಂಬ ಕೂಗು ಕೇಳಿ ಬಂತು. ಅಕ್ಕಿ ಭಾಗ್ಯದ ಭರವಸೆಯ ಮೂಲಕವೇ ಅಧಿಕಾರಕ್ಕೆ ಬಂದ ಸರಕಾರ ಮತ್ತೆ ಎಂದಿನಂತೆ ಯಥಾಸ್ಥಿತಿಗೆ ಮುಂದಾಗಿದೆ.

ಭರವಸೆಗಳ ಪರಂಪರೆ
ಈ ಕಸರತ್ತುಗಳು ಇಂದು ನಿನ್ನೆಯದ್ದಲ್ಲ. 1997ರಲ್ಲಿ ಸಾರ್ವತ್ರಿಕ ಪಡಿತರ ವ್ಯವಸ್ಥೆಯನ್ನು ಕಿತ್ತು ಹಾಕಿ ನಿರ್ದಿಷ್ಟ ಪಡಿತರ ವಿತರಣೆ ವ್ಯವಸ್ಥೆ (ಡಿಪಿಡಿಎಸ್)ಯನ್ನು ಜಾರಿಗೊಳಿಸಿದ ದಿನದಿಂದಲೇ ಪಡಿತರ ಚೀಟಿಗೋಸ್ಕರ ನೂಕುನುಗ್ಗಲು ಆರಂಭವಾಗಿತ್ತು. ಒಂದೂವರೆ ದಶಕದ
ಹಿಂದೆ ಪಡಿತರ ಚೀಟಿ ಎಂದರೆ ಸೀಮೆಎಣ್ಣೆಗಷ್ಟೇ ಮೀಸಲಾದ ಪರವಾನಿಗೆ ಪತ್ರವಾಗಿತ್ತು. ಆಗಲೂ ಒಂದೆರಡು ಕೆಜಿ ಅಕ್ಕಿ, ಗೋಧಿ ಮತ್ತಿತರ ದವಸ-ಧಾನ್ಯಗಳು, ರಿಯಾಯಿತಿ ದರದ ಕೋರ ಬಟ್ಟೆ ದೊರೆಯುತ್ತಿತ್ತು. ಆದರೆ ಜನರಿಗೆ ಆಹಾರದ ಬರವಿರಲಿಲ್ಲ. ತಮಗೆ ಬೇಕಾದ ಅಕ್ಕಿ,
ಜೋಳ, ರಾಗಿ ಮತ್ತಿತರ ಆಹಾರಧಾನ್ಯಗಳನ್ನು ತಾವೇ ಬೆಳೆಯುತ್ತಿದ್ದರು.

ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದ ಅಕ್ಕಿಯ ಬೆಲೆ ಏಳೆಂಟು ರೂಪಾಯಿಗಳಿಗಿಂತ ಜಾಸ್ತಿಯಿರಲಿಲ್ಲ. ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಯಾಗಿದ್ದಾಗ ಜಾರಿಗೊಳಿಸಿದ ಹಸಿರು ಪಡಿತರ ಚೀಟಿ ಅವರಿಗೆ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಈ ಚೀಟಿದಾರರು ಕೇಸರಿ ಕಾರ್ಡಿಗಿಂತ ಹೆಚ್ಚಿನ ಪ್ರಮಾಣದ ಪಡಿತರ ಪಡೆಯುತ್ತಿದ್ದರು. ಇದರೊಂದಿಗೆ ಪಡಿತರ ದಾರರ ನಡುವೆಯೇ ಶ್ರೀಮಂತರು ಮತ್ತು ಬಡವರೆಂಬ ಎರಡು ವರ್ಗ ಸೃಷ್ಟಿಯಾಯಿತು. ಏರುತ್ತಿರುವ ಪಡಿತರ ದಾರರ ಸಂಖ್ಯೆಯನ್ನು ಕಡತಗೊಳಿಸುವ ಉದ್ದೇಶದಿಂದ ಸರಕಾರ ಆಗಾಗ ಬಣ್ಣ ಬದಲಾಯಿಸುವ ಕೆಲಸಕ್ಕೆ ಕೈ ಹಾಕಿತು. ಕೇಸರಿ, ಹಳದಿ ಕಾರ್ಡುಗಳು ಕಣ್ಮರೆಯಾಗತೊಡಗಿದವು. ಪಡಿತರ ಸೌಲಭ್ಯವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಜನರು ಬಡವರಾಗುವ ಪ್ರಯತ್ನ ನಡೆಸಿದರು. ಈ ಮಧ್ಯೆ ಕೇಂದ್ರ ಸರಕಾರ ರಾಜೀವ್ ಗಾಂಧಿ ಸರಕಾರ ಅಂತ್ಯೋದಯ ಅನ್ನ ಯೋಜನೆಯಡಿ ಹೆಚ್ಚಿನ ಸವಲತ್ತು ಉಳ್ಳ ಪಡಿತರ ಯೋಜನೆ ಆರಂಭಿಸಿತು.

ಈ ಯೋಜನೆಗೆ ಸದಸ್ಯರಾಗಲು ಉಳ್ಳವರ ನಡುವೆಯೇ ಪೈಪೋಟಿ ಆರಂಭವಾಯಿತು. ಸವಲತ್ತಿನ ದುರುಪಯೋಗ ಹೆಚ್ಚಿದಾಗ ಕಾರ್ಡುಗಳ ಬದಲು ಕೂಪನ್ ಗಳನ್ನು ಹಂಚಲಾಯಿತು. ಇವು ಖಾಲಿಯಾದಾಗ ಬದಲಿ ಕಾರ್ಡ್ ನೀಡುತ್ತೇವೆಂದು ಹೇಳಿ ವರ್ಷಗಟ್ಟಲೆ ಯಾವ ಕಾರ್ಡು ಗಳನ್ನೂ ನೀಡದೆ ಸತಾಯಿಸುವ ಪರಂಪರೆ ಆರಂಭವಾಯಿತು. ೯೦ರ ದಶಕದ ನಂತರ ಪಡಿತರ ವಿಷಯ ಎಲ್ಲ ರಾಜಕೀಯ ಪಕ್ಷಗಳಿಗೂ ವೋಟು ಗಿಟ್ಟಿಸುವ ಸುಲಭ ತಂತ್ರವಾಯಿತು. ಬಿ.ಎಸ್. ಯಡಿಯೂರಪ್ಪ ಅವರು ಮೊದಲ ಬಾರಿಗೆ ಎರಡು ವಾರಗಳ ಕಾಲ ಸಿಎಂ ಆದ ಕಾಲಕ್ಕೆ ನೀಡಿದ ಮೊದಲ ಭರವಸೆ ಪಡಿತರ ಚೀಟಿ ಸಮಸ್ಯೆ ನಿವಾರಣೆ. ಸದ್ಯಕ್ಕೆ ಯಾವ ರಾಜಕೀಯ ಪಕ್ಷವೂ ಪಡಿತರದ ವಿಚಾರದಲ್ಲಿ ಹಿಂದೇಟು ಹಾಕುವಂತಿಲ್ಲ.

ಆದರೆ 70ರ ದಶಕದಲ್ಲಿ ಕೇಂದ್ರ ಸರಕಾರದ ನೀಡುತ್ತಿದ್ದ ವಾರ್ಷಿಕ ಆಹಾರ ಸಬ್ಸಿಡಿ ಪ್ರಮಾಣ 10 ಸಾವಿರ ಕೋಟಿ ರೂ.ಗಳ ಒಳಗಿತ್ತು. ಈಗ ರಾಜ್ಯ ಸರಕಾರವೇ ವರ್ಷಕ್ಕೆ 60 ಸಾವಿರ ಕೋಟಿಗಳನ್ನು ಇದಕ್ಕಾಗಿ ವ್ಯಯಿಸುತ್ತಿದೆ. ಒಂದೆಡೆ ಬಡವರ ಪರ ಸರಕಾರ ಎಂಬ ಭಾವನೆ
ಉಳಿಸಿಕೊಳ್ಳಬೇಕು, ಇನ್ನೊಂದೆಡೆ ಸಬ್ಸಿಡಿಯ ಮೊತ್ತ ವನ್ನು ನಿಯಂತ್ರಿಸಬೇಕು. ಈ ತಾಕಲಾಟಗಳ ನಡುವೆ ಸಿಲುಕಿದ ಸರಕಾರ ಬಡವರ ಸಂಖ್ಯೆಯನ್ನೇ ಇಳಿಸುವ ಯತ್ನಕ್ಕೆ ಕೈ ಹಾಕಿದೆ. ಪಡಿತರ ಅರ್ಹರಿಗೆ ಮಾತ್ರ ದೊರೆಯಬೇಕೆಂಬ ನೆಪದಿಂದ ಹತ್ತಾರು ನಿಯಮಗಳನ್ನು
ರೂಪಿಸುತ್ತಿದೆ. ಆದರೆ ಪಡಿತರದಾರರ ಸಂಖ್ಯೆ ಇಳಿಸಲು ಸಾಧ್ಯವಾಗುತ್ತಿಲ್ಲ.

ಅನರ್ಹರದ್ದೇ ಸಿಂಹಪಾಲು
ಸ್ವಯಂ ಸೇವಾ ಸಂಘಟನೆಯೊಂದು ನಡೆಸಿದ ಸಮೀಕ್ಷೆ ಪ್ರಕಾರ ಪಡಿತರ ಸೌಲಭ್ಯಕ್ಕೆಂದು ಸರಕಾರ ಬಿಡುಗಡೆ ಮಾಡುವ ಪ್ರತಿ 100 ರೂ. ಹಣದಲ್ಲಿ 28 ರು. ಕಾಳಸಂತೆ ಕೋರರ ಪಾಲಾಗುತ್ತಿದೆ. 31 ರೂ. ಮಧ್ಯವರ್ತಿಗಳ ಕೈ ಸೇರುತ್ತಿದೆ. 16 ರು. ಪಡಿತರ ನಿರ್ವಹಣೆಗೆಂದು
ವ್ಯಯವಾಗುತ್ತಿದೆ. ಕೇವಲ 25 ರು. ಫಲಾನುಭವಿಗಳಿಗೆ ಸಿಗುತ್ತಿದೆ. ಅಂದರೆ 60 ಸಾವಿರ ಕೋಟಿ ರೂ. ಅನುದಾನ ದಲ್ಲಿ 15 ಸಾವಿರ ಕೋಟಿ ರೂ.ಗಳ ಸೌಲಭ್ಯವಷ್ಟೇ ಬಡಜನರಿಗೆ ಲಭ್ಯವಾಗುತ್ತಿದೆ. ನಮ್ಮ ಪಡಿತರ ವ್ಯವಸ್ಥೆಗೆ ಕಾಯಕಲ್ಪ ಸಿಗಬೇಕಾದರೆ ಸಾರ್ವತ್ರಿಕ ಪಡಿತರ ವ್ಯವಸ್ಥೆ
ಯನ್ನು ಮರು ಜಾರಿಗೊಳಿಸುವುದೊಂದೇ ಮಾರ್ಗ ಎಂದು ಅರ್ಥಶಾಸ್ತ್ರಜ್ಞ ಅರ್ಮತ್ಯಸೇನ್ ಹೇಳಿದ್ದರು. ಈ ಮಾತು ಇಂದಿಗೂ ನಿಜ. ಪಡಿತರ ಚೀಟಿಗೆ ಪೈಪೋಟಿ ನಡೆಸುವುದು ನಿಲ್ಲಬೇಕಾದರೆ ಎಲ್ಲರನ್ನೂ ಪಡಿತರದಾರರ ಸಾಲಿಗೆ ಸೇರಿಸುವುದೇ ಉತ್ತಮ ಮಾರ್ಗ. ಈಗ ನೀಡುತ್ತಿರುವ ಪಡಿತರ ಪ್ರಮಾಣವನ್ನು ತಗ್ಗಿಸಿದರೆ ದೇಶದ ಎಲ್ಲ ಕುಟುಂಬಕ್ಕೂ ಆಹಾರ ಸಾಮಗ್ರಿ ಪೂರೈಸಬಹುದು.

ಇಷ್ಟಕ್ಕೂ ನಮ್ಮಲ್ಲಿ ರೇಷನ್ ಕಾರ್ಡ್ ಎಂದರೆ ಪಡಿತರಕ್ಕೆ ಮೀಸಲಾದ ಚೀಟಿ ಅಷ್ಟೇ ಅಲ್ಲ, ಗುರುತಿನ ಚೀಟಿಯೂ ಹೌದು. ಗೃಹಲಕ್ಷ್ಮೀ ಯೋಜನೆ, ವಿವಿಧ ಸ್ಕಾಲರ್ ಶಿಪ್ ಯೋಜನೆಗಳು, ಉನ್ನತ ಶಿಕ್ಷಣದಲ್ಲಿ ಮೀಸಲು, ಉಚಿತ ವೈದ್ಯಕೀಯ ಸೌಲಭ್ಯ, ಡ್ರೈವಿಂಗ್ ಲೈಸೆನ್ಸ್, ಭೂ ದಾಖಲೆ ಗಳ ನೋಂದಣಿ, ಬ್ಯಾಂಕ್ ಖಾತೆ ಮುಂತಾದ ಹತ್ತು ಹಲವು ವ್ಯವಹಾರಗಳಿಗೆ ರೇಷನ್ ಕಾರ್ಡ್ ಪ್ರಮುಖ ದಾಖಲೆಯಾಗಿ ಬಳಕೆಯಾಗುತ್ತಿದೆ. ಬಹುಪಾಲು ಮಂದಿ ಗುರುತಿನ ಚೀಟಿ ಉದ್ದೇಶದಿಂದಲೇ ರೇಷನ್ ಕಾರ್ಡಿಗೆ ಅರ್ಜಿ ಹಾಕುತ್ತಿದ್ದಾರೆ. ಬೆಂಗಳೂರಿಗೆ ಅನ್ಯ ರಾಜ್ಯಗಳಿಂದ ವಲಸೆ ಬಂದವರ ಮೊದಲ ಆದ್ಯತೆ ಈ ಕಾರ್ಡು. ನೆರೆ ರಾಜ್ಯದಲ್ಲೂ ನಮ್ಮಲ್ಲೂ ಬಿಪಿಎಲ್ ಪಟ್ಟಿಗೆ ಸೇರಿದ ಅದೆಷ್ಟೋ ಮಂದಿ ಈ ನಗರದಲ್ಲಿದ್ದಾರೆ.

ಭಾವಚಿತ್ರ ಸಹಿತ ಪಡಿತರ ಚೀಟಿ ವಿತರಣೆಗೆಂದೇ ರಾಜ್ಯ ಸರಕಾರ ಸಾವಿರಾರು ಕೋಟಿ ರು.ಗಳನ್ನು ವ್ಯಯಿಸುತ್ತಿದೆ. ಇಷ್ಟಾದರೂ ಅದೆಷ್ಟೋ ಕಡು ಬಡವರಿಗೆ ಇನ್ನೂ ಪಡಿತರ ಸೌಲಭ್ಯಗಳು ದೊರೆತಿಲ್ಲ. ವಿಧವೆಯರು, ಕುಟುಂಬದ ಬೆಂಬಲವಿಲ್ಲದೆ ಒಬ್ಬಂಟಿಯಾಗಿರುವವರು ಬಿಪಿಎಲ್ ಕಾರ್ಡುಗಳಿಗಾಗಿ ಈಗಲೂ ಸರಕಾರಿ ಕಚೇರಿಗಳ ಬಾಗಿಲು ತಟ್ಟುತ್ತಿದ್ದಾರೆ. ಒಂದು ಕಾರ್ಡು ಕೊಡಿಸಿ ಎಂದು ಎಂಪಿ, ಎಂಎಲ್‌ಎ, ಕಾರ್ಪೊರೇಟರ್
ಗಳಿಂದ ಹಿಡಿದು ಮರಿ ಪುಢಾರಿಗಳೆಲ್ಲರ ಕಾಲು ಹಿಡಿಯುವ ಮಂದಿ ಈಗಲೂ ಇದ್ದಾರೆ. ಕಾರ್ಡಿಗೋಸ್ಕರವೇ ಮಧ್ಯವರ್ತಿಗಳಿಗೆ 500 ರೂ.ಗಳಿಂದ 5000 ರೂ. ಗಳವರೆಗೆ ಕಮಿಷನ್ ನೀಡುವವರಿದ್ದಾರೆ. ಆದರೆ ಸರಕಾರ ವರ್ಷಕ್ಕೊಂದೆರಡು ಬಾರಿ ಹೊಸ ಪಡಿತರ ಚೀಟಿಗೆ ಅರ್ಜಿ ಆಹ್ವಾನಿಸು ತ್ತದೆ. ಸರ್ವರ್ ಸ್ಲೋ ನೆಪ ದಲ್ಲಿ ಯಾವ ಅರ್ಜಿಗಳು ಬಾರದಂತೆ ನೋಡಿಕೊಳ್ಳುತ್ತದೆ.

‘ ಸತ್ಯಮೇವ ಜಯತೇ’- ಇದು ನಮ್ಮ ರಾಷ್ಟ್ರೀಯ ಲಾಂಛನದ ಘೋಷವಾಕ್ಯ. ಕೋರ್ಟ್ ಕಟೆಕಟೆಯಲ್ಲಿ ನಿಂತು ಸಾಕ್ಷಿ ಹೇಳುವಾಗಲೂ ಭಗವದ್ಗೀತೆ, ಕುರಾನ್ ಅಥವಾ ಬೈಬಲ್ ಮುಟ್ಟಿ ಪ್ರಮಾಣ ಮಾಡುವ ಕ್ರಮವಿದೆ. ಆದರೆ ನಮ್ಮ ಬಡತನದ ವಿಚಾರದಲ್ಲಿ ಯಾವುದು ಸುಳ್ಳು, ಯಾವುದು ಸತ್ಯ? ನಾಳೆ ಸರಕಾರದ ಪ್ರತಿನಿಧಿಯೊಬ್ಬರು ಕಟೆಕಟೆಯಲ್ಲಿ ನಿಂತರೆ ಧೈರ್ಯವಾಗಿ ಎರಡೂ ಸುಳ್ಳುಗಳನ್ನು ಸತ್ಯ ಎಂದು ನಿರೂಪಿಸ
ಬಹುದು. ಪಡಿತರದ ವಿಚಾರದಲ್ಲಿ ನಮ್ಮ ಮಾನಸಿಕ ಬಡತನ ಮೊದಲು ನಿವಾರಣೆಯಾಗಬೇಕಿದೆ.

ಇದನ್ನೂ ಓದಿ: lokeshkayarga