Wednesday, 27th November 2024

BBK 11: ಬಿಗ್ ಬಾಸ್​ನಲ್ಲಿ ಪಡೆದ ಸಂಭಾವನೆ ಬಗ್ಗೆ ಮನಬಿಚ್ಚಿ ಮಾತನಾಡಿದ ಧರ್ಮಾ

Dharma Keerthiraj remuneration

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಧರ್ಮಾ ಕೀರ್ತಿರಾಜ್ ಎಂಟನೇ ವಾರಕ್ಕೆ ಎಲಿಮಿನೇಟ್ ಆದರು. ಎಲಿಮಿನೇಷನ್​ನಲ್ಲಿ ಕಡಿಮೆ ವೋಟಿನಿಂದಾಗಿ ಧರ್ಮ ಅರ್ಧಕ್ಕೆ ಮನೆ ಬಿಡಬೇಕಾಯಿತು. ಇವರು ದೊಡ್ಮನೆಯಲ್ಲಿ ಒಟ್ಟು 55 ದಿನ ಇದ್ದರು. ದೊಡ್ಮನೆಯಲ್ಲಿ ಇರಬೇಕು ಎಂದರೆ ರಫ್ ಆ್ಯಂಡ್ ಟಫ್ ಆಗಿರಬೇಕು. ಆದರೆ, ಧರ್ಮ ಅವರಲ್ಲಿ ಈ ಅಂಶ ಕೊಂಚ ಕಮ್ಮಿ ಇತ್ತು. ಅವರು ಸದಾ ಕೂಲ್ ಆಗಿಯೇ ಇರುತ್ತಿದ್ದರು. ಇದೇ ಇವರ ಉಳಿವಿಗೆ ಮುಳುವಾಯಿತು.

ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸಿದ ಪ್ರತಿಯೊಬ್ಬ ಸ್ಪರ್ಧಿಗೂ ಸಂಭಾವನೆ ಫಿಕ್ಸ್ ಮಾಡಲಾಗಿರುತ್ತದೆ. ಅವರ ಜನಪ್ರಿಯತೆಯ ಆಧಾರದ ಮೇಲೆ ಆ ಸಂಭಾವನೆ ನಿರ್ಧಾರವಾಗಿರುತ್ತದೆ. ಇದೀಗ ಬಿಗ್ ಬಾಸ್ ಶೋನಲ್ಲಿ ತಮಗೆ ಸಿಕ್ಕಿರುವ ಸಂಭಾವನೆ ಬಗ್ಗೆ ಧರ್ಮಾ ಕೀರ್ತಿರಾಜ್ ಮಾತನಾಡಿದ್ದಾರೆ.

ಅರ್ಧಶತಕ ಪೂರೈಸಿ ಶೋನಿಂದ ಎಲಿಮಿನೇಟ್ ಆದ ಧರ್ಮಾ ಅವರಿಗೆ ಸ್ಟೇಜ್ ಮೇಲೆ ಸುಮಾರು 2 ಲಕ್ಷ ರೂ. ಮೌಲ್ಯದ ಬಹುಮಾನ ಸಿಕ್ಕಿತ್ತು. ಆದರೆ ಸಂಭಾವನೆ ಎಷ್ಟು ಅಂತ ರಿವೀಲ್ ಮಾಡುವಂತಿಲ್ಲ ಎಂದು ಧರ್ಮಾ ಹೇಳಿದ್ದಾರೆ. ನನಗೆ ದುಡ್ಡು ಮುಖ್ಯ. ಹಾಗಂತ, ಎಲ್ಲವನ್ನು ನಾನು ಹಣದಿಂದ ಅಳೆಯುವುದಕ್ಕೆ ಆಗುವುದಿಲ್ಲ. ನಾನು ಈ ಶೋಗಾಗಿ 55 ದಿನ ಸಿನಿಮಾಗಳನ್ನು ಬಿಟ್ಟು ಹೋಗಿದ್ದೆ. ನಾನು ಅಲ್ಲಿಗೆ ಹೋಗದೇ ಇದ್ದಿದ್ದರೆ, ಒಂದು ಸಿನಿಮಾ ಮುಗಿಸಿರುತ್ತಿದ್ದೆ ಅಥವಾ ಒಟ್ಟೊಟ್ಟಿಗೆ ಎರಡು ಸಿನಿಮಾಗಳು ಮಾಡುತ್ತಿರುತ್ತಿದ್ದೆ ಎಂದು ಹೇಳಿದ್ದಾರೆ.

ಜನರ ಪ್ರೀತಿಯ ಬಗ್ಗೆ ಮಾತನಾಡಿದ ಧರ್ಮಾ, ನನ್ನ ಬ್ಯಾನರ್‌ನಲ್ಲೇ ಒಂದು ಸಿನಿಮಾ ಮಾಡಿ, ಅದು ಸೂಪರ್ ಹಿಟ್ ಆಗಿ, ನಾನು ದೊಡ್ಡ ಸ್ಟಾರ್ ಆದಾಗ ನನಗೆ ಎಷ್ಟು ಪ್ರೀತಿ ಸಿಗುತ್ತದೋ, ಅಷ್ಟು ಪ್ರೀತಿಯನ್ನು ಜನರು ನನಗೆ ಈ ಶೋನಲ್ಲೇ ಕೊಟ್ಟಿದ್ದಾರೆ. ನಾನಿದ್ದ 50 ದಿನ ನನ್ನ ಸಿನಿಮಾ 50 ದಿನ ಓಡಿದಷ್ಟೇ ಖುಷಿ ಆಗಿದೆ ಎಂದರು.

ಧರ್ಮಾ ತಮ್ಮ ಮದುವೆ ಬಗ್ಗೆಯೂ ಮಾತನಾಡಿದ್ದು, ಎರಡು ಮೂರು ವರ್ಷಗಳ ಹಿಂದೇನೆ ನನಗೆ ಮದುವೆ ಆಗಬೇಕಿತ್ತು. ಅದಕ್ಕೆ ಬೇಕಿರುವ ಎಲ್ಲಾ ಸಿದ್ಧತೆಗಳು ನಡೆದಿದ್ದವು. ಮದುವೆ ತುಂಬಾನೇ ಹತ್ತಿರ ಬಂದು ಕೆಲವು ಕಾರಣಗಳಿಂದಾಗಿ ಅದು ನಡೆಯಲಿಲ್ಲ. ಕೊನೆ ಕ್ಷಣದಲ್ಲಿ ಮದುವೆ ನಡೆಯಲಿಲ್ಲ ಎಂದಿದ್ದಾರೆ. ಜೊತೆಗೆ ಅನುಷಾ ರೈ ಅವರೊಂದಿಗೆ ಹೆಚ್ಚು ಸಿನಿಮಾ ಮಾಡಿದ್ದರಿಂದ ಗೆಳೆತನ ಬೆಳೆದಿದೆ. ಪ್ರೀತಿ-ಪ್ರೇಮ ಅಂತೇನು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

BBK 11: ಬಿಗ್ ಬಾಸ್​ನಲ್ಲಿ ನಾಮಿನೇಷನ್ ಬಿಸಿ: ಮಂಜು-ಶೋಭಾ ನಡುವೆ ಗಲಾಟೆ