ನವದೆಹಲಿ: ಉದ್ದೀಪನ ಸೇವನೆ ಪರೀಕ್ಷೆಗಾಗಿ ಮೂತ್ರ ಮಾದರಿ ನೀಡಲು ನಿರಾಕರಿಸಿ ನಿಯಮ ಉಲ್ಲಂಘನೆ ಮಾಡಿದ ಒಲಿಂಪಿಯನ್ ಕುಸ್ತಿಪಟು ಬಜರಂಗ್ ಪೂನಿಯಾ(Bajrang Punia) ಅವರಿಗೆ ರಾಷ್ಟ್ರೀಯ ಉದ್ದೀಪನ ನಿಗ್ರಹ ಸಂಸ್ಥೆ (ನಾಡಾ) ನಾಲ್ಕು ವರ್ಷಗಳ ಅಮಾನತು ಶಿಕ್ಷೆ ವಿಧಿಸಿದೆ. ನಾಡಾದ ಡೋಪಿಂಗ್ ವಿರೋಧಿ ನಿಯಮಗಳ ಆರ್ಟಿಕಲ್ 10.3.1ರ ಉಲ್ಲಂಘನೆಯಿಂದ ಈ ಶಿಕ್ಷೆ ವಿಧಿಸಲಾಗಿದೆ.
ನಿಯಮ ಉಲ್ಲಂಘನೆ ಎಂದು ಪರಿಗಣಿಸಿರುವ ನಾಡಾ, ಈ ಹಿಂದೆ ಬಜರಂಗ್ ಅವರನ್ನು 2ನೇ ಬಾರಿ ತಾತ್ಕಾಲಿಕವಾಗಿ ಅಮಾನತುಗೊಳಿಸಿತ್ತು. ಆದರೆ ತನ್ನ ಮೇಲಿನ ಅಮಾನತನ್ನು ವಿರೋಧಿಸಿ ಬಜರಂಗ್ ನಾಡಾ ಅಧಿಕಾರಿಗಳು ಮೂತ್ರದ ಮಾದರಿ ಕೊಂಡೊಯ್ಯಲು ತಂದಿದ್ದ ಕಿಟ್ನ ಅವಧಿ ಮೀರಿತ್ತು. ಇದನ್ನು ನಾನು ಪ್ರಶ್ನಿಸಿದ್ದೆ. ಇದಕ್ಕಾಗಿ ನನ್ನನ್ನು ನಾಡಾ ಗುರಿಯಾಗಿಸಿದೆ ಎಂದು ಆರೋಪಿಸಿ ದೆಹಲಿ ಹೈಕೋರ್ಟ್ನ(Delhi High Court) ಮೊರೆ ಹೋಗಿದ್ದರು.
ಉದ್ದೀಪನ ಪರೀಕ್ಷೆಗೆ ಮಾದರಿ ನೀಡಲು ನಿರಾಕರಿಸಿದರು ಎಂದು ಕಳೆದ ಏಪ್ರಿಲ್ನಲ್ಲಿ ನಾಡಾ, ಬಜರಂಗ್ ಅವರನ್ನು ಮೊದಲ ಬಾರಿ ನಿಷೇಧಿಸಿತ್ತು. ಬಳಿಕ ನಿಷೇಧವನ್ನು ತೆಗೆಯಲಾಗಿತ್ತು. ಬಳಿಕ ಜೂನ್ನಲ್ಲಿ ಮತ್ತೆ ನಿಷೇಧ ಹೇರಲಾಗಿತ್ತು. ಇದೀಗ ನಾಲ್ಕು ವರ್ಷಗಳ ಅಮಾನತು ಶಿಕ್ಷೆ ವಿಧಿಸಲಾಗಿದೆ.
ಇದನ್ನೂ ಓದಿ IPL 2025: ಪೃಥ್ವಿ ಶಾ ಅನ್ಸೋಲ್ಡ್ ಆಗಲು ಕಾರಣ ತಿಳಿಸಿದ ಮೊಹಮ್ಮದ್ ಕೈಫ್!
ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜೇಶ್ ಶರಣ್ ಸಿಂಗ್ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಬಜರಂಗ್ ಪುನಿಯಾ ಹಾಗೂ ಸಾಕ್ಷಿ ಮಲ್ಲಿಕ್ ದೆಹಲಿ ಜಂತರ್ ಮಂಥರ್ ನಲ್ಲಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ವೇಳೆಯಲ್ಲಿ ಬಿಜೆಪಿಯಿಂದ ಕುಸ್ತಿಪಟುಗಳಿಗೆ ಸೂಕ್ತ ಬೆಂಬಲ ಸಿಗದೇ ಇದ್ದಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಸೇರಿ ಹಲವು ಕಾಂಗ್ರೆಸ್ ನಾಯಕರು ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿದ್ದರು. ಹರಿಯಾಣ ಚುನಾವಣೆ ವೇಳೆ ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ಕಾಂಗ್ರೆಸ್ ಪಕ್ಷ ಸೇರಿದ್ದರು. ವಿನೇಶ್ ಸ್ಪರ್ಧಿಸಿ ಗೆಲುವು ಕಂಡಿದ್ದರು. ಆದರೆ ಬಜರಂಗ್ ಸ್ಪರ್ಧಿಸಲಿಲ್ಲ.