ಟೆಲ್‌ಅವಿವ್: ಇಸ್ರೇಲ್‌ನ ಭದ್ರತಾ ಕ್ಯಾಬಿನೆಟ್ ಮಂಗಳವಾರ ಇರಾನ್ ಬೆಂಬಲಿತ ಹೆಜ್ಬೊಲ್ಲಾ ಜೊತೆ ಕದನ ವಿರಾಮ ಒಪ್ಪಂದವನ್ನು (Israel-Hezbollah Ceasefire) ಅನುಮೋದಿಸಿದೆ. ಆ ಮೂಲಕ ಲೆಬನಾನ್‌ನಲ್ಲಿನ ಸಂಘರ್ಷವನ್ನು ಕೊನೆಗೊಳಿಸಲು ದಾರಿ ಮಾಡಿಕೊಟ್ಟಿದೆ ಎಂದು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರು ಘೋಷಿಸಿದರು.
ಇಸ್ರೇಲ್ ಜನರನ್ನು ಉದ್ದೇಶಿಸಿ ಮಾತನಾಡಿದ ನೆತನ್ಯಾಹು, ‘ನಾವು ಮಧ್ಯಪ್ರಾಚ್ಯದ ಮುಖವನ್ನು ಬದಲಾಯಿಸುತ್ತಿದ್ದೇವೆ. ಉತ್ತಮ ಒಪ್ಪಂದವು ಕಾರ್ಯಗತಗೊಳಿಸಬಹುದಾದವುಗಳಲ್ಲಿ ಒಂದಾಗಿದೆ’ ಎಂದು ಹೇಳಿದ್ದಾರೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಗಳವಾರ ಸಂಜೆ ಟೆಲ್ ಅವಿವ್‌ನಲ್ಲಿ ತಮ್ಮ ವಾರ್ ಕ್ಯಾಬಿನೆಟ್ ಸಭೆಯನ್ನು ಕರೆದಿದ್ದರು. ಇದರಲ್ಲಿ ಲೆಬನಾನಿನ ಭಯೋತ್ಪಾದಕ ಸಂಘಟನೆ ಹಿಜ್ಬುಲ್ಲಾ ಜೊತೆ 60 ದಿನಗಳ ಕದನ ವಿರಾಮದ ಕುರಿತು ಚರ್ಚಿಸಲಾಯಿತು. ಇಸ್ರೇಲಿ ವಾರ್ ಕ್ಯಾಬಿನೆಟ್, ಲೆಬನಾನ್‌ನಲ್ಲಿ ಹೆಜ್ಬೊಲ್ಲಾ ಜೊತೆ ಕದನ ವಿರಾಮಕ್ಕೆ ಒಪ್ಪಿಗೆ ನೀಡಿದೆ. ಈ ಕದನ ವಿರಾಮ ಬುಧವಾರ ಬೆಳಿಗ್ಗೆ ಪ್ರಾರಂಭವಾಗಲಿದೆ. ಈ ಕದನ ವಿರಾಮ ಒಪ್ಪಂದವು ಬೆಳಿಗ್ಗೆ 10 ಗಂಟೆಗೆ ಜಾರಿಗೆ ಬರಲಿದೆ ಎಂದು ವರದಿ ಮಾಡಿತ್ತು ವಿದೇಶಿ ಮಾಧ್ಯಮಗಳು ವರದಿ ಮಾಡಿವೆ.
ಲೆಬನಾನ್ ಪ್ರತಿಕ್ರಿಯೆ ಏನು?
ಇನ್ನು ಇಸ್ರೇಲ್ ಘೋಷಿಸಿರುವ ಕದನ ವಿರಾಮದ ಬಗ್ಗೆ ಲೆಬನಾನಿನ ಸಂಸದ ಹಸನ್ ಫದ್ಲಲ್ಲಾ ಅವರು ಪ್ರತಿಕ್ರಿಯಿಸಿದ್ದು, ‘ಈ ಕದನ ವಿರಾಮ ಎಷ್ಟು ಕಾಲ ಇರುತ್ತದೆ ಎಂದು ಹೇಳುವುದು ಕಷ್ಟ. ಇದು ಒಂದು ತಿಂಗಳು ಅಥವಾ ಒಂದು ವರ್ಷದವರೆಗೆ ಮುಂದುವರಿಯಬಹುದು’ ಎಂದು ಅಧಿಕಾರಿ ಹೇಳಿದ್ದಾರೆ. ಕದನ ವಿರಾಮ ಘೋಷಣೆಗಾಗಿ ಕಾಯುತ್ತಿರುವಾಗ ದೇಶವು ‘ಅಪಾಯಕಾರಿ, ಸೂಕ್ಷ್ಮ ಸಮಯಗಳ’ ಮೂಲಕ ಸಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Israel Airstrike: ಇರಾನ್ ಮೇಲೆ ಇಸ್ರೇಲ್ ಎರಡನೇ ಏರ್‌ಸ್ಟ್ರೈಕ್; ಇಲ್ಲಿದೆ ಭೀಕರ ದಾಳಿಯ ವಿಡಿಯೋ
ಕದನ ವಿರಾಮಕ್ಕೆ ಕಾರಣ ಏನು?
- ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ದೀರ್ಘಕಾಲದ ಯುದ್ಧದಲ್ಲಿ ಅಮೆರಿಕ, ಯುರೋಪಿಯನ್ ಯೂನಿಯನ್ ಮತ್ತು ವಿಶ್ವಸಂಸ್ಥೆಯು ಇತ್ತೀಚಿನ ದಿನಗಳಲ್ಲಿ ಕದನ ವಿರಾಮಕ್ಕಾಗಿ ಒತ್ತಾಯಿಸುತ್ತಿರುವುದರಿಂದ ಕದನ ವಿರಾಮ ಒಪ್ಪಂದಕ್ಕೆ ಬರಲಾಗಿದೆ.
- ಈ ತಿಂಗಳ ಆರಂಭದಲ್ಲಿ, ಇಸ್ರೇಲ್-ಹಮಾಸ್ ಯುದ್ಧದ ಕದನ ವಿರಾಮದ ಪ್ರಮುಖ ಭಾಗವಾಗಿದ್ದ ಕತಾರ್ ಹಿಂದೆ ಸರಿದಿತ್ತು. ಇನ್ನು ಮುಂದೆ ತಾನು ಯಾವುದೇ ಸಹಾಯ ಮಾಡುವುದಿಲ್ಲ ಎಂದು ಹೆಜ್ಬುಲ್ಲಾಗೆ ಹೇಳಿತ್ತು.
- ಕದನ ವಿರಾಮ ಒಪ್ಪಂದದ ನಂತರ ಇಸ್ರೇಲಿ ಪಡೆಗಳು ದಕ್ಷಿಣ ಲೆಬನಾನ್‌ನಿಂದ ಹಿಂದೆ ಸರಿಯಲಿವೆ ಎಂದು ತಿಳಿದು ಬಂದಿದೆ.
- ಯುದ್ಧದ ನಡುವೆ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ಐಸಿಸಿ) ನೆತನ್ಯಾಹುಗೆ ಬಂಧನ ವಾರಂಟ್ ಹೊರಡಿಸಿತ್ತು. ಇದೂ ಕೂಡ ಕದನ ವಿರಾಮಕ್ಕೆ ಸಹಿ ಮಾಡಲು ಕಾರಣವಾಗಿರಬಹುದು ಎಂದು ಊಹಿಸಲಾಗಿದೆ.
- ಗಾಜಾ ಪಟ್ಟಿ, ಲೆಬನಾನ್, ಇರಾನ್ ಗಡಿಗಳಲ್ಲಿ ಯುದ್ಧ ಮಾಡುತ್ತಿರುವ ಇಸ್ರೇಲ್ ಸೈನಿಕರ ಕೊರತೆಯನ್ನು ಎದುರಿಸುತ್ತಿದೆ.