Wednesday, 27th November 2024

Manipur Violence: ಸೇನಾ ಶಿಬಿರದಿಂದ ಮೈತೈ ಸಮುದಾಯದ ವ್ಯಕ್ತಿ ನಾಪತ್ತೆ; ಮಣಿಪುರ ಮತ್ತೆ ಉದ್ವಿಗ್ವ

Manipur Violence

ಇಂಫಾಲ: ಮಣಿಪುರ ಇಂಫಾಲದ ಪಶ್ಚಿಮ ಜಿಲ್ಲೆಯ 57 ಮೌಂಟೇನ್ ಡಿವಿಷನ್ ಲೀಮಾಖೋಂಗ್ ಸೇನಾ ಶಿಬಿರದಿಂದ ಮೈತೈ ಸಮುದಾಯಕ್ಕೆ ಸೇರಿದ 56 ವರ್ಷದ ವ್ಯಕ್ತಿ ನಾಪತ್ತೆಯಾಗಿದ್ದು, ಮತ್ತೊಮ್ಮೆ ಈ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಸದ್ಯ ಮಣಿಪುರದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಯಾವ ಕ್ಷಣದಲ್ಲಾದರೂ ಘರ್ಷಣೆ ಭುಗಿಲೇಳುವ ಆತಂಕ ಎದುರಾಗಿದೆ (Manipur Violence).

ಗುತ್ತಿಗೆ ಕೆಲಸದಲ್ಲಿ ತೊಡಗಿದ್ದ ಇಂಫಾಲದ ಪಶ್ಚಿಮದ ಲೊಯಿಟಾಂಗ್ ಖುನೌ ಗ್ರಾಮದ ನಿವಾಸಿ ಲೈಶ್ರಾಮ್ ಕಮಲ್ ಬಾಬು ಸೋಮವಾರ (ನ. 25) ಮಧ್ಯಾಹ್ನ 2 ಗಂಟೆಯಿಂದ ಲೀಮಾಖಾಂಗ್ ಸೇನಾ ಶಿಬಿರದಿಂದ ನಾಪತ್ತೆಯಾಗಿದ್ದು, ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಪೊಲೀಸರು ಹೇಳಿದ್ದೇನು?

ʼʼಕಮಲ್ ಬಾಬು ಅವರ ಪತ್ತೆಗೆ ಪೊಲೀಸರು ಮತ್ತು ಕೇಂದ್ರ ಸಶಸ್ತ್ರ ಪಡೆ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದೆʼʼ ಎಂದು ಕಾಂಗ್ಪೋಕ್ಪಿ ಜಿಲ್ಲೆಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. ಕುಕಿ ಸಮುದಾಯದವರು ಪ್ರಾಬಲ್ಯ ಹೊಂದಿರುವ ಕಾಂಗ್ಪೋಕ್ಪಿ ಮತ್ತು ಮೈತೈ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿರುವ ಇಂಫಾಲ ಪಶ್ಚಿಮ ಭಾಗದ ಗಡಿಯಲ್ಲಿ ಲೀಮಾಖೋಂಗ್ ಇದೆ. ಇಲ್ಲಿಂದ ಕಮಲ್‌ ನಾಪತ್ತೆಯಾಗಿರುವುದು ಅನುಮಾನ ಹುಟ್ಟು ಹಾಕಿದೆ. ಕಮಲ್‌ ನಾಪತ್ತೆಯಾದ ಹಿನ್ನೆಲೆಯಲ್ಲಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದ ಮೈತೈ ಸಮುದಾಯದವರು ಆಕ್ರೋಶ ವ್ಯಕ್ತಪಡಿಸಿದರು. ಮಹಿಳೆಯರು, ಮಕ್ಕಳು ಮಂಗಳವಾರ ರಸ್ತೆ ತಡೆದು ನ್ಯಾಯಕ್ಕಾಗಿ ಆಗ್ರಹಿಸಿದರು.

ʼʼಎಂದಿನಿಂತೆ ಕಮಲ್‌ ಲೀಮಾಖೋಂಗ್ ಸೇನಾ ಶಿಬಿರರಕ್ಕೆ ಗೇಟ್‌ ನಂ. 1ರ ಮೂಲಕ ಪ್ರವೇಶಿಸಿದರು. ಸೋಮವಾರ ಬೆಳಗ್ಗೆ 9.30ಕ್ಕೆ ಅವರು ತಮ್ಮ ಹೆಸರು ನೋಂದಾಯಿಸಿದ್ದಾರೆ. ಅದಾಗ್ಯೂ ಮಧ್ಯಾಹ್ನ 2 ಗಂಟೆಗೆ ಅವರ ಮೊಬೈಲ್‌ ಫೋನ್‌ ಸ್ವಿಚ್‌ ಆಫ್‌ ಆಗಿದೆ. ಕಮಲ್‌ನನ್ನು ಪತ್ತೆ ಹಚ್ಚುವಂತೆ ನಾವು ಆಗ್ರಹಿಸಿದ್ದೇವೆʼʼ ಎಂದು ಪ್ರತಿಭಟನಾನಿರತರು ತಿಳಿಸಿದ್ದಾರೆ. 1.30ರ ಬಳಿಕ ಕಮಲ್‌ ಕಂಡು ಬಂದಿಲ್ಲ ಎಂದು ಅವರ ಬಳಿ ಕೆಲಸ ಮಾಡುವ ಕಾರ್ಮಿಕರೊಬ್ಬರು ಮಾಹಿತಿ ನೀಡಿದ್ದಾರೆ. ಸದ್ಯ ಸುಮಾರು 2,000 ಸೇನಾ ಸಿಬ್ಬಂದಿ ಕಮಲ್‌ ಪತ್ತೆಗೆ ಕಾರ್ಯಚರಣೆ ನಡೆಸುತ್ತಿದೆ.

ʼʼನಾಪತ್ತೆಯಾದ ಕಮಲ್‌ನನ್ನು ಪತ್ತೆಹಚ್ಚಲು ಸೇನೆ ಮುಂದಾಗಿದೆ. ಅವರ ಸ್ಕೂಟರ್ ಅನ್ನು ಗುರುತಿಸಲು ಸೇನೆಯು ಹೆಲಿಕಾಪ್ಟರ್‌ ನಿಯೋಜಿಸಿದೆ. ಆದರೆ ಇನ್ನೂ ಕುರುಹು ಸಿಕ್ಕಿಲ್ಲ. ಶಿಬಿರದ ಬಳಿಯ ಬೆಟ್ಟ ಮತ್ತು ಕಾಡಿನಲ್ಲಿ ಕಮಲ್‌ ಮತ್ತು ಅವರ ಸ್ಕೂಟರ್ ಪತ್ತೆಹಚ್ಚಲು ವ್ಯಾಪಕ ಶೋಧ ಕಾರ್ಯ ನಡೆಸಲಾಗುತ್ತಿದೆ. ಕುಕಿ ಮತ್ತು ಮೈತೈ ಸಮುದಾಯದವರೊಂದಿಗೆ ಪ್ರತ್ಯೇಕ ಸಭೆ ನಡೆಸಲಾಗಿದೆ. ಕಮಲ್‌ ಬಗ್ಗೆ ಯಾವುದೇ ಮಾಹಿತಿ ಸಿಕ್ಕರೂ ತಿಳಿಸುವಂತೆ ಕೋರಲಾಗಿದೆ” ಎಂದು ಹೆಸರು ಹೇಳಲಿಚ್ಛಿಸದ ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ʼʼಈ ಘಟನೆ ಮತ್ತೊಮ್ಮೆ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿದೆ. ಕಮಲ್‌ ಚಲನವಲನ ಸಿಸಿಟಿವಿ ಕೆಮರಾದಲ್ಲಿ ದಾಖಲಾಗದಿರುವುದು ಕೂಡ ಕಾರ್ಯಾಚರಣೆಗೆ ಸವಾಲಾಗಿ ಪರಿಣಮಿಸಿದೆ. ಅದಾಗ್ಯೂ ಕ್ಯಾಂಪ್‌ನ ಸುತ್ತಮುತ್ತ ಸಾಕ್ಷಿ ಸಂಗ್ರಹಿಸಲು ಸೇನಾ ಸಿಬ್ಬಂದಿ ತೀವ್ರ ಪ್ರಯತ್ನದಲ್ಲಿ ತೊಡಗಿದ್ದಾರೆʼʼ ಎಂದು ಅವರು ಮಾಹಿತಿ ನೀಡಿದ್ದಾರೆ. ಈ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Manipur Violence: ಸಂಘರ್ಷ ಪೀಡಿತ ಮಣಿಪುರದಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಹೆಚ್ಚುವರಿ 50 ತುಕಡಿ ನಿಯೋಜನೆ