ಕಾಫಿ (Coffee) ಎಲ್ಲರಿಗೂ ಪ್ರಿಯವಾದದ್ದು. ಹೀಗಾಗಿಯೇ ಇಂದು ತರಹೇವಾರಿ ಕಾಫಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇತ್ತೀಚಿನ ದಿನಗಳಲ್ಲಿ ಕಾಫಿಯಲ್ಲಿ ಹೊಸ ಟ್ರೆಂಡ್ ಸೃಷ್ಟಿಯಾಗಿದೆ. ಅದುವೇ ಬುಲೆಟ್ ಪ್ರೂಫ್ ಕಾಫಿ (Bulletproof Coffee). ಬಾಲಿವುಡ್ ಸೆಲೆಬ್ರಿಟಿಗಳು ( Bollywood and Hollywood celebrities) ಇದನ್ನು ತುಂಬಾ ಇಷ್ಟ ಪಡುವುದಾಗಿ ಹೇಳುತ್ತಾರೆ. ಆದರೆ ಇದು ಆರೋಗ್ಯಕರವೇ ಎನ್ನುವ ಪ್ರಶ್ನೆಯೊಂದು ಉದ್ಭವವಾಗಿದೆ.
ಏನಿದು ಬುಲೆಟ್ ಪ್ರೂಫ್ ಕಾಫಿ?
ಬುಲೆಟ್ ಪ್ರೂಫ್ ಕಾಫಿಯನ್ನು “ಬುಲೆಟ್ ಕಾಫಿ” ಮತ್ತು “ಬಟರ್ ಕಾಫಿ” ಎಂದೂ ಕರೆಯುತ್ತಾರೆ. ಇದು ಅಧಿಕ ಕೊಬ್ಬಿನ ಕಾಫಿ ಆಗಿದ್ದು, ಉಪ್ಪುರಹಿತ ಬೆಣ್ಣೆ ಅಥವಾ ತುಪ್ಪವನ್ನು ಕಾಫಿಗೆ ಸೇರಿಸಲಾಗುತ್ತದೆ. ಕೆಟೋಜೆನಿಕ್ ಆಹಾರದ ಭಾಗವಾಗಿ ಜನಪ್ರಿಯವಾಗಿರುವ ಈ ಅಸಾಂಪ್ರದಾಯಿಕ ಕಾಫಿಯು ಬಾಲಿವುಡ್ ಮತ್ತು ಹಾಲಿವುಡ್ ಸೆಲೆಬ್ರಿಟಿಗಳಲ್ಲಿ ಅನೇಕರ ದೈನಂದಿನ ದಿನಚರಿಯ ಭಾಗವಾಗಿದೆ.
ಇತ್ತೀಚೆಗೆ ರಾಧಿಕಾ ಮದನ್ ಅವರು ಕರ್ಲಿ ಟೇಲ್ಸ್ ಜೊತೆ ತಾವು ತಮ್ಮ ದಿನವನ್ನು ಒಂದು ಕಪ್ ಬುಲೆಟ್ ಪ್ರೂಫ್ ಕಾಫಿಯೊಂದಿಗೆ ಪ್ರಾರಂಭಿಸುವುದಾಗಿ ಹೇಳಿದ್ದಾರೆ. ಅವರು ತಮ್ಮ ಕಾಫಿಗೆ “ತುಪ್ಪ” ಸೇರಿಸಲು ಇಷ್ಟಪಡುವುದಾಗಿ ತಿಳಿಸಿದರು.
ಬುಲೆಟ್ ಪ್ರೂಫ್ ಕಾಫಿ ಡಯಟ್ ಅನ್ನು ಕೃತಿ ಸನೋನ್, ಶಿಲ್ಪಾ ಶೆಟ್ಟಿ, ಅದಿತಿ ರಾವ್ ಹೈದರಿ, ಜಾಕ್ವೆಲಿನ್ ಫರ್ನಾಂಡೀಸ್ ಕೂಡ ಇಷ್ಟಪಡುವುದಾಗಿ ತಿಳಿಸಿದ್ದಾರೆ.
ಕೇವಲ ಬಾಲಿವುಡ್ ತಾರೆಗಳು ಮಾತ್ರವಲ್ಲ ಹ್ಯಾರಿ ಸ್ಟೈಲ್ಸ್ ಮತ್ತು ಶೈಲೀನ್ ವುಡ್ಲಿ ಸೇರಿದಂತೆ ಹಾಲಿವುಡ್ ತಾರೆಗಳು ಇದನ್ನು ಇಷ್ಟ ಪಡುತ್ತಾರೆ. ಇದು ಏಕಾಗ್ರತೆಯನ್ನು ಹೆಚ್ಚಿಸಲು, ತೂಕ ನಿರ್ವಹಣೆ ಮಾಡಲು ಸಹಾಯ ಮಾಡುತ್ತದೆ ಎನ್ನುತ್ತಾರೆ.
ಬುಲೆಟ್ ಪ್ರೂಫ್ ಕಾಫಿ ಆರೋಗ್ಯಕರವಾಗಿದೆಯೇ? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ?
ಶಕ್ತಿ ವರ್ಧಕ ಪೇಯ ಬುಲೆಟ್ ಪ್ರೂಫ್ ಕಾಫಿ
ಅಧಿಕ ಕೊಬ್ಬಿನ ಬುಲೆಟ್ ಪ್ರೂಫ್ ಕಾಫಿಯನ್ನು ಉಪ್ಪುರಹಿತ ಬೆಣ್ಣೆ ಅಥವಾ ತುಪ್ಪ, ಮೀಡಿಯಂ ಚೈನ್ ಟ್ರೈಗ್ಲಿಸರೈಡ್ (MCT) ಎಣ್ಣೆಯಂತಹ ಆರೋಗ್ಯಕರ ಕೊಬ್ಬಿನೊಂದಿಗೆ ಸೇರಿಸಿ ತಯಾರಿಸಲಾಗುತ್ತದೆ. ಮೂಲತಃ ಅಮೆರಿಕನ್ ಉದ್ಯಮಿ, ಲೇಖಕ ಡೇವ್ ಆಸ್ಪ್ರೇ ಇದನ್ನು ಜನಪ್ರಿಯಗೊಳಿಸಿದರು. ಈ ಪಾನೀಯವು ಕೆಟೋಜೆನಿಕ್ ಆಹಾರದ ಒಂದು ಭಾಗವಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸದೆ ನಿರಂತರ ಶಕ್ತಿಯನ್ನು ವರ್ಧಿಸುತ್ತದೆ.
ಇದು ಮೆದುಳು ಮತ್ತು ದೇಹವನ್ನು ಉತ್ತೇಜಿಸುವ, ತ್ವರಿತವಾಗಿ ಜೀರ್ಣವಾಗುವ ಕೊಬ್ಬಿನ ಮೂಲವನ್ನು ದೇಹಕ್ಕೆ ನೀಡುತ್ತದೆ. ಮಾನಸಿಕ ಸ್ಪಷ್ಟತೆಯನ್ನು ಸುಧಾರಿಸಲು, ಚಯಾಪಚಯವನ್ನು ವರ್ಧಿಸಲು ಮತ್ತು ಹಸಿವನ್ನು ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ.
ತುಪ್ಪದ ಕಾಫಿ ಆರೋಗ್ಯಕರವೇ?
ಕ್ಲಿನಿಕಲ್ ಡಯೆಟಿಷಿಯನ್ ಮತ್ತು ಕ್ರೀಡಾ ಪೌಷ್ಟಿಕತಜ್ಞ ಜಿಯಾನಾಬ್ ಜಿ. ಅವರ ಪ್ರಕಾರ ತುಪ್ಪದ ಕಾಫಿ ಮಿತವಾಗಿ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಇದು ಆರೋಗ್ಯಕರವಾಗಿದೆ. ಕೆಫೀನ್ ಮತ್ತು ಆರೋಗ್ಯಕರ ಕೊಬ್ಬನ್ನು ಸಂಯೋಜಿಸುವ ಮೂಲಕ ನಿರಂತರ ಶಕ್ತಿಯನ್ನು ಪಡೆಯಬಹುದು.
ಆರೋಗ್ಯಕರ ಡಯಟ್ ನಲ್ಲಿ ಕ್ಯಾಲೋರಿ ಕಡಿಮೆಯಾದರೆ ತುಪ್ಪದ ಪ್ರಮಾಣವನ್ನು ಮಿತಿಗೊಳಿಸುವುದು ಅಥವಾ ಸರಿಹೊಂದಿಸುವುದು ಬಹುಮುಖ್ಯವಾಗಿದೆ.
ಬುಲೆಟ್ ಪ್ರೂಫ್ ಕಾಫಿಯ ಪ್ರಯೋಜನಗಳು?
ಬುಲೆಟ್ ಪ್ರೂಫ್ ಕಾಫಿಯು ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಆರೋಗ್ಯಕರ ಕೊಬ್ಬುಗಳು ಸಕ್ಕರೆ ರಹಿತವಾಗಿ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ.
ಬುಲೆಟ್ ಪ್ರೂಫ್ ಕಾಫಿಯಲ್ಲಿರುವ ಎಂಸಿಟಿ ಎಣ್ಣೆಯು ಮೆದುಳಿನ ಚಟುವಟಿಕೆಯನ್ನು ಉತ್ತೇಜಿಸುತ್ತದೆ. ಇದರಿಂದ ಬುದ್ದಿಯ ತೀಕ್ಷ್ಣತೆ ಮತ್ತು ಏಕಾಗ್ರತೆ ಮಟ್ಟ ವೃದ್ಧಿಸಲು ಸಹಾಯ ಮಾಡುತ್ತದೆ.
ತೂಕ ನಷ್ಟಕ್ಕೂ ಬುಲೆಟ್ ಪ್ರೂಫ್ ಕಾಫಿ ಸಹಾಯ ಮಾಡುತ್ತದೆ. ಇದು ಹೆಚ್ಚು ಸಮಯ ಹೊಟ್ಟೆ ತುಂಬಿದ ಅನುಭವ ಕೊಡುತ್ತದೆ. ಹಸಿವನ್ನು ಕಡಿಮೆ ಮಾಡುತ್ತದೆ ಮತ್ತು ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ.
ಚಯಾಪಚಯವನ್ನು ವರ್ಧಿಸುವ ಈ ಕಾಫಿಯಲ್ಲಿ ಬಳಸುವ ಎಂಸಿಟಿ ತೈಲವು ದೇಹಕ್ಕೆ ತ್ವರಿತವಾಗಿ ಶಕ್ತಿಯನ್ನು ನೀಡುತ್ತದೆ. ಇದು ಚಯಾಪಚಯ ಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಬುಲೆಟ್ ಪ್ರೂಫ್ ಕಾಫಿಯಲ್ಲಿ ಕಾರ್ಬೋಹೈಡ್ರೇಟ್ ಮತ್ತು ಸಕ್ಕರೆಯನ್ನು ತಪ್ಪಿಸುವ ಮೂಲಕ ಈ ಪಾನೀಯವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಬುಲೆಟ್ ಪ್ರೂಫ್ ಕಾಫಿಯಲ್ಲಿ ತುಪ್ಪ, ಬೆಣ್ಣೆಯು ಸಮೃದ್ಧವಾಗಿದೆ. ಇದು ಕರುಳಿನ ಆರೋಗ್ಯಕ್ಕೆ ಒಳ್ಳೆಯದು.
ಆಹಾರದಲ್ಲಿ ಆರೋಗ್ಯಕರ ಕೊಬ್ಬನ್ನು ಸೇರಿಸಲು ಇದು ಉತ್ತಮವಾಗಿದೆ. ಇದು ಮೆದುಳು ಮತ್ತು ದೇಹದ ಕಾರ್ಯಗಳನ್ನು ಆರೋಗ್ಯವಾಗಿರಿಸುತ್ತದೆ.
ದುಷ್ಪರಿಣಾಮಗಳು
ಬುಲೆಟ್ ಪ್ರೂಫ್ ಕಾಫಿಯ ಮೂರು ದುಷ್ಪರಿಣಾಮಗಳನ್ನೂ ಹೊಂದಿದೆ.
ಉಪಹಾರವನ್ನು ಬುಲೆಟ್ಪ್ರೂಫ್ ಕಾಫಿಯೊಂದಿಗೆ ಬದಲಾಯಿಸುವುದರಿಂದ ದೇಹಕ್ಕೆ ಬೇಕಾಗುವ ಪೋಷಕಾಂಶಗಳು ಸಿಗದೇ ಹೋಗಬಹುದು. ತುಪ್ಪ ಮತ್ತು ಎಂಸಿಟಿ ಎಣ್ಣೆಯು ಕೊಬ್ಬನ್ನು ಒದಗಿಸಿದರೆ ಅವು ಊಟದಲ್ಲಿ ಸಿಗುವ ಅಗತ್ಯವಾದ ಜೀವಸತ್ವ, ಖನಿಜ ಮತ್ತು ಪ್ರೋಟೀನ್ಗಳನ್ನು ಹೊಂದಿರುವುದಿಲ್ಲ ಎಂಬುದು ನೆನಪಿರಲಿ.
ಬುಲೆಟ್ ಪ್ರೂಫ್ ಕಾಫಿಯು ಸ್ಯಾಚುರೇಟೆಡ್ ಕೊಬ್ಬಿನಿಂದ ತುಂಬಿದೆ. ಇದು ಅಧಿಕವಾಗಿ ಸೇವಿಸಿದರೆ ಆರೋಗ್ಯದ ಅಪಾಯಗಳನ್ನು ಹೆಚ್ಚಿಸುತ್ತದೆ, ವಿಶೇಷವಾಗಿ ಕೊಲೆಸ್ಟರಾಲ್, ಹೃದಯದ ತೊಂದರೆ ಇರುವವರಿಗೆ ಇದು ಆರೋಗ್ಯಕರವಲ್ಲ.
Gastric Problem: ಗ್ಯಾಸ್ಟ್ರಿಕ್ ಪೀಡೆಯಿಂದ ಪಾರಾಗುವುದು ಹೇಗೆ?
ಬುಲೆಟ್ ಪ್ರೂಫ್ ಕಾಫಿಯಲ್ಲಿರುವ ಬೆಣ್ಣೆಯು ಕೆಲವರಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಬಹುದು. ಇದು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಅಧಿಕ ಕೊಲೆಸ್ಟ್ರಾಲ್ ಹೊಂದಿರುವವರು ಅದನ್ನು ಮಿತಿಗೊಳಿಸಲು ಅಥವಾ ತಪ್ಪಿಸುವುದು ಒಳ್ಳೆಯದು.