ಕರಾಚಿ: ಇಸ್ಲಾಮಾಬಾದ್‌ನಲ್ಲಿ ತೀವ್ರ ರಾಜಕೀಯ ಪ್ರತಿಭಟನೆಯಿಂದಾಗಿ(political protests Pakistan) ಶ್ರೀಲಂಕಾದ ಎ ತಂಡವು ಪಾಕಿಸ್ತಾನದ(PAK vs SL) ಶಾಹೀನ್ಸ್ ವಿರುದ್ಧ ನಡೆಯುತ್ತಿರುವ ಸರಣಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ ತವರಿಗೆ ಮರಳಿದೆ. ಕಳೆದ ಕೆಲ ದಿನಗಳಿಂದ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್(Imran Khan) ಬೆಂಬಲಿಗರು ನಡೆಸುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು. ಪರಿಸ್ಥಿತಿ ಕೈ ಮೀರಿರುವ ಹಿನ್ನೆಲೆಯಲ್ಲಿ ಪಾಕ್ ಸೇನೆ ಮಧ್ಯ ಪ್ರವೇಶಿಸಿ ಪ್ರತಿಭಟನಾಕಾರರ ಹತ್ತಿಕ್ಕಲು ಕಂಡಲ್ಲಿ ಗುಂಡು ಆದೇಶ ಹೊರಡಿಸಿದೆ.
ಶ್ರೀಲಂಕಾ ಮಂಡಳಿಯೊಂದಿಗೆ ಸಮಾಲೋಚನೆಯ ನಂತರ, ಪಾಕಿಸ್ತಾನ ಶಾಹೀನ್ಸ್ ಮತ್ತು ಶ್ರೀಲಂಕಾ ಎ ನಡುವಿನ ಕೊನೆಯ ಎರಡು 50-ಓವರ್ ಪಂದ್ಯಗಳನ್ನು ಮುಂದೂಡಲಾಗಿದೆ ಎಂದು ಪಿಸಿಬಿ ದೃಢಪಡಿಸಿದೆ. ಸೋಮವಾರ ಇಸ್ಲಾಮಾಬಾದ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಶಾಹೀನ್ಸ್ 108 ರನ್‌ಗಳಿಂದ ಶ್ರೀಲಂಕಾ ತಂಡವನ್ನು ಸೋಲಿಸಿತ್ತು. ದ್ವಿತೀಯ ಪಂದ್ಯ ಬುಧವಾರ ಮತ್ತು ಶುಕ್ರವಾರದಂದು ರಾವಲ್ಪಿಂಡಿಯಲ್ಲಿ ನಿಗದಿಪಡಿಸಲಾಗಿತ್ತು. ಆದರೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಹಿನ್ನಲೆ ಪಂದ್ಯವನ್ನು ಮುಂದೂಡಿ ಲಂಕಾ ತಂಡವನ್ನು ವಾಪಸ್ ತವರಿಗೆ ಕಳುಹಿಸಲಾಗಿದೆ.
ಇದನ್ನೂ ಓದಿ Hardik Pandya: 2025ರ ಐಪಿಎಲ್‌ನ ಮೊದಲ ಪಂದ್ಯ ಆಡುವಂತಿಲ್ಲ ಹಾರ್ದಿಕ್ ಪಾಂಡ್ಯ; ಕಾರಣವೇನು?
ಕಳೆದ ವರ್ಷ ನಡೆದಿದ್ದ ಚುನಾವಣೆಯಲ್ಲಿ ಅಕ್ರಮ ನಡೆದಿದೆ, ಪಾಕಿಸ್ತಾನ್ -ತಹ್ರೀಕ್-ಇ-ಇನ್ಸಾಫ್ (ಪಿಟಿಐ) ಕಾರ್ಯಕರ್ತರ ಬಂಧನ ಖಂಡಿಸಿ ಪ್ರತಿಭಟನೆ ನಡೆಸಲು ಕಾರ್ಯಕರ್ತರಿಗೆ ಇಮ್ರಾನ್ ಕರೆ ನೀಡಿದ್ದರು. ಇಮ್ರಾನ್ ಖಾನ್ ಬಿಡುಗಡೆವರೆಗೂ ರಾಜಧಾನಿ ತೊರೆಯುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. ಇಮ್ರಾನ್ ಖಾನ್ ಹೋರಾಟಕ್ಕೆ ಮಣಿಯುವುದಿಲ್ಲ ಎಂದು ಪಾಕ್ ಸರ್ಕಾರ ಹೇಳಿದೆ.
ಇಸ್ಲಾಮಾಬಾದ್‌ನಲ್ಲಿ ಇಮ್ರಾನ್ ಬೆಂಬಲಿಗರು ರಸ್ತೆಗಳಲ್ಲಿ ಅಡ್ಡಲಾಗಿ ಇಟ್ಟಿರುವ ಕಂಟೈನರ್‌ಗಳನ್ನು ಹತ್ತಿ ಕಲ್ಲು ತೂರಾಟ ನಡೆಸಿದ್ದಾರೆ. ರಾಷ್ಟ್ರಪತಿ ಭವನ, ಪ್ರಧಾನಿ ಕಚೇರಿ, ಸರ್ಕಾರಿ ಸಂಸ್ಥೆಗಳಿರುವ ಡಿ-ಚೌಕ್‌ಗೆ ಮುತ್ತಿಗೆ ತಡೆಯಲು ಸೇನೆ ಮಧ್ಯ ಪ್ರವೇಶಿಸಿದೆ. ಸ್ಥಳೀಯಾಡಳಿತವು ಇಸ್ಲಾಮಾಬಾದ್, ರಾವಲ್‌ಪಿಂಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ, ಅಂತರ್ಜಾಲ ಸ್ಥಗಿತಗೊಳಿಸಿದೆ. ಮಂಗಳವಾರದ ವೇಳೆಗೆ ಘಟನೆಯಲ್ಲಿ 6 ಮಂದಿ ಭದ್ರತಾ ಸಿಬ್ಬಂದಿ ಅಸುನೀಗಿದ್ದರು.
2009ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ತೆರಳಿದ್ದ ವೇಳೆ ಶ್ರೀಲಂಕಾ ಆಟಗಾರರು ಪಂದ್ಯವನ್ನಾಡಲು ಬಸ್‌ನಲ್ಲಿ ಮೈದಾನಕ್ಕೆ ತೆರಳುತ್ತಿದ್ದರು. ಈ ವೇಳೆ ಬಸ್ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಪರಿಣಾಮ ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ಮಹೇಲ ಜಯವರ್ಧನೆ, ಉಪನಾಯಕ ಕುಮಾರ ಸಂಗಕ್ಕರ ಗಾಯಗೊಂಡರು. ತಿಲನ್ ಸಮರವೀರ, ತರಂಗ ಪರ್ಣವಿತನ, ಅಜಂತ ಮೆಂಡಿಸ್‌ಗೆ ಗಾಯವಾಗಿತ್ತು. ಈ ಪೈಕಿ ಸಮರವೀರ, ಪರ್ಣವಿತನ ಕಾಲಿಗೆ ಗಾಜಿನ ತುಂಡುಗಳು ಹೊಕ್ಕಿದ್ದವು. ಮೆಂಡಿಸ್ ಕುತ್ತಿಗೆ ಗಾಜಿನ ಚೂರು ನುಗ್ಗಿ ಗಾಯವಾಗಿತ್ತು. ಒಟ್ಟಾರೆ ಎಲ್ಲರೂ ಅಪಾಯದಿಂದ ಪಾರಾಗಿದ್ದರು. ಘಟನೆಯ ತರುವಾಯ ಮೈದಾನದಿಂದಲೇ ಶ್ರೀಲಂಕಾ ಆಟಗಾರರು ವಿಮಾನದಲ್ಲಿ ತವರಿಗೆ ಕಳುಹಿಸಲಾಗಿತ್ತು.