ಅಡಿಲೇಡ್: ಆಸ್ಟ್ರೇಲಿಯಾ(IND vs AUS) ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಿರುವ ಭಾರತ ತಂಡ ಇದೀಗ ದ್ವಿತೀಯ ಪಂದ್ಯವನ್ನಾಡಲು(ind vs aus 2nd test) ಸಜ್ಜಾಗಿದೆ. ಆದರೆ ಈ ಪಂದ್ಯಕ್ಕೆ ಆಡುವ ಬಳಗದ ಆಯ್ಕೆಗೊಂದಲ ಉಂಟು ಮಾಡಿದೆ. ಇದಕ್ಕೆ ಕಾರಣ ಖಾಯಂ ನಾಯಕ ರೋಹಿತ್ ಶರ್ಮ ಮತ್ತೆ ತಂಡ ಸೇರಿರುವುದು.
ಈಗಾಗಲೇ ರೋಹಿತ್ ಶರ್ಮ ಅಭ್ಯಾಸ ಆರಂಭಿಸಿದ್ದಾರೆ. ಡಿಸೆಂಬರ್ 6ರಂದು ಅಡಿಲೇಡ್ನಲ್ಲಿ ಅಹರ್ನಿಶಿ ಪಿಂಕ್ಬಾಲ್ ಟೆಸ್ಟ್ ನಡೆಯಲಿದೆ. ರೋಹಿತ್ ಆರಂಭಿಕರಾಗಿ ಕಣಕ್ಕಿಯುತ್ತಾರೆಯೇ ಅಥವಾ ಮಧ್ಯಮ ಕ್ರಮಾಂಕದಲ್ಲಿ ಆಡುವರೇ ಎಂಬುದು ಸದ್ಯ ತೀವ್ರ ಕುತೂಹಲ ಕೆರಳಿಸಿದೆ. ಯುವ ಬ್ಯಾಟರ್ ದೇವದತ್ ಪಡಿಕ್ಕಲ್ ಬದಲಿಗೆ ರೋಹಿತ್ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಾತ್ರಿ ಎನಿಸಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಆರಂಭಿನಾಗಿ ಕಣಕ್ಕಿಳಿದ ಕೆ.ಎಲ್ ರಾಹುಲ್ ಇದೇ ಕ್ರಮಾಂಕದಲ್ಲಿ ಮುಂದುವರಿಯಲಿದ್ದಾರಾ ಅಥವಾ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರಾ ಎಂಬ ಬಗ್ಗೆ ಕುತೂಹಲವಿದೆ.
ಇದನ್ನೂ ಓದಿ IPL 2025: ʻಅಭಿಮಾನಿಗಳು ತಂಡದ ಆತ್ಮʼ-ಆರ್ಸಿಬಿಗೆ ಭಾವನಾತ್ಮಕ ವಿದಾಯ ಹೇಳಿದ ಮೊಹಮ್ಮದ್ ಸಿರಾಜ್!
ವಾಕಾದಲ್ಲಿ ಅಭ್ಯಾಸ ಪಂದ್ಯವನ್ನಾಡುವ ವೇಳೆ ಎಡಗೈ ಹೆಬ್ಬೆರಳಿನ ಗಾಯಕ್ಕೆ ತುತ್ತಾಗಿ ಮೊದಲ ಪಂದ್ಯದಿಂದ ಹೊರಗುಳಿದಿದ್ದ ಶುಭಮಾನ್ ಗಿಲ್ ದ್ವಿತೀಯ ಪಂದ್ಯ ಆಡುವ ಬಗ್ಗೆ ಬಿಸಿಸಿಐ ಕಡೆಯಿಂದ ಯಾವುದೇ ಅಪ್ಡೆಟ್ ಇಲ್ಲ. ಮೂಲಗಳ ಪ್ರಕಾರ ಗಿಲ್ ದ್ವಿತೀಯ ಪಂದ್ಯ ಆಡುವುದು ಕೂಡ ಅನುಮಾನ ಎನ್ನಲಾಗಿದೆ. ಗಿಲ್ ಆಡದಿದ್ದರೆ. ಮೂರನೇ ಕ್ರಮಾಂಕದಲ್ಲಿ ರಾಹುಲ್ ಅಥವಾ ರೋಹಿತ್ ಇಬ್ಬರಲ್ಲಿ ಒಬ್ಬರು ಕಣಕ್ಕಿಳಿಯುವ ಸಾಧ್ಯತೆಯೂ ಇದೆ. ಪರ್ತ್ ಟೆಸ್ಟ್ನಲ್ಲಿ ರೋಹಿತ್ ಅನುಪಸ್ಥಿತಿಯಲ್ಲಿ ಇನಿಂಗ್ಸ್ ಆರಂಭಿಸುವ ಅವಕಾಶ ಪಡೆದ ರಾಹುಲ್, ಎರಡೂ ಇನಿಂಗ್ಸ್ಗಳಲ್ಲಿ ಕ್ರಮವಾಗಿ 26 ಮತ್ತು 77 ಸ್ಕೋರ್ನೊಂದಿಗೆ ಇತರ ಬ್ಯಾಟರ್ಗಳಿಗಿಂತ ಹೆಚ್ಚು ಸ್ಥಿರ ನಿರ್ವಹಣೆ ತೋರಿದ್ದರು.
2021ರಲ್ಲಿ ಅಡಿಲೇಡ್ನಲ್ಲಿ ನಡೆದ ಪಿಂಕ್ಬಾಲ್ ಟೆಸ್ಟ್ನಲ್ಲಿ ಅಶ್ವಿನ್, 45 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು. ಹೀಗಾಗಿ ದ್ವಿತೀಯ ಟೆಸ್ಟ್ನಲ್ಲಿ ಇವರಿಗೆ ಅವಕಾಶ ಸಿಗುವುದು ಬಹುತೇಕ ಖಚಿತ. ಮೊದಲ ಪಂದ್ಯವನ್ನಾಡಿದ್ದ ವಾಷಿಂಗ್ಟನ್ ಸುಂದರ್ ಈ ಪಂದ್ಯದಿಂದ ಹೊರಗುಳಿಯಬಹುದು. ಉಳಿದಂತೆ ವೇಗದ ಬೌಲಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆ ಕಂಡುಬರುವುದು ಅನುಮಾನ. ಮೊದಲ ಪಂದ್ಯದಲ್ಲಿ ಶ್ರೇಷ್ಠ ನಿರ್ವಹಣೆ ತೋರಿದ ಹರ್ಷಿತ್ ರಾಣಾ, ನಿತೀಶ್ ರೆಡ್ಡಿ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರೇ ಮುಂದುವರಿಯಬಹುದು.