ಪ್ಯಾರಿಸ್: ಕೆಲವೊಮ್ಮೆ ಮಕ್ಕಳು ಮಾಡುವ ತಪ್ಪಿಗೆ ದೊಡ್ಡವರು ತಲೆದಂಡ ತೆರಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಇಲ್ಲೊಬ್ಬ ವಿದ್ಯಾರ್ಥಿನಿ ಶಿಕ್ಷಕನ ಮೇಲಿನ ಕೋಪಕ್ಕೆ ಸುಳ್ಳು ಹೇಳಿ ಕೊನೆಗೆ ಉಗ್ರ ಸಂಘಟನೆಗಳು ಆತನ ಶಿರಚ್ಛೇದ(Teacher Beheaded) ಮಾಡುವಂತೆ ಮಾಡಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಎಲ್ಲಾ ಮುಗಿದ ಮೇಲೆ ವಿದ್ಯಾರ್ಥಿನಿ ಕೋರ್ಟ್ನಲ್ಲು ತನ್ನ ತಪ್ಪನ್ನು ಒಪ್ಪಿಕೊಂಡು ಕುಟುಂಬದವರ ಬಳಿ ಕ್ಷಮೆಯಾಚಿಸಿದ್ದಾಳೆ.
2020ರಲ್ಲಿ ಪ್ಯಾರಿಸ್ನ ಹೊರಗೆ ಚೆಚೆನ್ ಮೂಲದ ಶಿಕ್ಷಕ ಸ್ಯಾಮ್ಯುಯೆಲ್ ಪ್ಯಾಟಿಯನ್ನು ಶಿರಚ್ಛೇದ ಮಾಡಲು ಕಾರಣರಾಗಿ ದ್ವೇಷದ ವಾತಾವರಣವನ್ನು ಹುಟ್ಟುಹಾಕಿದ ಆರೋಪ ಹೊತ್ತಿರುವ ಎಂಟು ಜನರು ವಿಚಾರಣೆ ಎದುರಿಸಿದ್ದಾರೆ. ಅವರಲ್ಲಿ ಅಪ್ರಾಪ್ತ ಬಾಲಕಿಯ 52 ವರ್ಷದ ತಂದೆ ಕೂಡ ಸೇರಿದ್ದಾರಂತೆ. ಹಲವು ವರ್ಷಗಳ ಹಿಂದೆ ಫ್ರಾನ್ಸ್ನಲ್ಲಿ ನಡೆದಿರುವ ಈ ಘಟನೆ ಈಗ ಭಾರೀ ಸದ್ದು ಮಾಡುತ್ತಿದೆ. ಶಿಕ್ಷೆ ಪೂರ್ಣಗೊಳ್ಳುತ್ತಿರುವಾಗಲೇ ಬಾಲಕಿ ಶಿಕ್ಷಕನ ಕುಟುಂಬಸ್ಥರ ಜತೆ ಕ್ಷಮೆಯಾಚಿಸಿದ್ದಾಳೆ.
ಹಾಗೇ 65 ವರ್ಷದ ಫ್ರೆಂಚ್-ಮೊರೊಕನ್ ಇಸ್ಲಾಮಿಕ್ ಕಾರ್ಯಕರ್ತ ಅಬ್ದೆಲ್ಹಕೀಮ್ ಸೆಫ್ರಿಯೋಯಿ ಅವರನ್ನು ಕೂಡ ವಿಚಾರಣೆ ಮಾಡಲಾಗಿದೆ. ಶಿಕ್ಷಕ ಪ್ಯಾಟಿಯನ್ನು “ಟೀಚಿಂಗ್ ಥಗ್” (teaching thug)ಎಂದು ವಿವರಿಸುವ ವಿಡಿಯೊವನ್ನು ಸೆಫ್ರಿಯೋಯಿ ಪೋಸ್ಟ್ ಮಾಡಿದ್ದಾರೆ. ಇವರನ್ನು ಕಳೆದ ನಾಲ್ಕು ವರ್ಷಗಳಿಂದ ವಿಚಾರಣೆಗಾಗಿ ಬಂಧನದಲ್ಲಿರಿಸಲಾಗಿತ್ತು.
ಆಗಿದ್ದೇನು?
ಫ್ರಾನ್ಸ್ನ ಶಿಕ್ಷಕ ಪ್ಯಾಟಿ ಪ್ರವಾದಿ ಮೊಹಮ್ಮದ್ ಅವರ ವ್ಯಂಗ್ಯಚಿತ್ರಗಳನ್ನು ತೋರಿಸುವ ಮೊದಲು ಮುಸ್ಲಿಂ ವಿದ್ಯಾರ್ಥಿಗಳನ್ನು ತನ್ನ ತರಗತಿಯಿಂದ ಹೊರಹೋಗುವಂತೆ ಕೇಳಿದ್ದರು ಎಂದು ಬಾಲಕಿ ತನ್ನ ತಾಯಿಯ ಬಳಿ ಸುಳ್ಳು ಹೇಳಿದ್ದಾಳಂತೆ. ಆದರೆ ಆ ಸಮಯದಲ್ಲಿ ಅವಳು ತರಗತಿಯಲ್ಲಿಯೇ ಇರಲಿಲ್ಲ ಎಂಬುದು ತನಿಖೆ ವೇಳೆ ಬಯಲಾಗಿದೆ.
ಬಾಲಕಿಯ ನಡವಳಿಕೆ ಮತ್ತು ಪದೇ ಪದೇ ಗೈರು ಹಾಜರಿಯಾಗುತ್ತಿರುವುದಕ್ಕೆ ಆಕೆಯನ್ನು ಎರಡು ದಿನಗಳ ಕಾಲ ಶಾಲೆಯಿಂದ ಅಮಾನತುಗೊಳಿಸಲಾಗಿತ್ತು. ಇದನ್ನು ಸಮರ್ಥಿಸಲು ತಾನು ತನ್ನ ತಾಯಿಯ ಬಳಿ ಈ ರೀತಿಯ ಸುಳ್ಳಿನ ಕತೆ ಕಟ್ಟಿದ್ದೇನೆ ಎಂದು ಬಾಲಕಿ ನ್ಯಾಯಾಲಯಕ್ಕೆ ತಿಳಿಸಿದ್ದಾಳೆ. ತನ್ನ ತಪ್ಪನ್ನು ಮುಚ್ಚಿಡಲು ಬಾಲಕಿಯು ಶಿಕ್ಷಕನ ವಿರುದ್ಧ ಸುಳ್ಳು ಆರೋಪ ಹೊರಿಸಿದ್ದಾಳಂತೆ.
ಪ್ಯಾಟಿಯ ಮರಣದ ನಂತರವೂ ಅವಳು ಎಲ್ಲರ ಬಳಿ ಸುಳ್ಳನ್ನು ಸತ್ಯವೆಂದು ನಂಬಿಸಿದ್ದಳು. ಆದರೆ ಆಕೆಯನ್ನು ಬಂಧಿಸಿ 30 ಗಂಟೆಗಳ ಕಾಲ ವಿಚಾರಣೆ ಮಾಡಿದ ನಂತರವೇ ಅವಳು ಸುಳ್ಳು ಹೇಳಿರುವುದನ್ನು ತನಿಖಾಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾಳೆ. ಅಪಪ್ರಚಾರ ಮಾಡಿದ ಆರೋಪದ ಮೇಲೆ ಬಾಲಕಿಗೆ 2023 ರ ಡಿಸೆಂಬರ್ನಲ್ಲಿ 18 ತಿಂಗಳ ಪ್ರೊಬೆಷನರಿ ಶಿಕ್ಷೆ ವಿಧಿಸಲಾಗಿತ್ತು.
ಫ್ರಾನ್ಸ್ನ ವಾಕ್ ಸ್ವಾತಂತ್ರ್ಯ ಕಾನೂನುಗಳನ್ನು ಚರ್ಚಿಸಲು ಪ್ಯಾಟಿ ಚಾರ್ಲಿ ಹೆಬ್ಡೊ ನಿಯತಕಾಲಿಕವನ್ನು ತಮ್ಮ ತರಗತಿಯಲ್ಲಿ ಬಳಸಿದ್ದರಂತೆ. 2015 ರಲ್ಲಿ ಚಾರ್ಲಿ ಹೆಬ್ಡೊ ಪ್ರವಾದಿ ಮೊಹಮ್ಮದ್ ವ್ಯಂಗ್ಯಚಿತ್ರಗಳನ್ನು ಮರುಪ್ರಕಟಿಸಿದ ಕೆಲವೇ ವಾರಗಳ ನಂತರ ಅವರ ಹತ್ಯೆ ನಡೆದಿದೆ. ನಿಯತಕಾಲಿಕದಲ್ಲಿ ಚಿತ್ರಗಳನ್ನು ಬಳಸಿದ ನಂತರ, ಇಸ್ಲಾಮಿಕ್ ಬಂದೂಕುಧಾರಿಗಳು ಅವರ ಕಚೇರಿಗಳಿಗೆ ನುಗ್ಗಿ 12 ಜನರನ್ನು ಕೊಂದಿದ್ದರು.