ಇಂದೋರ್: ಪ್ರಸಕ್ತ ಸಾಗುತ್ತಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ಗುಜರಾತ್ನ ಉರ್ವಿಲ್ ಪಟೇಲ್(Urvil Patel) ಭಾರತೀಯ ಟಿ20 ಕ್ರಿಕೆಟ್ನಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಅತಿ ವೇಗವಾಗಿ ಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ.
ಇಂದೋರ್ನ ಎಮರಾಲ್ಡ್ ಹೈಟ್ಸ್ ಇಂಟರ್ನ್ಯಾಶನಲ್ ಸ್ಕೂಲ್ ಗ್ರೌಂಡ್ನಲ್ಲಿ ಬುಧವಾರ, ನಡೆದ ಈ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಉರ್ವಿಲ್ ಪಟೇಲ್ ಕೇವಲ 28 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದರು. ಇದುವರೆಗೆ ಅತಿ ವೇಗವಾಗಿ ಟಿ20 ಶತಕ ಬಾರಿಸಿದ ಭಾರತೀಯ ದಾಖಲೆ ರಿಷಭ್ ಪಂತ್ ಹೆಸರಿನಲ್ಲಿತ್ತು. 2018 ರಲ್ಲಿ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಹಿಮಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ ಕಣಕ್ಕಿಳಿದ್ದ ಪಂತ್ 32 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದೀಗ ಪಂತ್ ದಾಖಲೆ ಪತನಗೊಂಡಿದೆ.
ಉರ್ವಿಲ್ ಅವರ ಪ್ರಚಂಡ ಬ್ಯಾಟಿಂಗ್ ವೇಳೆ ಏಳು ಬೌಂಡರಿ ಮತ್ತು 12 ಸಿಕ್ಸರ್ ಸಿಡಿಯಲ್ಪಟ್ಟಿತು. ಒಟ್ಟು 35 ಎಸೆತ ಎದುರಿಸಿದ ಉರ್ವಿಲ್, ಅಜೇಯ 113 ರನ್ ಗಳಿಸಿದರು. ಇವರ ಈ ಬ್ಯಾಟಿಂಗ್ ನೆರವಿನಿಂದ ಗುಜರಾತ್ ತಂಡ 58 ಎಸೆತಗಳು ಬಾಕಿ ಇರುವಂತೆಯೇ 156 ರನ್ಗಳನ್ನು ಬೆನ್ನಟ್ಟಿ ಪಂದ್ಯವನ್ನು ಗೆದ್ದು ಬೀಗಿತು.
ಇದನ್ನೂ ಓದಿ IND vs AUS: ದ್ವಿತೀಯ ಟೆಸ್ಟ್ಗೆ ಭಾರತ ಆಡುವ ಬಳಗದ ಆಯ್ಕೆಯೇ ಜಟಿಲ
2023 ರಲ್ಲಿ ಲಿಸ್ಟ್ ಎ ಕ್ರಿಕೆಟ್ನಲ್ಲಿಯೂ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಶತಕ ಬಾರಿಸಿ ಸುದ್ದಿಯಾಗಿದ್ದರು. ಚಂಡೀಗಢದಲ್ಲಿ ನಡೆದಿದ್ದ ಅರುಣಾಚಲ ಪ್ರದೇಶದ ವಿರುದ್ಧದ ಪಂದ್ಯದಲ್ಲಿ ಉರ್ವಿಲ್ ಕೇವಲ 41 ಎಸೆತಗಳಲ್ಲಿ 100 ರನ್ ಬಾರಿಸಿದ್ದರು. ಈ ಮೂಲಕ ಲಿಸ್ಟ್ ಎ ಕ್ರಿಕೆಟ್ನಲ್ಲಿ ಅತಿ ವೇಗವಾಗಿ ಶತಕ ಬಾರಿಸಿದ 2ನೇ ಆಟಗಾರ ಎನಿಸಿಕೊಂಡಿದ್ದರು. ದಾಖಲೆ ಮಾಜಿ ಆಟಗಾರ ಯೂಸುಫ್ ಪಠಾಣ್ ಹೆಸರಿನಲ್ಲಿದೆ. 2010ರಲ್ಲಿ ಮಹಾರಾಷ್ಟ್ರದ ವಿರುದ್ಧದ ಪಂದ್ಯದಲ್ಲಿಯೂಸುಫ್ ಬರೋಡಾ ಪರ 40 ಎಸೆತಗಳಲ್ಲಿ ಶತಕ ಬಾರಿಸಿದ್ದರು.
ಯಾರು ಈ ಉರ್ವಿಲ್?
ಬರೋಡಾದ ಮೆಹ್ಸಾನಾದವರಾದ ಉರ್ವಿಲ್ 2018 ರಲ್ಲಿ ರಾಜ್ಕೋಟ್ನಲ್ಲಿ ಮುಂಬೈ ವಿರುದ್ಧದ ಟಿ 20 ಪಂದ್ಯವನ್ನಾಡುವ ಮೂಲಕ ಬರೋಡಾ ತಂಡಕ್ಕೆ ಪದಾರ್ಪಣೆ ಮಾಡಿದರು. ಅದೇ ವರ್ಷದಲ್ಲಿ, ಅವರು ಲಿಸ್ಟ್ ಎ ಕ್ರಿಕೆಟ್ಗೆ ಪ್ರವೇಶಿಸಿದರು.
ಗುಜರಾತ್ ಟೈಟಾನ್ಸ್ 2023 ರ ಋತುವಿನಲ್ಲಿ ಉರ್ವಿಲ್ ಅವರನ್ನು ಮೂಲಬೆಲೆ 20 ಲಕ್ಷಕ್ಕೆ ಖರೀದಿ ಮಾಡಿತ್ತು. ಆದರೆ ಅವರಿಗೆ ಆಡುವ ಅವಕಾಶ ಲಭಿಸಿರಲಿಲ್ಲ. ಕಳೆದ ಬಾರಿ ಅನ್ಸೋಲ್ಡ್ ಆಗಿದ್ದ ಉರ್ವಿಲ್ ಈ ಬಾರಿಯೂ ಅನ್ಸೋಲ್ಡ್ ಆಗಿದ್ದಾರೆ. ಒಟ್ಟು 44 ಟಿ20 ಪಂದ್ಯ ಆಡಿರುವ ಉರ್ವಿಲ್ 23.52 ರ ಸರಾಸರಿಯಲ್ಲಿ 988 ರನ್ ಗಳಿಸಿದ್ದಾರೆ. ಈ ವೇಳೆ ಒಂದು ಶತಕ ಮತ್ತು ನಾಲ್ಕು ಅರ್ಧಶತಕ ಬಾರಿಸಿದ್ದಾರೆ.