ಲಖನೌ : ಉತ್ತರ ಪ್ರದೇಶದಲ್ಲಿ ಮಸೀದಿ ಸಮೀಕ್ಷೆಯನ್ನು(Mosque Survey) ವಿರೋಧಿಸಿ ನಡೆದ ಸಂಭಾಲ್ ಹಿಂಸಾಚಾರದಲ್ಲಿ ಈವರೆಗೆ ಐವರು ಸಾವನ್ನಪ್ಪಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಭಾರೀ ನಷ್ಟ ಉಂಟಾಗಿದೆ. ಇದೀಗ ನಷ್ಟ ಪರಿಹಾರವನ್ನು ಗಲಭೆಕೋರರಿಂದಲೇ ವಸೂಲು ಮಾಡಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಹಿಂಸಾಚಾರದ ವೇಳೆ ಕಲ್ಲು ತೂರಾಟ ನಡೆಸಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಉಂಟು ಮಾಡಿದ ಗಲಭೆಕೋರರ ಫೋಟೊಗಳನ್ನು ಬಹಿರಂಗವಾಗಿ ಪ್ರದರ್ಶಸಿಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (Sambhal Violence)
ಹಿಂಸಾಚಾರದ ಹಿಂದಿರುವ ಕಾರಣ?
ನ್ಯಾಯಾಲಯದ ಆದೇಶದ ಮೇರೆಗೆ ನಗರದ ಕೋಟ್ ಗರ್ವಿ ಪ್ರದೇಶದ ಶಾಹಿ ಜಾಮಾ ಮಸೀದಿಯ ಸರ್ವೇ ಕಾರ್ಯ ನಡೆಸುತ್ತಿರುವ ಸಂದರ್ಭದಲ್ಲಿ ಭಾನುವಾರ ಭುಗಿಲೆದ್ದ ಘರ್ಷಣೆಯಲ್ಲಿ ಐವರು ಮೃತಪಟ್ಟಿದ್ದು, ಪೊಲೀಸರು ಸೇರಿದಂತೆ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಯುಪಿ ಸರ್ಕಾರದಿಂದ ಕಠಿಣ ಕ್ರಮ
“ಸಂಭಾಲ್ ಹಿಂಸಾಚಾರದಲ್ಲಿ (Sambhal Violence) ಪಾಲ್ಗೊಂಡಿರುವ ವ್ಯಕ್ತಿಗಳ ವಿರುದ್ಧ ಯುಪಿ ಸರ್ಕಾರ (UP Government) ಕಠಿಣ ನಿಲುವನ್ನು ತಳೆದಿದೆ. ಕಲ್ಲು ತೂರಾಟ ನಡೆಸಿದ ಮತ್ತು ದುಷ್ಕರ್ಮಿಗಳ ಪೋಸ್ಟರ್‌ಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಾಗುವುದು ಮತ್ತು ನಷ್ಟದ ಪರಿಹಾರವನ್ನು ಅವರಿಂದಲೇ ವಸೂಲಿ ಮಾಡಲಾಗುವುದು. ಗಲಭೆಕೋರರನ್ನು ಬಂಧಿಸಲು ನೆರವಾಗಿ, ಸೂಕ್ತ ಮಾಹಿತಿಯನ್ನು ನೀಡಿದವರಿಗೆ ಬಹುಮಾನವನ್ನೂ ಘೋಷಿಸಲಾಗುತ್ತದೆ” ಎಂದು ಅಧಿಕೃತವಾಗಿ ತಿಳಿದು ಬಂದಿದೆ.
ಈ ಹಿಂದೆ 2020ರಲ್ಲಿ ಕೂಡ ಸಿಎಎ(CAA) ವಿರೋಧಿ ಪ್ರತಿಭಟನೆಯ ಸಮಯದಲ್ಲಿ ಉತ್ತರ ಪ್ರದೇಶ (Uttar Pradesh) ಸರ್ಕಾರ ಗಲಭೆಕೋರರ ಫೋಟೋಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಿತ್ತು. ರಾಜ್ಯ ರಾಜಧಾನಿ ಸೇರಿದಂತೆ ಹಲವಾರು ಸ್ಥಳಗಳಲ್ಲಿ ದುಷ್ಕರ್ಮಿಗಳ ಪೋಸ್ಟರ್‌ಗಳನ್ನು ಯೋಗಿ ಆದಿತ್ಯನಾಥ್ ಸರ್ಕಾರವು ಪ್ರದರ್ಶಿಸಿತ್ತು. ಆದರೆ ನ್ಯಾಯಾಲಯದ ಆದೇಶದ ನಂತರ ಅವುಗಳನ್ನು ತೆಗೆದುಹಾಕಲಾಗಿತ್ತು.
ಭಾನುವಾರ ಸಂಭಾಲ್ನಲ್ಲಿ ಸರ್ವೆ ತಂಡವು ತನ್ನ ಕೆಲಸವನ್ನು ಪುನರಾರಂಭಿಸುತ್ತಿದ್ದಂತೆ ಮಸೀದಿಯ ಬಳಿ ದೊಡ್ಡ ಜನಸಮೂಹ ಜಮಾಯಿಸಿ ಜೋರಾಗಿ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿತ್ತು. ನಂತರ ಪ್ರತಿಭಟನಾಕಾರರು ಭದ್ರತಾ ಸಿಬ್ಬಂದಿಯೊಂದಿಗೆ ಘರ್ಷಣೆಗಿಳಿದು ವಾಹನಗಳಿಗೆ ಬೆಂಕಿ ಹಚ್ಚಿ ಕಲ್ಲು ತೂರಾಟ ನಡೆಸಿದ್ದು, ಪರಿಸ್ಥಿತಿ ಮತ್ತಷ್ಟು ಉಲ್ಭಣಗೊಂಡಿದೆ.
ಎಸ್‌ಪಿ ಸಂಸದ, ಶಾಸಕನ ವಿರುದ್ಧ ಆರೋಪ
ಈವರೆಗೆ ಪೊಲೀಸರು 25ಕ್ಕೂ ಹೆಚ್ಚು ಗಲಭೆಕೋರರನ್ನು ಬಂಧಿಸಿದ್ದು, ಏಳು ಎಫ್ಐಆರ್ಗಳನ್ನು (FIR) ದಾಖಲಿಸಿದ್ದಾರೆ. ಇದರಲ್ಲಿ ಸಂಭಾಲ್ನ ಸಮಾಜವಾದಿ ಪಕ್ಷದ ಸಂಸದ ಜಿಯಾ-ಉರ್-ರೆಹಮಾನ್ ಬರ್ಕ್, ಪಕ್ಷದ ಸ್ಥಳೀಯ ಶಾಸಕ ಇಕ್ಬಾಲ್ ಮೆಹಮೂದ್ ಅವರ ಪುತ್ರ ಸೊಹೈಲ್ ಇಕ್ಬಾಲ್ ಮತ್ತು 2,750ಕ್ಕೂ ಹೆಚ್ಚು ಅಪರಿಚಿತ ಶಂಕಿತರ ವಿರುದ್ಧ ಆರೋಪ ಹೊರಿಸಲಾಗಿದೆ.
ಘಟನೆಯ ಬಗ್ಗೆ ಮ್ಯಾಜಿಸ್ಟೀರಿಯಲ್ ತನಿಖೆ ನಡೆಯುತ್ತಿದ್ದು, ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣ ಕುಮಾರ್ ವಿಷ್ಣೋಯ್ ಹೇಳಿದ್ದಾರೆ. ಗಲಭೆ ಮತ್ತು ನಗರದ ಅಶಾಂತಿಗೆ ಕಾರಣರಾದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ : Jama mosque Violence: ಮಸೀದಿ ಸರ್ವೆ ವೇಳೆ ಭುಗಿಲೆದ್ದ ಹಿಂಸಾಚಾರ; ನಾಲ್ವರು ಬಲಿ… ಇಂಟರ್ನೆಟ್ ಸ್ಥಗಿತ