Thursday, 28th November 2024

PAN 2.0: ನಿಮ್ಮ ಇ- ಮೇಲ್‌ಗೇ ಬರಲಿದೆ ಹೊಸ ಇ- ಪ್ಯಾನ್!

PAN 2.0

ಅರ್ಜಿ ಹಾಕದೆಯೇ ಹೊಸ ಇ- ಪ್ಯಾನ್ (PAN 2.0) ಅನ್ನು ಇ- ಮೇಲ್‌ಗೆ (New e-PAN) ಕಳುಹಿಸಿಕೊಡಲಾಗುತ್ತದೆ. ಈಗಾಗಲೇ ಅಸ್ತಿತ್ವದಲ್ಲಿರುವ ಪ್ಯಾನ್ ಕಾರ್ಡ್‌ಗಳು (old Pan card) ಪ್ಯಾನ್ 2.0 ಯೋಜನೆಯ (PAN 2.0 project) ಅಡಿಯಲ್ಲಿ ಮಾನ್ಯವಾಗಿರುತ್ತದೆ.

ಬಳಕೆದಾರರಿಗೆ ಅವರ ಇ-ಮೇಲ್ ಐಡಿಗೆ ಅದರ ಎಲೆಕ್ಟ್ರಾನಿಕ್ ಆವೃತ್ತಿಯನ್ನು ಕಳುಹಿಸಿಕೊಡಲಾಗುತ್ತದೆ. ಅಧಿಕೃತವಾಗಿ ಕಾರ್ಡ್ ಬೇಕೆಂದು ಬಯಸುವವರು ದೇಶದೊಳಗೆ ವಾಸಿಸುತ್ತಿದ್ದರೆ ಅರ್ಜಿ ಸಲ್ಲಿಸಿ 50 ರೂ. ಪಾವತಿಸಬೇಕಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ (Income Tax Department ) ತಿಳಿಸಿದೆ.

ಪ್ಯಾನ್ ಹೊಂದಿರುವವರು ಇ-ಮೇಲ್, ಮೊಬೈಲ್, ವಿಳಾಸ, ಹೆಸರು, ಹುಟ್ಟಿದ ದಿನಾಂಕದಂತಹ ಯಾವುದೇ ಪ್ಯಾನ್ ವಿವರಗಳನ್ನು ತಿದ್ದುಪಡಿ ಅಥವಾ ಅಪ್‌ಡೇಟ್ ಮಾಡಲು ಬಯಸಿದರೆ ಪ್ಯಾನ್ 2.0 ಪ್ರಾಜೆಕ್ಟ್ ಪ್ರಾರಂಭವಾದ ಬಳಿಕ ಉಚಿತವಾಗಿ ಮಾಡಬಹುದು ಎಂಬುದಾಗಿ ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು ಹೇಳಿದೆ.

PAN 2.0

ಪ್ಯಾನ್ 2.0 ಯೋಜನೆ ಹೊರತರುವವರೆಗೆ ಪ್ಯಾನ್ ಹೊಂದಿರುವವರು ಇ-ಮೇಲ್, ಮೊಬೈಲ್ ಮತ್ತು ವಿಳಾಸದ ನವೀಕರಣ, ತಿದ್ದುಪಡಿಗಾಗಿ ಆಧಾರ್ ಆಧಾರಿತ ಆನ್‌ಲೈನ್ ಸೌಲಭ್ಯವನ್ನು ಉಚಿತವಾಗಿ ಪಡೆಯಬಹುದಾಗಿದೆ.

ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (CCEA) 1,400 ಕೋಟಿ ರೂ. ನ ಪ್ಯಾನ್ 2.0 ಯೋಜನೆಗೆ ಅನುಮತಿ ನೀಡಿದ ಒಂದು ದಿನದ ಬಳಿಕ ಈ ಮಾಹಿತಿಯನ್ನು ಬಿಡುಗಡೆ ಮಾಡಲಾಗಿದೆ.

ಪ್ಯಾನ್ ನಲ್ಲಿ ಕ್ಯೂಆರ್ ಕೋಡ್‌ಗಳು ಇರಲಿದ್ದು, ಇದು ಪ್ಯಾನ್ ನಲ್ಲಿರುವ ಇತರ ವಿವರಗಳ ತ್ವರಿತ ಪರಿಶೀಲನೆಗಾಗಿ ಈ ವೈಶಿಷ್ಟ್ಯವನ್ನು ಈಗಾಗಲೇ ಹೊರತರಲಾಗಿದೆ.

PAN 2.0: ದೇಶದಲ್ಲಿ ಪ್ಯಾನ್‌ 2.0 ಜಾರಿಗೆ ಕೇಂದ್ರದ ಸಿದ್ಧತೆ; ಏನಿದು ಯೋಜನೆ? ಹಳೆಯ ಪ್ಯಾನ್ ಕಾರ್ಡ್ ಏನಾಗುತ್ತೆ?

ಎಲ್ಲ ಪ್ಯಾನ್ ಮತ್ತು ಟ್ಯಾನ್ ಸಂಬಂಧಿತ ಸೇವೆಗಳು ಆದಾಯ ತೆರಿಗೆ ಇಲಾಖೆಯ ಮೂರು ವಿಭಿನ್ನ e-filing portal, UTIITSL and Protean e-Gov ಪೋರ್ಟಲ್‌ನಲ್ಲಿ ಲಭ್ಯವಿದೆ. ಇವೆಲ್ಲವೂ ಆದಾಯ ತೆರಿಗೆ ಇಲಾಖೆಯ ಪೋರ್ಟಲ್ ಗೆ ಮಾಹಿತಿಯನ್ನು ಒದಗಿಸುತ್ತವೆ. ಈ ಮೂಲಕ ಅರ್ಜಿ ಹಂಚಿಕೆ, ಆನ್‌ಲೈನ್ ಮೌಲ್ಯೀಕರಣ, ಆಧಾರ್‌ನೊಂದಿಗೆ ಲಿಂಕ್ ಮತ್ತು ನವೀಕರಣವನ್ನು ಸಹ ಮಾಡಲಾಗುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯು ಕಾಗದರಹಿತವಾಗಿರುತ್ತದೆ.