Wednesday, 27th November 2024

Jalaj Dhir: ಭೀಕರ ರಸ್ತೆ ಅಪಘಾತ; ಬಾಲಿವುಡ್‌ ನಿರ್ದೇಶಕ ಅಶ್ವಿನಿ ಧೀರ್‌ ಪುತ್ರ ಸಾವು

ಮುಂಬೈ: ಮುಂಬೈಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬಾಲಿವುಡ್‌ ನಿರ್ದೇಶಕ ಅಶ್ವಿನಿ ಧೀರ್‌ (Ashwini Dhir) ಅವರ ಪುತ್ರ ಜಲಜ್‌ ಧೀರ್‌ (Jalaj Dhir) ಮೃತಪಟ್ಟಿದ್ದಾರೆ. ಅವರಿಗೆ 18 ವರ್ಷ ವಯಸ್ಸಾಗಿತ್ತು. ವಿಲೆ ಪಾರ್ಲೆ ಹೆದ್ದಾರಿಯಲ್ಲಿ ನ. 23ರಂದು ಈ ಅವಘಡ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ವರದಿಯೊಂದರ ಪ್ರಕಾರ ಜಲಜ್‌ ತಮ್ಮ ಮೂವರು ಸ್ನೇಹಿತರೊಂದಿಗೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಅಪಘಾತದ ವೇಳೆ ಚಾಲಕ ಮದ್ಯಪಾನ ಮಾಡಿದ್ದ ಎನ್ನಲಾಗಿದೆ. ಜಲಜ್‌ ಅವರೊಂದಿಗಿದ್ದ ಸ್ನೇಹಿತ ಸಾರ್ಥಕ್‌ ಕೌಶಿಕ್‌ ಕೂಡ ಮೃತಪಟ್ಟಿದ್ದಾರೆ. ಚಾಲಕ ಸಹಿಲ್‌ ಮೆಂಧಾ ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದ ವಿವರ

ಎನ್‌ಡಿಟಿವಿ ವರದಿಯ ಪ್ರಕಾರ ಜಲಜ್‌ ತಮ್ಮ ಸ್ನೇಹಿತರೊಂದಿಗೆ ಬಾಂದ್ರಾದಿಂದ ಗೋರೆಗಾಂವ್‌ಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅವಘಡದ ವೇಳೆ ಕಾರು 120-150 ಎಂಪಿಎಚ್‌ ವೇಗದಲ್ಲಿ ಸಾಗುತ್ತಿತ್ತು. ಇಷ್ಟೊಂದು ವೇಗದಲ್ಲಿ ಕಾರು ಓಡಿಸುತ್ತಿದ್ದ ಸಹಿಲ್‌ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಗುದ್ದಿದ್ದಾನೆ. ಕಾರಿನಲ್ಲಿದ್ದ ಜಲಜ್‌ ಅವರ ಸೇಹಿತ ಜಿಮ್ಮಿ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುವ ಪೊಲೀಸರು ಸದ್ಯ ಸಹಿಲ್‌ನನ್ನು ವಶಕ್ಕೆ ಪಡೆದಿದ್ದಾರೆ.

ಘಟನೆಯ ದಿನ ಜಲಜ್ ಧೀರ್‌ ಮತ್ತು ಅವರ ಸ್ನೇಹಿತರು ಗೋರೆಗಾಂವ್ ಪೂರ್ವದಲ್ಲಿ ಹೌಸ್ ಪಾರ್ಟಿ ಮಾಡುತ್ತಿದ್ದರು ಎಂದು ವರದಿಯೊಂದು ತಿಳಿಸಿದೆ. ಬಳಿಕ ಮುಂಜಾನೆ 3 ಗಂಟೆಯವರೆಗೆ ವಿಡಿಯೊ ಗೇಮ್‌ ಆಡಿದ ಅವರು ನಂತರ ಲಾಂಗ್‌ ಡ್ರೈವ್‌ಗೆ ಹೋಗಲು ನಿರ್ಧರಿಸಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಸದ್ಯ ಪೊಲೀಸರು ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಅಶ್ವಿನಿ ಧಿರ್‌ ಹಿನ್ನೆಲೆ

ಅಶ್ವಿನಿ ಧಿರ್‌ ಬಾಲಿವುಡ್‌ನ ಜನಪ್ರಿಯ ನಿರ್ದೇಶಕರಲ್ಲಿ ಒಬ್ಬರು. ಅಜಯ್‌ ದೇವಗನ್‌, ಆರ್‌.ಮಾಧವನ್‌, ಸಂಜಯ್‌ ದತ್‌ ಮುಂತಾದ ಸ್ಟಾರ್‌ ನಟದ ಚಿತ್ರಗಳಿಗೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. 2008ರಲ್ಲಿ ತೆರೆಕಂಡ ʼವನ್‌ ಟು ತ್ರಿʼ ಚಿತ್ರದ ಮೂಲಕ ಸಿನಿರಂಗ ಪ್ರವೇಶಿಸಿದರು. ಸುನೀಲ್‌ ಶೆಟ್ಟಿ, ಪರೇಶ್‌ ರಾವಲ್‌, ತುಷಾರ್‌ ಕಪೂರ್‌, ಇಶಾ ಡಿಯೋಲ್‌, ಸಮೀರಾ ರೆಡ್ಡಿ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಕಾಮಿಡಿ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.

2010ರಲ್ಲಿ ʼಅತಿಥಿ ತುಂ ಕಬ್‌ ಜಾಂಗೆʼ ಚಿತ್ರದ ಮೂಲಕ ಅಶ್ವಿನಿ ಮತ್ತೊಮ್ಮೆ ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದು ಬೀಗಿದರು. ಅಜಯ್‌ ದೇವಗನ್‌, ಪರೇಶ್‌ ರಾವಲ್‌, ಕೊಂಕಣ್‌ಸೇನ್‌ ಶರ್ಮಾ ಮತ್ತಿತರರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 2012ರಲ್ಲಿ ರಿಲೀಸ್‌ ಆದ ʼಸನ್‌ ಆಫ್‌ ಸರ್ದಾರ್‌ʼ ಚಿತ್ರವನ್ನು ನಿರ್ದೇಶಿಸುವ ಮೂಲಕ ಅಶ್ವಿನಿ ಮತ್ತೊಮ್ಮೆ ಮ್ಯಾಜಿಕ್‌ ಸೃಷ್ಟಿಸಿದರು. ತೆಲುಗಿನ ಸೂಪರ್‌ ಹಿಟ್‌ ಚಿತ್ರ ʼಮರ್ಯಾದೆ ರಾಮಣ್ಣʼದ ರಿಮೇಕ್‌ ಆಗಿರುವ ಇದರಲ್ಲಿ ಅಜಯ್‌ ದೇವಗನ್‌, ಸಂಜಯ್‌ ದತ್‌, ಸೋನಾಕ್ಷಿ ಸಿನ್ಹಾ ಮತ್ತಿತರರು ಅಭಿನಯಿಸಿದ್ದರು. ಇದಾಗಿ ಸುಮಾರು 5 ವರ್ಷ ಬ್ರೇಕ್‌ ತೆಗೆದುಕೊಂಡ ಅಶ್ವಿನಿ ಅವರ ಮುಂದಿನ ಚಿತ್ರ ʼಗೆಸ್ಟ್‌ ಇನ್‌ ಲಂಡನ್‌ʼ 2017ರಲ್ಲಿ ತೆರೆಕಂಡಿತು. ಕಾರ್ತಿಕ್‌ ಆರ್ಯನ್‌, ಕೃತಿ ಕರಬಂಧ ನಟಿಸಿದ್ದ ಈ ಸಿನಿಮಾ ಮ್ಯಾಜಿಕ್‌ ಮಾಡುವಲ್ಲಿ ವಿಫಲವಾಯಿತು.

ಅಶ್ವಿನಿ ನಿರ್ದೇಶನದ ʼಹಿಸಾಬ್‌ ಬರಾಬರ್‌ʼ ಇತ್ತೀಚೆಗೆ ನಡೆದ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಸನಗೊಂಡಿತ್ತು. ಈ ಸಿನಿಮಾದಲ್ಲಿ ಆರ್‌.ಮಾಧವನ್‌ ನಾಯಕರಾಗಿ ಕಾಣಿಸಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Tragic Accident :ಡ್ರೈವಿಂಗ್‌ ವೇಳೆ ನಿದ್ದೆಗೆ ಜಾರಿದ ಚಾಲಕ; ಲಾರಿಗೆ ಕಾರು ಡಿಕ್ಕಿ- ಡೆಡ್ಲಿ ಆಕ್ಸಿಡೆಂಟ್‌ನಲ್ಲಿ ಐವರು ವೈದ್ಯರ ದುರ್ಮರಣ