ಇನ್ನೇನು ಮೂರೇ ದಿನ 2024ನೇ ವರ್ಷದ ಕೊನೆಯ ತಿಂಗಳಿಗೆ ನಾವು ಪದಾರ್ಪಣೆ ಮಾಡಲಿದ್ದೇವೆ. ವರ್ಷದ ಕೊನೆಯ ತಿಂಗಳಲ್ಲಿ ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಆಚರಣೆಗಳನ್ನು ನಡೆಸಲಾಗುತ್ತದೆ. ಡಿಸೆಂಬರ್ (December 2024) 1ರಿಂದ 31ರವರೆಗೆ ಪ್ರತಿ ದಿನವೂ ಒಂದೊಂದು ಆಚರಣೆಗೆ ಸೀಮಿತವಾಗಿರುವುದು ಈ ತಿಂಗಳ ವಿಶೇಷವಾಗಿದೆ.
ವಿಶ್ವ ಏಡ್ಸ್ ದಿನ, ಭಾರತೀಯ ನೌಕಾಪಡೆ ದಿನ, ಅಂತಾರಾಷ್ಟ್ರೀಯ ಗುಲಾಮಗಿರಿ ನಿರ್ಮೂಲನಾ ದಿನ, ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ ಸೇರಿದಂತೆ ಡಿಸೆಂಬರ್ ತಿಂಗಳು ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಆಚರಣೆಗಳನ್ನು ಒಳಗೊಂಡಿದೆ. ಪ್ರತಿಯೊಂದು ಆಚರಣೆಗಳು ಒಂದೊಂದು ಉದ್ದೇಶಗಳನ್ನು ಹೊಂದಿದ್ದು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಡಿಸೆಂಬರ್ 1 ವಿಶ್ವ ಏಡ್ಸ್ ದಿನ
ಕಳೆದ 33 ವರ್ಷಗಳಿಂದ ಅಂದರೆ 1988ರಿಂದ ಪ್ರತಿ ವರ್ಷ ಡಿಸೆಂಬರ್ 1ರಂದು ಜಾಗತಿಕವಾಗಿ ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತಿದೆ. ಎಚ್‌ಐವಿ (ಮಾನವ ಇಮ್ಯುನೊ ಡಿಫಿಷಿಯನ್ಸಿ ವೈರಸ್) ಬಗ್ಗೆ ಅರಿವು ಮೂಡಿಸುವುದು, ಎಚ್‌ಐವಿ ಪೀಡಿತರ ಒಗ್ಗಟ್ಟನ್ನು ತೋರಿಸುವುದು, ಏಡ್ಸ್ ಸಂಬಂಧಿತ ಕಾಯಿಲೆಯಿಂದ ಸತ್ತವರನ್ನು ನೆನಪಿಸಿಕೊಳ್ಳುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.
2023 ರಲ್ಲಿ ಭಾರತದಲ್ಲಿ 66,400 ಹೊಸ ಎಚ್‌ಐವಿ ಪ್ರಕರಣಗಳನ್ನು ಗುರುತಿಸಲಾಗಿದೆ. ಜಾಗತಿಕವಾಗಿ 2023ರಲ್ಲಿ 13 ಲಕ್ಷ ಜನರು ಹೊಸದಾಗಿ ಎಚ್‌ಐವಿ ಸೋಂಕಿಗೆ ಒಳಗಾಗಿದ್ದಾರೆ. 2010ಕ್ಕೆ ಹೋಲಿಸಿದರೆ ಇದು ಶೇ. 39ರಷ್ಟು ಕಡಿಮೆಯಾಗಿದೆ. 2010ರಲ್ಲಿ ಜಾಗತಿಕವಾಗಿ 21 ಲಕ್ಷ ಜನರು ಎಚ್‌ಐವಿ ಸೋಂಕಿಗೆ ಒಳಗಾಗಿದ್ದರು.
ಈ ವರ್ಷ”ಹಕ್ಕುಗಳ ಹಾದಿಯನ್ನು ತೆಗೆದುಕೊಳ್ಳಿ” ಎನ್ನುವ ಥೀಮ್ ನೊಂದಿಗೆ ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತಿದೆ. ಎಚ್‌ಐವಿ/ಏಡ್ಸ್ ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ಎದುರಿಸಲು ಮಾನವ ಹಕ್ಕುಗಳನ್ನು ಎತ್ತಿಹಿಡಿಯುವ ಪ್ರಾಮುಖ್ಯತೆಯನ್ನು ಸಾರಲಾಗುತ್ತದೆ.
ಡಿಸೆಂಬರ್ 2 ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ
ಭೋಪಾಲ್ ಅನಿಲ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ನೆನಪಿಗಾಗಿ ಭಾರತದಲ್ಲಿ ಡಿಸೆಂಬರ್ 2 ಅನ್ನು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನಾಗಿ ಆಚರಿಸಲಾಗುತ್ತದೆ. ಭೋಪಾಲ್ ಅನಿಲ ದುರಂತವು 1984ರ ಡಿಸೆಂಬರ್ 2ರಂದು ರಾತ್ರಿ ಸಂಭವಿಸಿತು. ಮೀಥೈಲ್ ಐಸೊಸೈನೇಟ್ ವಿಷಕಾರಿ ಅನಿಲದಿಂದಾಗಿ ಅನೇಕ ಜನರು ಸಾವನ್ನಪ್ಪಿದರು. ಭೋಪಾಲ್ ಅನಿಲ ದುರಂತವನ್ನು ಅತಿದೊಡ್ಡ ಕೈಗಾರಿಕಾ ಮಾಲಿನ್ಯ ವಿಪತ್ತುಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.
ನೀರು, ಗಾಳಿ, ಮಣ್ಣು ಮತ್ತು ಶಬ್ದದಂತಹ ವಿವಿಧ ಮಾಲಿನ್ಯವನ್ನು ಉಂಟುಮಾಡುವ ಮತ್ತು ಪರಿಸರ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುವ ಕೈಗಾರಿಕೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಮತ್ತು ಜಾಗೃತಿ ಮೂಡಿಸುವುದು ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ.
ಡಿಸೆಂಬರ್ 2 ಅಂತಾರಾಷ್ಟ್ರೀಯ ಗುಲಾಮಗಿರಿ ನಿರ್ಮೂಲನೆ ದಿನ
ಪ್ರಪಂಚದಾದ್ಯಂತ ಸುಮಾರು 150 ಮಿಲಿಯನ್ ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಜಗತ್ತಿನಾದ್ಯಂತ 40 ದಶಲಕ್ಷಕ್ಕೂ ಹೆಚ್ಚು ಜನರು ಆಧುನಿಕ ಗುಲಾಮಗಿರಿಗೆ ಬಲಿಯಾಗಿದ್ದಾರೆ ಎಂದು ವಿಶ್ವ ಸಂಸ್ಥೆ ಹೇಳಿದೆ. ಗುಲಾಮಗಿರಿ ನಿರ್ಮೂಲನೆಗಾಗಿ ಪ್ರತಿ ವರ್ಷ ಡಿಸೆಂಬರ್ 2 ಅಂತಾರಾಷ್ಟ್ರೀಯ ಗುಲಾಮಗಿರಿ ನಿರ್ಮೂಲನೆ ದಿನವನ್ನು ಆಚರಿಸಲಾಗುತ್ತದೆ.
ವ್ಯಕ್ತಿಗಳ ಕಳ್ಳಸಾಗಣೆ, ಲೈಂಗಿಕ ಶೋಷಣೆ, ಬಾಲಕಾರ್ಮಿಕತೆ, ಬಲವಂತದ ಮದುವೆ ಮತ್ತು ಸಶಸ್ತ್ರ ಸಂಘರ್ಷದಲ್ಲಿ ಬಲವಂತದ ನೇಮಕಾತಿ ಸೇರಿದಂತೆ ಗುಲಾಮಗಿರಿಯ ನಿರ್ಮೂಲನೆ ಮಾಡುವುದು ಈ ದಿನದ ಉದ್ದೇಶವಾಗಿದೆ.
ಡಿಸೆಂಬರ್ 2 ವಿಶ್ವ ಕಂಪ್ಯೂಟರ್ ಸಾಕ್ಷರತಾ ದಿನ
2001ರಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ (NIIT) ಭಾರತೀಯ ಕಂಪೆನಿಯು ತನ್ನ 20ನೇ ವಾರ್ಷಿಕೋತ್ಸವದ ಅಂಗವಾಗಿ ವಿಶ್ವ ಕಂಪ್ಯೂಟರ್ ಸಾಕ್ಷರತಾ ದಿನವನ್ನು ಆಚರಿಸಲು ಪ್ರಾರಂಭಿಸಿತು.
ವಿಶ್ವದ ಕಂಪ್ಯೂಟರ್ ಬಳಕೆದಾರರಲ್ಲಿ ಹೆಚ್ಚಿನವರು ಪುರುಷರು. ಈ ಹಿನ್ನೆಲೆಯಲ್ಲಿ ಎನ್ ಐಐಟಿ ಹೆಚ್ಚಿನ ಮಹಿಳೆಯರು ಮತ್ತು ಮಕ್ಕಳನ್ನು ಕಂಪ್ಯೂಟರ್ ಸಾಕ್ಷರರನ್ನಾಗಿ ಮಾಡಲು ಈ ದಿನಾಚರಣೆಯನ್ನು ಪ್ರಾರಂಭಿಸಿತ್ತು.
ಡಿಸೆಂಬರ್ 3 ವಿಶ್ವ ಅಂಗವಿಕಲರ ದಿನ
1992ರಿಂದ ಪ್ರತಿ ವರ್ಷ ವಿಶ್ವಸಂಸ್ಥೆಯು ಈ ದಿನವನ್ನು ಆಚರಿಸುತ್ತಿದೆ. ಅಂಗವೈಕಲ್ಯ ಸಮಸ್ಯೆಗಳ ಬಗ್ಗೆ ತಿಳುವಳಿಕೆ ಮೂಡಿಸಲು, ವಿಕಲಾಂಗ ವ್ಯಕ್ತಿಗಳ ಘನತೆ , ಹಕ್ಕು ಮತ್ತು ಯೋಗಕ್ಷೇಮವನ್ನು ಬೆಂಬಲಿಸಲು ಈ ದಿನವನ್ನು ಆಚರಿಸಲಾಗುತ್ತಿದೆ.
ಅಂಗವಿಕಲರ ಹಕ್ಕುಗಳನ್ನು ಭದ್ರಪಡಿಸುವ ಮತ್ತು ಅವರು ಇತರರೊಂದಿಗೆ ಸಂಪೂರ್ಣವಾಗಿ, ಸಮಾನವಾಗಿ ಮತ್ತು ಪರಿಣಾಮಕಾರಿಯಾಗಿ ಸಮಾಜದಲ್ಲಿ ಭಾಗವಹಿಸುವಂತೆ ಮಾಡಲು ಈ ದಿನಾಚರಣೆಯ ಮೂಲಕ ಪ್ರೋತ್ಸಾಹಿಸಲಾಗುತ್ತದೆ.
ಡಿಸೆಂಬರ್ 4 ಭಾರತೀಯ ನೌಕಾಪಡೆ ದಿನ
ಭಾರತೀಯ ನೌಕಾ ಪಡೆಗಳ ಶೌರ್ಯ, ಪ್ರಯತ್ನ ಮತ್ತು ಸಾಧನೆಗಳನ್ನು ನೆನಪಿಸಲು ಡಿಸೆಂಬರ್ 4 ರಂದು ಪ್ರತಿ ವರ್ಷ ಭಾರತೀಯ ನೌಕಾಪಡೆಯ ದಿನವನ್ನು ಆಚರಿಸಲಾಗುತ್ತದೆ. 1971ರಲ್ಲಿ ಭಾರತ- ಪಾಕಿಸ್ತಾನ ಯುದ್ಧದ ಸಮಯದಲ್ಲಿ ಕರಾಚಿ ಗಡಿಯಲ್ಲಿ ಕೆಚ್ಚೆದೆಯಿಂದ ಹೋರಾಡಿದ ಭಾರತೀಯ ಸೈನಿಕರನ್ನು ಗೌರವಿಸಲು ಭಾರತೀಯ ನೌಕಾಪಡೆಯ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಭಾರತೀಯ ನೌಕಾಪಡೆಯ ಯುದ್ಧನೌಕೆಗಳು ಮತ್ತು ವಿಮಾನಗಳನ್ನು ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತದೆ. ನೌಕಾ ಉತ್ಸವದ ಮೂಲಕ ಮಿಲಿಟರಿ ಫೋಟೋ ಪ್ರದರ್ಶನವನ್ನು ಆಯೋಜಿಸಲಾಗುತ್ತದೆ.
ಡಿಸೆಂಬರ್ 5 ವಿಶ್ವ ಮಣ್ಣಿನ ದಿನ
ನಮ್ಮ ಜೀವನದಲ್ಲಿ ಮಣ್ಣಿನ ಮಹತ್ವದ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸಲು ಪ್ರತಿ ವರ್ಷ ಡಿಸೆಂಬರ್ 5 ರಂದು ವಿಶ್ವ ಮಣ್ಣಿನ ದಿನವನ್ನು ಆಚರಿಸಲಾಗುತ್ತದೆ. ಆಹಾರ ಸುರಕ್ಷತೆಯನ್ನು ಖಾತರಿಪಡಿಸುವ ಸಲುವಾಗಿ ಮಣ್ಣಿನ ಸವೆತವನ್ನು ನಿಲ್ಲಿಸಲು ಮತ್ತು ಫಲವತ್ತತೆಯನ್ನು ಕಾಪಾಡಿಕೊಳ್ಳಲು ಕ್ರಮಗಳನ್ನು ಕೈಗೊಳ್ಳುವುದು ಈ ದಿನದ ಉದ್ದೇಶವಾಗಿದೆ. 2014ರಲ್ಲಿ ಮೊದಲ ಬಾರಿಗೆ ವಿಶ್ವ ಮಣ್ಣಿನ ದಿನವನ್ನು ಆಚರಿಸಲಾಯಿತು.
ಡಿಸೆಂಬರ್ 5 ಅಂತಾರಾಷ್ಟ್ರೀಯ ಸ್ವಯಂ ದಿನ
ಜಾಗತಿಕವಾಗಿ ಒಗ್ಗಟ್ಟು ಮತ್ತು ಮಾನವೀಯತೆ ತೋರಲು ಒಂದು ಬಿಲಿಯನ್‌ಗಿಂತಲೂ ಹೆಚ್ಚು ಜನರು ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರನ್ನು ಗೌರವಿಸಲು, ಸ್ವಯಂ ಸೇವೆಯ ಮೌಲ್ಯವನ್ನು ಗುರುತಿಸಲು ವಿಶ್ವದಾದ್ಯಂತ ಡಿಸೆಂಬರ್ 5ರಂದು ಅಂತಾರಾಷ್ಟ್ರೀಯ ಸ್ವಯಂಸೇವಕ ದಿನವನ್ನು ಆಚರಿಸಲಾಗುತ್ತದೆ. ಸಮಾಜದ ಶಾಂತಿ ಮತ್ತು ಅಭಿವೃದ್ಧಿಯನ್ನು ಮುನ್ನಡೆಸುವಲ್ಲಿ ಸ್ವಯಂಸೇವಕರ ಪಾತ್ರವನ್ನು ಈ ದಿನ ಗುರುತಿಸಲಾಗುತ್ತದೆ.
ಡಿಸೆಂಬರ್ 6 ಡಾ. ಬಿ.ಆರ್. ಅಂಬೇಡ್ಕರ್ ಪುಣ್ಯತಿಥಿ
ಭಾರತೀಯ ಸಂವಿಧಾನದ ಪ್ರಮುಖ ವಾಸ್ತು ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುಣ್ಯತಿಥಿಯನ್ನು ಡಿಸೆಂಬರ್ 6 ರಂದು ಆಚರಿಸಲಾಗುತ್ತದೆ. ಬಾಬಾ ಸಾಹೇಬ್ ಎಂದು ಪ್ರೀತಿಯಿಂದ ಕರೆಯಲ್ಪಡುವ ಡಾ. ಬಿ.ಆರ್. ಅಂಬೇಡ್ಕರ್ ಅವರು ನ್ಯಾಯಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ರಾಜಕಾರಣಿ ಮತ್ತು ಸಮಾಜ ಸುಧಾರಕರಾಗಿದ್ದರು. ಅವರು ಹಲವಾರು ಸಾಮಾಜಿಕ ಚಳುವಳಿಗಳಿಗೆ ಸ್ಫೂರ್ತಿ ನೀಡಿದ್ದರು.
ಡಿಸೆಂಬರ್ 6 ಮೈಕ್ರೋವೇವ್ ಓವನ್ ದಿನ
ಕಾಲೇಜು ವಿದ್ಯಾರ್ಥಿಗಳು, ಒಂಟಿಯಾಗಿ ವಾಸಿಸುವವರು, ಹೆಚ್ಚು ದುಡಿಯುವ ಪೋಷಕರ ಜೀವನವನ್ನು ಸುಲಭಗೊಳಿಸಿದ ಮೈಕ್ರೋವೇವ್ ನ ಆವಿಷ್ಕಾರವನ್ನು ಗೌರವಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಮೈಕ್ರೋವೇವ್ ಓವನ್ ಆಹಾರವನ್ನು ಬೇಯಿಸಲು ಮತ್ತು ಮತ್ತೆ ಬಿಸಿ ಮಾಡಲು ಅನುಕೂಲಕರ ಮತ್ತು ವೇಗವಾಗಿ ಮಾಡುವಂತೆ ಮಾಡಿದೆ.
ಡಿಸೆಂಬರ್ 7 ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ದಿನ
ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನದ ಪ್ರಾಮುಖ್ಯತೆಯ ಬಗ್ಗೆ ವಿಶ್ವಾದ್ಯಂತ ಜಾಗೃತಿ ಮೂಡಿಸಲು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ದಿನವನ್ನು ಡಿಸೆಂಬರ್ 7 ರಂದು ಆಚರಿಸಲಾಗುತ್ತದೆ.
ಡಿಸೆಂಬರ್ 7 ಭಾರತೀಯ ಸಶಸ್ತ್ರ ಪಡೆಗಳ ಧ್ವಜ ದಿನ
ದೇಶದ ಗೌರವವನ್ನು ಕಾಪಾಡಲು ಗಡಿಯಲ್ಲಿ ವೀರಾವೇಶದಿಂದ ಹೋರಾಡುವ ಸೈನಿಕರನ್ನು ಗೌರವಿಸಲು ಡಿಸೆಂಬರ್ 7 ಅನ್ನು ಭಾರತದಾದ್ಯಂತ ಸಶಸ್ತ್ರ ಪಡೆಗಳ ಧ್ವಜ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತೀಯ ಸಶಸ್ತ್ರ ಪಡೆಗಳಿಗೆ ಮತ್ತು ಯೋಧರಿಗೆ ಕೃತಜ್ಞತೆಗಳನ್ನು ವ್ಯಕ್ತಪಡಿಸಲು ಸಂಪೂರ್ಣ ರಾಷ್ಟ್ರ ಈ ದಿನ ಒಂದಾಗುತ್ತದೆ.
ಡಿಸೆಂಬರ್ 7 ಭಾರತೀಯ ಸಶಸ್ತ್ರ ಪಡೆಗಳ ಧ್ವಜ ದಿನ
ದೇಶದ ಗೌರವವನ್ನು ಕಾಪಾಡಲು ಗಡಿಯಲ್ಲಿ ವೀರಾವೇಶದಿಂದ ಹೋರಾಡುವ ಸೈನಿಕರನ್ನು ಗೌರವಿಸಲು ಡಿಸೆಂಬರ್ 7 ಅನ್ನು ಭಾರತದಾದ್ಯಂತ ಸಶಸ್ತ್ರ ಪಡೆಗಳ ಧ್ವಜ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತೀಯ ಸಶಸ್ತ್ರ ಪಡೆಗಳಿಗೆ ಮತ್ತು ಯೋಧರಿಗೆ ಕೃತಜ್ಞತೆಗಳನ್ನು ವ್ಯಕ್ತಪಡಿಸಲು ಸಂಪೂರ್ಣ ರಾಷ್ಟ್ರ ಈ ದಿನ ಒಂದಾಗುತ್ತದೆ.
ಡಿಸೆಂಬರ್ 9 ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ
ಪ್ರತಿ ವರ್ಷ ಡಿಸೆಂಬರ್ 9 ರಂದು ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವನ್ನು ಆಚರಿಸಲಾಗುತ್ತದೆ. ಭ್ರಷ್ಟಾಚಾರದ ವಿರುದ್ಧ ಸಾರ್ವಜನಿಕ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ. ಯುಎನ್ ಜನರಲ್ ಅಸೆಂಬ್ಲಿಯು 2003ರ ಅಕ್ಟೋಬರ್ 31ರಂದು ಭ್ರಷ್ಟಾಚಾರದ ವಿರುದ್ಧ ಯುನೈಟೆಡ್ ನೇಷನ್ಸ್ ಕನ್ವೆನ್ಷನ್ ಅನ್ನು ಅಂಗೀಕರಿಸಿತು. ಸಮಾವೇಶದ ಸಮಯದಲ್ಲಿ ಡಿಸೆಂಬರ್ 9 ಅನ್ನು ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನಾಚರಣೆಗೆ ನಿರ್ಧರಿಸಲಾಯಿತು.
ಡಿಸೆಂಬರ್ 10 ಮಾನವ ಹಕ್ಕುಗಳ ದಿನ
ಪ್ರಪಂಚದಾದ್ಯಂತ ಡಿಸೆಂಬರ್ 10ರಂದು ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ. ಜನಾಂಗ, ಬಣ್ಣ, ಧರ್ಮ, ಲಿಂಗ, ಭಾಷೆ, ರಾಜಕೀಯ ಅಥವಾ ಇತರ ಅಂಶಗಳನ್ನು ಪರಿಗಣಿಸದೆ ಎಲ್ಲರಿಗೂ ಅರ್ಹವಾದ ಸಮಾನ ಅಧಿಕಾರ ನೀಡುವುದು ಇದರ ಉದ್ದೇಶವಾಗಿದೆ.
1948ರ ಡಿಸೆಂಬರ್ 10ರಂದು ಪ್ಯಾರಿಸ್‌ನಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯಿಂದ ಈ ದಿನದ ಬಗ್ಗೆ ಘೋಷಣೆ ಮಾಡಲಾಯಿತು.
ಡಿಸೆಂಬರ್ 11 ಅಂತಾರಾಷ್ಟ್ರೀಯ ಪರ್ವತ ದಿನ
ವಿಶ್ವಸಂಸ್ಥೆಯು ಡಿಸೆಂಬರ್ 11 ಅನ್ನು ಅಂತಾರಾಷ್ಟ್ರೀಯ ಪರ್ವತ ದಿನವೆಂದು ಘೋಷಿಸಿದೆ. ಯುಎನ್ ಪ್ರಕಾರ, ಪರ್ವತವು ಪ್ರಪಂಚದ ಅರ್ಧದಷ್ಟು ಜೀವವೈವಿಧ್ಯಗಳಿಗೆ ಆಶ್ರಯತಾಣವಾಗಿದೆ. ಎಲ್ಲಾ ಪ್ರಮುಖ ಜೀವವೈವಿಧ್ಯ ಪ್ರದೇಶಗಳಲ್ಲಿ ಪರ್ವತವು ಶೇ.30ರಷ್ಟನ್ನು ಅನ್ನು ಹೊಂದಿದೆ .ಹವಾಮಾನ ಬದಲಾವಣೆ ಮತ್ತು ಅತಿಯಾದ ಮಾನವನ ಹಸ್ತಕ್ಷೇಪದಿಂದ ಪರ್ವತಗಳು ಅಪಾಯದಲ್ಲಿದೆ. ಅವುಗಳ ರಕ್ಷಣೆಯೇ ಈ ದಿನದ ಉದ್ದೇಶವಾಗಿದೆ.
ಡಿಸೆಂಬರ್ 12 ಯುನಿವರ್ಸಲ್ ಹೆಲ್ತ್ ಕವರೇಜ್ ದಿನ
ಪ್ರತಿಯೊಬ್ಬರಿಗೂ ಕೈಗೆಟಕುವ ಆರೋಗ್ಯ ರಕ್ಷಣೆ ನೀಡುವ ಉದ್ದೇಶದ ಹಿನ್ನೆಲೆಯಲ್ಲಿ 2017ರ ಡಿಸೆಂಬರ್ 12ರಿಂದ ಅಂತಾರಾಷ್ಟ್ರೀಯ ಯುನಿವರ್ಸಲ್ ಹೆಲ್ತ್ ಕವರೇಜ್ ಡೇ ಅನ್ನು ಆಚರಿಸಲಾಗುತ್ತಿದೆ.
ಡಿಸೆಂಬರ್ 14 ಅಂತಾರಾಷ್ಟ್ರೀಯ ಇಂಧನ ಸಂರಕ್ಷಣಾ ದಿನ
ಇಂಧನ ಸಂರಕ್ಷಣೆ ಮತ್ತು ದಕ್ಷತೆಯಿಂದ ಬಳಸುವ ವಿಷಯದಲ್ಲಿ ರಾಷ್ಟ್ರಗಳು ಎಷ್ಟು ದೂರ ಬಂದಿವೆ ಎಂಬುದನ್ನು ಪ್ರದರ್ಶಿಸಲು ಪ್ರತಿ ವರ್ಷ, ಡಿಸೆಂಬರ್ 14 ಅನ್ನು ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನವಾಗಿ ಆಚರಿಸಲಾಗುತ್ತದೆ. ಈ ದಿನವು ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ಶಕ್ತಿಯ ಸಂರಕ್ಷಣೆಯ ಮೌಲ್ಯದ ಬಗ್ಗೆ ಜಾಗೃತಿಯನ್ನು ಮೂಡಿಸುವ ಗುರಿಯನ್ನು ಹೊಂದಿದೆ.
ಡಿಸೆಂಬರ್ 15 ಅಂತಾರಾಷ್ಟ್ರೀಯ ಚಹಾ ದಿನ
ನೀರಿನ ಬಳಿಕ ಜನರು ಕುಡಿಯಲು ಆಯ್ಕೆ ಮಾಡುವ ಎರಡನೇ ಅತಿ ಹೆಚ್ಚು ಪಾನೀಯವೆಂದರೆ ಚಹಾ. ಚೀನಾದ ಅನಂತರ ಭಾರತವು ಎರಡನೇ ಅತಿ ದೊಡ್ಡ ಚಹಾ ಉತ್ಪಾದಕ ದೇಶವಾಗಿದೆ. ಶ್ರೀಲಂಕಾ, ಬಾಂಗ್ಲಾದೇಶ, ವಿಯೆಟ್ನಾಂ, ನೇಪಾಳ, ಕೀನ್ಯಾ, ಇಂಡೋನೇಷಿಯಾ, ಮಲೇಷ್ಯಾ, ಮಲಾವಿ, ಭಾರತ, ಉಗಾಂಡಾ ಮತ್ತು ತಾಂಜಾನಿಯಾದಲ್ಲಿ ಡಿಸೆಂಬರ್ 15 ರಂದು ಅಂತಾರಾಷ್ಟ್ರೀಯ ಚಹಾ ದಿನವನ್ನು ಆಚರಿಸಲಾಗುತ್ತದೆ.
ಡಿಸೆಂಬರ್ 16 ವಿಜಯ್ ದಿವಸ್
1971ರ ಡಿಸೆಂಬರ್ 3 ರಂದು ಪ್ರಾರಂಭವಾದ ಭಾರತ- ಪಾಕಿಸ್ತಾನ ಯುದ್ಧವು ಡಿಸೆಂಬರ್ 16 ರಂದು ಕೊನೆಗೊಂಡಿತು. ಪಾಕಿಸ್ತಾನವು ಭಾರತಕ್ಕೆ ಶರಣಾಯಿತು. ಪಾಕಿಸ್ತಾನದ ಸೇನೆಯು ಸುಮಾರು 93,000 ಸೈನಿಕರೊಂದಿಗೆ ಭಾರತದ ಮುಂದೆ ಶರಣಾಯಿತು. ಈ ಯುದ್ಧದಲ್ಲಿ ಸುಮಾರು 3,900 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು ಮತ್ತು 9,851 ಮಂದಿ ಗಾಯಗೊಂಡಿದ್ದರು. ಅವರನ್ನು ಗೌರವಿಸುವ ಸಲುವಾಗಿ ಭಾರತದಲ್ಲಿ ಈ ದಿನವನ್ನು ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ.
ಡಿಸೆಂಬರ್ 18 ಭಾರತದ ಅಲ್ಪಸಂಖ್ಯಾತರ ಹಕ್ಕುಗಳ ದಿನ
ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ದಿನವನ್ನು ಪ್ರತಿ ವರ್ಷ ಡಿಸೆಂಬರ್ 18 ರಂದು ಆಚರಿಸಲಾಗುತ್ತದೆ. ಜಾತಿ, ಜನಾಂಗ, ಧರ್ಮಗಳ ಆಧಾರದ ಮೇಲೆ ಯಾವುದೇ ತಾರತಮ್ಯವಿಲ್ಲದೆ ಅಲ್ಪಸಂಖ್ಯಾತ ಗುಂಪುಗಳ ಹಕ್ಕುಗಳ ಬಗ್ಗೆ ಅವರಿಗೆ ಅರಿವು ಮತ್ತು ಶಿಕ್ಷಣ ನೀಡುವ ಉದ್ದೇಶವನ್ನು ಈ ದಿನ ಹೊಂದಿದೆ.
ಡಿಸೆಂಬರ್ 18 ಅಂತಾರಾಷ್ಟ್ರೀಯ ವಲಸಿಗರ ದಿನ
ವಲಸಿಗರು ಎದುರಿಸುತ್ತಿರುವ ಸವಾಲು ಮತ್ತು ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಡಿಸೆಂಬರ್ 18 ರಂದು ಅಂತಾರಾಷ್ಟ್ರೀಯ ವಲಸಿಗರ ದಿನವನ್ನು ಆಚರಿಸಲಾಗುತ್ತದೆ.
ಡಿಸೆಂಬರ್ 19 ಗೋವಾ ವಿಮೋಚನ ದಿನ
ಪೋರ್ಚುಗೀಸ್ ಆಳ್ವಿಕೆಯಿಂದ 1961ರಲ್ಲಿ ರಾಜ್ಯದ ವಿಮೋಚನೆಯನ್ನು ಗುರುತಿಸಲು ಗೋವಾ ವಿಮೋಚನಾ ದಿನವನ್ನು ಆಚರಿಸಲಾಗುತ್ತದೆ. 1961ರಲ್ಲಿ ಭಾರತೀಯ ಸೇನೆಯು ಗೋವಾವನ್ನು ಯಶಸ್ವಿಯಾಗಿ ವಶಪಡಿಸಿಕೊಂಡಾಗ 451 ವರ್ಷಗಳ ಕಾಲ ಪೋರ್ಚುಗೀಸ್ ಆಳ್ವಿಕೆಯು ಇಲ್ಲಿ ಕೊನೆಗೊಂಡಿತ್ತು.
ಡಿಸೆಂಬರ್ 20 ಅಂತಾರಾಷ್ಟ್ರೀಯ ಮಾನವ ಒಗ್ಗಟ್ಟಿನ ದಿನ
ಅಂತಾರಾಷ್ಟ್ರೀಯ ಮಾನವ ಒಗ್ಗಟ್ಟಿನ ದಿನವನ್ನು ಪ್ರತಿ ವರ್ಷ ಡಿಸೆಂಬರ್ 20 ರಂದು ಆಚರಿಸಲಾಗುತ್ತದೆ. ಈ ದಿನವು ಅಂತಾರಾಷ್ಟ್ರೀಯ ಒಪ್ಪಂದಗಳಿಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಲು ರಾಜ್ಯಗಳನ್ನು ಪ್ರೇರೇಪಿಸುತ್ತದೆ. ಶಾಂತಿ, ಸಾಮಾಜಿಕ ನ್ಯಾಯ ಮತ್ತು ಸುಸ್ಥಿರ ಅಭಿವೃದ್ಧಿಯ ಸಾಮಾನ್ಯ ಉದ್ದೇಶಗಳ ಕಡೆಗೆ ಒಟ್ಟಾಗಿ ಕೆಲಸ ಮಾಡಲು ಈ ದಿನಾಚರಣೆ ಮೂಲಕ ಕರೆ ನೀಡಲಾಗುತ್ತದೆ.
ಡಿಸೆಂಬರ್ 22 ರಾಷ್ಟ್ರೀಯ ಗಣಿತ ದಿನ
ಭಾರತೀಯ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರು ಗಣಿತ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳನ್ನು ಗೌರವಿಸಲು ಅವರ ಜನ್ಮದಿನವಾದ ಡಿಸೆಂಬರ್ 22ರಂದು ಪ್ರತಿ ವರ್ಷ ರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಗುತ್ತದೆ. 2012ರಂದು ಮೊದಲ ಬಾರಿಗೆ ದೇಶದಾದ್ಯಂತ ರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಯಿತು.
ಡಿಸೆಂಬರ್ 23 ರಾಷ್ಟ್ರೀಯ ರೈತರ ದಿನ
ಭಾರತದಲ್ಲಿ ರಾಷ್ಟ್ರೀಯ ರೈತರ ದಿನವನ್ನು ಪ್ರತಿ ವರ್ಷ ಡಿಸೆಂಬರ್ 23 ರಂದು ಆಚರಿಸಲಾಗುತ್ತದೆ. ರೈತ ನಾಯಕರಾಗಿದ್ದ ಭಾರತದ 5 ನೇ ಪ್ರಧಾನ ಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನವನ್ನು ರೈತರ ದಿನವಾಗಿ ಆಚರಿಸಲಾಗುತ್ತದೆ. ಚೌಧರಿ ಚರಣ್ ಸಿಂಗ್ ಅವರು ಭಾರತೀಯ ರೈತರ ಜೀವನವನ್ನು ಸುಧಾರಿಸಲು ಅನೇಕ ನೀತಿಗಳನ್ನು ಪರಿಚಯಿಸಿದ್ದರು.
ಡಿಸೆಂಬರ್ 24 ರಾಷ್ಟ್ರೀಯ ಗ್ರಾಹಕರ ದಿನ
ಗ್ರಾಹಕರ ಚಳವಳಿಯ ಮಹತ್ವವನ್ನು ಎತ್ತಿ ಹಿಡಿಯಲು ಮತ್ತು ಪ್ರತಿಯೊಬ್ಬ ಗ್ರಾಹಕರ ಹಕ್ಕುಗಳು ಮತ್ತು ಜವಾಬ್ದಾರಿಗಳ ಬಗ್ಗೆ ಜಾಗೃತಿ ಮೂಡಿಸಲು ವಾರ್ಷಿಕವಾಗಿ ಡಿಸೆಂಬರ್ 24ರಂದು ರಾಷ್ಟ್ರೀಯ ಗ್ರಾಹಕರ ದಿನವನ್ನು ಆಚರಿಸಲಾಗುತ್ತದೆ.
ಡಿಸೆಂಬರ್ 25 ಕ್ರಿಸ್‌ಮಸ್
ಕ್ರೈಸ್ತ ಧರ್ಮೀಯರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಕ್ರಿಸ್‌ಮಸ್ ಅನ್ನು ಪ್ರತಿ ವರ್ಷ ಡಿಸೆಂಬರ್ 25 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಕ್ರಿಸ್‌ಮಸ್‌ನ ಸಂಭ್ರಮವು ಒಂದು ದಿನ ಮುಂಚಿತವಾಗಿ ಅಂದರೆ ಡಿಸೆಂಬರ್ 24 ರಿಂದ ಪ್ರಾರಂಭವಾಗುತ್ತದೆ. ಕ್ರಿಶ್ಚಿಯನ್ ಧರ್ಮದ ಜನರು ಈ ದಿನವನ್ನು ಯೇಸುಕ್ರಿಸ್ತನ ಜನ್ಮದಿನವೆಂದು ಆಚರಿಸುತ್ತಾರೆ.
ಡಿಸೆಂಬರ್ 25 ಉತ್ತಮ ಆಡಳಿತ ದಿನ
ಭಾರತದಾದ್ಯಂತ ಡಿಸೆಂಬರ್ 25 ಅನ್ನು ಉತ್ತಮ ಆಡಳಿತ ದಿನವಾಗಿ ಆಚರಿಸಲಾಗುತ್ತದೆ. ಈ ದಿನ ದೇಶದ ಮಾಜಿ ಪ್ರಧಾನಿ ಮತ್ತು ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವಾಗಿದೆ. ವಾಜಪೇಯಿ ಅವರ ಸರ್ಕಾರವು ಉತ್ತಮ ಆಡಳಿತ ನೀಡಿರುವುದರಿಂದ ಅವರ ಜನ್ಮ ದಿನವನ್ನು ಉತ್ತಮ ಆಡಳಿತದ ದಿನವಾಗಿ ಘೋಷಿಸಲಾಗಿದೆ.
IPL 2025: ಮೆಗಾ ಆಕ್ಷನ್‌ನಿಂದ ಹೊರಗುಳಿಯಲು ಕಾರಣ ತಿಳಿಸಿದ ಬೆನ್ ಸ್ಟೋಕ್ಸ್!
ಡಿಸೆಂಬರ್ 26 ಬಾಕ್ಸಿಂಗ್ ದಿನ
ಕ್ರಿಸ್ಮಸ್ ದಿನದ ಮರುದಿನ ಬಾಕ್ಸಿಂಗ್ ದಿನವನ್ನು ಆಚರಿಸಲಾಗುತ್ತದೆ. ಬಡವರಿಗೆ ಉಡುಗೊರೆಗಳನ್ನು ನೀಡಲು ಈ ದಿನವನ್ನು ಆಚರಿಸಲಾಗುತ್ತದೆ. ಯುಕೆ, ಸ್ಕಾಟ್‌ಲ್ಯಾಂಡ್, ಐರ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮತ್ತು ಕೆನಡಾದಲ್ಲಿ ಇದು ಸಾರ್ವಜನಿಕ ರಜಾದಿನವಾಗಿದೆ. 1871ರಿಂದ ಅಧಿಕೃತವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ದಾನ, ದೇಣಿಗೆ ಮತ್ತು ನಿರ್ಗತಿಕರಿಗೆ ನಿಧಿ ಸಂಗ್ರಹಕ್ಕಾಗಿ ಈ ದಿನವನ್ನು ಹೆಚ್ಚಿನವರು ಮೀಸಲಿಡುತ್ತಾರೆ.