ಬೆಳಗಾವಿ: ತಂತ್ರಜ್ಞಾನ-ಚಾಲಿತ ಬೆಳವಣಿಗೆ ಮತ್ತು ಕೈಗಾರಿಕಾ ಆವಿಷ್ಕಾರ ಉತ್ತೇಜಿಸುವ ತನ್ನ ಬದ್ಧತೆಗೆ ಪೂರಕವಾಗಿ ಕರ್ನಾಟಕ ರಾಜ್ಯ ಸರ್ಕಾರವು ಫ್ಲಿಪ್ಕಾರ್ಟ್, ಫೆಡರಲ್ ಬ್ಯಾಂಕ್ ಮತ್ತು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ (ಎಫ್ಐಸಿಸಿಐ) ಸಹಯೋಗದಲ್ಲಿ ಎಸ್ಎಂಇ ಸಹಯೋಗ ಸಂವಾದ ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಿತ್ತು.
ಮುಂದಿನ ವರ್ಷ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ – ಇನ್ವೆಸ್ಟ್ ಕರ್ನಾಟಕ 2025ʼದ ಸಮಗ್ರ ಪೂರ್ವಭಾವಿ ಸಿದ್ಧತೆಗಳ ಭಾಗವಾಗಿ ಈ ಸಂವಾದ ಏರ್ಪಡಿಸಲಾಗಿತ್ತು. ಕರ್ನಾಟಕದಾದ್ಯಂತ ಸ್ಪರ್ಧಾತ್ಮಕ ಮತ್ತು ಸುಧಾರಿತ ಡಿಜಿಟಲ್ ಕೈಗಾರಿಕಾ ಪರಿಸರ ಅಭಿವೃದ್ಧಿಪಡಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ.
ಫ್ಲಿಪ್ಕಾರ್ಟ್ನ ಕಾರ್ಪೊರೇಟ್ ವ್ಯವಹಾರಗಳ ಸಹ ನಿರ್ದೇಶಕ. ನೀಲೇಶ್ ಕುಮಾರ್, ಫೆಡರಲ್ ಬ್ಯಾಂಕ್ನ ಪ್ರಾದೇಶಿಕ ಮುಖ್ಯಸ್ಥ ಸಂಜೊ ಜೋಸೆಫ್ ಮತ್ತು ʼಫಿಕ್ಕಿʼ ಪ್ರತಿನಿಧಿಗಳು ಭಾಗವಹಿಸಿದ್ದರು.
ತ್ವರಿತವಾಗಿ ಬದಲಾಗುತ್ತಿರುವ ಉದ್ದಿಮೆ ಲೋಕದಲ್ಲಿ ಅಗತ್ಯವಾದ ಜ್ಞಾನ ಮತ್ತು ಸಾಧನಗಳ ನೆರವಿನಿಂದ ʼಎಸ್ಎಂಇʼ-ಗಳನ್ನು ಸನ್ನದ್ಧಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.
ಕೈಗಾರಿಕೆಗಳ ಡಿಜಿಟಲೀಕರಣದ (ಉದ್ಯಮ 4.0) ಮಾನದಂಡಗಳನ್ನು ಸಾಧಿಸಲು, ಇತ್ತೀಚಿನ ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿ ಕೊಳ್ಳುವ ವಿಧಾನವನ್ನು ಚರ್ಚಿಸಲಾಯಿತು. ರಫ್ತು ಹೆಚ್ಚಳ ಮತ್ತು ʼಎಸ್ಎಂಇʼಗಳನ್ನು ಜಾಗತಿಕ ಪೂರೈಕೆದಾರರಾಗಿ ಅಭಿವೃದ್ಧಿಪಡಿಸುವ ಕಾರ್ಯತಂತ್ರ ಅಳವಡಿಕೆ, ಇ-ಕಾಮರ್ಸ್ ತಾಣಗಳ ಸಮರ್ಥ ಬಳಕೆ, ಅಗತ್ಯ ಹಣಕಾಸು ನೆರವು ಪಡೆಯುವಿಕೆ ಮತ್ತು ವಿವಿಧ ವಲಯಗಳ ಮೂಲ ಉಪಕರಣ ತಯಾರಿಕಾ ಕಂಪನಿಗಳು (ಒಇಎಂ) ಹಾಗೂ ಖರೀದಿದಾರರ ಜೊತೆ ಸಂಪರ್ಕ ಸಾಧಿಸಲು ಸರ್ಕಾರಿ ಅಂತರ್ಜಾಲ ತಾಣಗಳ ಸಮರ್ಪಕ ಬಳಕೆ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ವಹಿವಾಟು ಹೆಚ್ಚಿಸಲು ʼಫಿಕ್ಕಿʼ ಮೂಲಕ ಸಂಪರ್ಕ ಜಾಲ ಬಳಸಿಕೊಳ್ಳಲು ಎಸ್ಎಂಇ ಉದ್ಯಮಿಗಳಿಗೆ ಸಲಹೆ ನೀಡಲಾಯಿತು.
ಇನ್ವೆಸ್ಟ್ ಕರ್ನಾಟಕ ಫೋರಂ ಅಭಿವೃದ್ಧಿಪಡಿಸಿರುವ ಎಸ್ಎಂಇ ಕನೆಕ್ಟ್ ಅಂತರ್ಜಾಲ ತಾಣದ ನೆರವಿನಿಂದ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಖರೀದಿದಾರರು ಮತ್ತು ʼಒಇಎಂʼಗಳ ಮೂಲಕ ಸ್ಥಳೀಯ, ದೇಶೀಯ ಹಾಗೂ ವಿದೇಶಿ ಎಸ್ಎಂಇ-ಗಳ ಜೊತೆ ಸಂಪರ್ಕ ಸಾಧಿಸುವ ಉದ್ದೇಶಕ್ಕೆ ʼಎಸ್ಎಂಇ ಸಹಯೋಗʼ ಕಾರ್ಯಕ್ರಮ ರೂಪಿಸಲಾಗಿದೆ.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್ಎಂಇ) ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವಲ್ಲಿ ಮತ್ತು ಸರಿಯಾದ ಗ್ರಾಹಕರನ್ನು ಹುಡುಕುವಲ್ಲಿ ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಸಂವಾದ ಕಾರ್ಯಕ್ರಮ ನೆರವಾಯಿತು.
ರಫ್ತು , ಹಣಕಾಸು ಸೌಲಭ್ಯ, ಇ-ಕಾಮರ್ಸ್ ಮತ್ತು ನಿರಂತರ ವಹಿವಾಟಿನ ಒಳನೋಟಗಳನ್ನು ಒದಗಿಸುವುದರ ಜೊತೆಗೆ, ʼಎಂಎಸ್ಎಂಇʼ ಉದ್ಯಮಿಗಳಿಗೆ ವಹಿವಾಟಿನ ಸದ್ಯದ ತ್ವರಿತ ಬದಲಾವಣೆಯ ಜೊತೆಗೆ ಮುನ್ನಡೆಯುವ ಬಗ್ಗೆ ಮಾರ್ಗದರ್ಶನ ನೀಡಲಾಯಿತು.
ಉದ್ಯಮ ಕ್ಷೇತ್ರಗಳಲ್ಲಿ ತಮ್ಮ ಜ್ಞಾನ ಮತ್ತು ಕೌಶಲಗಳನ್ನು ಹೆಚ್ಚಿಸಿಕೊಳ್ಳಲು, ಸ್ಪರ್ಧಾತ್ಮಕ ಮಾರುಕಟ್ಟೆಗಳಲ್ಲಿ ಹೊಂದಾಣಿಕೆ ಮೂಲಕ ಅಭಿವೃದ್ಧಿ ಸಾಧಿಸುವ ಬಗ್ಗೆ ಉದ್ಯಮಿಗಳು ಅನುಭವಿ ಪರಿಣತರ ಜೊತೆ ವಿಚಾರ ವಿನಿಮಯ ನಡೆಸಿದರು.
ರಾಜ್ಯದ ಆರ್ಥಿಕ ಬೆಳವಣಿಗೆಗೆ ಪ್ರಮುಖ ಕೊಡುಗೆ ನೀಡಲು ʼಎಸ್ಎಂಇʼಗಳನ್ನು ಸಬಲೀಕರಣಗೊಳಿಸಲು ಕರ್ನಾಟಕ ಸರ್ಕಾರವು ಬದ್ಧವಾಗಿದೆ. ಇನ್ವೆಸ್ಟ್ ಕರ್ನಾಟಕ 2025 ನಂತರ ದೊರೆಯಲಿರುವ ಅವಕಾಶಗಳನ್ನು ಬಳಸಿಕೊಳ್ಳಲು ಅವುಗಳ ಸಿದ್ಧತೆಯನ್ನು ಖಚಿತಪಡಿಸಲು ಈ ಕಾರ್ಯಕ್ರಮ ಆಯೋಜಿಸಿತ್ತು.