ಮುಂಬೈ : ಇತ್ತೀಚೆಗೆ ಷೇರು ಮಾರುಕಟ್ಟೆ ಹೂಡಿಕೆ ಹಗರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಸ್ಟಾಕ್ ಮಾರ್ಕೆಟಿಂಗ್ ಹೆಸರಿನಲ್ಲಿ ಸೈಬರ್ ಖದೀಮರು ಅಮಾಯಕರಿಂದ ಕೋಟಿ ಕೋಟಿ ರೂ. ಲೂಟಿ ಮಾಡುತ್ತಿದ್ದಾರೆ. ಇದೀಗ ಅಂತಹದ್ದೇ ಒಂದು ಘಟನೆ ವರದಿಯಾಗಿದೆ. ಸ್ಟಾಕ್ ಟ್ರೇಡಿಂಗ್ ಹಗರಣದಲ್ಲಿ (Stock trading scam) 75 ವರ್ಷದ ನಿವೃತ್ತ ಶಿಪ್ ಕ್ಯಾಪ್ಟನ್ ಝಾಕ್ಷಿಸ್ ಕೋಸಾ ವಾಡಿಯಾ ಅವರಿಗೆ 11.16 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಡೋಂಗ್ರಿ ಮೂಲದ ವ್ಯಕ್ತಿಯನ್ನು ಮುಂಬೈನ ದಕ್ಷಿಣ ಸೈಬರ್ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಕೈಫ್ ಇಬ್ರಾಹಿಂ ಮನ್ಸೂರಿ ಎಂದು ಗುರುತಿಸಲಾಗಿದೆ (Cyber Crime).
ಆರೋಪಿ ವಂಚನೆಗಾಗಿ ಅನೇಕ ಬ್ಯಾಂಕ್ ಖಾತೆಗಳನ್ನು ಹೊಂದಿದ್ದ ಎಂದು ತಿಳಿದು ಬಂದಿದೆ. ಬಂಧಿತನಿಂದ ವಿವಿಧ ಖಾತೆಗಳಿಗೆ ಸಂಬಂಧಿಸಿದ 33 ಡೆಬಿಟ್ ಕಾರ್ಡ್ ಮತ್ತು 12 ಚೆಕ್ ಬುಕ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆತನನ್ನು ಡಿಸೆಂಬರ್ 2ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.
1985 ರಲ್ಲಿ ನಿವೃತ್ತರಾದ ವಾಡಿಯಾ ಅವರನ್ನು ಈ ವರ್ಷದ ಆಗಸ್ಟ್ 19 ರಂದು ವಾಟ್ಸಾಪ್ ಗ್ರೂಪ್ ಹೂಡಿಕೆ ಕ್ಲಬ್ಗೆ ಆರೋಪಿ ಸೇರಿಸಿದ್ದಾನೆ. ಆರೋಪಿಯ ಇನ್ನೂ ಕೆಲವರು ಇದ್ದು, ಇವರ ಗುಂಪು ಷೇರು ಮಾರುಕಟ್ಟೆ ಹೂಡಿಕೆಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡು, ಕ್ರಮೇಣ ಅವರ ವಿಶ್ವಾಸವನ್ನು ಗಳಿಸಿತು. ನಂತರ ಅವರಿಗೆ ಹೂಡಿಕೆ ಕಂಪನಿಯ ಹೆಸರಿನಲ್ಲಿ ಖಾತೆ ತೆರೆಯುವ ಲಿಂಕ್ ಕಳುಹಿಸಲಾಗಿದೆ. ಅನ್ಯಾ ಸ್ಮಿತ್ ಎಂಬ ಮಹಿಳೆ ವಾಡಿಯಾ ಅವರನ್ನು ಸಂಪರ್ಕಿಸಿ, ಹೂಡಿಕೆಯ ಬಗ್ಗೆ ಮಾರ್ಗದರ್ಶನ ನೀಡಿದ್ದಾಳೆ.
ಆಕೆಯ ಸಲಹೆಯನ್ನು ಅನುಸರಿಸಿದ, ವಾಡಿಯಾ ಸೆಪ್ಟೆಂಬರ್ 5 ಮತ್ತು ಅಕ್ಟೋಬರ್ 19ರ ನಡುವೆ ಸುಮಾರು 11.20 ಕೋಟಿ ರೂ.ಗಳನ್ನು ವಿವಿಧ 22 ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಆ್ಯಪ್ನಲ್ಲಿ ಅವರಿಗೆ ಗಮನಾರ್ಹ ಲಾಭವನ್ನು ತೋರಿಸಲಾಗಿದೆ. ಆದರೆ ಅವರು ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ, ಮಹಿಳೆ ತೆರಿಗೆಯಾಗಿ ಶೇ.20 ಬೇಡಿಕೆಯಿಟ್ಟಿದ್ದಳು. ವಾಡಿಯಾ ಅನೇಕ ಖಾತೆಗಳ ಬಗ್ಗೆ ಪ್ರಶ್ನಿಸಿದಾಗ ಮಹಿಳೆ, ಇದು ತೆರಿಗೆ ಉಳಿಸುವ ಕ್ರಮ ಎಂದು ಹೇಳಿದ್ದಳು. ಶೇ.20ರಷ್ಟು ತೆರಿಗೆ ಪಾವತಿಸಿದ ನಂತರವೂ ಹೆಚ್ಚುವರಿ ಹಣದ ಬೇಡಿಕೆ ನಿಲ್ಲದ ಕಾರಣ ಅನುಮಾನಗೊಂಡು ಸೈಬರ್ ಪೊಲೀಸರ ಮೊರೆ ಹೋಗಿದ್ದಾರೆ.
ತನಿಖೆ ವೇಳೆ ಐಡಿಎಫ್ ಸಿ ಬ್ಯಾಂಕ್ ಖಾತೆಯಿಂದ ಚೆಕ್ ಮೂಲಕ 6 ಲಕ್ಷ ರೂಪಾಯಿ ಹಣ ಡ್ರಾ ಮಾಡಿರುವುದು ಪತ್ತೆಯಾಗಿದೆ. ವಿಚಾರಣೆ ನಡೆಸಿದಾಗ, ಮನ್ಸೂರಿಯ ಸೂಚನೆಯ ಮೇರೆಗೆ ಹಣವನ್ನು ಹಿಂಪಡೆದಿರುವುದಾಗಿ ಮಹಿಳೆ ಬಹಿರಂಗಪಡಿಸಿದ್ದಾಳೆ. ತನಿಖೆಯ ಪ್ರಕಾರ, ಆರೋಪಿ ಮನ್ಸೂರಿ ಐದು ಬ್ಯಾಂಕ್ ಖಾತೆಗಳಿಗೆ 44 ಲಕ್ಷ ರೂ.ವರ್ಗಾವಣೆ ಮಾಡಿದ್ದ ಎಂದು ತಿಳಿದು ಬಂದಿದೆ. ವಾಡಿಯಾ ಪೊಲೀಸರಿಗೆ ದೂರು ನೀಡುತ್ತಿದ್ದಂತೆ ಆರೋಪಿ ಮನ್ಸೂರಿ ಬಂಧನವನ್ನು ತಪ್ಪಿಸಲು ಕೇರಳಕ್ಕೆ ಓಡಿಹೋಗಿದ್ದ. ಆತನ ಪತ್ತೆಗೆ ಕೇರಳಕ್ಕೆ ಪೊಲೀಸ್ ತಂಡವನ್ನು ರವಾನಿಸಿ ಅಲ್ಲಿಂದ ಬಂಧಿಸಲಾಗಿದೆ.
ಹೆಚ್ಚಿನ ವಿಚಾರಣೆಯಲ್ಲಿ ವಂಚನೆಯಿಂದ ಸಂಪಾದಿಸಿದ ಹಣವನ್ನು ವಿದೇಶಕ್ಕೆ ಸಾಗಿಸಲು ಯೋಜನೆ ಮಾಡಿದ್ದರು ಎಂದು ತಿಳಿದು ಬಂದಿದೆ. ಪೊಲೀಸರು ಉಳಿದ ಆರೋಪಿಗಳಿಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಇದನ್ನೂ ಓದಿ : Cyber Crime: ಸ್ಟಾಕ್ ಮಾರ್ಕೆಟ್ ತರಬೇತಿ ನೀಡೋದಾಗಿ ನಂಬಿಸಿ 100 ಕೋಟಿ ರೂ. ಪಂಗನಾಮ! ಚೀನಾ ಪ್ರಜೆ ಅರೆಸ್ಟ್