Thursday, 28th November 2024

Chennai Super Kings: ಸಿಎಸ್‌ಕೆಯ ಫಿಕ್ಸಿಂಗ್‌ ಕರಾಳತೆ ಬಿಚ್ಚಿಟ್ಟ ಮಾಜಿ ಐಪಿಎಲ್‌ ಅಧ್ಯಕ್ಷ

ನವದೆಹಲಿ: ಐಪಿಎಲ್‌ನ ಮಾಜಿ ಅಧ್ಯಕ್ಷ ಲಲಿತ್‌ ಮೋದಿ(Lalit Modi) ಅವರು 5 ಬಾರಿಯ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌(Chennai Super Kings) ತಂಡದ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಫ್ರಾಂಚೈಸಿಯ ಮಾಲೀಕರಾಗಿರುವ ಎನ್‌.ಶ್ರೀನಿವಾಸನ್‌(N Srinivasan) ಅಂಪೈರ್‌ಗಳನ್ನೇ ಫಿಕ್ಸ್‌ ಮಾಡುತ್ತಿದ್ದರು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಯೂಟ್ಯೂಬರ್‌ ರಾಜ್‌ ಸಮಾನಿ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ಲಲಿತ್‌ ಮೋದಿ, ‘ನಾನು ಐಪಿಎಲ್‌ ಅಧ್ಯಕ್ಷನಾಗಿದ್ದ ಚೆನ್ನೈ ಮಾಲಿಕರಾದ ಶ್ರೀನಿವಾಸನ್‌ ತಮಗೆ ಬೇಕಾದ ಹಾಗೆ ಪಂದ್ಯಗಳಿಗೆ ಅಂಪೈರ್‌ಗಳನ್ನು ಬದಲಿಸುತ್ತಿದ್ದರು. ಇದನ್ನು ಬಹಿರಂಗಗೊಳಿಸಲು ಮುಂದಾದಾಗ ಶ್ರೀನಿವಾಸನ್‌ ನನ್ನ ವಿರುದ್ಧವೇ ತಿರುಗಿ ಬಿದ್ದಿದ್ದರುʼ ಎಂದರು. ಫಿಕ್ಸಿಂಗ್‌ನಲ್ಲಿ ಸಿಲುಕಿ 2016 ಮತ್ತು 2017ರ ಆವೃತ್ತಿಯ ಐಪಿಎಲ್‌ನಲ್ಲಿ ಚೆನ್ನೈ ತಂಡವನ್ನು 2 ವರ್ಷಗಳ ನಿಷೇಧ ಶಿಕ್ಷೆಗೆ ಒಳಪಡಿಸಲಾಗಿತ್ತು.

ಪಂದ್ಯದಲ್ಲಿ ಅಂಪೈರ್‌ಗಳನ್ನು ಮಾತ್ರವಲ್ಲದೆ ಹರಾಜಿನಲ್ಲಿಯೂ ಫಿಕ್ಸಿಂಗ್‌ ನಡೆಯುತ್ತಿತ್ತು ಎಂದು ಲಲಿತ್‌ ಮೋದಿ ಆರೋಪಿಸಿದ್ದಾರೆ. ‘ಹರಾಜಿನಲ್ಲಿಯೂ ಶ್ರೀನಿವಾಸನ್‌ ತಮ್ಮ ತಂಡಕ್ಕೆ ಬೇಕಾದ ಆಟಗಾರರನ್ನು ಬೇರೆ ಫ್ರಾಂಚೈಸಿಯವರು ಖರೀದಿ ಮಾಡದಂತೆ ಫಿಕ್ಸಿಂಗ್‌ ಮಾಡುತ್ತಿದ್ದರು. ಇಂಗ್ಲೆಂಡ್‌ನ ಫ್ಲಿಂಟಾಪ್‌ ಅವರನ್ನು ಖರೀದಿಸಲು ಶ್ರೀನಿವಾಸನ್‌ ನಿರ್ಧರಿಸಿದ್ದರು. ಹೀಗಾಗಿ ಫ್ಲಿಂಟಾಫ್‌ಗೆ ಹರಾಜಿನಲ್ಲಿ ಬೇರೆ ಯಾವುದೇ ಬಿಡ್‌ ಮಾಡದಂತೆ ನೋಡಿಕೊಳ್ಳಲಾಗಿತ್ತುʼ ಎಂದು ಲಲಿತ್‌ ಆರೋಪಿಸಿದ್ದಾರೆ.

ಇದನ್ನೂ ಓದಿ IPL 2025: ʻಆರ್‌ಸಿಬಿ ಪರ ನನ್ನ ಅಧ್ಯಾಯ ಮುಕ್ತಾಯʼ-ಫ್ಯಾನ್ಸ್‌ಗೆ ಫಾಫ್‌ ಡು ಪ್ಲೆಸಿಸ್‌ ಭಾವನಾತ್ಮಕ ಸಂದೇಶ!

ಇದೇ ವೇಳೆ 2010ರಲ್ಲಿ ತಾವು ಭಾರತ ತೊರೆದ ಬಗ್ಗೆಯೂ ಲಲಿತ್‌ ಮೋದಿ ಮಾತನಾಡಿದ್ದು, ದಾವುದ್‌ ಇಬ್ರಾಹಿಂ ಅವರ ಜೀವ ಬೆದರಿಕೆಗೆ ಹೆದರಿ ದೇಶ ಬಿಡುವಂತಾಯಿತು ಎಂದು ಹೇಳಿದರು. ಮ್ಯಾಚ್‌ ಫಿಕ್ಸಿಂಗ್‌ ನಡೆಸುವಂತೆ ದಾವುದ್‌ನಿಂದ ಕರೆ ಬಂದಿತ್ತು. ಆದರೆ ನಾನು ಇದಕ್ಕೆ ಒಪ್ಪಲಿಲ್ಲ. ಹೀಗಾಗಿ ದಾವುದ್‌ 24 ಗಂಟೆಯಲ್ಲಿ ದೇಶ ಬಿಡದಿದ್ದರೆ ಕೊಲ್ಲುವುದಾಗಿ ಬೆದರಿಸಿದ್ದರು. ನನ್ನ ಭದ್ರತೆ ಬಗ್ಗೆ ಪೊಲೀಸ್‌ ಇಲಾಖೆ ಕೂಡ ಆತಂಕ ವ್ಯಕ್ತಪಡಿಸಿತ್ತು. ಹೀಗಾಗಿ ನಾನು ಭಾರತ ತೊರೆದೆ. ಈಗಲೂ ಕೂಡ ನನಗೆ ಜೀವ ಭಯವಿದೆ ಎಂದರು.

ಇದೇ ವೇಳೆ ಕೊಚ್ಚಿ ಫ್ರಾಂಚೈಸಿ ಕುರಿತು ಮಾತನಾಡಿರುವ ಲಲಿತ್ ಮೋದಿ ಕಾಂಗ್ರೆಸ್ ಸಂಸದ ಶಶಿತರೂರ್ ಮತ್ತು ಅವರ ದಿವಂಗತ ಪತ್ನಿ ಸುನಂದಾ ಪುಷ್ಕರ್ ವಿಚಾರವಾಗಿಯೂ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಕೊಚ್ಚಿ ತಂಡದ ವಿಚಾರವಾಗಿ ಸುನಂದಾ ಶೂನ್ಯ ಬಂಡವಾಳದ ಹೊರತಾಗಿಯೂ ಶೇ.25% ರಷ್ಟು ಲಾಭಾಂಶ ಪಾಲು ಹೊಂದಿದ್ದರು. ಈ ಬಗ್ಗೆ ಪ್ರಶ್ನೆ ಮಾಡಿದರೆ ದೆಹಲಿಯ 10 ಜನಪಥ್ ಶಕ್ತಿಕೇಂದ್ರ (ಆ ದಿನಗಳಲ್ಲಿ ಸೋನಿಯಾ ಗಾಂಧಿ ಅವರ ನಿವಾಸ)ದಿಂದ ಕರೆಗಳು ಬರುತ್ತಿತ್ತು.

ಅಲ್ಲದೆ ಇಡಿ ದಾಳಿ, ಆದಾಯ ತೆರಿಗೆ ಕ್ರಮ ಮತ್ತು ಜೈಲು ಬೆದರಿಕೆಗಳು ಬರುತ್ತಿದ್ದವು. ಆಗಿನ ಬಿಸಿಸಿಐ ಮುಖ್ಯಸ್ಥ ಶಶಾಂಕ್ ಮನೋಹರ್ ಅವರು ಲಲಿತ್ ಮೋದಿಗೆ ಕರೆ ಮಾಡಿ ಒಪ್ಪಂದಕ್ಕೆ ಸಹಿ ಹಾಕುವಂತೆ ಕೇಳಿಕೊಂಡರು. ಒಂದು ವೇಳೆ ಸಹಿ ಹಾಕದಿದ್ದರೆ ನನ್ನ ಸ್ಥಾನದಿಂದ ನನ್ನನು ತೆಗೆದುಹಾಕುವುದಾಗಿ ಹೇಳಿದ್ದರು ಎಂದು ಲಲಿತ್ ಮೋದಿ ಹೇಳಿದ್ದಾರೆ.