Thursday, 28th November 2024

IPL 2025: ಹಿಂದೂ ವಿರೋಧಿ ಬಾಂಗ್ಲಾಕ್ಕೆ ಬಿಸಿ ಮುಟ್ಟಿಸಿದ ಬಿಸಿಸಿಐ

ನವದೆಹಲಿ: ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದ ಐಪಿಎಲ್​ 18ನೇ ಆವೃತ್ತಿಯ(IPL 2025) ಎರಡು ದಿನಗಳ ಮೆಗಾ ಹರಾಜು ಪ್ರಕ್ರಿಯೆಯಲ್ಲಿ 62 ವಿದೇಶಿಯರ ಸಹಿತ ಒಟ್ಟು 182 ಆಟಗಾರರು ಬಿಕರಿಯಾದರು. ಎಲ್ಲ 10 ತಂಡಗಳು ಒಟ್ಟಾರೆ 639.15 ಕೋಟಿ ರೂ. ವ್ಯಯಿಸಿದವು. 2025ರ ಮಾರ್ಚ್​ 14ರಿಂದ ಮೇ 25ರವರೆಗೆ ಟೂರ್ನಿ ನಡೆಯಲಿದೆ. ಹರಾಜಿನಲ್ಲಿ ಒಟ್ಟು 12 ಬಾಂಗ್ಲಾದೇಶ ಆಟಗಾರರು ಕಾಣಿಸಿಕೊಂಡರೂ ಯಾವೊಬ್ಬ ಆಟಗಾರನೂ ಖರೀದಿಯಾಗಲಿಲ್ಲ. ಈ ಬಗ್ಗೆ ಬಾಂಗ್ಲಾ ಆಟಗಾರರು ಅಳಲು ತೋಡಿಕೊಂಡಿದ್ದಾರೆ.

ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚುತ್ತಿರುವ ಕಾರಣ, ಅವರ ವಿರುದ್ಧದ ಕ್ರಿಕೆಟ್‌ ಸರಣಿಗೆ ಭಾರತೀಯರಿಂದ ವಿರೋಧ ವ್ಯಕ್ತವಾಗುತ್ತಿದೆ. ಇದೇ ಸೆಪ್ಟೆಂಬರ್‌ ತಿಂಗಳಲ್ಲಿ ಟೆಸ್ಟ್‌ ಮತ್ತು ಟಿ20 ಸರಣಿಯನ್ನಾಡಲು ಬಾಂಗ್ಲಾದೇಶ ತಂಡ ಭಾರತಕ್ಕೆ ಬಂದಾಗ ಬಿಸಿಸಿಐ ವಿರುದ್ಧ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೇ ಕಾರಣದಿಂದ ಈ ಬಾರಿ ಬಾಂಗ್ಲಾ ಆಟಗಾರರನ್ನು ಖರೀದಿ ಮಾಡಿಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ IND vs PAK: ಪಾಕ್‌ ತಂಡಕ್ಕೂ ಭಾರತದಲ್ಲಿ ಆಡಲು ಸಾಧ್ಯವಿಲ್ಲ; ಎಚ್ಚರಿಕೆ ನೀಡಿದ ಪಿಸಿಬಿ ಮುಖ್ಯಸ್ಥ

ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವ ಕಾರಣದಿಂದಲೇ ಪಾಕಿಸ್ತಾನದ ಯಾವೊಬ್ಬ ಆಟಗಾರನಿಗೂ ಐಪಿಎಲ್ ನಲ್ಲಿ ಆಡುವ ಅವಕಾಶ ನೀಡುತ್ತಿಲ್ಲ. ಆರಂಭಿಕ ಆವೃತ್ತಿಯಲ್ಲಿ ಪಾಕಿಸ್ತಾನ ಆಟಗಾರರು ಕೂಡ ಐಪಿಎಲ್‌ ಆಡಿದ್ದರು. ಮುಂಬೈ ದಾಳಿಯ ಬಳಿಕ ಪಾಕ್‌ ಆಟಗಾರರನ್ನು ಐಪಿಎಲ್‌ನಿಂದ ನಿಷೇಧಿಸಲಾಗಿತ್ತು. ಇದೀಗ ಹಿಂದೂಗಳ ಮೇಲೆ ದೌರ್ಜನ್ಯ ಎಸೆಗುತ್ತಿರುವ ಬಾಂಗ್ಲಾದೇಶಕ್ಕೂ ಪರೋಕ್ಷವಾಗಿ ಬಿಸಿಸಿಐ ಮತ್ತು ಐಪಿಎಲ್‌ ಆಡಳಿತ ಮಂಡಳಿ ಬಿಸಿ ಮುಟ್ಟಿಸಿದಂತಿದೆ. ಕಳೆದ ಆವೃತ್ತಿ ತನಕ ಬಾಂಗ್ಲಾ ಆಟಗಾರರು ಐಪಿಎಲ್‌ ತಂಡದ ಭಾಗವಾಗಿದ್ದರು.

ಐಪಿಎಲ್‌ ಹರಾಜಿನಲ್ಲಿ ಖರೀದಿಯಾಗ ಬಗ್ಗೆ ಬಾಂಗ್ಲಾದೇಶದ ಆಟಗಾರರು ಅಳಲು ತೋಡಿಕೊಂಡಿದ್ದು, ಹರಾಜಿನ ಸುತ್ತಿಗೆ ಬಂದರೂ ನಮ್ಮನ್ನು ಬೇಕೆಂತಲೇ ಖರೀದಿಸಿಲ್ಲ ಎಂದು ಹೇಳಲಾರಂಭಿಸಿದ್ದಾರೆ. ಈ ಬಾರಿ ಅಫಘಾನಿಸ್ತಾನದ ಆಟಗಾರರರಿಗೆ ಉತ್ತಮ ಬೇಡಿಕೆ ಕಂಡು ಬಂತು. ಅನ್‌ಕ್ಯಾಪ್ಡ್‌ ಆಟಗಾರರು ಕೂಡ ಉತ್ತಮ ಬೆಲೆಗೆ ಬಿಕರಿಯಾದರು.

ಬಾಂಗ್ಲಾದೇಶದಲ್ಲಿ ದಂಗೆ ಭುಗಿಲೆದ್ದಿರುವ ಸಂಧರ್ಭದಲ್ಲಿ ಹಿಂದೂ ಕ್ರಿಕೆಟಿಗ ಲಿಟನ್‌ ದಾಸ್ ಅವರ ಮನೆಗೂ ಬೆಂಕಿ ಹಚ್ಚಲಾಗಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೊ ಕೂಡ ವೈರಲ್‌ ಆಗಿತ್ತು. ಈಗಲೂ ಕೂಡ ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ.

ಬಾಂಗ್ಲಾದೇಶದಲ್ಲಿ ಚಿನ್ಮೋಯ್ ಕೃಷ್ಣ ದಾಸ್ ಪ್ರಭು ಬಂಧನದ ನಂತರ ಭಾರತದಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿನ್ಮೋಯ್ ಕೃಷ್ಣ ದಾಸ್ ಬಂಧನದ ಬಗ್ಗೆ ಭಾರತದ ವಿದೇಶಾಂಗ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ಹಿಂದೂಗಳು ಮತ್ತು ಎಲ್ಲಾ ಅಲ್ಪಸಂಖ್ಯಾತರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅವರು ಬಾಂಗ್ಲಾದೇಶ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.