Thursday, 28th November 2024

Air India Pilot Case: ಪೈಲೆಟ್‌ ಆತ್ಮಹತ್ಯೆ ಕೇಸ್‌; ಬಾಯ್‌ಫ್ರೆಂಡ್‌ ಬಗ್ಗೆ ಆಘಾತಕಾರಿ ಸಂಗತಿ ಬಿಚ್ಚಿಟ್ಟ ಪೋಷಕರು

Air India Pilot Case

ಲಖನೌ: ಏರ್ ಇಂಡಿಯಾದ 25 ವರ್ಷದ ಮಹಿಳಾ ಪೈಲಟ್ (Air India Pilot Case) ಸೃಷ್ಟಿ ತುಲಿ (Srishti Tuli) ಸೋಮವಾರ ಅಂಧೇರಿಯ ಮರೋಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡು ಮೃತ ಪಟ್ಟಿದ್ದಳು. ತನ್ನ ಫ್ಲಾಟ್‌ನಲ್ಲಿ ಡೇಟಾ ಕೇಬಲ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದು ತಿಳಿದು ಬಂದಿತ್ತು. ಆಕೆಯ ಸಾವಿನ ನಂತರ ಆಕೆಯ ಕುಟುಂಬಸ್ಥರು ಸೃಷ್ಟಿ ಬಾಯ್‌ಫ್ರೆಂಡ್‌ ಮೇಲೆ ಆತನೇ ಮಗಳ ಸಾವಿಗೆ ಕಾರಣ ಎಂದು ದೂರಿದ್ದರು. ಕೊಲೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪೊಲೀಸರು ಆಕೆಯ ಗೆಳೆಯ ಆದಿತ್ಯ ಪಂಡಿತ್ (27)ನನ್ನು ಬಂಧಿಸಲಾಗಿದೆ.

ಮುಂಬೈನ ಮರೋಲ್ ಪ್ರದೇಶದಲ್ಲಿನ ಬಾಡಿಗೆ ಮನೆಯಲ್ಲಿ ಸೃಷ್ಟಿ ತುಲಿ ಸೋಮವಾರ ಶವವಾಗಿ ಪತ್ತೆಯಾಗಿದ್ದಾರೆ. ತನ್ನ ಗೆಳೆಯ ಆದಿತ್ಯ ಪಂಡಿತ್ (27) ಜೊತೆ ಫೋನ್‌ನಲ್ಲಿ ಜಗಳವಾಡಿದ ನಂತರ ಆಕೆ ನೇಣು ಹಾಕಿಕೊಳ್ಳಲು ಡೇಟಾ ಕೇಬಲ್ ಬಳಸಿದ್ದಳು. ಬಾಗಿಲಿಗೆ ಬೀಗ ಹಾಕಿರುವುದನ್ನು ಕಂಡು ಆಕೆಯ ಫ್ಲಾಟ್‌ಗೆ ಧಾವಿಸಿದ ಎಂದು ಆದಿತ್ಯ ಪೊಲೀಸರಿಗೆ ತಿಳಿಸಿದ್ದಾನೆ. ನಂತರ ಬಾಗಿಲು ತೆರೆದು ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಆಕೆ ಮೃತಪಟ್ಟಿದ್ದಳು.

ಮೂಲತಃ ಉತ್ತರ ಪ್ರದೇಶದ ಗೋರಖ್‌ಪುರದವಳಾದ ಸೃಷ್ಟಿ ಮುಂಬೈನಲ್ಲಿ ವಾಸವಿದ್ದಳು. ಘಟನೆಯ ಬಗ್ಗೆ ಆಕೆಯ ಚಿಕ್ಕಪ್ಪ ವಿವೇಕ್ ತುಲಿ ಪ್ರತಿಕ್ರಿಯೆ ನೀಡಿದ್ದು, ಅದಿತ್ಯ ಪಂಡಿತ್‌ ವಿರುದ್ಧ ಕಿಡಿ ಕಾರಿದ್ದಾರೆ. ಸೃಷ್ಟಿ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯ ಹುಡುಗಿ ಅಲ್ಲ. ಇದೊಂದು ಯೋಜಿತ ಕೊಲೆ ಎಂದು ಆರೋಪಿಸಿದ್ದಾರೆ. ಆತ ಅವಳೊಂದಿಗೆ ಪೈಲೆಟ್‌ ತರಬೇತಿ ಪ್ರಾರಂಭಿಸಿದ್ದು, ಆಕೆಯ ಬಗ್ಗೆ ಅಸೂಯೆ ಹೊಂದಿದ್ದ ಹಾಗೂ ಕಿರುಕುಳ ನೀಡುತ್ತಿದ್ದ ಎಂದು ಹೇಳಿದ್ದಾರೆ.

ಆಕೆಯ ಬಳಿ ಹಣಕ್ಕಾಗಿ ಪೀಡಿಸುತ್ತಿದ್ದ ಎಂಬ ವಿಷಯವನ್ನು ವಿವೇಕ್‌ ತುಲಿ ಬಹಿರಂಗ ಪಡಿಸಿದ್ದಾರೆ. ನಾವು ಆಕೆಯ ಬ್ಯಾಂಕ್‌ ಖಾತೆ ಪರಿಶೀಲಿಸಿದ್ದೇವೆ. ದೀಪಾವಳಿ ಸಮಯದಲ್ಲಿ ಆತನ ಖಾತೆಗೆ 65 ಸಾವಿರ ರೂ ವರ್ಗಾವಣೆಯಾಗಿದೆ. ಆತ ಸೃಷ್ಟಿಯನ್ನು ಬ್ಲಾಕ್‌ ಮೇಲ್‌ ಮಾಡಿದ್ದ ಎಂಬುದು ನನಗೆ ತಿಳಿದು ಬಂದಿದೆ. ಅವಳು ಸಾಯುವ 15 ನಿಮಿಷಗಳ ಮೊದಲು ತನ್ನ ತಾಯಿ ಮತ್ತು ಚಿಕ್ಕಮ್ಮನೊಂದಿಗೆ ಚೆನ್ನಾಗಿಯೇ ಮಾತನಾಡಿದ್ದಳು. ಆದಿತ್ಯ ಅವಳಿಗೆ ಏನೂ ಮಾಡಿದ್ದನೋ ಗೊತ್ತಿಲ್ಲ. ಆಕೆ ತಾನು ಎದುರಿಸುತ್ತಿರುವ ಯಾವುದೇ ಕಿರುಕುಳದ ಬಗ್ಗೆ ಸೃಷ್ಟಿ ತನ್ನ ಕುಟುಂಬಕ್ಕೆ ಹೇಳಿಲ್ಲ. ಆದಿತ್ಯ ಅವಳಿಗೆ ಸಾರ್ವಜನಿಕವಾಗಿ ಹಲವಾರು ಬಾರಿ ಅವಮಾನ ಮಾಡಿದ್ದ ಎಂದು ಅವಳ ಸ್ನೇಹಿತರು ಹೇಳಿದ್ದಾರೆ. ರಸ್ತೆ ಮಧ್ಯೆ ಕಾರ್‌ ನಿಲ್ಲಿಸಿ ಅವಳನ್ನು ಕೆಳಗಿಳಿಸಿದ ಸಂದರ್ಭಗಳೂ ಇವೆ ಅಲ್ಲದೆ, ಆಕೆಯ ಆಹಾರ ಪದ್ಧತಿ ಬದಲಿಸುವಂತೆ ಹಾಗೂ ಮಾಂಸಾಹಾರ ಸೇವನೆ ನಿಲ್ಲಿಸುವಂತೆ ಒತ್ತಾಯಿಸುತ್ತಿದ್ದ ಎಂದು ಅವರು ಹೇಳಿದ್ದಾರೆ.

ಸೃಷ್ಟಿಗೆ ಕೆಲಸ ಇದ್ದಾಗಲೂ ರಜೆ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದ. ಅಲ್ಲದೇ ತನ್ನ ಕುಟುಂಬದ ಕಾರ್ಯಕ್ರಮಗಳಿಗೆ ತನ್ನ ಜತೆಗೆ ಬರುವಂತೆ ಬಲವಂತ ಮಾಡುತ್ತಿದ್ದ. ಹೀಗೆ ಒಮ್ಮೆ ಕಿತ್ತಾಟ ನಡೆದಾಗ, ಸುಮಾರು 10- 12 ದಿನ ಆಕೆಯ ಫೋನ್ ನಂಬರ್ ಬ್ಲಾಕ್ ಮಾಡಿದ್ದ. ಇದರಿಂದ ಸೃಷ್ಟಿ ತೀವ್ರ ನೊಂದಿದ್ದಳು ಎಂದಿದ್ದಾರೆ. ಆತನ ವರ್ತನೆಯ ಬಗ್ಗೆ ಆಕೆ ನನ್ನ‌ ಮಗಳ ಬಳಿ ಸಾಕಷ್ಟು ಸಲ ಹೇಳಿಕೊಂಡಿದ್ದಳು ಎಂದು ಹೇಳಿದ್ದಾರೆ.

ನಮ್ಮ ಕುಟುಂಬವು ನ್ಯಾಯಕ್ಕಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಸಂಪರ್ಕಿಸುತ್ತದೆ ಎಂದು ಅವರು ಹೇಳಿದರು. ಸೃಷ್ಟಿ ಸಾವಿನಲ್ಲಿ ಕೇವಲ ಆದಿತ್ಯ ಒಬ್ಬನೇ ಅಲ್ಲ ಮತ್ತೊಬ್ಬ ಮಹಿಳೆಯ ಕೈವಾಡವಿದೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ : Viral Video: ಏಕಾಏಕಿ ಸಾಧುವಿನ ಜಡೆ ಹಿಡಿದು ಮೇಲಕ್ಕೆತ್ತಿದ ಖಲಿ! ವಿಡಿಯೊ ಫುಲ್‌ ವೈರಲ್‌