ಕ್ಯಾನ್‌ಬೆರಾ: ಭಾರತ ತಂಡವು(Team India) ಕ್ಯಾನ್‌ಬೆರಾದಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್(Anthony Albanese) ಅವರನ್ನು ಗುರುವಾರ ಭೇಟಿ ಮಾಡಿತು. ರೋಹಿತ್ ಶರ್ಮಾ ನೇತೃತ್ವದ ತಂಡ ಮತ್ತು ಆಸ್ಟ್ರೇಲಿಯ ಮಂಡಳಿ ಅಧ್ಯಕ್ಷರ ತಂಡದ(Australia PM’s XI team) ಆಟಗಾರರು ಸಾಂಪ್ರದಾಯಿಕವಾಗಿ ಪ್ರಧಾನಿಯನ್ನು ಸಂಸತ್ತಿನಲ್ಲಿ ಭೇಟಿ ಮಾಡಿ ಫೋಟೋ ಕ್ಲಿಕ್ಕಿಸಿಕೊಂಡರು. ಕ್ಯಾನ್‌ಬೆರಾದಲ್ಲಿ ನ. 30-ಡಿ. ಒಂದರಂದು ನಡೆಯುವ ಆಸೀಸ್ ಪ್ರಧಾನ ಮಂತ್ರಿ ಇಲೆವೆನ್ ವಿರುದ್ಧದ ಹೊನಲು ಬೆಳಕಿನ ಪಿಂಕ್ ಬಾಲ್ ಟೆಸ್ಟ್ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ಆಡಲಿದೆ.
ನಾಯಕ ರೋಹಿತ್ ಶರ್ಮಾ ಅವರು ಭಾರತೀಯ ತಂಡದ ಆಟಗಾರರನ್ನು ಅಲ್ಬನೀಸ್ ಅವರಿಗೆ ಪರಿಚಯಿಸಿದರು. ಈ ವೇಳೆ ಅಲ್ಬನೀಸ್ ಅವರು ಪರ್ತ್ ಟೆಸ್ಟ್ ಪಂದ್ಯದಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ್ದ ಜಸ್‌ಪ್ರೀತ್ ಬುಮ್ರಾ ಮತ್ತು ಶತಕ ಬಾರಿಸಿದ್ದ ವಿರಾಟ್ ಕೊಹ್ಲಿಯನ್ನು ಶ್ಲಾಘಿಸಿದರು. ಬುಮ್ರಾ ಬೌಲಿಂಗ್ ಶೈಲಿಯು ಎಲ್ಲರಿಗಿಂತ ವಿಭಿನ್ನವಾಗಿದೆ ಎಂದು ಹೇಳಿದರು. ಮತ್ತು ಅವರ ಪ್ರಯತ್ನಕ್ಕಾಗಿ ಅವರನ್ನು ಶ್ಲಾಘಿಸಿದರು. ವಿರಾಟ್ ಕೊಹ್ಲಿ ಜತೆ ಮಾತನಾಡಿದ ಅವರು, ಪರ್ತ್‌ನಲ್ಲಿ ನಿಮ್ಮದು ಉತ್ತಮ ಸಮಯ ಎಂದರು. ಭವಿಷ್ಯದಲ್ಲಿ ಇನ್ನೂ ಉತ್ತಮ ಮಟ್ಟದ ಸಾಧನೆ ಹೊರಹೊಮ್ಮಲಿ ಎಂದು ಹಾರೈಸಿದರು.
ಇದೇ ವೇಳೆ ಅಲ್ಬನೀಸ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ತಮ್ಮ ಸಂದೇಶವನ್ನು ತಿಳಿಸಿದರು. “ಅದ್ಭುತ ಭಾರತದ ವಿರುದ್ಧ ಈ ವಾರ ಮನುಕಾ ಓವಲ್‌ನಲ್ಲಿ PM’s XI ಮುಂದೆ ದೊಡ್ಡ ಸವಾಲು ಇದೆ. ಆದರೆ ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಹೇಳಿದಂತೆ, ನಾನು ಆಸೀಸ್‌ಗೆ ಕೆಲಸ ಮಾಡಲು ಬೆಂಬಲ ನೀಡುತ್ತೇನೆ” ಎಂದು ಹೇಳಿದರು. ಕಳೆದ ವರ್ಷ ಭಾರತದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯವನ್ನು ಆಂಥೋನಿ ಅಲ್ಬನೀಸ್ ಮತ್ತು ನರೇಂದ್ರ ಮೋದಿ ಜತೆಯಾಗಿ ವೀಕ್ಷಿಸಿದ್ದರು.
ಇದನ್ನೂ ಓದಿ Pragya Jaiswal: 33 ವರ್ಷದ ಖ್ಯಾತ ನಟಿಗೆ 25ರ ಹರೆಯದ ಶುಭಮನ್ ಗಿಲ್ ಜತೆ ಡೇಟಿಂಗ್ ಬಯಕೆ!
ದ್ವಿತೀಯ ಪಂದ್ಯಕ್ಕೂ ಮುನ್ನ ಆಘಾತವೊಂದು ಎದುರಾಗಿದೆ. ಆಲ್‌ರೌಂಡರ್ ಮಿಚೆಲ್ ಮಾರ್ಷ್(Mitchell Marsh) ಗಾಯದಿಂದ ಫಿಟ್‌ನೆಸ್ ಹೊಂದಿಲ್ಲದ ಕಾರಣ ಅವರ ಸ್ಥಾನಕ್ಕೆ ಆಲ್‌ರೌಂಡರ್ ಬ್ಯೂ ವೆಬ್‌ಸ್ಟರ್ ಅವರನ್ನು ಬ್ಯಾಕಪ್ ಆಟಗಾರನಾಗಿ ಆಯ್ಕೆ ಮಾಡಲಾಗಿದೆ.
ದ್ವಿತೀಯ ಪಂದ್ಯ ಡಿ.6 ರಿಂದ ಅಡಿಲೇಡ್‌ನಲ್ಲಿ ಆರಂಭವಾಗಲಿದೆ. ಈ ಪಂದ್ಯ ಪಿಂಕ್ ಬಾಲ್ ಟೆಸ್ಟ್ ಪಂದ್ಯವಾಗಿದೆ. ಪಂದ್ಯ ಆರಂಭಕ್ಕೆ ಇನ್ನೂ ಒಂದು ವಾರಗಳ ಸಮಯ ಬಾಕಿ ಇದೆ. ಒಂದು ವೇಳೆ ಮಿಚೆಲ್ ಮಾರ್ಷ್ ಈ ಹೊತ್ತಿಗೆ ಸರಿಯಾಗಿ ಚೇತರಿಸದೇ ಹೋದರೆ ಬ್ಯೂ ವೆಬ್‌ಸ್ಟರ್ ಚೊಚ್ಚಲ ಟೆಸ್ಟ್ ಆಡುವ ಸಾಧ್ಯತೆ ಇದೆ.
ಆಸ್ಟ್ರೇಲಿಯ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ನಥನ್ ಮೆಕ್‌ಸ್ವೀನಿ, ಉಸ್ಮಾನ್ ಖ್ವಾಜಾ, ಮಾರ್ನಸ್ ಲಬುಶೇನ್, ಸ್ಟೀವನ್ ಸ್ಮಿತ್, ಟ್ರ್ಯಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ, ಮಿಚೆಲ್ ಸ್ಟಾರ್ಕ್, ನಥನ್ ಲಿಯಾನ್, ಜೋಶ್ ಹೇಝಲ್‌ವುಡ್, ಜೋಶ್ ಇಂಗ್ಲಿಸ್, ಸ್ಕಾಟ್ ಬೋಲ್ಯಾಂಡ್, ಬ್ಯೂ ವೆಬ್‌ಸ್ಟರ್.