Thursday, 28th November 2024

Viral Video: ಪ್ರೀತಿಯ ಶ್ವಾನಕ್ಕಾಗಿ 14 ಲಕ್ಷ ರೂ. ಮೌಲ್ಯದ ‘ಡಾಗ್ ಸೂಟ್ ಕೇಸ್’ ಖರೀದಿ- ಉದ್ಯಮಿ ವಿರುದ್ಧ ಸಿಡಿದೆದ್ದ ನೆಟ್ಟಿಗರು

ಈ ಜಗತ್ತು ಹೇಗಂದ್ರೆ ನಿಮಗೊಂದು ವಸ್ತು ಇಷ್ಟವಾಗಿ ನೀವದನ್ನು ಖರೀದಿಸಿ ಅದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ರೆ, ಅದ್ರ ಬಗ್ಗೆ ಮತ್ತು ನಿಮ್ಮ ಟೇಸ್ಟ್ ಬಗ್ಗೆ ಜನ ಕಮೆಂಟ್ ಮಾಡ್ತಿರ್ತಾರೆ. ಕೆಲವರು ನಿಮ್ಮ ದುಬಾರಿ ಜೀವನ ಶೈಲಿಯನ್ನು ಟೀಕೆ ಮಾಡಿದ್ರೆ, ಇನ್ನು ಕೆಲವರು ನಿಮ್ಮ ಹಣವನ್ನು ನೀವು ಹೇಗೆ ಖರ್ಚು ಮಾಡ್ಬೇಕು ಅಂತ ನಿಮ್ಗೆ ಬಿಟ್ಟಿ ಸಲಹೆ ಕೊಡ್ತಿರ್ತಾರೆ! ಅಂತಹದ್ದೇ ಒಂದು ಸುದ್ದಿ ಸದ್ಯಕ್ಕೆ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗ್ತಿದೆ. ಭಾರತೀಯ ಮೂಲದ ಅನಿವಾಸಿ ಉದ್ಯಮಿಯೊಬ್ಬರು ತಮ್ಮ ಪ್ರೀತಿಯ ನಾಯಿಗಾಗಿ 14 ಲಕ್ಷ ರೂಪಾಯಿ ಮೌಲ್ಯದ ಡಾಗ್ ಸೂಟ್ ಕೇಸ್ ಖರೀದಿಸಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಬಾಯಿಗೆ ಆಹಾರವಾಗಿದ್ದಾರೆ!

ಡಾಕ್ಟರ್ ಮಲ್ಟಿಮೀಡಿಯಾ (Doctor Multimedia) ಸಂಸ್ಥೆಯ ಸಿಇಒ (CEO) ಆಗಿರುವ ಅಜಯ್ ಥಾಕೋರ್ (Ajay Thakore), ಅಕಾ ಏಸ್ ರೋಜರ್ಸ್ (aka Ace Rogers) ಎಂಬ ಅನಿವಾಸಿ ಭಾರತೀಯ (NRI) ಉದ್ಯಮಿಯೊಬ್ಬರು ತಮ್ಮ ನಾಯಿಗೆ ಐಷಾರಾಮಿ ವಸ್ತುವೊಂದನ್ನು ಖರೀದಿಸಿ ಅದರ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಟೀಕೆಯನ್ನೆದುರಿಸುತ್ತಿದ್ದಾರೆ.

ಆ ಉದ್ಯಮಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿರುವಂತೆ, ಲೂವಿಸ್ ವಿಟ್ಟನ್ (LV) ಕಂಪೆನಿಯ ‘ಬೋನ್ ಟ್ರಂಕ್’ ಹೆಸರಿನ ಡಾಗ್ ಸೂಟ್ ಕೇಸನ್ನು ಖರೀದಿ ಮಾಡಿದ್ದಾರೆ. ಇದರ ಬೆಲೆ 14 ಲಕ್ಷ ರೂಪಾಯಿಗಳಾಗಿದೆ. ಇದಕ್ಕೆ ಕಮೆಂಟ್ ಮಾಡಿರುವ ಹಲವರು, ಈ ಹಣವನ್ನು ಬೀದಿ ನಾಯಿಗಳ ಆಶ್ರಯಕ್ಕಾಗಿ ದೇಣಿಗೆ ನೀಡಬಹುದಿತ್ತು ಎಂದು ಕಮೆಂಟ್ ಮಾಡಿದ್ದಾರೆ.

“ನಾಳೆ ನನ್ನದಲ್ಲ ಎಂಬ ರೀತಿಯಲ್ಲಿ ಆಸ್ಪೆನ್ ಹಣವನ್ನು ಖರ್ಚು ಮಾಡುತ್ತಾನೆ. ಈಗ 20 ಸಾವಿರ ಡಾಲರ್ ಮೌಲ್ಯದ ಲೂವಿಸ್ ವಿಟ್ಟನ್ ಬೋನ್ ಟ್ರಂಕ್ ಆತನಿಗಾಗಿ ಬಂದಿದೆ’ ಎಂದು ಥಾಕೋರ್ ವಿಡಿಯೋ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಥಾಕೋರ್ ಲೂವಿಸ್ ಸ್ಟೋರ್ ಗೆ ಪ್ರವೇಶಿಸಿ ಅಲ್ಲಿನ ಸಿಬ್ಬಂದಿಗಳೊಂದಿಗೆ ತಮಾಷೆಯಾಗಿ, ‘ನನಗನ್ನಿಸುತ್ತದೆ ನನ್ನ ನಾಯಿ ಇಲ್ಲಿಂದ ಏನೋ ಒಂದನ್ನು ಎತ್ತಿಕೊಂಡು ಹೋಗಲಿದೆ..’ ಎಂದು ಹೇಳುತ್ತಿರುವುದು ಆ ವಿಡಿಯೋದಲ್ಲಿದೆ.

ಬಳಿಕ ವ್ಯಕ್ತಿಯೊಬ್ಬರು, ಈ ಉದ್ಯಮಿ 14 ಲಕ್ಷದ ಹತ್ತು ಸಾವಿರ ರೂಪಾಯಿ ಮೌಲ್ಯದ ಎಲ್.ವಿ. ಬೋನ್ ಟ್ರಂಕ್ ಖರೀದಿಸಿರುವುದನ್ನು ಬಹಿರಂಗಪಡಿಸಿದ್ದಾರೆ. ಹಾಗಾದ್ರೆ ಏನಿದು ಬೋನ್ ಟ್ರಂಕ್? ಎಲ್.ವಿ. ಸಂಸ್ಥೆಯ ಅಧಿಕಾರಿಗಳು ವಿವರಿಸುವಂತೆ ಇದು ಸೂಟ್ ಕೇಸ್ ರೂಪದಲ್ಲಿದ್ದು ಮೂಳೆಯ ರಚನೆಯಲ್ಲಿದೆ. ಇದರ ಒಳಗೆ ವಾರ್ನಿಶ್ ಮಾಡಲಾದ ಮರದ ಟ್ರೇ ಇದ್ದು, ಎರಡು ಪಾತ್ರಗಳಿವೆ.

ಥಾಕೋರ್ ತನ್ನ ಇನ್ ಸ್ಟಾ ಖಾತೆಯಲ್ಲಿ ಪೋಸ್ಟ್ ಮಾಡಿರುವ ಈ ವಿಡಿಯೋ ಈಗಾಗಲೇ 1.7 ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ. ಮತ್ತು ಸಾವಿರಾರು ಲೈಕ್ಸ್ ಹಾಗೂ ಕಮೆಂಟ್ ಗಳು ಈ ವಿಡಿಯೋಗೆ ಬಂದಿದೆ.

ಇದನ್ನೂ ಓದಿ: PM Narendra Modi: ಪ್ರಧಾನಿ ಮೋದಿ ಹತ್ಯೆಗೆ ಭಾರೀ ಸಂಚು? ಬೆದರಿಕೆ ಕರೆ ಮಾಡಿದ್ದ ಮಹಿಳೆ ಹೇಳಿದ್ದೇನು?

‘ನೀವು ಈ ಜಗತ್ತಿನ ಬಗ್ಗೆ ಏನಂದುಕೊಂಡಿದ್ದೀರಿ. ನೀವಿಷ್ಟು ಅಭದ್ರತೆಯಿಂದ ಇದ್ದೀರಿ ಎಂಬುದು ತುಂಬಾ ಬೇಸರದ ವಿಷಯವಾಗಿದೆ’ ಎಂದು ಒಬ್ಬರು ಕಮೆಂಟ್ ಮಾಡಿದ್ದರೆ, ಅದಕ್ಕೆ ಪ್ರತಿಕ್ರಿಯಿಸಿರುವ ಥಾಕೋರ್, ‘ನನ್ನ ಮಗು ದಶ ಕೋಟಿ ಮೌಲ್ಯವನ್ನು ಹೊಂದಿದೆ ಮತ್ತು ವರ್ಷವೊಂದಕ್ಕೆ 12 ಮಿಲಿಯನ್ ವೆಚ್ಚದಲ್ಲಿ ಹಾಗೂ 100 ಮಿಲಿಯನ್ ನಂಬಿಕೆಯಲ್ಲಿ ಬದುಕುತ್ತಿದ್ದಾನೆ, ನಿಮ್ಮ ಮಗುವಿನ ಮೌಲ್ಯವೆಷ್ಟು..?’ ಎಂದು ತಿರುಗೇಟು ನೀಡಿದ್ದಾರೆ.

‘ನಾನು ನೂರಾರು ಜನರನ್ನು ಕೆಲಸಕ್ಕಿಟ್ಟುಕೊಂಡಿದ್ದೇನೆ ಮತ್ತು ಕೋಟಿಗಳ ಮೊತ್ತದಲ್ಲಿ ಪ್ರಾಣಿಗಳ ವಿಚಾರದಲ್ಲಿ ದೇಣಿಗೆ ನಿಡುತ್ತಿದ್ದೆನೆ. ಆದ್ರೆ ನೀವು ಇನ್ ಸ್ಟಾ ದಲ್ಲಿ ಸಮಯ ಕಳೆಯೋದು ಬಿಟ್ಟು ಬೇರೇನು ಮಾಡ್ತಿದ್ದಿರಿ’ ಎಂದು ಮಾರುತ್ತರ ನೀಡಿದ್ದಾರೆ ಥಾಕೋರ್. ಆದರೆ ಈ ಉದ್ಯಮಿಯ ಈ ವಿಡಿಯೋ ಪೋಸ್ಟ್ ಗೆ ನೆಟ್ಟಿಗರು ಹಾಕಿರುವ ಕಮೆಂಟ್ ಗಳನ್ನೊಮ್ಮೆ ನೋಡೋದಾದ್ರೆ.. ‘ಪ್ರಪಂಚದಲ್ಲಿ ಜನರು ಹಸಿವಿನಿಂದ ಸಾಯ್ತಿದ್ದಾರೆ.. ಎಷ್ಟು ಬೇಸರದ ವಿಷಯ’, 20 ಸಾವಿರ ಡಾಲರ್ ನಲ್ಲಿ ನಾಯಿಗಳಿಗೆ ರಕ್ಷಣೆ ನೀಡುವ ಬಗ್ಗೆ ಯೋಚಿಸಿದ್ದರೆ ಎಷ್ಟು ಚೆನ್ನಾಗಿತ್ತು..?’ ಎಂಬೆಲ್ಲಾ ರೀತಿಯ ಕಮೆಂಟ್ ಗಳು ಬಂದಿವೆ.

ಇನ್ನೊಂದು ಇಂಟರೆಸ್ಟಿಂಗ್ ವಿಚಾರವೇನಂದ್ರೆ, ಈ ವರ್ಷದ ಪ್ರಾರಂಭದಲ್ಲಿ ಅಜಯ್ ಥಾಕೋರ್ ತನ್ನ ಹಾಯಿದೋಣಿಯನ್ನು ಪಾರ್ಕ್ ಮಾಡಲು ನಿರಾಕರಿಸಿದಕ್ಕೆ ಕಾರ್ಮಿಕರೊಬ್ಬರನ್ನು ಕೊಲ್ಲುವ ಬೆದರಿಕೆಯೊಡ್ಡುವ ಮೂಲಕ ಸುದ್ದಿಯಾಗಿದ್ದರು. ಈ ಸಂದರ್ಭ ನಡೆದಿದ್ದ ವಾಗ್ವಾದದಲ್ಲಿ ಕ್ಯಾಲಿಫೋರ್ನಿಯಾ ಮೂಲದ ಈ ಉದ್ಯಮಿ ತನ್ನ ಖಾಸಗಿ ಅಂಗವನ್ನು ಪ್ರದರ್ಶಿಸಿ ಉದ್ಧಟತನ ಮೆರೆದಿದ್ದರು. “ನಾನು ನಿನ್ನನ್ನು ಕೊಲ್ಲುತ್ತೇನೆ, ನಿಂಗೊತ್ತಾ ನಾನು ನಿನ್ನನ್ನು ಕೊಲ್ಲುತ್ತೇನೆ, ನಾನು ಕೊಲ್ಲುತ್ತೇನೆ..’ ಎಂದು ಆ ಕಾರ್ಮಿಕನ ಮೇಲೆ ರೇಗಾಡುವ ವಿಡಿಯೋ ವೈರಲ್ ಆಗಿತ್ತು.