ಸಂದರ್ಶನ: ಶೀಲಾ ಸಿ. ಶೆಟ್ಟಿ
ನಟಿ, ಕಲಾವಿದೆ ಹಾಗೂ ಬಿಗ್ ಬಾಸ್ ಸ್ಪರ್ಧಿ, ಯಮುನಾ ಶ್ರೀನಿಧಿ (Yamuna Srinidhi) ಯಾರಿಗೆ ಗೊತ್ತಿಲ್ಲ? ಈಗಾಗಲೇ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಯಮುನಾ ಅವರು, ಸಾಕಷ್ಟು ಸೀರಿಯಲ್ಗಳಲ್ಲೂ ಅಭಿನಯಿಸಿದ್ದಾರೆ. ಇವರು ಪ್ರತಿಭಾನ್ವಿತ ಭರತನಾಟ್ಯ ಕಲಾವಿದೆ ಕೂಡ. ಅಶ್ವಿನಿ ನಕ್ಷತ್ರ ಧಾರಾವಾಹಿಯ ಮೂಲಕ ಹೆಸರು ಮಾಡಿದ ಯಮುನಾ, ಸದ್ಯ ನಿರ್ದೆಶಕ ಪ್ರೇಮ್ ಅವರ ʼಕೇಡಿʼ ಸಿನಿಮಾದಲ್ಲಿ ಬ್ಯುಜಿಯಾಗಿದ್ದಾರೆ. ಈ ಎಲ್ಲದರ ನಡುವೆ ತಮ್ಮ ಬಿಡುವಿನ ವೇಳೆಯನ್ನು ಒಂದಿಷ್ಟೂ ವ್ಯರ್ಥ ಮಾಡದೇ ಒಂದಲ್ಲ ಒಂದು ಕೆಲಸದಲ್ಲಿ ನಿರತರಾಗಿರುತ್ತಾರೆ.
ಈ ಬಾರಿಯ ಸ್ಟಾರ್ ವಿಂಟರ್ ಕೇರ್ (Star Winter Care Tips) ಕಾಲಂಗಾಗಿ ವಿಶ್ವವಾಣಿ ನ್ಯೂಸ್ನೊಂದಿಗೆ ಮಾತನಾಡಿದ ಅವರು, ತಮ್ಮ ವಿಂಟರ್ ಪ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್ಮೆಂಟ್ ಬಗ್ಗೆ ಮಾತ್ರವಲ್ಲದೇ, ಓದುಗರಿಗೂ ಒಂದಿಷ್ಟು ಸಿಂಪಲ್ ಹಾಗೂ ವಿಂಟರ್ ಕೇರ್ ಟಿಪ್ಸ್ ನೀಡಿದ್ದಾರೆ. ಈ ಎಲ್ಲದರ ಕುರಿತಂತೆ ಇಲ್ಲಿದೆ ಡಿಟೇಲ್ಸ್.
ಬಹಳಷ್ಟು ವರ್ಷಗಳ ಕಾಲ ಅಮೆರಿಕದಲ್ಲಿ ನೆಲೆಸಿದ್ದ ನಿಮ್ಮ ವಿಂಟರ್ ಫ್ಯಾಷನ್ ಏನು?
ನನಗೆ ಮೊದಲಿನಿಂದಲೂ ಚಳಿಯೆಂದರೇ ಸಾಕು, ಫ್ಯಾಷನ್ ಎನ್ನುವುದಕ್ಕಿಂತ ಹೆಚ್ಚಾಗಿ ಬೆಚ್ಚಗಿರುವ ಔಟ್ಫಿಟ್ಗಳಲ್ಲಿ ಇರಲು ಬಯಸುತ್ತೇನೆ. ಎಲ್ಲದಕ್ಕಿಂತ ಹೆಚ್ಚಾಗಿ ದೇಹ ಕವರ್ ಆಗುವಂತಹ ಕಂಫರ್ಟಬಲ್ ಉಡುಗೆಗಳಲ್ಲಿರುತ್ತೇನೆ.
ನಿಮ್ಮ ವಿಂಟರ್ ಟ್ರಾವೆಲ್ ಫ್ಯಾಷನ್ನಲ್ಲಿ ಏನೆನಿರುತ್ತದೆ?
ಸದಾ ನನ್ನ ಜತೆ ಒಂದು ತೆಳುವಾದ ಸ್ವೆಟರ್, ಶಾಲು ಹಾಗೂ ಸ್ಕಾರ್ಫ್!
ಚಳಿಗಾಲದಲ್ಲಿ ನೀವು ಪಾಲಿಸುವ ಬ್ಯೂಟಿ ಕೇರ್ ಏನು?
ನಿಮಗೆ ಗೊತ್ತೇ! ಇದುವರೆಗೂ ನಾನು ಒಮ್ಮೆಯೂ ಬ್ಯೂಟಿ ಪಾರ್ಲರ್ಗೆ ಹೋಗಿಲ್ಲ! ಕಿಚನ್ನಲ್ಲಿ ಸಿಗುವ ವಸ್ತುಗಳಿಂದಲೇ ಆರೈಕೆ ಮಾಡಿಕೊಳ್ಳುತ್ತೇನೆ. ಇನ್ನು, ವಾರಕ್ಕೊಮ್ಮೆ ಕೊಬ್ಬರಿ ಎಣ್ಣೆ ಹಚ್ಚಿಕೊಂಡು, ಎಣ್ಣೆ ಸ್ನಾನ ಮಾಡುತ್ತೇನೆ. ತರಕಾರಿ-ಹಣ್ಣುಗಳನ್ನು ಕತ್ತರಿಸಿದ ನಂತರ ದೊರೆಯುವ ಅವುಗಳ ರಸವನ್ನು, ಲೇಪಿಸಿಕೊಂಡು ಸ್ಕ್ರಬ್ ಹಾಗೂ ಫೇಶಿಯಲ್ ರೀತಿಯಲ್ಲಿ ಬಳಸುತ್ತೇನೆ. ಇದೇ ನನ್ನ ಬ್ಯೂಟಿಯ ರಹಸ್ಯ.
ನಿಮ್ಮ ಫಿಟ್ನೆಸ್ ಸೀಕ್ರೆಟ್?
ಮನೆಯಲ್ಲಿ ಕೆಲಸದವರಿಲ್ಲ! ಎಲ್ಲಾ ಕೆಲಸವನ್ನು ಖುದ್ದು ನಾನೇ ಮಾಡುತ್ತೇನೆ. ಅದೇ ನನಗೆ ಪ್ರತಿದಿನದ ವ್ಯಾಯಾಮದ ರುಟೀನ್.
ಚಳಿಗಾಲದಲ್ಲಿ ಕೂದಲ ಆರೈಕೆ ಹೇಗೆ?
ಶೂಟಿಂಗ್ ಇಲ್ಲದಾಗ ಕೂದಲಿಗೆ ಕೊಬ್ಬರಿ ಎಣ್ಣೆ, ನೆತ್ತಿಗೆ ಹರಳೆಣ್ಣೆ ಹಚ್ಚಿ ಎರಡ್ಮೂರು ದಿನ ಹಾಗೆಯೇ ಬಿಟ್ಟು ನಂತರ ತಲೆಸ್ನಾನವನ್ನು ಶೀಗೆಕಾಯಿಯಿಂದ ವಾಶ್ ಮಾಡುತ್ತೇನೆ. ನಮ್ಮಮ್ಮನ ಈ ಆರೈಕೆ ಇಂದಿಗೂ ಮುಂದುವರೆದಿದೆ. ಹಾಗಾಗಿ ಇನ್ನೂ ನನಗೆ ಹೇರ್ಕಲರ್ ಬಳಕೆ ಮಾಡುವ ದಿನ ಬಂದಿಲ್ಲ!
ಈ ಸುದ್ದಿಯನ್ನೂ ಓದಿ | Quirk Dress Fashion: ಯುವ ಜನತೆಯನ್ನು ಆಕರ್ಷಿಸುತ್ತಿದೆ ಫಂಕಿ ಕ್ವಿರ್ಕ್ ಫ್ಯಾಷನ್!
ಚಳಿಗಾಲದ ಆರೈಕೆಗೆ ಓದುಗರಿಗೆ ನೀವು ನೀಡುವ 3 ಟಿಪ್ಸ್ಗಳೇನು?
- ಆದಷ್ಟೂ ಬೆಚ್ಚಗಿಡುವ ಫ್ಯಾಷನ್ವೇರ್ ಆಯ್ಕೆ ಮಾಡಿ, ಧರಿಸಿ.
- ಚಳಿಗಾಲದಲ್ಲೂ ನೀರನ್ನು ಕುಡಿಯುತ್ತಿರಿ. ತ್ವಚೆ ಸುಕೋಮಲವಾಗಿರಲು ಸಹಾಯವಾಗುವುದು.
- ಕೂದಲಿಗೆ ಕೊಬ್ಬರಿ ಎಣ್ಣೆ ಹಚ್ಚಿ, ವಾರಕ್ಕೊಮ್ಮೆ ಎಣ್ಣೆ ಸ್ನಾನ ಮಾಡುವುದನ್ನು ರೂಢಿಸಿಕೊಳ್ಳಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)