Thursday, 28th November 2024

Viral News: ಸ್ನೋ ಹಿಲ್ ಸ್ಟೇಷನ್‌ನಲ್ಲಿ ವೆಕೇಷನ್ ಪ್ಲ್ಯಾನ್ ಮಾಡಿದ್ದವರು ಜೈಲು ಸೇರಿದರು; ದಿಲ್ಲಿಯ ಖತರ್ನಾಕ್ ದರೋಡೆ ಗ್ಯಾಂಗ್‌ನ ರೋಚಕ ಕಹಾನಿ

ನವದೆಹಲಿ: ಇದೊಂಥರಾ ‘ಸಾಲ ಮಾಡಿ ತುಪ್ಪ ತಿನ್ನಲು’ ಹೊರಟವರ ಕಥೆಯಂತಿದೆ! ವಿವಿಧ ಪ್ರಕರಣಗಳಲ್ಲಿ ತಗಲಾಕೊಂಡು ಜೈಲು ಶಿಕ್ಷೆ ಅನುಭವಿಸುತ್ತಿದ್ದ ಆರು ಜನ, ಜೈಲಿನಿಂದ ಹೊರ ಬಂದ ಬಳಿಕ ಪರ್ವತ ಪ್ರದೇಶಕ್ಕೆ ಟ್ರಕ್ಕಿಂಗ್ ಹೋಗಲು ನಿರ್ಧರಿಸಿದ್ದಾರೆ. ಆದರೆ ಅವರ್ಯಾರ ಕೈಯಲ್ಲೂ ಅದಕ್ಕೆ ಬೇಕಾದಷ್ಟು ಹಣವಿರಲಿಲ್ಲ. ಹಾಗೆಂದು ತಮ್ಮ ಮನದಾಸೆಯನ್ನು ನಿರಾಶೆಗೊಳಿಸುವಂತಿಲ್ಲ. ಅದಕ್ಕಾಗಿ ಸರಣಿ ದರೋಡೆ ನಡೆಸುವ ಪ್ಲ್ಯಾನ್ ಮಾಡ್ಕೊಂಡಿದ್ದ ಇವರು, ತಮ್ಮ ಮೊದಲನೇ ದರೋಡೆ ಪ್ರಯತ್ನದಲ್ಲೇ ಎಡವಟ್ಟು ಮಾಡಿಕೊಂಡು ಸಿಕ್ಕಿಬಿದ್ದು ಇದೀಗ ಮತ್ತೆ ಪೊಲೀಸರ ಅತಿಥಿಗಳಾಗಿದ್ದು, ಈ ಸುದ್ದಿ ಸಿಕ್ಕಾಪಟ್ಟೆ ವೈರಲ್ (Viral News) ಆಗಿದೆ.

ಹೀಗೆ ಜೈಲಿನಿಂದ ಹೊರಬಂದ ಬಳಿಕ ಟ್ರೆಕ್ಕಿಂಗ್‌ಗಾಗಿ ರಾಷ್ಟ್ರರಾಜಧಾನಿಯ ದ್ವಾರಕಾ ಪ್ರದೇಶದಲ್ಲಿ ದರೋಡೆಗಿಳಿದಿದ್ದ ಈ ಖತರ್ನಾಕ್ ಗ್ಯಾಂಗನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಿಂದಾಪುರದ ಜೆಜೆ ಕಾಲನಿ ನಿವಾಸಿಗಳಾಗಿರುವ ಈ ಕ್ರಿಮಿನಲ್ ಗ್ಯಾಂಗಿನ ಸದಸ್ಯರು ನ. 12ರಂದು ಅಂಗಡಿ ಮಾಲಕರೊಬ್ಬರಿಗೆ ಗನ್ ತೋರಿಸಿ ಬೆದರಿಸಿ ದರೋಡೆಗೆ ಯತ್ನಿಸಿದ್ದರು. ದಿನಸಿ ಅಂಗಡಿ ಮಾಲಕರಾಗಿರುವ ಮುಖೇಶ್ ಎಂಬಾತ ತನ್ನ ದಿನದ ವ್ಯವಹಾರವನ್ನು ಮುಗಿಸಿ ಸ್ಕೂಟರ್‌ನಲ್ಲಿ ಮನೆ ಕಡೆಗೆ ಸಾಗುತ್ತಿದ್ದ ಸಂದರ್ಭದಲ್ಲಿ, ಅವರನ್ನು ಈ ಖತರ್ನಾಕ್ ಗ್ಯಾಂಗ್ ಬಿಂದಾಪುರದ ಡಿಡಿಎ ಫ್ಲ್ಯಾಟ್ ಸಮೀಪ ಅಡ್ಡ ಹಾಕಿ ಗನ್ ತೋರಿಸಿ 50 ಸಾವಿರ ರೂ. ದೋಚಿದ್ದಾರೆ ಎಂದು ದ್ವಾರಕಾದ ಡೆಪ್ಯುಟಿ ಪೊಲೀಸ್ ಕಮಿಷನರ್ ಅಂಕಿತ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.

ಇದನ್ನೂ ಓದಿ: Actor Darshan: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

ಘಟನೆ ನಡೆದ ಬಳಿಕ ದೂರನ್ನು ಸ್ವೀಕರಿಸಿದ ಪೊಲೀಸರು ಸುತ್ತಮುತ್ತಲಿನ ಪ್ರದೇಶದ ಸುಮಾರು 500 ಸಿಸಿ ಕೆಮರಾಗಳ ಪರಿಶೀಲನೆ ನಡೆಸಿದ್ದಾರೆ. ಆ ಸಂದರ್ಭದಲ್ಲಿ ಅವರಿಗೆ ಕೆಲವು ಶಂಕಿತ ವ್ಯಕ್ತಿಗಳ ಸುಳಿವು ಸಿಕ್ಕಿದೆ. ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು ಪ್ರಾರಂಭದಲ್ಲಿ, ಮಹಮ್ಮದ್ ಸಾಜಿದ್ (23), ಮಹಮ್ಮದ್ ಶೋಯೆಬ್ (19) ಮತ್ತು ಮಹಮ್ಮದ್ ರಶೀದ್ (22) ಎಂಬ ಮೂವರು ಆರೋಪಿಗಳನ್ನು ನ. 17ರಂದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಪೊಲೀಸರಿಗೆ ಇನ್ನು ಮೂವರು ಆರೋಪಿಗಳ ಮಾಹಿತಿ ಲಭ್ಯವಾಗಿದ್ದು, ಅದರಂತೆ ಪೊಲೀಸರು, ಮಹಮ್ಮದ್ ಅಯಾನ್ (19), ಅಹಮ್ಮದ್ ಅಫ್ತಾಬ್ (22) ಮತ್ತು ಮಹಮ್ಮದ್ ಅಲ್ತಾಬ್ (24) ಎಂಬ ಮೂವರು ಅರೋಪಿಗಳನ್ನು ಬಂಧಿಸಿದ್ದಾರೆ.

ʼʼಈ ಎಲ್ಲ ಆರು ಜನ ಆರೊಪಿಗಳು ಕ್ರಿಮಿನಲ್ ಹಿನ್ನಲೆಯುಳ್ಳವರಾಗಿದ್ದು, ಇವರೆಲ್ಲರೂ ಹಣಕಾಸಿನ ತೊಂದರೆಯಲ್ಲಿದ್ದರು. ಇತ್ತೀಚೆಗಷ್ಟೇ ಜೈಲಿನಿಂದ ಹೊರಬಂದಿದ್ದ ಇವರು, ಯಾವುದಾದರೂ ಹಿಲ್ ಸ್ಟೇಷನ್‌ಗೆ ತೆರಳಿ ಹಿಮದಲ್ಲಿ ಆಟವಾಡಿ ಖುಷಿಪಡಲು ಬಯಸಿದ್ದರು. ಆದರೆ ತಮ್ಮಲ್ಲಿ ಅಷ್ಟೊಂದು ಹಣವಿಲ್ಲದೇ ಇದ್ದ ಕಾರಣ ಅವರು ದರೋಡೆಗಿಳಿಯಲು ನಿರ್ಧರಿಸಿದ್ದರು” ಎಂದು ಸಿಂಗ್ ಅವರು ಇನ್ನಷ್ಟು ಮಾಹಿತಿ ನೀಡಿದ್ದಾರೆ.

ಖಚಿತ ಮಾಹಿತಿಯನ್ನಾಧರಿಸಿ ಆರೋಪಿಗಳು ದಿನಸಿ ಅಂಗಡಿ ಮಾಲಕನನ್ನು ದರೋಡೆ ಮಾಡಲು ಪ್ಲ್ಯಾನ್ ಮಾಡಿ ಅದರಂತೆ ಉದ್ಯಮಿಯನ್ನು ಅಡ್ಡಗಟ್ಟಿ 50 ಸಾವಿರ ರೂ. ದರೋಡೆ ಮಾಡಿದ್ದರು. ಇದೀಗ ಪೊಲೀಸರು ಆರೋಪಿಗಳಿಂದ 35,200 ರೂ. ಹಾಗೂ ಒಂದು ದೇಸಿ ನಿರ್ಮಿತ ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ.

ಈ ಗ್ಯಾಂಗ್ ಇನ್ನಷ್ಟು ದರೋಡೆ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿತ್ತು. ಆದರೆ ಮೊದಲ ಪ್ರಕರಣದಲ್ಲೇ ಪೊಲೀಸರಿಗೆ ಸಿಕ್ಕಿ ಬೀಳುವ ಮೂಲಕ ಅವರ ಯೋಜನೆಯೆಲ್ಲಾ ತಲೆಕೆಳಗಾಗಿದೆ. ಒಟ್ಟಿನಲ್ಲಿ ಹಿಮಬೆಟ್ಟಗಳಿಗೆ ತೆರಳಿ ಎಂಜಾಯ್ ಮಾಡಲು ಪ್ಲ್ಯಾನ್ ಮಾಡಿದ್ದವರು ಇದೀಗ ಮತ್ತೆ ಕಂಬಿಗಳ ಹಿಂದೆ ಸೇರುವಂತಾಗಿದೆ.