ಹೊಸದಿಲ್ಲಿ: ಬಾಂಗ್ಲಾದೇಶದಲ್ಲಿ ಹಿಂದೂ ಮುಖಂಡ ಚಿನ್ಮಯ್ ಕೃಷ್ಣ ದಾಸ್ (Chinmoy Krishna Das) ಅವರನ್ನು ಬಂಧಿಸಿರುವುದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಇದೀಗ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಕ್ ಹಸೀನಾ (Sheikh Hasina) ಅವರೂ ಈ ನಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಚಿನ್ಮಯ್ ಕೃಷ್ಣ ದಾಸ್ ಅವರನ್ನು ಅನ್ಯಾಯವಾಗಿ ಬಂಧಿಸಲಾಗಿದ್ದು, ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಆಗಸ್ಟ್‌ನಲ್ಲಿ ತಮ್ಮನ್ನು ಅಧಿಕಾರದಿಂದ ಹೊರಹಾಕಿದಾಗಿನಿಂದ ಭುಗಿಲೆದ್ದ ಹಿಂಸಾಚಾರವನ್ನು ಧೈರ್ಯದಿಂದ ಎದುರಿಸಿದ ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರನ್ನು ರಕ್ಷಿಸುವಂತೆ ಅವರು ಬಾಂಗ್ಲಾದೇಶ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಶೇಕ್ ಹಸೀನಾ ಹೇಳಿದ್ದೇನು?
ʼʼಸನಾತನ ಧರ್ಮದ ಪ್ರಮುಖ ನಾಯಕರಾದ ಚಿನ್ಮಯ್ ಕೃಷ್ಣ ದಾಸ್ ಅವರನ್ನು ಅನ್ಯಾಯವಾಗಿ ಬಂಧಿಸಲಾಗಿದೆ. ಅರನ್ನು ಕೂಡಲೇ ಬಿಡುಗಡೆ ಮಾಡಬೇಕು. ಚಿತ್ತಗಾಂಗ್‌ನಲ್ಲಿ ಹಿಂದೂ ದೇವಾಲಯಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಹಿಂದೆ ಅಹ್ಮದೀಯ ಸಮುದಾಯದ ಮಸೀದಿಗಳು, ದೇವಾಲಯಗಳು, ಚರ್ಚುಗಳು, ಮಠಗಳು ಮತ್ತು ಮನೆಗಳ ಮೇಲೆ ದಾಳಿ ನಡೆಸಿ, ಧ್ವಂಸಗೊಳಿಸಲಾಗಿದೆ, ಲೂಟಿ ಮಾಡಲಾಗಿದೆ ಮತ್ತು ಬೆಂಕಿ ಹಚ್ಚಲಾಗಿದೆ. ಧಾರ್ಮಿಕ ಸ್ವಾತಂತ್ರ್ಯ ಮತ್ತು ಎಲ್ಲ ಸಮುದಾಯಗಳ ಜನರ ಜೀವನ ಮತ್ತು ಆಸ್ತಿಯ ಸುರಕ್ಷತೆಯನ್ನು ಬಾಂಗ್ಲಾ ಸರ್ಕಾರ ಖಚಿತಪಡಿಸಿಕೊಳ್ಳಬೇಕು” ಎಂದು ಅವಾಮಿ ಲೀಗ್ ಹಸೀನಾ ಅವರ ಹೇಳಿಕೆಯನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
আওয়ামী লীগ সভানেত্রী বঙ্গবন্ধুকন্যা শেখ হাসিনার বিবৃতিঃ
— Awami League (@albd1971) November 28, 2024
চট্টগ্রামে একজন আইনজীবীকে হত্যা করা হয়েছে, এই হত্যার তীব্র প্রতিবাদ জানাচ্ছি। এই হত্যাকাণ্ডের সঙ্গে যারা জড়িত তাদেরকে খুঁজে বের করে দ্রুত শাস্তি দিতে হবে। এই ঘটনার মধ্য দিয়ে চরমভাবে মানবাধিকার লঙ্ঘিত হয়েছে। একজন… pic.twitter.com/b7yjlyj9Et
ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಭುಗಿಲೆದ್ದ ಬಳಿಕ ಶೇಕ್ ಹಸೀನಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಆಗಸ್ಟ್‌ನಲ್ಲಿ ಭಾರತಕ್ಕೆ ಪಲಾಯನ ಮಾಡಿದ್ದರು. ಸೇನೆಯ ಹೆಲಿಕಾಫ್ಟರ್‌ನಲ್ಲಿ ಅವರು ದಿಲ್ಲಿಗೆ ಬಂದಿಳಿದಿದ್ದರು.
“ಅಸಂಖ್ಯಾತ ಅವಾಮಿ ಲೀಗ್ ನಾಯಕರು, ಕಾರ್ಯಕರ್ತರು, ವಿದ್ಯಾರ್ಥಿಗಳು, ಸಾರ್ವಜನಿಕರು ಮತ್ತು ಕಾನೂನು ಜಾರಿ ಸಂಸ್ಥೆಗಳ ಸದಸ್ಯರ ಹತ್ಯೆಯ ನಂತರ ದಾಳಿ ಮತ್ತು ಬಂಧನಗಳ ಮೂಲಕ ಮತ್ತೆ ಕಿರುಕುಳ ನೀಡಲಾಗುತ್ತಿದೆ. ಈ ಕ್ರಮಗಳನ್ನು ನಾನು ಬಲವಾಗಿ ಖಂಡಿಸುತ್ತೇನೆ” ಎಂದು ಅವರು ತಿಳಿಸಿದ್ದಾರೆ.
ಶೇಖ್ ಹಸೀನಾ ಅವರನ್ನು ಪ್ರಧಾನಮಂತ್ರಿ ಹುದ್ದೆಯಿಂದ ಪದಚ್ಯುತಗೊಳಿಸಿ ಗಡಿಪಾರು ಮಾಡಿದ ಬಳಿಕ ಬಾಂಗ್ಲಾದೇಶದಲ್ಲಿ ಚುನಾಯಿತ ಸರ್ಕಾರದ ಆಡಳಿತ ಅಂತ್ಯವಾಗಿದೆ. ಆ. 8ರಿಂದ ಮಿಲಿಟರಿ ಬೆಂಬಲಿತ ಹಾಗೂ ಮೊಹಮ್ಮದ್ ಯೂನಸ್ ನೇತೃತ್ವದ ಹಂಗಾಮಿ ಸರ್ಕಾರ ಆಡಳಿತ ನಡೆಸುತ್ತಿದೆ.
ʼʼಚಿತ್ತಗಾಂಗ್‌ನಲ್ಲಿ ನಡೆದ ವಕೀಲರ ಹತ್ಯೆಯೂ ಕಳವಳಕಾರಿ. ಇದಕ್ಕೆ ಕಾರಣವಾದವರನ್ನು ಗುರುತಿಸಿ ಅವರಿಗೆ ಕಠಿಣ ಶಿಕ್ಷೆ ನೀಡಬೇಕು. ಈ ಘಟನೆಯ ಮೂಲಕ ಮಾನವ ಹಕ್ಕುಗಳನ್ನು ತೀವ್ರವಾಗಿ ಉಲ್ಲಂಘಿಸಲಾಗಿದೆ. ಒಬ್ಬ ವಕೀಲರು ತಮ್ಮ ವೃತ್ತಿಪರ ಕರ್ತವ್ಯಗಳನ್ನು ನಿರ್ವಹಿಸಲು ಹೋದಾಗ ಕ್ರೂರವಾಗಿ ಹೊಡೆದು ಅವರನ್ನು ಹತ್ಯೆ ಮಾಡಲಾಗಿದೆ. ಅವರು ಯಾರೇ ಆಗಿರಲಿ, ಅವರಿಗೆ ಶಿಕ್ಷೆಯಾಗಬೇಕು” ಎಂದು ಶೇಕ್ ಹಸೀನಾ ಆಗ್ರಹಿಸಿದ್ದಾರೆ.
“ಅಸಾಂವಿಧಾನಿಕವಾಗಿ ಅಧಿಕಾರವನ್ನು ವಶಪಡಿಸಿಕೊಂಡ ಯೂನುಸ್ ಸರ್ಕಾರವು ಈ ಭಯೋತ್ಪಾದಕರನ್ನು ಶಿಕ್ಷಿಸಲು ವಿಫಲವಾದರೆ, ಮಾನವ ಹಕ್ಕುಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಂಡ ತೆರಬೇಕಾಗುತ್ತದೆ. ಈ ರೀತಿಯ ಭಯೋತ್ಪಾದನೆ ವಿರುದ್ಧ ಒಗ್ಗಟ್ಟಿನಿಂದ ನಿಲ್ಲುವಂತೆ ನಾನು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ. ಸಾಮಾನ್ಯ ಜನರ ಜೀವ ಮತ್ತು ಆಸ್ತಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ” ಎಂದು ಅವರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Bangladesh Unrest: ಬಾಂಗ್ಲಾದೇಶದಲ್ಲಿ ಹಿಂದೂ ಸಂತ ಚಿನ್ಮಯ್ ಕೃಷ್ಣ ದಾಸ್ ಅರೆಸ್ಟ್ ಆಗಿದ್ದೇಕೆ?