ಸಕಾರಾತ್ಮಕ ಶಕ್ತಿ (Positive energy) ಇರುವಂತೆ ನಕಾರಾತ್ಮಕ ಶಕ್ತಿಯೂ (Negative energy) ಇರುತ್ತದೆ. ಸಕಾರತ್ಮಕ ಶಕ್ತಿ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ವೃದ್ಧಿಸಿದರೆ, ನಕಾರಾತ್ಮಕ ಶಕ್ತಿ ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತವೆ. ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಲು ಕೆಲವೊಂದು ವಾಸ್ತು (Vastu Tips) ನಿಯಮಗಳಿವೆ.
ಮನೆ ಎನ್ನುವುದು ಮಂದಿರವಿದ್ದಂತೆ. ಇಲ್ಲಿ ವಾಸ್ತು ಶಾಸ್ತ್ರದ ನಿಯಮ ಮತ್ತು ತತ್ತ್ವಗಳನ್ನು ಅನುಸರಿಸುವ ಮೂಲಕ ಶುದ್ಧತೆ ಮತ್ತು ಪವಿತ್ರತೆಯನ್ನು ಕಾಪಾಡಿಕೊಳ್ಳಬಹುದು. ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದ್ದರೆ ಅದು ಅಶಾಂತಿ, ಆರ್ಥಿಕ ಸಮಸ್ಯೆ, ರೋಗ ಮತ್ತು ದುಃಖವನ್ನು ಉಂಟುಮಾಡುತ್ತದೆ ಎನ್ನಲಾಗುತ್ತದೆ.
ಉಜ್ಜಯಿನಿಯ ಖ್ಯಾತ ವಾಸ್ತು ತಜ್ಞ ಕೈಲಾಶ್ ನಾರಾಯಣ ಶರ್ಮಾ ಅವರು ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ತೊಡೆದುಹಾಕಲು ಸಹಾಯ ಮಾಡುವ ಕೆಲವು ವಿಧಾನಗಳನ್ನು ಹೇಳಿದ್ದಾರೆ. ಅವುಗಳು ಇಂತಿವೆ.
ನೀರು
ಮನೆಯಲ್ಲಿ ನಕಾರಾತ್ಮಕತೆಯನ್ನು ತೊಡೆದುಹಾಕಲು ನೀರು ಪರಿಣಾಮಕಾರಿಯಾಗಿದೆ. ಒಂದು ಬಟ್ಟಲಿನಲ್ಲಿ ನೀರನ್ನು ತುಂಬಿಸಿ ಸೂರ್ಯನ ಬೆಳಕಿನಲ್ಲಿ 4 ರಿಂದ 5 ಗಂಟೆಗಳ ಕಾಲ ಇರಿಸಿ. ಇದರ ಅನಂತರ ನೆಚ್ಚಿನ ದೇವರು ಅಥವಾ ದೇವತೆಯನ್ನು ಪ್ರಾರ್ಥಿಸಿ ಆ ನೀರನ್ನು ಮಾವಿನ ಅಥವಾ ಅಶೋಕ ಎಲೆಗಳ ಸಹಾಯದಿಂದ ಮನೆಯ ಪ್ರತಿಯೊಂದು ಮೂಲೆಗೂ ಸಿಂಪಡಿಸಿ. ಇದಕ್ಕಾಗಿ ಗಂಗಾಜಲವನ್ನೂ ಬಳಸಬಹುದು.
ಶಂಖ
ವಾಸ್ತು ಶಾಸ್ತ್ರದಲ್ಲಿ ಶಂಖಗಳಿಗೆ ವಿಶೇಷ ಮಹತ್ವವಿದೆ. ಶಂಖದ ಶಬ್ದವು ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ಓಡಿಸುತ್ತದೆ. ಇದನ್ನು ಊದುವುದರ ಜೊತೆಗೆ ಶಂಖದಲ್ಲಿ ನೀರನ್ನು ತುಂಬಿಸಿ ಅದನ್ನು ಮನೆಯ ಸುತ್ತಲೂ ಸಿಂಪಡಿಸಿ. ಇದು ಆರ್ಥಿಕ ವೃದ್ಧಿಯನ್ನು ಉಂಟು ಮಾಡುತ್ತದೆ.
ಅಗರಬತ್ತಿ
ದೇವಸ್ಥಾನದಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಧೂಪದ್ರವ್ಯವನ್ನು ಬೆಳಗಿಸಲಾಗುತ್ತದೆ. ಅದಕ್ಕಾಗಿ ಮನೆಯಲ್ಲಿ ಹಲವಾರು ಅಗರಬತ್ತಿಗಳನ್ನು ಸುಡುವ ಅಗತ್ಯವಿಲ್ಲ. ಒಂದು ಅಗರಬತ್ತಿಯನ್ನು ಬೆಳಗಿಸಿ ನೆಚ್ಚಿನ ದೇವರು ಅಥವಾ ದೇವತೆಯನ್ನು ಪ್ರಾರ್ಥಿಸಿ ಇಡೀ ಮನೆಯ ಸುತ್ತ ಧೂಪದ್ರವ್ಯವನ್ನು ಸರಿಸಿ. ಇದರಿಂದ ಮನೆಯಿಂದ ನಕಾರಾತ್ಮಕ ಶಕ್ತಿ ಹೊರಹೋಗುತ್ತದೆ.
ಹೂವು
ಬೆಳಗ್ಗೆ ಪೂಜೆ ಮಾಡುವಾಗ ಮನೆಯಲ್ಲಿರುವ ದೇವತೆಗಳಿಗೆ ಹೂವುಗಳನ್ನು ಅರ್ಪಿಸುವುದರಿಂದಲೂ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಬಹುದು. ಪ್ರತಿದಿನ ಸಂಜೆ ಅವುಗಳನ್ನು ತೆಗೆದುಹಾಕಬೇಕು. ಇಲ್ಲದಿದ್ದರೆ ಅದು ಬದಲಾಗಿ ನಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ. ಒಂದು ವೇಳೆ ದೇವರಿಗೆ ಸಂಜೆ ಹೂವುಗಳನ್ನು ಅರ್ಪಿಸುತ್ತಿದ್ದರೆ ರಾತ್ರಿಯಲ್ಲಿ ಅವುಗಳನ್ನು ತೆಗೆದುಹಾಕಬೇಕು.
Vastu Tips: ಸಂತೋಷ, ಸಮೃದ್ಧಿಯನ್ನು ಆಕರ್ಷಿಸಿ; ಈ ಮೂರು ವಸ್ತುಗಳನ್ನು ಮನೆಯ ದಕ್ಷಿಣ ದಿಕ್ಕಿನಲ್ಲಿರಿಸಿ
ಉಪ್ಪು
ಮನೆಯಲ್ಲಿರುವ ವಿವಿಧ ಸಮಸ್ಯೆಗಳನ್ನು ತೊಡೆದುಹಾಕಲು ಉಪ್ಪು ಸಹಾಯ ಮಾಡುತ್ತದೆ. ಉಪ್ಪು ಮನೆಯ ವಾಸ್ತು ದೋಷವನ್ನು ದೂರ ಮಾಡುತ್ತದೆ. ನೆಲವನ್ನು ಒರೆಸುವ ನೀರಿನಲ್ಲಿ ಸ್ವಲ್ಪ ಉಪ್ಪನ್ನು ಸೇರಿಸಿ ಅಥವಾ ಉಪ್ಪನ್ನು ಮನೆಯ ಪ್ರತಿಯೊಂದು ಮೂಲೆಯಲ್ಲಿ ಸಿಂಪಡಿಸಿ ಪ್ರತಿದಿನ ಬೆಳಗ್ಗೆ ಅದನ್ನು ಎಸೆಯಿರಿ. ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಬಹುದು.