ಬೆಂಗಳೂರು: ನೀರು ಬಾರದ ಕೊಳವೆಬಾವಿ ಮುಚ್ಚದೇ ಇದ್ದರೆ 1 ವರ್ಷ ಜೈಲು, 10 ಸಾವಿರ ರೂ. ದಂಡ ವಿಧಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಅಧ್ಯಕ್ಷತೆಯಲ್ಲಿ ಗುರುವಾರ (ನ. 28) ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಿಸಲಾಗಿದೆ. ಇದರ ಜತೆಗೆ ಒಟ್ಟು 9 ವಿಧೇಯಕಗಳಿಗೆ ತಿದ್ದುಪಡಿ ಮಾಡಿ ಅನುಮೋದಿಸಲಾಗಿದೆ.
ಕರ್ನಾಟಕ ಅಂತರ್ಜಲ (ನಿಯಮಾವಳಿ ಮತ್ತು ಅಭಿವೃದ್ಧಿ ಮತ್ತು ನಿರ್ವಹಣಾ ನಿಯಂತ್ರಣ) (ತಿದ್ದುಪಡಿ) ವಿಧೇಯಕ-2024ಕ್ಕೆ ಅನುಮೋದನೆ ನೀಡಲಾಗಿದೆ. ವಿಫಲವಾದ ಕೊಳವೆಬಾವಿಗಳನ್ನು ಮುಚ್ಚದೇ ಬಿಡುವುದನ್ನು ತಪ್ಪಿಸಲು ಈ ವಿಧೇಯಕವನ್ನು ತಿದ್ದುಪಡಿ ಮಾಡಲಾಗಿದೆ. ಇದರ ಪ್ರಕಾರ ನೀರು ಬಾರದ ಕೊಳವೆಬಾವಿ ಮುಚ್ಚದೇ ಇದ್ದರೆ 1 ವರ್ಷ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಅಲ್ಲದೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ವಿಫಲರಾಗುವ, ಅಧಿಸೂಚಿಯಲ್ಲದ ಪ್ರದೇಶಗಳಲ್ಲಿ ಅಂತರ್ಜಲ ಉಪಯೋಗಿಸಿ ನಿಯಮ ಉಲ್ಲಂಘಿಸುವ ವ್ಯಕ್ತಿಗಳಿಗೆ 5,000 ರೂ.ಗಳ ದಂಡ ಹಾಗೂ 3 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಲು ವಿಧೇಯಕದಲ್ಲಿ ಅವಕಾಶ ಮಾಡಿಕೊಡಲಾಗಿದೆ.
ಇಂದು ನನ್ನ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಇತರೆ ಪ್ರಮುಖ ನಿರ್ಣಯಗಳು ಹೀಗಿವೆ#CabinetDecisions pic.twitter.com/GwbsKYxG39
— Siddaramaiah (@siddaramaiah) November 28, 2024
ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆ (ಕರ್ನಾಟಕ) (ತಿದ್ದುಪಡಿ) ನಿಯಮಗಳು 2024, ಅಸಂಘಟಿತ ಕಾರ್ಮಿಕರ ಕರ್ನಾಟಕ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ, 2024 ಅನ್ನು ಅನುಮೋದಿಸಲಾಗಿದೆ. ಕಾರ್ಮಿಕ ಕಲ್ಯಾಣ ನಿಧಿಗೆ ಪ್ರತಿ ಕಾರ್ಮಿಕರಿಂದ 20 ರೂ., ಮಾಲೀಕರಿಂದ 40 ರೂ. ಹಾಗೂ ಸರ್ಕಾರದಿಂದ 20 ರೂ.ಗಳನ್ನು ಸಂಗ್ರಹಿಸುವುದನ್ನು ಹೆಚ್ಚಿಸಿ 50-50 ಮಾಡಲಾಗಿದೆ. ಕಾರ್ಮಿಕರಿಂದ 50 ರೂ., ಸರ್ಕಾರದಿಂದ 50 ರೂ.ಗಳು ಹಾಗೂ ಮಾಲೀಕರಿಂದ 100 ಹಾಗೂ ವಂತಿಗೆಯನ್ನು ಹೆಚ್ಚಿಸಲು ತಿದ್ದುಪಡಿ ಮಾಡಲಾಗಿದೆ. 42 ಕೋಟಿ ರೂ.ಗಳ ವಂತಿಗೆ ಸಂಗ್ರಹವಾಗುತ್ತಿತ್ತು. ತಿದ್ದುಪಡಿಯಿಂದ 100 ಕೋಟಿ ರೂ.ಗಳಷ್ಟು ಮೊತ್ತ ಸಂಗ್ರಹವಾಗುವ ಅಂದಾಜಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್. ಕೆ.ಪಾಟೀಲ್ ತಿಳಿಸಿದರು.
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ-204ಕ್ಕೆ ಅನುಮೋದನೆ: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯಕ್ಕೆ ಇಲ್ಲಿಯವರೆಗೆ ರಾಜ್ಯಪಾಲರು ಕುಲಪತಿಗಳಾಗಿದ್ದರು. ತಿದ್ದುಪಡಿಯ ನಂತರ ಮುಖ್ಯಮಂತ್ರಿ ಕುಲಪತಿಗಳಾಗಲಿದ್ದಾರೆ. ವಿಶ್ವವಿದ್ಯಾಲಯ ಹೆಚ್ಚು ಕ್ರಿಯಾಶೀಲವಾಗಬೇಕು ಹಾಗೂ ನಿರ್ಣಯಗಳು ಶೀಘ್ರವಾಗಿ ಆಗಬೇಕು ಎನ್ನುವ ಕಾರಣಕ್ಕೆ ತಿದ್ದುಪಡಿ ಮಾಡಲಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕ-2024: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (2ನೇ ತಿದ್ದುಪಡಿ) ವಿಧೇಯಕ, 2024, ಕರ್ನಾಟಕ ಕಾರ್ಮಿಕರ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ 2024, Karnataka State Allied and Healthcare Professions Council ನಿಯಮಗಳು 2024 ಹಾಗೂ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ 2024ಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಪ್ರಮುಖ ನಿರ್ಣಯಗಳು
ಪ್ರವಾಸಿ ತಾಣಗಳಲ್ಲಿ ರೋಪ್ ವೇ: ರಾಜ್ಯದ ಹಲವು ಪ್ರವಾಸಿ ತಾಣಗಳಲ್ಲಿ ರೋಪ್ ವೇಗಳನ್ನು ನಿರ್ಮಿಸುವ ಸಂಬಂಧ ಕರ್ನಾಟಕ ಪ್ರವಾಸೋದ್ಯಮ ರೋಪ್ ವೇಸ್ ವಿಧೇಯಕ 2024ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಲಾಗಿದೆ. ಅಂಜನಾದ್ರಿ, ಯಾದಗಿರಿ, ನಂದಿಬೆಟ್ಟ, ಸವದತ್ತಿ ಸೇರಿದಂತೆ 12 ಕಡೆಗಳಲ್ಲಿ ಸಮೀಕ್ಷೆ ನಡೆಸಿ ರೋಪ್ ವೇ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು.
ಆರೋಗ್ಯ ಕೇಂದ್ರಗಳಿಗೆ ಉಪಕರಣ ಖರೀದಿಗೆ ಅನುಮೋದನೆ: 2024-25ನೇ ಸಾಲಿನಲ್ಲಿ ಕಾರ್ಯಕ್ರಮಗಳಡಿ 15 ವಿವಿಧ ಹಣಕಾಸು ಆಯೋಗದ ಅನುದಾನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ರೋಗ ಪತ್ತೆ ಮೂಲ ಸೌಕರ್ಯಗಳನ್ನು ಒದಗಿಸಲು 145.99 ಕೋಟಿ ರೂ.ಗಳಲ್ಲಿ ಉಪಕರಣಗಳನ್ನು ಖರೀದಿಸಲು ಹಾಗೂ 84.88 ಕೋಟಿ ರೂ. ಅಂದಾಜು ಮೊತ್ತದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಗರ ಆರೋಗ್ಯ ಕ್ಷೇಮ ಕೇಂದ್ರ – ನಮ್ಮ ಕ್ಲಿನಿಕ್ ಗಳಲ್ಲಿನ ಪ್ರಯೋಗಾಲಯಗಳನ್ನು ಮತ್ತು ಆರೋಗ್ಯ ಸೇವೆಗಳನ್ನು ಬಲಪಡಿಸಲು ಉಪಕರಣಗಳನ್ನು ಖರೀದಿಸಲು ಹಾಗೂ 5 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲು ಮತ್ತು 72.96 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಮ್ಮ ಕ್ಲಿನಿಕ್‌ಗಳಿಗೆ ಅಗತ್ಯವಿರುವ ಔಷಧಿ ಮತ್ತು ರಾಸಾಯನಿಕಗಳನ್ನು PM- ABHIM ಅನುದಾನದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
PM- ABHIM ಯೋಜನೆಯಡಿಯಲ್ಲಿ ಚಿಕ್ಕಬಳ್ಳಾಪುರದ CIMS ಇಲ್ಲಿಗೆ ಅನುಮೋದನೆಯಾಗಿರುವ 50 ಹಾಸಿಗೆ ತೀವ್ರ ನಿಗಾ ಆರೈಕೆ ಘಟಕವನ್ನು ಜಿಲ್ಲೆಯ ಚಿಂತಾಮಣಿ ತಾಲೂಕಿಗೆ ಸ್ಥಳಾಂತರಿಸಿ 16.63 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಆದೇಶಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ.
PM- ABHIM ಯೋಜನೆಯಡಿಯಲ್ಲಿ 108.36 ಕೋಟಿ ರೂ ವೆಚ್ಚದಲ್ಲಿ ಒಟ್ಟು 254 ನಗರ ಆರೋಗ್ಯ ಕ್ಷೇಮಕೇಂದ್ರ – ನಮ್ಮ ಕ್ಲಿನಿಕ್ ಗಳನ್ನು ಉಪಕರಣಗಳೊಂದಿಗೆ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಈ ಸುದ್ದಿಯನ್ನೂ ಓದಿ: Basavaraja Bommai: ಬಾಂಗ್ಲಾದ ಹಿಂದುಗಳ ಮೇಲಿನ ದಾಳಿ ನಿಲ್ಲಿಸಲು ವಿಶ್ವಸಂಸ್ಥೆ ಮಧ್ಯಪ್ರವೇಶ; ಬೊಮ್ಮಾಯಿ ಆಗ್ರಹ