Saturday, 11th January 2025

Raghavendra Jois Column: ಮಾರುಕಟ್ಟೆ ಜಿಗಿತ, ಕರಡಿ ಕುಣಿತ

ದುಡ್ಡು-ಕಾಸು

ರಾಘವೇಂದ್ರ ಜೋಯಿಸ್‌, ಮೈಸೂರು

ಷೇರು ಮಾರುಕಟ್ಟೆಯ ವಹಿವಾಟೇ ಒಂದು ವಿಸ್ಮಯ. ಇಲ್ಲಿನ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಯಾವಾಗ ಮೇಲಕ್ಕೆ ಹೋಗುತ್ತವೆ, ಯಾವಾಗ ಕೆಳಗೆ ಬೀಳುತ್ತವೆ ಎಂಬುದನ್ನು ತಜ್ಞರು ‘ಅಂದಾಜು’ ಮಾಡಬ ಹುದೇ ಹೊರತು, ‘ಇದಮಿತ್ಥಂ’ ಎಂದು ನಿಖರವಾಗಿ ಹೇಳಲು ಅವರಿಗೂ ಕಷ್ಟ. ಇನ್ನು ಶ್ರೀಸಾಮಾನ್ಯರಿಗಂತೂ ಇದು ಕಬ್ಬಿಣದ ಕಡಲೆ. ಆದ್ದರಿಂದ, ಷೇರುಪೇಟೆಯಲ್ಲಿ ನೇರ ವಾಗಿ ಹಣ ಹೂಡುವ ಮೊದಲು ಇಂಥವರು ಅದರ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದರೆ ಒಳ್ಳೆಯದು.

ಷೇರುಪೇಟೆಯಲ್ಲಿ ಇವತ್ತಿದ್ದ ಷೇರಿನ ಬೆಲೆ ನಾಳೆಯೂ ಇರುತ್ತದೆ ಅಥವಾ ಜಾಸ್ತಿ ಆಗುತ್ತದೆ ಅನ್ನುವುದಕ್ಕೆ ಯಾವುದೇ ಖಾತ್ರಿಯಿಲ್ಲ. ಏಕೆಂ
ದರೆ ಇಲ್ಲಿನ ವಹಿವಾಟು ಅನೇಕ ಅಂಶ ಗಳನ್ನು ಅವಲಂಬಿಸಿರುತ್ತದೆ. ಅವುಗಳೆಂದರೆ: ಷೇರುಗಳ ಬೇಡಿಕೆ ಮತ್ತು ಪೂರೈಕೆ; ದೇಶದಲ್ಲಿನ
ಆರ್ಥಿಕ ಸ್ಥಿರತೆ, ಹಣದುಬ್ಬರ, ಜಿಡಿಪಿಯ ಅಂದಾಜು ಮುಂತಾದವು; ಕೇಂದ್ರ ಸರಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ನ ಕಾರ್ಯ ನೀತಿಗಳು ಹಾಗೂ ನಿರ್ಧಾರಗಳು; ಸರಕಾರದ ಸ್ಥಿರತೆ, ರಾಜಕೀಯ ಪಕ್ಷಗಳ ಹೊಂದಾಣಿಕೆ, ಚುನಾವಣೆಗಳು ಮತ್ತು ಅವುಗಳ ಫಲಿತಾಂಶಗಳು; ಪ್ರಮುಖ ಕಂಪನಿಗಳು ಘೋಷಿಸುವ ಲಾಭ, ಷೇರುದಾರರಿಗೆ ನೀಡುವ ಲಾಭಾಂಶ ಮತ್ತಿತರ ಹಣಕಾಸಿನ ಕಾರ್ಯಕ್ಷಮತೆಗಳು; ಮಾನ್ಸೂನ್ ವಿಳಂಬ, ಬೆಳೆ ವೈಫಲ್ಯ, ನೈಸರ್ಗಿಕ ವಿಕೋಪ, ವಿದೇಶಿ ಕರೆನ್ಸಿಗಳಲ್ಲಿನ ವ್ಯತ್ಯಾಸ, ಅಮೆರಿಕದ ಫೆಡರಲ್ ರಿಸರ್ವ್‌ನಲ್ಲಾಗುವ ಬಡ್ಡಿಯಲ್ಲಿನ ಬದಲಾವಣೆ, ಯುದ್ಧಘೋಷಣೆ, ಅಂತಾ ರಾಷ್ಟ್ರೀಯ ಮಾರುಕಟ್ಟೆಯಲ್ಲಾಗುವ ಬದಲಾವಣೆ ಮುಂತಾದ ಮತ್ತಿತರ ಬಾಹ್ಯ ವಿಷಯಗಳು.

ಇವಷ್ಟೇ ಅಲ್ಲದೆ, ಕೆಲವೊಮ್ಮೆ ಯಾವುದೇ ಸರಿಯಾದ ಕಾರಣವಿಲ್ಲದೆಯೂ ಷೇರುದಾರರ ಭಾವನೆಗಳು ಮತ್ತು ಆತಂಕಗಳಿಂದಲೂ ಷೇರು
ಪೇಟೆ ಮುಗ್ಗರಿಸುವುದುಂಟು; ಕೆಲವೊಮ್ಮೆ, ಅಮೆರಿಕದ ಅಧ್ಯಕ್ಷರಿಗೆ ‘ಶೀತ’ ಆದರೂ ನಮ್ಮ ಷೇರುಪೇಟೆಗೆ ‘ಜ್ವರ’ ಬರುವುದೂ ಉಂಟು!
ಹಾಗಾದರೆ ಷೇರುಪೇಟೆಯಲ್ಲಿನ ಹೂಡಿಕೆ ಕೇವಲ ನಷ್ಟ ತರಿಸುವಂಥದ್ದು, ಅದರಲ್ಲಿ ಲಾಭ ಕಡಿಮೆ ಅಪಾಯ ಜಾಸ್ತಿ ಅಂತ ಅಂದುಕೊಂಡರೆ ಅದೂ ತಪ್ಪು. ಇಲ್ಲಿಯೂ ಲಾಭ ಮಾಡಬಹುದು, ಕೆಲವೊಮ್ಮೆ ಬೇರೆ ಹೂಡಿಕೆಗಿಂತಲೂ ಅತ್ಯಧಿಕ ಲಾಭ ಬರುವ ಸಾಧ್ಯತೆಯೂ ಇದೆ.

ಆದರೆ ಯಾವುದೇ ಷೇರಿನಲ್ಲಿ ಹೂಡಿಕೆ ಮಾಡುವ ಮುನ್ನ ಒಂದಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಅವುಗಳೆಂದರೆ: ಷೇರುಪೇಟೆಯ ಮೇಲೆ ಪರಿಣಾಮ ಬೀರಬಲ್ಲ, ಮೇಲೆ ತಿಳಿಸಿದ ಅಂಶಗಳ ಬಗ್ಗೆ ಅರಿವಿರಬೇಕು. ಹೂಡಿಕೆ ಮಾಡುವ ಕಂಪನಿಗಳ ವಹಿವಾಟು, ಲಾಭಗಳಿಕೆ, ಅದರ ಮುಂದಿನ ವಹಿವಾಟಿನ ಅಂದಾಜು, ಷೇರುಮೌಲ್ಯದ ಸ್ಥಿರತೆ ಮುಂತಾದವುಗಳ ಬಗ್ಗೆ ವಿಷಯ ಸಂಗ್ರಹಿಸಿ ಪರಿಶೀಲಿಸಿ ನಿರ್ಧರಿಸಬೇಕು.
ಮಕ್ಕಳ ಶಿಕ್ಷಣ, ಮದುವೆ, ವೈದ್ಯಕೀಯ ಚಿಕಿತ್ಸೆ ಮುಂತಾದ ತಕ್ಷಣದ ಅಗತ್ಯಗಳಿಗೆ ಮೀಸಲಿಟ್ಟ ಹಣವನ್ನು ಷೇರುಪೇಟೆಯಲ್ಲಿ ತೊಡಗಿಸಬೇಡಿ. ನಿಮಗೆ ಅಗತ್ಯವಿದ್ದಾಗ ಮಾರುಕಟ್ಟೆ ಕುಸಿದಿದ್ದರೆ ನೀವು ನಷ್ಟ/ ತೊಂದರೆಯನ್ನು ಅನುಭವಿಸುವುದು ಚಿತ. ದೀರ್ಘಕಾಲಿಕ ಹೂಡಿಕೆ ಮಾಡಿದರೆ ಒಳ್ಳೆಯದು. ಷೇರುಪೇಟೆಯಲ್ಲಿ ಹೂಡಿಕೆ ಮಾಡಿದ ಮೇಲೆ, ಹೂಡಿಕೆ ಮಾಡಿದ ಕಂಪನಿಯ ವಹಿವಾಟು ಮತ್ತು ಷೇರಿನ ಬೆಲೆಯ ಬಗ್ಗೆ
ಗಮನ ವಿರಬೇಕು. ನಿಮಗೆ ಅದರಿಂದ ನಷ್ಟವಾಗಬಹುದು ಎಂಬ ಮುನ್ಸೂಚನೆ ಸಿಕ್ಕಿದರೆ ಕೂಡಲೇ ಮಾರಬಹುದು.

ಮಾರುಕಟ್ಟೆ ಕುಸಿಯುತ್ತಿರುವಾಗ ಹೆದರಿ ನಷ್ಟದಲ್ಲಿ ಮಾರುವುದು, ಮಾರುಕಟ್ಟೆ ಏರುಗತಿಯಲ್ಲಿದ್ದಾಗ ಅತಿಹೆಚ್ಚಿನ ಬೆಲೆಗೆ ಕೊಳ್ಳುವುದು ಈ ಎರಡನ್ನೂ ಸಾಧ್ಯವಾದಷ್ಟು ಮಾಡಬಾರದು. ಪ್ರತಿದಿನ ಖರೀದಿ ಮತ್ತು ಮಾರಾಟ ಮಾಡುವವರು ಇನ್ನೂ ಹೆಚ್ಚು ಕಂಪನಿಗಳ ಹಾಗೂ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿತಿರಬೇಕು.

ಷೇರು ಮಾರಾಟದಿಂದ ಬರುವ ಲಾಭಕ್ಕೆ ಮತ್ತು ಕಂಪನಿಗಳು ನೀಡುವ ಲಾಭಾಂಶಕ್ಕೆ ಸಂದಾಯ ಮಾಡಬೇಕಾಗುವ ಆದಾಯ ತೆರಿಗೆ ಬಗ್ಗೆ ಅರಿತಿರಬೇಕು. ಕಂಪನಿಗಳನ್ನು ವಿಶ್ಲೇಷಿಸಿ ಹೂಡಿಕೆ ಮಾಡುವ ಸಾಮರ್ಥ್ಯವಿಲ್ಲದಿದ್ದರೆ ತಜ್ಞರ ಸಲಹೆ ಪಡೆಯಬೇಕು, ಇಲ್ಲವಾದಲ್ಲಿ
ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವುದು ಉತ್ತಮ.

(ಲೇಖಕರು ಹವ್ಯಾಸಿ ಬರಹಗಾರರು)

ಇದನ್ನೂ ಓದಿ: Kannadacolumn