Friday, 20th September 2024

’ಪೂಮಾಲೈ ವಾಂಗಿ ವಂದಾನ್‌ ಪೂಕ್ಕಳ್ ಇಲ್ಲೈಯೇ…’

ತಿಳಿರು ತೋರಣ

ಶ್ರೀವತ್ಸ ಜೋಶಿ

ಅದು 35 ವರ್ಷಗಳ ಹಿಂದೆ, 1985ರಲ್ಲಿ ಬಿಡುಗಡೆಯಾದ ಒಂದು ಅತ್ಯುತ್ತಮ ತಮಿಳು ಚಿತ್ರ ‘ಸಿಂಧು ಭೈರವಿ’ಯ ಹಾಡೊಂದರ ಮೊದಲ ಸಾಲು.

ನಾನೇನೂ ಮಹಾ ತಮಿಳು ಸಿನಿಮಾಗಳನ್ನು ನೋಡಿರುವವನು ಎಂದಲ್ಲ, ಜೀವನದಲ್ಲಿ ಇದುವರೆಗೆ ನೋಡಿರಬಹುದಾದ
ಬೆರಳೆಣಿಕೆಯ ತಮಿಳು ಚಿತ್ರಗಳಲ್ಲಿ ಸಿಂಧು ಭೈರವಿ ಕೂಡ ಒಂದು ಅಂತ ಅಷ್ಟೇ. ಅದೂ ಥಿಯೇಟರ್‌ಗೆ ಹೋಗಿ ಅಲ್ಲ, ದೂರ ದರ್ಶನದಲ್ಲಿ ಭಾನುವಾರಗಳಂದು ಮಧ್ಯಾಹ್ನ ಒಂದೂವರೆ ಗಂಟೆಗೆ ಪ್ರಶಸ್ತಿ ವಿಜೇತ ಪ್ರಾದೇಶಿಕ ಚಲನಚಿತ್ರಗಳು ಪ್ರಸಾರ ವಾಗ್ತಿದ್ದವಲ್ವಾ ಅದರಲ್ಲಿ ನೋಡಿದ್ದು. ಅಮೃತಾಂಜನ್ ಹಚ್ಚಿಕೊಂಡೇ ನೋಡಬೇಕಾದ ಆರ್ಟ್ ಫಿಲಂ ಏನಲ್ಲ, ಕಮರ್ಷಿಯಲ್ ಸಿನಿಮಾದ ಎಲ್ಲ ಸರಕೂ ಸಿಂಧು ಭೈರವಿಯಲ್ಲಿ ಇತ್ತು.

ಥಿಯೇಟರ್‌ಗಳಲ್ಲಿ ಭರ್ಜರಿ ಪ್ರದರ್ಶನಗೊಂಡು ಕನಿಷ್ಠ ಮೂರ್ನಾಲ್ಕು ವರ್ಷಗಳಾದ ಮೇಲೆ ದೂರದರ್ಶನದಲ್ಲಿ ಬಂದದ್ದೋ ಏನೋ. ಇರಲಿ, ನಾನದನ್ನು ದೂರದರ್ಶನದಲ್ಲಿ ನೋಡಿದ್ದೇ ಒಳ್ಳೆಯದಾಯಿತು, ಕಾರಣ ಇಂಗ್ಲಿಷ್ ಸಬ್ ಟೈಟಲ್ಸ್ ಇದ್ದಿದ್ದರಿಂದ ಸಂಭಾಷಣೆಗಳನ್ನು ಅರ್ಥ ಮಾಡಿಕೊಳ್ಳುವುದು ಸುಲಭ. ಮಾತ್ರವಲ್ಲ, ಒಟ್ಟಾರೆಯಾಗಿ ಸಿಂಧು ಭೈರವಿ ಚಿತ್ರ, ಅದರಲ್ಲೂ ಆ ಹಾಡು, ಅದರಲ್ಲೂ ಆರಂಭದ ಆ ಸಾಲು ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ನಿಂತಿರುವುದಕ್ಕೂ ಸಬ್‌ಟೈಟಲ್ಸೇ ಕಾರಣ.

‘ಪೂಮಾಲೈ ವಾಂಗಿ ವಂದಾನ್ ಪೂಕ್ಕಳ್ ಇಲ್ಲೈಯೇ…’ ಎಂದು ಹಾಡು ಆರಂಭವಾದಾಗ ಕಾಣಿಸಿಕೊಂಡಿದ್ದ ಇಂಗ್ಲಿಷ್ ಸಬ್ ‌ಟೈಟಲ್ ಹೀಗಿತ್ತು: He brought a garland; Alas! with no flowers!  ಹೌದು, ಅದನ್ನು ಕನ್ನಡದಲ್ಲಿ ಹೇಳಿದರೂ ಅದೇ ಅರ್ಥ: ‘ಹೂಮಾಲೆ ತೆಗೆದುಕೊಂಡು ಬಂದನು; ಅದರಲ್ಲಿ ಹೂವುಗಳೇ ಇರಲಿಲ್ಲ!’ ಎಷ್ಟು ಪವರ್‌ಫುಲ್ ಲಿರಿಕ್ಸ್, ಎಂಥ ಪ್ರಖರ ರೂಪಕ! ಹೂವುಗಳೇ ಇಲ್ಲದ್ದು ಹೂಮಾಲೆ ಅನಿಸಿಕೊಳ್ಳುವುದಾದರೂ ಹೇಗೆ? ಆಲೋಚಿಸಿದರೆ ಗಾಢ ಚಿಂತನೆಗೆ ಗ್ರಾಸ. ಹಾಡಿನ ಆ ಒಂದು ಸಾಲು, ಮೂರು ದಶಕಗಳಾದ ಮೇಲೂ ಆಗಾಗ ನನ್ನ ಯೋಚನಾ ಲಹರಿಯಲ್ಲಿ ಹಾದುಹೋಗುತ್ತಿರುತ್ತದೆ.

ಕೆಲವೊಮ್ಮೆ ಅದನ್ನು ನನ್ನ ಬರವಣಿಗೆ ಯಲ್ಲಿ ಸಂದರ್ಭೋಚಿತವಾಗಿ ಹೋಲಿಕೆಗೆ ಬಳಸಿಕೊಂಡದ್ದೂ ಇದೆ. ಈವತ್ತಿನ ಲೇಖನಕ್ಕಂತೂ ಶೀರ್ಷಿಕೆಯಾಗಿಯೇ ಆಯ್ಕೆಯಾಗಿದೆ. ಅಂದಹಾಗೆ, ಇದೇನಿದು ಕನ್ನಡ ಪತ್ರಿಕೆಯಲ್ಲಿ ಅಂಕಣ ಬರಹಕ್ಕೆ ತಮಿಳು ತಲೆಬರಹವೇ!? ಎಂದು ಹುಬ್ಬೇರಿಸುವವರಿದ್ದರೆ ಕೇಳಿಸ್ಕೊಳ್ಳಿ – ನಾನು ಈ ಲೇಖನವನ್ನು ನವೆಂಬರ್‌ನಲ್ಲಿ ಬರೆಯದೆ ಮುದ್ದಾಂ ಆಗಿ ಡಿಸೆಂಬರ್‌ಗೆ ಮುಂದೂಡಿದ್ದು ಆ ಒಂದು ಸಣ್ಣ ಹಿಂಜರಿಕೆಯಿಂದಲೇ.

ಸಿಂಧು ಭೈರವಿ ಚಿತ್ರವು ತಮಿಳಿನ ಮೇರುಪ್ರತಿಭೆ ಕೆ.ಬಾಲಚಂದರ್ ಅವರ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಬಂದದ್ದು. ಶಿವ ಕುಮಾರ್, ಸುಹಾಸಿನಿ, ಸುಲಕ್ಷಣಾ ಮುಖ್ಯ ತಾರಾಗಣ. ಇಳೈಯರಾಜ ಸಂಗೀತ ನಿರ್ದೇಶನ. ಕೆ.ಜೆ.ಯೇಸುದಾಸ್ ಮತ್ತು ಕೆ.ಎಸ್.ಚಿತ್ರಾ ಹಿನ್ನೆಲೆಗಾಯನ. ಆ ವರ್ಷ ದೀಪಾವಳಿ ವಿಶೇಷವೆಂದು ಬಿಡುಗಡೆಗೊಂಡು ಬ್ಲಾಕ್ ಬಸ್ಟರ್ ಆದ ಚಿತ್ರವದು, ಆಮೇಲೆ ಮೂರು ರಜತಕಮಲ ರಾಷ್ಟ್ರಪ್ರಶಸ್ತಿಗಳನ್ನೂ ಬಾಚಿಕೊಂಡಿತ್ತು. ಕಥಾಹಂದರ ವೇನೆಂದರೆ – ಜೆಕೆಬಿ (ಜೆ.ಕೆ. ಬಾಲ ಗಣಪತಿ) ಎಂಬೊಬ್ಬ ಶಾಸ್ತ್ರೀಯ ಸಂಗೀತ ಕಲಾವಿದ ಗಾಯನಪ್ರತಿಭೆಯ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ತನ್ನ ಪತ್ನಿ ಭೈರವಿಗಿಂತ ಸಿಂಧು ಎಂಬ ಶ್ರೋತೃವೊಬ್ಬಳಲ್ಲಿ ಆಕರ್ಷಿತನಾಗುತ್ತಾನೆ.

ಸಂಗೀತ ಶಿಕ್ಷಕಿಯಾಗಿದ್ದ ಅವಳು ಪ್ರತಿಭಾನ್ವಿತೆಯೂ ಹೌದೆಂದು ಅರಿತುಕೊಳ್ಳುತ್ತಾನೆ. ಆಮೇಲೆ ಮದಿರೆಯ ದಾಸನಾಗಿ ತನ್ನ ಕಲಾಜೀವನದಲ್ಲಿ ಅಧಃಪತನ ಕಾಣುತ್ತಾನೆ. ಹೆಂಡತಿ ಭೈರವಿಯು ಗಂಡನನ್ನು ಸರಿದಾರಿಗೆ ತರಲು ಯತ್ನಿಸಿ ವಿಫಲಳಾಗುತ್ತಾಳೆ. ಆಮೇಲೆ ಸಿಂಧುಳ ನೆರವನ್ನೂ ಪಡೆದು ಯಶಸ್ವಿಯಾಗುತ್ತಾಳೆ. ‘ಪೂಮಾಲೈ ವಾಂಗಿ ವಂದಾನ್ ಪೂಕ್ಕಳ್ ಇಲ್ಲೈಯೇ…’ ಹಾಡು ಜೆಕೆಬಿ ಪರಮಕುಡುಕನಾಗಿ ದಾರುಣ ಪರಿಸ್ಥಿತಿಯಲ್ಲಿದ್ದಾಗಿನದು.

ನನ್ನನ್ನು ತೀವ್ರವಾಗಿ ತಟ್ಟಿದ್ದು ಹಾಡಿನ ಮೊದಲ ಸಾಲು ಮಾತ್ರವಾದರೂ, ಆ ಹಾಡನ್ನು ತುಂಬ ಸಲ ಕೇಳಿದ್ದೇನೆ. ನನ್ನ
ಸಂಗೀತ ಸಂಗ್ರಹದಲ್ಲಿ ಸೇರಿಸಿಕೊಂಡು ಈಗಲೂ ಕೆಲವೊಮ್ಮೆ ಕೇಳುತ್ತಿರುತ್ತೇನೆ. ತಮಿಳು ಸ್ನೇಹಿತನೊಬ್ಬನಲ್ಲಿ ಆ ಇಡೀ ಹಾಡಿನ
ಭಾವಾರ್ಥವನ್ನೂ ಕೇಳಿ ಬರೆದಿಟ್ಟುಕೊಂಡಿದ್ದೇನೆ. ಅದು ಒಂದು ವಿಷಾದಭರಿತ ಗಝಲ್‌ನಂತೆ ಇದೆ. ನೀವೂ ಓದುವಿರಂತೆ,
ಇಲ್ಲಿದೆ ನೋಡಿ. ಮೆಚ್ಚುಗೆಯಾದರೆ ಸಲ್ಲುವುದು ತಮಿಳು ಚಿತ್ರಸಾಹಿತಿ ವೈರಮುತ್ತು ಅವರಿಗೆ.

‘ಹೂಮಾಲೆ ತೆಗೆದುಕೊಂಡು ಬಂದ, ಆದರೆ ಹೂವುಗಳೇ ಇಲ್ಲ! ಪ್ರತಿದಿನವೂ ಹೀಗೆಯೇ, ಹೂವುಗಳಿಲ್ಲದ ಮಾಲೆ ತರುತ್ತಾನೆ. ಕೇಳುವ ಕಿವಿಗಳಿಲ್ಲ ಇಲ್ಲಿ, ಮತ್ತೆ ಸಂಗೀತವಾದರೂ ಏತಕ್ಕೆ? ಕಾಣುವ ಕಣ್ಣುಗಳಿಲ್ಲ ಇಲ್ಲಿ, ಮತ್ತೆ ದೀಪದ ಬೆಳಕಾದರೂ ಏತಕ್ಕೆ? ಈತ ಪ್ರತಿದಿನವೂ ಆಕೆಯ ನೆನಪಲ್ಲೇ ಕೊರಗುತ್ತಾನೆ. ಕೈಗಳಲ್ಲಿ ಮದ್ಯದ ಬಟ್ಟಲು ಹಿಡಿದುಕೊಂಡು ಆ ಮಧುರ ವಿಷಕ್ಕೆ ಆಕರ್ಷಿತ ನಾಗಿದ್ದಾನೆ. ಸಂಗೀತದ ಸ್ವರ ಲಯ ತಾಳಗಳನ್ನು ಮರೆತುಬಿಟ್ಟಿದ್ದಾನೆ. ಅಭಿಮಾನಿಗಳ ಪತ್ರಗಳನ್ನು ಹರಿದು ಚೂರುಚೂರು ಮಾಡಿ ಕಡಲ ತೀರಕ್ಕೆಸೆಯುತ್ತಾನೆ. ಅಲ್ಲೂ ಅವನಿಗೆ ಅವಳ ಹೆಜ್ಜೆಗಳ ಹುಡುಕಾಟ. ಮೋಹನ ರಾಗ ಹಾಡಬೇಕಾದ ಸಮಯ ದಲ್ಲೂ ಸಿಂಧು ಭೈರವಿ ರಾಗದಲ್ಲೇ ಪ್ರಲಾಪಿಸುತ್ತಾನೆ.

ವಿಧಿಯ ತೂಗುಯ್ಯಾಲೆಯಲ್ಲಿ ಓಲಾಡುತ್ತಿರುತ್ತಾನೆ. ಖ್ಯಾತಿಯೆಲ್ಲವನ್ನೂ ಮದ್ಯದ ನಶೆಯಿಂದಾಗಿ ಕಳೆದುಕೊಂಡಿದ್ದಾನೆ. ವೇದಿಕೆಯ ಮೇಲೆ ಅವನ ಕೊರಳಿಗೆ ಹಾಕುತ್ತಿದ್ದ ಹೂಮಾಲೆಗಳೆಲ್ಲ ಈಗ ಬೀದಿಪಾಲಾಗಿವೆ. ಇನ್ನು ಮದ್ಯ ಸೇವಿಸುವುದಿಲ್ಲ ಎಂದು ನಿನ್ನೆಯಷ್ಟೇ ಶಪಥ ಮಾಡಿದ್ದ; ಖಾಲಿ ಬಟ್ಟಲನ್ನೂ ಬಿಸಾಡಿಬಿಟ್ಟಿದ್ದ; ಆದರೆ ಇಂದು ಮತ್ತೆ ಅವಳ ನೆನಪಾಗಿ ಶಪಥ ವನ್ನು ಮುರಿದಿದ್ದಾನೆ. ಗಾನಕೋಗಿಲೆ ಎಂದು ಒಂದು ಕಾಲದಲ್ಲಿ ಬಿರುದು ಪಡೆದಾತ ಈಗ ಹೊರಡಿಸುತ್ತಿರುವ ಸ್ವರಗಳು ಬರೀ ಕೆಮ್ಮು ಗೂರಲಿನವು. ಸುತ್ತಲಿನ ಜನರ ಇರುವನ್ನೇ ಮರೆತುಬಿಟ್ಟಿದ್ದಾನೆ.

ನಶೆಯ ಬೆನ್ನುಹತ್ತಿ ತನ್ನ ಗೌರವವನ್ನು ತಾನೇ ಹಾಳು ಮಾಡಿಕೊಂಡಿದ್ದಾನೆ. ಅವನದೇ ಮುಖ ಹೇಗಿದೆಯೆಂದು ಅವನಿಗೆ ಗೊತ್ತಿದೆಯೋ ಇಲ್ಲವೋ. ಅವನು ತಂದಿರುವ ಹೂಮಾಲೆಯನ್ನು ಧರಿಸುವ ಕೊರಳಿಲ್ಲ ಇಲ್ಲಿ. ಅಷ್ಟಾಗಿ ಅದರಲ್ಲಿ ಹೂವುಗಳೇ ಇಲ್ಲವಲ್ಲ!’ ಈಗ, ಸಿಂಧು ಭೈರವಿ ಸಂಗೀತಕಲಾವಿದನ ಅಧಃಪತನ ಮತ್ತು ಮದ್ಯದ ನಶೆಗಳನ್ನೆಲ್ಲ ಬದಿಗಿಟ್ಟು, ‘ಪೂಮಾಲೈ ವಾಂಗಿ ವಂದಾನ್ ಪೂಕ್ಕಳ್ ಇಲ್ಲೈಯೇ…’ ಸಾಲಿನ ಸೋದಾಹರಣ ವ್ಯಾಖ್ಯಾನಕ್ಕಿಳಿಯೋಣ.

ಇನ್ನು ಮುಂದಿನದು ಮೇಲಿನಂತೆ ವಿಷಾದಕರ ಗಂಭೀರ ಚಿಂತನೆ ಅಲ್ಲ. ‘ಹೂಮಾಲೆಯಲ್ಲಿ ಹೂವುಗಳೇ ಇಲ್ಲ!’ ರೀತಿಯ ತಮಾಷೆ ಪ್ರಸಂಗಗಳು, ಪೇಚಾಟಗಳು, ಸ್ವಾರಸ್ಯಕರ ಸಂಗತಿಗಳು ಹೇಗೆ ನಮಗೆ ಆಗಾಗ ಎದುರಾಗುತ್ತವೆ ಅಂತ ಒಂದು ಪಕ್ಷಿನೋಟ. ಬಹುಶಃ ‘ಶಿವಪೂಜೆಯಲ್ಲಿ ಕರಡಿಗೆ ಬಿಟ್ಟಹಾಗೆ’ ಸನ್ನಿವೇಶಗಳೆಲ್ಲ ಇದೇ ರೀತಿಯವು. ಶಿವಪೂಜೆಗೆ ಮುಖ್ಯವಾಗಿ ಬೇಕಾಗಿರುವುದು
ಶಿವಲಿಂಗ. ಅದನ್ನು ಕರಡಿಗೆಯೆಂಬ ಪುಟ್ಟ ಪೆಟ್ಟಿಗೆಯಲ್ಲಿ ಇಟ್ಟು ಆ ಕರಡಿಗೆಯನ್ನು ಶಿವದಾರದಿಂದ ಪೋಣಿಸಿ ಸದಾಕಾಲ
ಕೊರಳಲ್ಲಿ ಧರಿಸುತ್ತಾರೆ.

ಶರಣರು ಶಿವಪೂಜೆ ಮಾಡಬೇಕೆಂದಾಗಲೆಲ್ಲ, ತಮ್ಮ ಕೊರಳಲ್ಲಿಯೇ ಇರುವ ಕರಡಿಗೆಯಿಂದ ಶಿವಲಿಂಗವನ್ನು ತೆಗೆದು ಪೂಜೆ ಮಾಡಿಕೊಳ್ಳುತ್ತಾರೆ. ಒಂದು ವೇಳೆ ಶಿವಲಿಂಗವಿರುವ ಕರಡಿಗೆಯನ್ನೇ ಎಲ್ಲೋ ಮರೆತು ಬಿಟ್ಟುಬಂದರೆ? ಹೂಮಾಲೆಯಲ್ಲಿ ಹೂವುಗಳಿಲ್ಲದೆ ಬರೀ ದಾರ ಇದ್ದ ಹಾಗೇ ಆಗುತ್ತದೆ. ಶಿವದಾರಕ್ಕೆ ಪೋಣಿಸಿದ ಕರಡಿಗೆ ಇಲ್ಲದೆ ಬರೀ ಶಿವದಾರ ಆಗುತ್ತದೆ. ಶಿವಪೂಜೆಯಲ್ಲಿ ಕರಡಿಗೆಯಲ್ಲಿರುವ ಲಿಂಗವೇ ಪ್ರಮುಖ. ಲಿಂಗವಿರುವ ಕರಡಿಗೆಯಿಲ್ಲದೆ ಶಿವಪೂಜೆ ಪೂರ್ಣವಾಗುವುದಿಲ್ಲ, ವ್ಯರ್ಥ, ಅದು ಶಿವಪೂಜೆಯೇ ಅಲ್ಲ.

ಈ ನುಡಿಗಟ್ಟನ್ನು ಹಲವರು ‘ಶಿವಪೂಜೆಯಲ್ಲಿ ಕರಡಿ ಬಿಟ್ಟಹಾಗೆ’ ಎಂದು ತಪ್ಪಾಗಿ ಅರ್ಥೈಸಿರುವುದು ಬೇರೆಯದೇ ಒಂದು
ವೈಚಿತ್ರ್ಯ. ಅಂತೂ ಶಿವಪೂಜೆಯಲ್ಲಿ ಕರಡಿಗೆ ಬಿಟ್ಟಹಾಗೆ ಅಂದರೆ ಮುಖ್ಯವಾದ್ದನ್ನೇ ಮರೆತ ಹಾಗೆ. ಬೇರೆ ಕೆಲವು ಗಾದೆ ನುಡಿಗಟ್ಟುಗಳಲ್ಲೂ ಇಂಥದ್ದೇ ಅರ್ಥ ಧ್ವನಿ ಹೊರಹೊಮ್ಮುವುದಿದೆ. ‘ಹೆಸರು ಕ್ಷೀರಸಾಗರ ಭಟ್ಟ, ಮನೆಯಲ್ಲಿ ಮಜ್ಜಿಗೆ ನೀರಿಗೂ ತತ್ವಾರ’ ಅಂತೊಂದು ಗಾದೆಯನ್ನು ನೀವು ಕೇಳಿರಬಹುದು. ‘ಹೆಸರಿಗೆ ಹೊನ್ನ ಹೆಗ್ಗಡೆ, ಎಸರಿಗೆ ಅಕ್ಕಿ ಇಲ್ಲ’ ಗಾದೆ ಸಹ ಅದೇ ರೀತಿಯದು. ಅಕ್ಕಿ ಎಂದಾಗ ನೆನಪಾಗುತ್ತದೆ, ಅಕ್ಕಿ ಬಳಸದೆ ರವೆಯಿಂದ ಮಾಡಿದ ಸಿಹಿತಿಂಡಿಯನ್ನು ಬೆಂಗಳೂರಿಗರು ‘ಕೇಸರಿಭಾತ್’ ಅಂತಾರಷ್ಟೆ? ಭಾತ್ ಅಂದರೆ ಅನ್ನ, ಅಕ್ಕಿಯಿಂದ ಮಾಡಿದ್ದು.

ಇದು ಭಾತ್ ಇಲ್ಲದ ಕೇಸರಿಭಾತ್! ಒಮ್ಮೆ ನಾನು ಬೆಂಗಳೂರಿಗರೊಬ್ಬರನ್ನು ಹಾಗೆ ಕೆಣಕಿದ್ದಕ್ಕೆ ಅವರೂ ಸ್ಮಾರ್ಟ್‌ನೆಸ್ ಉಪಯೋಗಿಸಿ ಹೀಗೆ ಉತ್ತರಿಸಿದ್ದರು: ನಮ್ಮ ಕೇಸರಿಭಾತ್‌ನಲ್ಲಿ ಭಾತ್(ಅನ್ನ) ಇರುವುದಿಲ್ಲ ನಿಜ. ಆದರೆ ಅದಕ್ಕೆ ಕಾಂಪೆನ್ಸೇಷನ್ ಎಂಬಂತೆ ನಮ್ಮ ‘ರೈಸ್ ಭಾತ್’ನಲ್ಲಿ ಎರಡೆರಡು ಸಲ ಅನ್ನ ಇದೆ. ಅಲ್ಲಿಗೆ ಬ್ಯಾಲೆನ್ಸ್ ಆಯ್ತಲ್ಲ? ಅವರ ತರ್ಕವನ್ನು ನಾನು ಒಪ್ಪಲೇಬೇಕಾಯಿತು. ವಾಂಗಿಭಾತ್‌ನದೂ ಅದೇ ಕಥೆ. ಅದರಲ್ಲಿ ಭಾತ್ ಏನೋ ಇದೆ, ಆದರೆ ವಾಂಗಿ ಅಂದರೆ ಬದನೆಕಾಯಿ ಇದ್ದೇಇರುತ್ತೆ ಎಂದು ಹೇಳಲಿಕ್ಕಾಗುವುದಿಲ್ಲ.

ಬದನೆಕಾಯಿ ಸೇರೋದಿಲ್ಲವೆಂಬ ಕಾರಣಕ್ಕೆ ಕೆಲವರು ಚವಳಿಕಾಯಿ, ಹೂಕೋಸು, ಬ್ರೋಕೊಲಿ (ಹಸುರುಕೋಸು), ದಪ್ಪ ಮೆಣಸಿನ ಕಾಯಿ ಮುಂತಾದುವುಗಳ ಪೈಕಿ ಯಾವುದಾದರೂ ತರಕಾರಿ ಬಳಸಿ ಮಾಡುತ್ತಾರೆ, ಆದರೂ ವಾಂಗಿಭಾತ್ ಎಂದೇ ಹೇಳುತ್ತಾರೆ! ಹೂಮಾಲೆಯಲ್ಲಿ ಹೂವು ಗಳಿಲ್ಲದ ಹಾಗೆ. ಖಾದ್ಯಪದಾರ್ಥಗಳಿಗೆ ಸಂಬಂಧಿಸಿದಂತೆಯೇ ಇನ್ನೊಂದು ಮಜಾ ಅಂದರೆ ‘ಲೆಮನ್ ಜ್ಯೂಸ್ – ಮೇಡ್ ವಿದ್ ಆರ್ಟಿಫಿಷಿಯಲ್ ಫ್ಲೇವರ್ಸ್’ ಅಂತ ಒಂದೆಡೆ, ‘ಪಾತ್ರೆ ತೊಳೆಯುವ ಡಿಟರ್ಜೆಂಟ್ ಲಿಕ್ವಿಡ್‌ನಲ್ಲಿ ನಿಜವಾದ ನಿಂಬೆಹಣ್ಣು ಬಳಕೆಯಾಗಿದೆ’ ಅಂತ ಇನ್ನೊಂದೆಡೆ!

ಯಾವುದು ಎಲ್ಲಿ ಇರಬೇಕೋ ಅಲ್ಲಿ ಇಲ್ಲ. ಏನು ಮಾಯವೋ ಏನು ಮರ್ಮವೋ. ಜೇನುತುಪ್ಪದಲ್ಲಿ ಜೇನೇ ಇರುವುದಿಲ್ಲ, ಚೀನಾದಿಂದ ಆಮದು ಮಾಡಿದ ಸಿರಪ್ ಇರುತ್ತದೆ ಅನ್ನೋದು ನಿನ್ನೆಮೊನ್ನೆ ಬಂದಿರುವ ತಾಜಾ ಸುದ್ದಿ. ಬಾಬಾ ರಾಮ್‌ದೇವ್‌ನ ಪತಂಜಲಿ ಬ್ರಾಂಡ್ ಜೇನುತುಪ್ಪವೂ ಕಲಬೆರಕೆಯದೇ ಅಂತೆ. ‘ಸಾವಿರ ಕೆರೆಗಳ ಸುಂದರ ನಾಡು’ ಎಂಬ ಪ್ರಖ್ಯಾತಿ ಯಾವ
ನಗರಕ್ಕೆ ಇದ್ದದ್ದು ಗೊತ್ತೇ? ಟಿಪ್ಪು ಸುಲ್ತಾನನ ವಿರುದ್ಧ ರಣತಂತ್ರ ರೂಪಿಸುವ ಸಲುವಾಗಿ ಬೇಕಾದ ಮಾಹಿತಿಯನ್ನು ಸಂಗ್ರಹಿ ಸಲಿಕ್ಕೆ ಬ್ರಿಟಿಷ್ ದಂಡನಾಯಕ ಮತ್ತು ಆಗ ಭಾರತದ ಗವರ್ನರ್ – ಜನರಲ್ ಆಗಿದ್ದ ಲಾರ್ಡ್ ಕಾರ್ನ್‌ವಾಲಿಸ್ 1791ರಲ್ಲಿ
ಮದ್ರಾಸ್‌ನಿಂದ ದೂತರ ತಂಡವೊಂದನ್ನು ಬೆಂಗಳೂರಿಗೆ ಕಳುಹಿಸಿದ್ದನಂತೆ.

ಬೆಂಗಳೂರಿನ ಸೌಂದರ್ಯವನ್ನು ಕಂಡ ಆ ದೂತರು ‘ಸಾವಿರ ಕೆರೆಗಳ ಸುಂದರ ನಾಡು’ ಎಂದು ವರದಿಯಲ್ಲಿ ಬಣ್ಣಿಸಿದ್ದರಂತೆ. ಈಗೇನಾದರೂ ಆ ದೂತರ ವಂಶಸ್ಥರು ಬೆಂಗಳೂರಿಗೆ ಬಂದು ನೋಡಿದರೆ ಎಷ್ಟು ಕೆರೆಗಳನ್ನು ಕಂಡಾರು? ಹಾಗಂತ, ಇನ್ನೊಂದು ರೀತಿಯಲ್ಲಿ ಗಮನಿಸಿದರೆ, ಪಳೆಯುಳಿಕೆಗಳು ಹೂವುಗಳಿಲ್ಲದ ಹೂಮಾಲೆಯಂತೆ ಬೆಂಗಳೂರಿನಲ್ಲಿ ಬೇಕಾದಷ್ಟು ಸಿಗುತ್ತವೆ. ಶತಮಾನಗಳ ಹಿಂದಿನ ವಿಚಾರ ಬೇಡ, ನಮ್ಮದೇ ಕಾಲದ ಮೆಜೆಸ್ಟಿಕ್, ಸಾಗರ್, ಶಿವಾನಂದ ಮುಂತಾಗಿ ಚಿತ್ರಮಂದಿರಗಳಿಂದಾಗಿ ಹೆಸರಾದ ಪ್ರದೇಶಗಳು ಈಗ ಆ ಚಿತ್ರಮಂದಿರಗಳು ಇಲ್ಲದೆಯೂ ಅದೇ ಹೆಸರನ್ನು ಉಳಿಸಿಕೊಂಡಿಲ್ಲವೆ? ಸೀಸ ಬಳಸದೆ ಗ್ರಾಫೈಟ್ (ಇಂಗಾಲ)ದಿಂದ ಮಾಡಿದ್ದರೂ ಪೆನ್ಸಿಲ್‌ಗೆ ಅಚ್ಚಕನ್ನಡದಲ್ಲಿ ಇನ್ನೂ ‘ಸೀಸದ ಕಡ್ಡಿ’ ಎಂಬ ಪದವೇ ಇದೆಯಲ್ಲ, ಹಾಗೆ.

ಜರ್ಮನಿಯಲ್ಲಿ ಹೆಂಡಕುಡುಕರ ಹಬ್ಬದ ‘ಅಕ್ಟೋಬರ್‌ಫೆಸ್ಟ್’ ಎಂಬ ಹೆಸರು ಕೂಡ ಅದೇ ರೀತಿ. ಹಬ್ಬ ನಡೆಯುವುದು ಬಹುತೇಕ ಸಪ್ಟೆಂಬರ್ ತಿಂಗಳಲ್ಲಿ, ಆದರೂ ‘ಅಕ್ಟೋಬರ್‌ಫೆಸ್ಟ್’ ಎಂದು ಹೆಸರು. ಇದಕ್ಕೆ ಕಾರಣ, ಅಕ್ಟೋಬರ್ ತಿಂಗಳ ಮೊದಲ ಭಾನು ವಾರ ಆ ಹಬ್ಬದ ಕೊನೆ ಎಂದು ನಿಗದಿಯಾಗಿರುತ್ತದೆ. ಆವತ್ತು ಕೊನೆ ಆಗಲೇಬೇಕು. ಅಕ್ಟೋಬರ್ ಒಂದನೆಯ ತಾರೀಕು ಭಾನುವಾರದಂದು ಬಂದರಂತೂ ಇಡೀ ‘ಅಕ್ಟೋಬರ್ ಫೆಸ್ಟ್’ ಸಪ್ಟೆಂಬರ್‌ನಲ್ಲೇ ನಡೆದಿರುತ್ತದೆ! ಅಮೆರಿಕದಲ್ಲಿ ‘ಡ್ರೈವ್‌ವೇ ಯಲ್ಲಿ ಕಾರು ಡ್ರೈವ್ ಮಾಡುವುದಿಲ್ಲ ಪಾರ್ಕ್ ಮಾಡುತ್ತೇವೆ; ಪಾರ್ಕ್‌ವೇಯಲ್ಲಿ ಕಾರು ಪಾರ್ಕ್ ಮಾಡುವುದಿಲ್ಲ, ಡ್ರೈವ್ ಮಾಡುತ್ತೇವೆ’ ಸಹ ಅಂಥದ್ದೇ.

ಮತ್ತೆ ಇಲ್ಲಿಯ ಗ್ರೀನ್‌ಕಾರ್ಡ್ ಅಥವಾ ಪಚ್ಚೆಪರವಾನಗಿ ಪಚ್ಚೆ ಬಣ್ಣದ್ದಿರುವುದಿಲ್ಲ ಎಂದು ಗೊತ್ತಿರಲಿ. ಪಿಂಕ್ ಸ್ಲಿಪ್ ಗುಲಾಬಿ
ಬಣ್ಣದ್ದಿರುವುದಿಲ್ಲ ಮತ್ತು ವಿಮಾನದ ಬ್ಲ್ಯಾಕ್ ಬಾಕ್ಸ್ ಕಪ್ಪು ಬಣ್ಣದ್ದಿರುವುದಿಲ್ಲ ಎಂದು ಬಹುಶಃ ಈಗಾಗಲೇ ನೀವು ನೆನಪಿಸಿ ಕೊಂಡಿರಿ. ಇವೆಲ್ಲವೂ ಒಂದು ರೀತಿಯಲ್ಲಿ ಹೂವುಗಳಿಲ್ಲದ ಹೂಮಾಲೆಗಳೇ. ‘ನಾಟಕದ ಮುಖ್ಯ ಪಾತ್ರಧಾರಿಯೇ ಬಂದಿಲ್ಲ, ನಾಟಕ ಹೇಗೆ ಆಡುವುದು?’ ಎಂಬಂಥ ಸನ್ನಿವೇಶಗಳು ಬರುತ್ತವೆ ನೋಡಿ, ಅವುಗಳನ್ನೂ ಈ ಪಟ್ಟಿಗೆ ಸೇರಿಸಬಹುದು. ಅಂಥ ದೊಂದು ಸನ್ನಿವೇಶ ಇಲ್ಲಿದೆ: ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿರುವ ಪುಟ್ಟ ಹಳ್ಳಿ ಕಾಮಾರಪುರ. ಅಂದು ಶಿವರಾತ್ರಿ ಜಾಗರಣೆಗೆಂದು ಹಳ್ಳಿಯ ಜನರೆಲ್ಲ ಸೇರಿದ್ದರು.

ನಾಟಕವಾಡಲು ಒಂದು ಒಳ್ಳೆಯ ನಾಟಕ ತಂಡವನ್ನೂ ಕರೆಸಿದ್ದರು. ಆದರೆ ಮುಖ್ಯ ಪಾತ್ರಧಾರಿಯೇ ಕಾಯಿಲೆ  ಬಿದ್ದಿದ್ದನಾದ್ದ ರಿಂದ ನಾಟಕ ನಡೆಸಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಒದಗಿತು. ಆಗ ಹಳ್ಳಿಯ ಜನರೇ ಒಂದು ಉಪಾಯ ಹುಡುಕಿದರು. ಅದೇನೆಂದರೆ ಶಿವನ ಪಾತ್ರಧಾರಿಯಾಗಲು ತಮ್ಮ ಹಳ್ಳಿಯಲ್ಲೇ ಒಬ್ಬ ವ್ಯಕ್ತಿಯನ್ನು ಹುಡುಕುವುದು. ಈಗಾಗಲೇ ತನ್ನ ಸ್ನೇಹಿತ ರನ್ನು ಕಟ್ಟಿಕೊಂಡು ಊರ ಬಳಿಯ ಮಾವಿನ ತೋಟದಲ್ಲಿ ತಾನೇ ರಚಿಸಿದ ಪೌರಾಣಿಕ ನಾಟಕಗಳನ್ನು ಆಡುತ್ತಿದ್ದ ಒಬ್ಬ ಬಾಲಕ ಆ ಊರಿನಲ್ಲಿದ್ದ. ಅವನಿಗೇ ಶಿವನ ವೇಷ ಹಾಕಿಸುವುದು ಎಂದು ತೀರ್ಮಾನಿಸಿ ಆ ಬಾಲಕನನ್ನು ಒಪ್ಪಿಸಿಯೂಬಿಟ್ಟರು.

ನಾಟಕ ಆರಂಭವಾಯಿತು. ಕೊನೆಗೆ ಶಿವನ ಪಾತ್ರಧಾರಿಯ ಪ್ರವೇಶವೂ ಆಯಿತು. ಆದರೆ ರಂಗದ ಮೇಲೆ ಶಿವನ ವೇಷ ಧರಿಸಿದ ಬಾಲಕ ಆ ಪಾತ್ರದ ಭಾವದಲ್ಲಿ ಎಷ್ಟೊಂದು ಮುಳುಗಿಹೋದ ಎಂದರೆ ಅವನು ನಿಜವಾಗಿಯೂ ಧ್ಯಾನಸ್ಥನಾಗಿಯೇ ಬಿಟ್ಟ. ಅವನಿಗೆ ಬಾಹ್ಯಪ್ರಜ್ಞೆ ಹೊರಟು ಹೋಯಿತು. ಜನರೆಲ್ಲ ಹೌಹಾರಿ ನಾಟಕ ನಿಲ್ಲಿಸಿದರಾದರೂ ಅವರಿಗೆಲ್ಲ ಸಾಕ್ಷಾತ್ ಶಿವನನ್ನೇ ಕಂಡ ಅನುಭವವಾಯಿತು. ಆ ಬಾಲಕ ಯಾರು ಗೊತ್ತೇ? ಆಗ ಗದಾಧರ ಎಂದು ಹೆಸರಿತ್ತು ಆತನದು.

ಮುಂದೆ ಆತನೇ ಶ್ರೀರಾಮಕೃಷ್ಣ ಪರಮಹಂಸ! ಕಾಮಾರಪುರದ ಜನರಿಗೇನೋ ನಾಟಕಕ್ಕೆ ಬದಲಿ ಪಾತ್ರಧಾರಿಯಾಗಿ ಗದಾಧರ ಸಿಕ್ಕಿದ್ದ. ಆದರೆ 1775ರಲ್ಲಿ ಬ್ರಿಟನ್ ನಲ್ಲಿ ಒಂದು ಊರಿನಲ್ಲಿ ಶೇಕ್ಸ್‌ಪಿಯರ್‌ನ ಪ್ರಖ್ಯಾತ ‘ಹ್ಯಾಮ್ಲೆಟ್’ ದುರಂತ ನಾಟಕವನ್ನು ಆಡಲಿದ್ದ ತಂಡ ಆ ಊರಿಗೆ ಬಂದು ಡೇರೆ ಹೂಡಿದಾಗ, ನಾಟಕದ ಮುಖ್ಯ ಪಾತ್ರ- ಹ್ಯಾಮ್ಲೆಟ್ ದ ಪ್ರಿನ್ಸ್ ಆಫ್ ಡೆನ್ಮಾರ್ಕ್ – ಅದನ್ನು ನಿರ್ವಹಿಸಲಿದ್ದ ಪಾತ್ರಧಾರಿ ಕಾಣೆಯಾಗಿದ್ದ. ಆಮೇಲೆ ಗೊತ್ತಾಯಿತು ಆತ ವಸತಿಗೃಹವೊಂದರ ಯಜಮಾನನ ಮಗಳನ್ನು ಒಲಿಸಿಕೊಂಡು ಅವಳೊಂದಿಗೆ ಪರಾರಿಯಾಗಿದ್ದ!

ಆದರೆ ಏನು ಮಾಡುವುದು,  ನಾಟಕ ಪ್ರದರ್ಶನ ಇದೆಯೆಂದು ಊರಿಡೀ ಪ್ರಚಾರ ಮಾಡಿ ಆಗಿದೆ. ದೂರದೂರದಿಂದ ಪ್ರೇಕ್ಷಕರು ಬಂದು ಒಟ್ಟುಸೇರಿದ್ದಾರೆ. ನಾಟಕ ಆರಂಭವಾಯಿತು. ನಾಟಕದ ಬೇರೆ ಪಾತ್ರಧಾರಿಗಳೆಲ್ಲ ರಂಗದ ಮೇಲೆ ಬಂದು ಪ್ರೇಕ್ಷಕರಲ್ಲಿ ಬೇಡಿಕೊಂಡರಂತೆ: ‘ಈದಿನ ನಾವು ಹ್ಯಾಮ್ಲೆಟ್ ಇಲ್ಲದೆಯೇ ಹ್ಯಾಮ್ಲೆಟ್ ನಾಟಕವನ್ನು ಆಡಲಿದ್ದೇವೆ. ಅಂಥದೊಂದು ಅನಿವಾರ್ಯ ಪರಿಸ್ಥಿತಿ ಬಂದಿದೆ.

ನಿಮ್ಮ ಸಹಕಾರವನ್ನು ಕೋರುತ್ತೇವೆ. ಹ್ಯಾಮ್ಲೆಟ್ ಇಲ್ಲದ ಹ್ಯಾಮ್ಲೆಟ್ ನಾಟಕ ನಿಮಗೆ ಇಷ್ಟವಾಗುತ್ತದೆ ಎಂದುಕೊಳ್ಳುತ್ತೇವೆ.’
ಬಿನ್ನಹ ಆದಮೇಲೆ ಹಾಗೆಯೇ ನಾಟಕವನ್ನು ಆಡಿತೋರಿಸಿದ ರಂತೆ. ಪ್ರೇಕ್ಷಕರಿಗೆ ಇಷ್ಟವಾಯ್ತೋ ಇಲ್ಲವೋ ಗೊತ್ತಿಲ್ಲ, ಆದರೆ
Hamlet without the Prince of Denmark ಎಂಬ ನುಡಿಗಟ್ಟು ಇಂಗ್ಲಿಷ್ ಭಾಷೆಗೆ ಸೇರಿಕೊಂಡಿತು. ಪತ್ರಿಕೆಗಳು ಆ ಘಟನೆಯನ್ನು ಅದೇ ಪದಗಳಿಂದ ಬಣ್ಣಿಸಿದವು. ಆಮೇಲೆ ಅಂಥ ಸನ್ನಿವೇಶಗಳನ್ನು ಬಣ್ಣಿಸಲು ಆ ನುಡಿಗಟ್ಟಿನ ಬಳಕೆಯಾಗತೊಡಗಿತು.

ಅಭಿವೃದ್ಧಿಯ ಯಾವೊಂದು ಕುರುಹೂ ಇಲ್ಲದೆ ಸದಾ ಅಭಿವೃದ್ಧಿಯ ಮಂತ್ರವನ್ನೇ ಜಪಿಸುವ ರಾಜಕೀಯ ಪಕ್ಷಗಳು, ಕಂಟಿಂಜೆನ್ಸಿಗಳೇನೂ ಇಲ್ಲದಿದ್ದರೂ ಕಂಟಿಂಜೆಂಟ್ ಫೀ ಎಂದು ಶುಲ್ಕ ವಸೂಲಿ ಮಾಡುವ ಶಿಕ್ಷಣ ಸಂಸ್ಥೆಗಳು, ನಿಜವಾದ
ಪ್ರಗತಿಯ ಯಾವ ಸಾಧ್ಯತೆಯಿದ್ದರೂ ಅದಕ್ಕೆ ಅಡ್ಡಗಾಲು ಹಾಕುತ್ತ ತಮ್ಮನ್ನು ತಾವು ಪ್ರಗತಿಪರರು ಎಂದು ಹೇಳಿಕೊಳ್ಳುವ
ಎಡಬಿಡಂಗಿಗಳು – ಇವರೆಲ್ಲ ‘ಹ್ಯಾಮ್ಲೆಟ್ ವಿದೌಟ್ ದ ಪ್ರಿನ್ಸ್ ಆಫ್ ಡೆನ್ಮಾರ್ಕ್’ ಕೇಸುಗಳೇ. ಅವೆಲ್ಲಕ್ಕಿಂತ ಬೆಸ್ಟ್ ಅಂದರೆ
‘ರಾಷ್ಟ್ರಪಿತ ಮಹಾತ್ಮ ಗಾಂಧಿಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನದಂದು ಪುಷ್ಪನಮನ
ಕಾರ್ಯಕ್ರಮ’ ಎಂದು ತುಮಕೂರಿನ ಜಿಲ್ಲಾ ಕಾಂಗ್ರೆಸ್ ಸಮಿತಿಯ ಜಾಹಿರಾತು ಅಕ್ಟೋಬರ್ 2ರಂದು ಕನ್ನಡ ದಿನಪತ್ರಿಕೆ ಗಳಲ್ಲಿ ಪ್ರಕಟವಾಗಿತ್ತು. ಅದರಲ್ಲಿ ರಾಹುಲ್, ಸೋನಿಯಾ, ಖರ್ಗೆ, ಸಿದ್ರಾಮಯ್ಯ, ಡಿಕೆಶಿ ಸೇರಿದಂತೆ ಒಟ್ಟು 26 ಭಾವಚಿತ್ರಗಳಿದ್ದವು.

ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಚಿತ್ರವೇ ಇಲ್ಲ! ಹೂವುಗಳಿಲ್ಲದ ಹೂಮಾಲೆ ಯಾರಿಗೋ!