Thursday, 26th December 2024

Winter Puffer Jacket Fashion: ಚುಮು ಚುಮು ಚಳಿಯಲ್ಲಿ ಟ್ರೆಂಡಿಯಾದ ವೈವಿಧ್ಯಮಯ ಪಫರ್ ಜಾಕೆಟ್ಸ್!

Winter Puffer Jacket Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ವೈವಿಧ್ಯಮಯ ಪಫರ್ ಜಾಕೆಟ್‌ಗಳು ಈ ಚಳಿಗಾಲದ ಫ್ಯಾಷನ್‌ನ (Winter Puffer Jacket Fashion) ಟಾಪ್ ಲಿಸ್ಟ್‌ಗೆ ಸೇರಿವೆ. ಹೌದು, ಮಲ್ಟಿ ಪಾಕೆಟ್ ಪಫರ್ ಜಾಕೆಟ್, ರಿವರ್ಸಿಬಲ್, ಫರ್ ಮಿಕ್ಸ್ ಪಫರ್ ಜಾಕೆಟ್, ಡೌನ್ ಕ್ವಿಲ್ಟಿಂಗ್ ಪಫರ್ ಜಾಕೆಟ್, ಡಿಟ್ಯಾಚಬಲ್ ಪಫರ್ ಜಾಕೆಟ್ ಹೀಗೆ ನಾನಾ ಬಗೆಯವು ಈ ಚಳಿಗಾಲದಲ್ಲಿ ಫ್ಯಾಷನ್ ಲೋಕದಲ್ಲಿ ರಾರಾಜಿಸುತ್ತಿವೆ.

ಚಿತ್ರಗಳು: ಪಿಕ್ಸೆಲ್

ಯೂನಿಸೆಕ್ಸ್ ಪಫರ್ ಜಾಕೆಟ್ಸ್

ಹುಡುಗ-ಹುಡುಗಿಯರೆಂಬ ಭೇದ-ಭಾವವಿಲ್ಲದೆ, ಇಬ್ಬರೂ ಧರಿಸಬಹುದಾದ ಸಾಕಷ್ಟು ಸಿಂಪಲ್ ಮಾನೋಕ್ರೋಮ್ ಶೇಡ್‌ನ ಡಿಸೈನ್‌ನ ಯೂನಿಸೆಕ್ಸ್ ಡಿಸೈನ್‌ನ ಪಫರ್ ಜಾಕೆಟ್‌ಗಳು ಇಂದು ಹೆಚ್ಚು ಟ್ರೆಂಡಿಯಾಗಿವೆ.

ಬೆಚ್ಚಗಿಡುವ ಪಫರ್ ಜಾಕೆಟ್ಸ್

ಈ ಚಳಿಗಾಲದಲ್ಲಿ ದೇಹದ ತಾಪಮಾನವನ್ನು ಕಾಪಾಡುವ ಈ ಶೈಲಿಯ ಜಾಕೆಟ್‌ಗಳು, ಹೊರಗಿನ ವಾತಾವರಣದಲ್ಲಿನ ಚಳಿಯಿಂದ ಸಂರಕ್ಷಿಸುತ್ತವೆ. ದೇಹವನ್ನು ಬೆಚ್ಚಗಿಡುತ್ತವೆ ಎನ್ನುತ್ತಾರೆ ಯಂಗ್ ಫ್ಯಾಷನಿಸ್ಟಾ ರೀತು. ಅವರ ಪ್ರಕಾರ, ಮೊದಲೆಲ್ಲಾ ಪಫರ್ ಜಾಕೆಟ್ ಎಂದಾಕ್ಷಣ ಅದು ಹುಡುಗರ ಜಾಕೆಟ್ ಎಂದೇ ಬಿಂಬಿಸಲಾಗುತ್ತಿತ್ತು. ಆದರೆ, ಈಗ ಆಗಿಲ್ಲ, ಹುಡುಗಿಯರು ಕೂಡ ಈ ಜಾಕೆಟ್‌ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ.

ಪಫರ್ ಜಾಕೆಟ್ಸ್ ವಿನ್ಯಾಸ

ಯಾವುದೇ ಪಫರ್ ಜಾಕೆಟ್‌ಗಳು ತೆಳುವಾಗಿರುವುದಿಲ್ಲ, ಬದಲಿಗೆ ಧರಿಸಿದಾಗ ಕುಶನ್ ಅನುಭವ ನೀಡುವ ಪಫಿ ಲೇಯರ್ ಹೊಂದಿರುತ್ತವೆ. ಎ ಲೈನ್ ಹಾಗೂ ಸ್ಟ್ರೀಮ್ ಲೈನ್ ಸ್ಟಿಚ್ಚಿಂಗ್ ಹೊಂದಿರುತ್ತವೆ. ಕಾಮನ್ ಆಗಿ ಎಲ್ಲೆಡೆ ದೊರಕುವ ಪಫರ್ ಜಾಕೆಟ್‌ಗಳು ಒಂದೇ ಡಿಸೈನ್ ಹಾಗೂ ಸ್ಟಿಚ್ಚಿಂಗ್ ಟೈಪ್ ಹೊಂದಿರುತ್ತವೆ. ವೂಲ್ ಹಾಗೂ ಲೆದರ್‌ನದ್ದನ್ನು ಹೊರತುಪಡಿಸಿದಲ್ಲಿ, ಉಳಿದೆಲ್ಲವೂ ಹೆಚ್ಚು ಬೆಲೆ ಹೊಂದಿರುವುದಿಲ್ಲ. ಸಿಂಥೆಟಿಕ್ ಫ್ಯಾಬ್ರಿಕ್ ಹೊಂದಿರುವಂತವು ಲೈಟ್‌ವೇಟ್ ಆಗಿರುತ್ತವೆ. ಇನ್ನು, ಹಾರಿಝಾಂಟಲ್ ಹಾಗೂ ವರ್ಟಿಕಲ್ ಎಲೈನ್ ಹಾಗೂ ಸ್ಟ್ರೀಮ್ ಲೈನ್ ಹೊಂದಿರುವ ಪಫರ್ ಜಾಕೆಟ್‌ಗಳು, ಮಿಡಿಯಂ ಹಾಗೂ ಹೆವ್ವಿ ಪರ್ಸನಾಲಿಟಿಗೆ ಹೊಂದುವಂತಹ ಡಿಸೈನ್‌ನಲ್ಲಿ ದೊರಕುತ್ತವೆ ಎನ್ನುತ್ತಾರೆ ಮಾರಾಟಗಾರರು.

ಹುಡುಗರ ಪಫರ್ ಜಾಕೆಟ್ ಕ್ರೇಝ್

ಪಫರ್ ಜಾಕೆಟ್ ಎಂದಾಕ್ಷಣ ಅತಿ ಹೆಚ್ಚು ಅದರತ್ತ ಅಟ್ರಾಕ್ಟ್ ಆಗುವುದು ಹುಡುಗರು. ವೇಸ್ಟ್‌ಲೈನ್ ತನಕ ಇರುವ ಪಫರ್ ಜಾಕೆಟ್‌ಗಳು ಹುಡುಗರಿಗೆ ಅಚ್ಚುಮೆಚ್ಚು. ಅದರಲ್ಲೂ ಎವರ್‌ಗೀನ್ ಕಲರ್ ಎಂದೇ ಬಿಂಬಿತವಾಗುವ ಬ್ಲ್ಯಾಕ್ ಹಾಗೂ ಬ್ರೌನ್ ಪಫರ್ ಜಾಕೆಟ್‌ಗಳು ಎಂದಿನಂತೆ ಬೇಡಿಕೆ ಉಳಿಸಿಕೊಂಡಿವೆ. ಇನ್ನು, ಉಳಿದಂತೆ, ಡೀಪ್ ರೆಡ್, ವೈಟ್, ಬ್ಲ್ಯೂ, ಆರೆಂಜ್ ಹಾಗೂ ಕ್ರೀಮ್ ವರ್ಣದ ಪಫರ್ ಜಾಕೆಟ್‌ಗಳು, ಈ ಸೀಸನ್‌ನಲ್ಲಿ ನಯಾ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ.

ಹುಡುಗಿಯರಿಗೆ ಪಫರ್ ಜಾಕೆಟ್ಸ್

ಸ್ಲಿಮ್ ಹುಡುಗಿಯರಿಗೆ ಪಫರ್ ಜಾಕೆಟ್ ಹೇಳಿ ಮಾಡಿಸಿದ ಲೇಯರ್ ಲುಕ್ ನೀಡುವ ಔಟ್‌ಫಿಟ್ ಎನ್ನಬಹುದು. ಪ್ಲಂಪಿಯಾಗಿರುವವರು ಆದಷ್ಟೂ ಇದರ ಆಯ್ಕೆ ಮಾಡದಿದ್ದರೇ ಉತ್ತಮ. ಧರಿಸಲೇ ಬೇಕೆಂಬ ಆಸೆ ಇರುವವರು, ಆದಷ್ಟೂ ನೀ ಲೆಂತ್ ಇರುವಂತಹ ಲಾಂಗ್ ಪಫರ್ ಜಾಕೆಟ್‌ಗಳನ್ನು ಸೆಲೆಕ್ಟ್ ಮಾಡಬೇಕು.

ಈ ಸುದ್ದಿಯನ್ನೂ ಓದಿ | Geometric Jewel Fashion: ಯುವತಿಯರ ಜ್ಯುವೆಲ್ ಫ್ಯಾಷನ್‌ನಲ್ಲಿ ಜೆಮೆಟ್ರಿಕ್ ಡಿಸೈನ್‌ನ ಫಂಕಿ ಆಭರಣಗಳು!

ಪಫರ್ ಜಾಕೆಟ್ಸ್ ಟಿಪ್ಸ್

  • ಪರ್ಸನಾಲಿಟಿಗೆ ತಕ್ಕಂತೆ ಡಿಸೈನ್ ಆಯ್ಕೆ ಮಾಡಿ.
  • ಟ್ರೆಡಿಷನಲ್ ವೇರ್‌ನೊಂದಿಗೆ ಧರಿಸಬೇಡಿ.
  • ಬೈಕ್ ರೈಡರ್‌ಗಳಿಗೆ ಸಖತ್ತಾಗಿ ಕಾಣಿಸುತ್ತವೆ.
  • ಯೂನಿಸೆಕ್ಸ್ ಪಫರ್ ಜಾಕೆಟ್‌ಗಳನ್ನು ಹುಡುಗ-ಹುಡುಗಿ ಇಬ್ಬರೂ ಧರಿಸಬಹುದು.

(ಲೇಖಕಿ: ಫ್ಯಾಷನ್ ಪತ್ರಕರ್ತೆ)