Saturday, 23rd November 2024

ಮಾಸ್ತಿ ಕಥೆಗಳಿಗೆ ನೂರು ವರ್ಷ

ಕೆ.ಸತ್ಯನಾರಾಯಣ

ಸಣ್ಣ ಕಥೆಗಳಿಂದಲೇ ಮಹಾನ್ ಲೇಖಕರಾಗಿ ಬೆಳೆದವರು ಮಾಸ್ತಿ ವೆಂಕಟೇಶ ಅಯ್ಯಂಗಾರ್. ಅವರ ಕಥೆಗಳನ್ನು ಮತ್ತೆ ಮತ್ತೆ ಓದುವ ಅನುಭವವೇ ವಿಶಿಷ್ಟ. ಕೆ.ಸತ್ಯನಾರಾಯಣ ಅವರು ಕನ್ನಡದ ಪ್ರಮುಖ ಕಥೆಗಾರರು. ಅವರು ಮಾಸ್ತಿ ಯವರ ಕಥೆಗಳನ್ನು ಮತ್ತೆ ಮತ್ತೆ ಓದುತ್ತಾ ಹೇಗೆ ತಾನೂ ಬೆಳೆದೆ, ಹೊಸ ಹೊಸ ಕಥೆಗಳನ್ನುಬರೆದೆ ಎಂದು ಬರೆದು ಕೊಂಡಿದ್ದು, ಆ ಆತ್ಮನಿವೇದನೆಯನ್ನು ಓದುವ ಅನುಭವವೇ ಅನನ್ಯ. ಡಿಸೆಂಬರ್ 12ರಂದು ಕೆ.ಸತ್ಯನಾರಾಯಣ ಅವರ ಹೊಸ ಪುಸ್ತಕ ‘ಮಹಾಕಥನದ ಮಾಸ್ತಿ’ ಬಿಡುಗಡೆಯಾಗಲಿದೆ. ಅದರಲ್ಲಿನ ‘ಓದುಗರೊಡನೆ’ ಬರೆಹವನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ.

1920ರಲ್ಲಿ ಮಾಸ್ತಿಯವರ ಮೊದಲ ಕಥಾ ಸಂಕಲನ ಪ್ರಕಟವಾಯಿತು. ಸಣ್ಣಕತೆಯ ಪ್ರಕಾರವನ್ನು ತನ್ನ ಅಭಿವ್ಯಕ್ತಿ ಮಾಧ್ಯಮ ವನ್ನಾಗಿ ಮಾಡಿಕೊಂಡ ಕನ್ನಡದ ಮುಖ್ಯ ಲೇಖಕರೊಬ್ಬರ ಮೊದಲ ಕಥಾ ಸಂಕಲನ ಪ್ರಕಟವಾದ ನೂರನೆಯ ವರ್ಷವಿದು. ಮಾಸ್ತಿಕತೆಗಳನ್ನು ವಿಸ್ತಾರವಾಗಿ ಓದಿ, ಹೊಸ ಇಪ್ಪತ್ತು ಲೇಖನಗಳನ್ನು ಬರೆದು, ಈಗಾಗಲೇ ಸುಮಾರು ಮೂವತ್ತು ವರ್ಷಗಳಿಂದ ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಲೇಖನಗಳನ್ನು ಸೇರಿಸಿಕೊಂಡು, ಈ ಪುಸ್ತಕವನ್ನು ಪ್ರಕಟಿಸುತ್ತಿರುವುದಕ್ಕೆ ಇದೂ ಒಂದು ಮುಖ್ಯ ಕಾರಣ.

1991ರಲ್ಲಿ ಮಾಸ್ತಿಯವರ ಶತಮಾನೋತ್ಸವ ಸಂದರ್ಭದಲ್ಲಿ ‘ಸಂವಾದ’ ಪ್ರಕಾಶನದವರು ಚಳ್ಳಕೆರೆಯಲ್ಲಿ ಏರ್ಪಡಿಸಿದ್ದ ವಿಚಾರ ಸಂಕಿರಣಕ್ಕಾಗಿ ಮಾಸ್ತಿಯವರ ಎಲ್ಲ ಕತೆಗಳನ್ನು ಒಟ್ಟಾಗಿ ಓದುವ ಸದವಕಾಶ ನನಗೆ ಒದಗಿ ಬಂತು. ಆ ಹೊತ್ತಿಗಾಗಲೇ ನಾನು ಕಾದಂಬರಿ, ಪ್ರಬಂಧ ವಿಮರ್ಶಾ ಸಂಕಲನಗಳನ್ನು ಪ್ರಕಟಿಸಿದ್ದೆ. ಆದರೆ ಮಾಸ್ತಿಯವರ ಕತೆಗಳನ್ನು ಒಟ್ಟಿಗೇ ಓದಿದ ಮೇಲೆ, ನನಗೆ ಗೊತ್ತಿಲ್ಲದಂತೆ ನನ್ನಲ್ಲೇ ಒಂದು ಆಂತರಿಕ ಪರಿವರ್ತನೆಯಾಗಿ ಇದ್ದಕ್ಕಿದ್ದಂತೆ ಸಣ್ಣಕಥೆಗಳನ್ನು ಬರೆಯತೊಗಿದೆ.

ನನ್ನೊಳಗೆ ಅನೇಕ ಕತೆಗಳಿರುವುದು ನನಗೇ ಆಶ್ಚರ್ಯದ ಸಂಗತಿಯಾಗಿತ್ತು. 1992ರ ಅಕ್ಟೋಬರ್ 1993 ಏಪ್ರಿಲ್ ಕಾಲಾವಧಿ ಯಲ್ಲಿ ನನ್ನ ಮೊದಲ ಕಥಾಸಂಕಲನ ‘ನಿಮ್ಮ ಮೊದಲ ಪ್ರೇಮದ ಕಥೆ’ಯ ಎಲ್ಲ ಕತೆಗಳನ್ನು ಬರೆದೆ. ಸಹಜವಾಗಿಯೇ
ಈ ಕತೆಗಳಲ್ಲಿ ಮಾಸ್ತಿಯವರ ಪ್ರಭಾವವಿತ್ತು. ನಿರೂಪಣೆಯ ಹೊಸತನ, ಕಥೆಯ ವಸ್ತುವಿನ ವೈವಿಧ್ಯದಿಂದಾಗಿ ಈ ಸಂಕಲನಕ್ಕೆ
ಓದುಗರು, ವಿಮರ್ಶಕರಿಂದ ಒಳ್ಳೆಯ ವ್ಯಾಪಕ ಪ್ರೋತ್ಸಾಹ ಸಿಕ್ಕಿತು.

ಜತೆಯಲ್ಲೇ, ನವ್ಯ ಚಳವಳಿಯ ನಂತರ ಈ ರೀತಿಯ ಕಥಾ ಮಾದರಿಯನ್ನು ಒಪ್ಪಲು ಸಾಧ್ಯವೇ ಇಲ್ಲ ಎಂಬ ಪ್ರತಿಕ್ರಿಯೆಯೂ ಕೇಳಿ ಬಂತು. ಈ ಪ್ರತಿಕ್ರಿಯೆಗೆ ಸಾಹಿತ್ಯಕವಾಗಿ, ಯಾವುದೇ ರೀತಿಯ ಮೌಲಿಕತೆ ಇರಲಿಲ್ಲ ಏಕೆಂದರೆ, ಯಾವುದೇ ಲೇಖಕ, ಯಾವುದೇ ಕ್ರಮದಲ್ಲಾದರೂ ಬರೆಯಬಹುದು. ಹಾಗೆ ಬರೆದದ್ದರಲ್ಲಿ ಸಾರ್ಥಕವಾದದ್ದು ಇದೆಯೇ ಎಂಬುದು ಮಾತ್ರ ಮುಖ್ಯ ಪ್ರಶ್ನೆ. ನನ್ನ ಪಾಲಿಗೆ ನಾನು ಬರೆಯುತ್ತಾ ಹೋದೆ. ವಿಕ್ಟೋರಿಯಾ ಮಗ ದೇವಲಿಂಗು (1998) ಹಾಗೂ ಹಳೆಯ ಕಾಲದ ಹೊಸ ಕಥೆ (2002) ಸಂಕಲನಗಳು ಪ್ರಕಟವಾಗಿಕೆಗಾರನಾಗಿ ನನಗೆ ಒಂದು ಸ್ಥಾನವನ್ನು ಪ್ರಸಿದ್ಧಿಯನ್ನು ತಂದುಕೊಟ್ಟವು.

ಬೇರೆ ಬೇರೆ ಮನೋಧರ್ಮದ ಸಂಪಾದಕರು- ವಿಮರ್ಶಕರು ಸಂಪಾದಿಸಿದ ಸಂಪುಟಗಳಲ್ಲಿ ನನ್ನ ಕತೆಗಳಿಗೆ ಸ್ಥಾನ ಸಿಗುವುದರ ಜೊತೆಗೆ, ಜಿ.ಎಸ್. ಆಮೂರರಂತಹ ಹಿರಿಯ ವಿಮರ್ಶಕರು, ಶತಮಾನದ ಕನ್ನಡ ಸಣ್ಣ ಕತೆಗಳನ್ನು ಕುರಿತು ಬರೆಯುವಾಗ ನವ್ಯೋತ್ತರ ಕತೆಗಾರರನ್ನು ಚರ್ಚಿಸುತ್ತಾ ನನ್ನ ಬಗ್ಗೆೆಯೂ ವಿವರವಾಗಿ ಬರೆದದ್ದು ನನ್ನ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿತು. ನನ್ನ ಬರವಣಿಗೆಯ ಒಂದು ಸ್ವಭಾವೆಂದರೆ ಒಂದೇ ಪ್ರಕಾರಕ್ಕೆ ತುಂಬಾ ಸಮಯ ಅಂಟಿಕೊಳ್ಳಲು ನನಗೆ ಆಗುವು ದಿಲ್ಲ, ಹಾಗಾಗಿ, ಈ ಕಾಲಾವಧಿಯಲ್ಲಿ ನಾನು ಕಾದಂಬರಿ, ಪ್ರಬಂಧ, ವಿಮರ್ಶೆ, ಪ್ರವಾಸಕಥನಗಳನ್ನು ಬರೆಯುತ್ತಲೇ ಇದ್ದೆ.

ನನ್ನೊಳಗಿರುವ, ನನಗೆ ದಕ್ಕುವ ಎಲ್ಲಾ ಕತೆಗಳನ್ನು ಮಾಸ್ತಿ ಕ್ರಮದಲ್ಲಿ ಬರೆಯುವುದು ಸಾಧ್ಯವಿಲ್ಲವೆಂದು ನನಗೇ ಕ್ರಮೇಣ
ಮನದಟ್ಟಾಯಿತು. ಅಲ್ಲದೆ ಯಾವೊಬ್ಬ ಲೇಖಕನನ್ನು ಎಷ್ಟೇ ಇಷ್ಟಪಟ್ಟರೂ, ನನ್ನ ಅಂತರಂಗದ ಒತ್ತಾಯ, ಮನೋಧರ್ಮ ಕ್ಕನುಗುಣವಾಗಿ ನನ್ನದೇ ಹಾದಿಯನ್ನು ಕೂಡ ರೂಪಿಸಿಕೊಳ್ಳಬೇಕೆನಿಸಿತು. ಆದರೆ ಮಾಸ್ತಿಯವರ ಕತೆಗಳಲ್ಲಿರುವ ಅನುಭವ-
ಪಾತ್ರ ವೈವಿಧ್ಯ, ಇನ್ನೊಬ್ಬರ ಕತೆ, ಅನುಭವವನ್ನು ನಮ್ಮದಾಗಿಸಿಕೊಳ್ಳುವ ಕ್ರಮವನ್ನು ನನ್ನ ಕತೆಗಳ ಅನುಭವಕ್ಕೆ ಆಕೃತಿಗೆ ತಕ್ಕಂತೆ ಹೊಂದಿಸಿಕೊಳ್ಳಬೇಕೆನಿಸಿತು.

ಮುಂದಿನ ಸಂಕಲನಗಳಾದ ನಕ್ಸಲ್ ವರಸೆ (2010), ಹೆಗ್ಗುರುತು (2012), ಚಿತ್ರಗುಪ್ತನ ಕತೆಗಳು (2015), ಅಮೆರಿಕನ್ ಮನೆ (2016), ನಿಜವಾದ ಸೋದರಮಾವ ಅಥವಾ (2018)- ಈ ಸಂಕಲನದ ಕತೆಗಳು ಮತ್ತು ಈ ತನಕದ ಕತೆಗಳು (2006) ಸಂಪುಟದ ಕೊನೆಯ ಭಾಗದ ಕತೆಗಳಲ್ಲೂ ನನ್ನ ಬದಲಾದ ಕಥಾ ರೀತಿಯನ್ನು ಓದುಗರು ಗುರುತಿಸಬಹುದು. ಈಗಲೂ ನಾನು ಮಾಸ್ತಿಕತೆ ಗಳನ್ನು ಮತ್ತೆ ಮತ್ತೆ ಓದುತ್ತಿರುತ್ತೇನೆ. ನನ್ನ ಸಂಪರ್ಕದಲ್ಲಿ ಬರುವ ಬಂಧು- ಮಿತ್ರರೊಡನೆ ಚರ್ಚಿಸುತ್ತಲೇ ಇರುತ್ತೇನೆ. ಇಂತಹ ಚರ್ಚೆ ಮತ್ತೆ ಕತೆಗಳ ಮರು ಓದಿಗೆ ಪ್ರೇರೇಪಿಸುತ್ತದೆ. ಇಲ್ಲಿಯ ಬಹುಪಾಲು ಲೇಖನಗಳು ಅಂತಹ ಮರು ಓದಿನ ಫಲಶ್ರುತಿ.

ಮಾಸ್ತಿ ಸಣ್ಣಕತೆಯ ಪ್ರಕಾರವನ್ನು ಆಯ್ಕೆಮಾಡಿಕೊಂಡೂ ಹೇೆ ಮುಖ್ಯ ಲೇಖಕರಾದರು, ಕನ್ನಡ ಸಂಸ್ಕೃತಿಯ ವಿಶಿಷ್ಟ ಧ್ವನಿ ಯಾದರು ಮತ್ತು ಹಾಗೆಂದು ಗುರುತಿಸುವುದು ವಿಮರ್ಶಕರಿಗೆ ಏಕೆ ಅನಿವಾದ್ಯವಾಯಿತು ಎಂದು ನಾನು ಮತ್ತೆ ಮತ್ತೆ
ಯೋಚಿಸುತ್ತಲೇ ಬಂದಿದ್ದೇನೆ. ಮಾಸ್ತಿಯವರನ್ನು ನಿರಂತರವಾಗಿ ಕೆಲವು ಸಂಗತಿಗಳು ಕಾಡಿವೆ. ಆ ಸಂಗತಿ ವಿದ್ಯಮಾನಗಳಿಗೆ
ಇರುವ ಸಕಲ ಸಾಧ್ಯತೆಗಳನ್ನು ಸಾಕ್ಷಾತ್ಕರಿಸಿಗೊಳಿಸಿಕೊಳ್ಳಲು ಮತ್ತೆ ಮತ್ತೆ ಅವರು ಒಂದೇ ಸಂಗತಿ-ಪರಿಕಲ್ಪನೆಗಳನ್ನು ಕುರಿತು
ಕತೆಗಳನ್ನು ಬರೆಯುತ್ತಲೇ ಹೋಗಿದ್ದಾರೆ.

ಗಂಡು-ಹೆಣ್ಣಿನ ಸಂಬಂಧ, ಕಾಮದ ಆಕರ್ಷಣೆ, ದಾಂಪತ್ಯ, ಕುಟುಂಬದ ಆಯಾಮಗಳು ಇಂತಹ ಒಂದು ಸಂಗತಿ. ಸಾವಿನ ಹೊಸ್ತಿಲಿನಲ್ಲಿ ನಿಂತು ಇಡೀ ಬದುಕನ್ನು ಅವಲೋಕಿಸುವುದು ಕೂಡ ಮಾಸ್ತಿಯವರಿಗೆ ಆಪ್ತವಾದ ಒಂದು ಕ್ರಮ. ನಮ್ಮ ಬದುಕಿನ ಮೇಲೆ ವಸಾಹತುಶಾಹಿಯ ಪ್ರಭಾವ, ಸಾಮಾಜಿಕ, ಚಲನ-ವಲಸೆ, ಪ್ರಭುತ್ವದ ಪ್ರಭಾವ, ಸತ್ಯ-ನ್ಯಾಯದ ಕಲ್ಪನೆ-ಇವು ಕೂಡ ಅವರನ್ನು ನಿರಂತರವಾಗಿ ಕಾಡಿವೆ. ಯಾವುದೇ ವಸ್ತುವಿನ ವಿದ್ಯಮಾನದ ಎಲ್ಲ ಹೊಳಹುಗಳು, ಸಾಧ್ಯತೆಗಳು, ಲೇಖಕನಿಗೆ
ಒಂದೇ ಸಲಕ್ಕೆ ಒಂದೇ ಅಭಿವ್ಯಕ್ತಿಗೆ ಸಿಗುವುದಿಲ್ಲ.

ಮತ್ತೆ ಮತ್ತೆ ಅದೇ ಪ್ರಪಂಚವನ್ನು ಒಳಹೊಕ್ಕು ಕಥಾಶೋಧನೆ ಮಾಡುತ್ತಲೇ ಇರಬೇಕಾಗುತ್ತದೆ. ಮಾಸ್ತಿಯ ಬಹುಪಾಲು ಕಥೆ ಗಳು ಹೀಗೆ ಬರೆಸಿಕೊಂಡ ಮಹಾನ್ ಕಥನದ ಒಂದೊಂದು ಭಾಗವಾಗಿದೆ. ಮಾಸ್ತಿಯವರ ಕಥನವನ್ನು ಹೀಗೆ ಒಂದು ಮಹಾನ್ ಕಥನವೆಂದು ಭಾವಿಸಿ, ಓದಲು ಹೊರಟರೆ ಎಲ್ಲ ಕತೆಗಳ ನಡುವೆ ಇರುವ ಅಂತರ್-ಸಂಬಂಧದ ವಿನ್ಯಾಸ ನಮ್ಮ ಗ್ರಹಿಕೆಗೆ ಬಂದು ಒಂದು ವಿಶಾಲವಾದ ಭೂಪಟ ಮೂಡುತ್ತದೆ. ನನ್ನ ಓದು, ಮರು ಓದು ಮತ್ತು ಇಲ್ಲಿಯ ಲೇಖನಗಳು ಆ ದಿಕ್ಕಿನಲ್ಲಿವೆ. ಈ ರೀತಿಯ ಓದಿನಿಂದಾಗಿ ನನಗೆ ಅವರ ಕತೆಗಳು ಹೆಚ್ಚು ಆಪ್ತವಾದವು.

1980ರ ದಶಕದ ಬೇರೆ ಬೇರೆ ವರ್ಷಗಳಲ್ಲಿ ಮಾಸ್ತಿಯವರನ್ನು ಸಂದರ್ಶಿಸಿದ ಇಬ್ಬರು ಸಾಹಿತ್ಯ ಚಿಂತಕರ ಸಂದರ್ಶನ ಬರಹ ಗಳನ್ನು ಕುರಿತ ವಿಶ್ಲೇಷಣೆ ಕೂಡ ಇಲ್ಲಿದೆ. ಮಾಸ್ತಿಯವರ ನೂರು ಕತೆಗಳ ಪೈಕಿ ಸುಮಾರು 60 ಕತೆಗಳು ಇಲ್ಲಿ ಪರಿಶೀಲನೆಗೆ ಬಂದಿವೆ. ಇನ್ನೂ ಎಷ್ಟೋ ಕತೆಗಳು ಇಲ್ಲಿ ಚರ್ಚಿಸಿರುವ ವಿದ್ಯಮಾನ ಪರಿಕಲ್ಪನೆಗಳನ್ನು ಕುರಿತು ಬರೆದಿರುವಂದ್ದೇ. ಇಲ್ಲಿ ಪರಿಶೀಲಿಸಿರುವ ಕತೆಗಳ ವಿಶ್ಲೇಷಣೆ ಹೇಳುವುದಕ್ಕಿಂತ ಹೊಸದೇನನ್ನು ಅವು ಹೇಳುವುದಿಲ್ಲ ಎಂದು ನನಗನಿಸಿದ್ದರಿಂದ ಅಂತಹ ಕತೆಗಳನ್ನು ಇಲ್ಲಿ ವಿಶ್ಲೇಷಿಸಲು ಹೋಗಿಲ್ಲ.

ಮುಂದಿನ ದಿನಗಳ ವಿಶ್ಲೇಷಕರು ಅಂತಹ ಕತೆಗಳನ್ನು ಹಿಡಿದು ಮಾಸ್ತಿಯ ಮಹಾಕಥನದ ಇನ್ನೊಂದು ಭೂಪಟ ರಚಿಸಬ
ಹುದು. ಈ ರೀತಿಯ ಕತೆಗಳ ಓದು-ಬರವಣಿಗೆ ನನಗೆ ತುಂಬಾ ಸಮಾಧಾನ-ಸಂತೋಷವನ್ನು ಕೊಟ್ಟಿದೆ. ಕತೆಗಾರನಾಗಿ ನನ್ನ
ಸ್ವಭಾವ-ಶಕ್ತಿ-ಮಿತಿಗಳನ್ನು ಅರಿಯಲು ನೆರವಾಗಿದೆ. ಜಗತ್ತಿನ ಮತ್ತು ಕನ್ನಡದ ಮುಖ್ಯ ಕತೆಗಾರರನ್ನು ಹೊಸ ಬೆಳಕಿನಿಂದ
ಕಾಣಲು ಸಾಧ್ಯವಾಗಿದೆ. ಇನ್ನೂ ಮುಖ್ಯವಾಗಿ ಇಲ್ಲಿಯ ಕತೆಗಳ ಓದು ಮಾಸ್ತಿ ಕತೆಗಳನ್ನು ಮತ್ತೆ ಮತ್ತೆ ಮತ್ತು ಇನ್ನಷ್ಟು ಓದುವಂತೆ ಓದುಗರನ್ನು ಪ್ರೇರೇಪಿಸಿದರೆ ನನಗೆ ತುಂಬಾ ಸಂತೋಷವಾಗುತ್ತದೆ. ಈ ರೀತಿಯ ಓದು ಸಾಹಿತ್ಯಕ ಅಧ್ಯಯನವೇ ಆಗಬೇಕಾಗಿಲ್ಲ, ಬದುಕಿನ ನಿಗೂಢಗಳನ್ನು ಅರ್ಥ ಮಾಡಿಕೊಳ್ಳಲು, ನಮ್ಮ ಮನಸ್ಸು ಮಾಗಲು, ನಮ್ಮಲ್ಲಿ ವಿನಯ ಮೂಡಲು ಮಾಸ್ತಿ ಕತೆಗಳ ಓದು ಕನ್ನಡಿಗರಿಗೆ ಅಗತ್ಯ ಎಂದು ನಾನು ಭಾವಿಸಿದ್ದೇನೆ.

ಮಾಸ್ತಿ ಕತೆಗಳ ಬಗ್ಗೆೆ ಓದುಗರ ಉತ್ಸಾಹ ಹೆಚ್ಚಲು ಸ್ವಲ್ಪ ಸ್ವಲ್ಪವೇ ಈ ಬರವಣಿಗೆ ಕೂಡ ಕಾರಣವಾಗುವುದಾದರೂ ನನಗೆ ಸಂತೋಷವೇ. (ಪ್ರತಿಕ್ರಿಯಿಸಿ : viramapost@gmail.com)