Saturday, 23rd November 2024

ಕಾವ್ಯದ ಸೂಕ್ಷ್ಮ ದನಿ

ಡಾ.ಟಿ.ಯಲ್ಲಪ್ಪ

ಕವಿ, ಕಾದಂಬರಿಕಾರ, ಸಾಹಿತ್ಯ ಸಂಘಟಕ ಡಾ. ನಾ. ಮೊಗಸಾಲೆಯವರು ರಚಿಸಿದ ಎಲ್ಲಾ ಕವನಗಳು ಒಂದು ಸಂಪುಟದಲ್ಲಿ ಅಡಕಗೊಂಡು ‘ನೀಲ ಆಕಾಶ’ (ಈ ತನಕದ ಕವನಗಳು) ಎಂಬ ಹೆಸರಿನಲ್ಲಿ ಈಗ ಪ್ರಕಟಗೊಂಡಿವೆ. ಸುಮಾರು ಆರು ದಶಕಗಳಿಂದಲೂ ಕಾವ್ಯ ರಚನೆಯಲ್ಲಿ ತೊಡಗಿಕೊಂಡಿರುವ ನಾ.ಮೊಗಸಾಲೆಯವರು ಕವನ ಗಳನ್ನು, ಒಂದೇ ಸಂಪುಟದಲ್ಲಿ ಓದುವ ಅನುಭವವೇ ವಿಶಿಷ್ಟ, ಅನನ್ಯ. ಜತೆಗೆ ಈ ಗ್ರಂಥದಲ್ಲಿ ಅಡಕಗೊಳಿಸಿರುವ ಅನುಬಂಧಗಳಲ್ಲಿ ಮೊಗಸಾಲೆಯವರ ಕಾವ್ಯದ ಕುರಿತು ಹಲವು ವಿಮರ್ಶಕರು ಬರೆದ ಲೇಖನಗಳೂ ಇವೆ. ಹಾಗಾಗಿ ಹಿರಿಯ ಕವಿಯೊಬ್ಬರ ಕಾವ್ಯರಚನಾ ಶೈಲಿಯನ್ನು ಅಧ್ಯಯನ ಮಾಡುವ ಅಪೂರ್ವ ಅವಕಾಶ ಸಹ ಇಲ್ಲಿ  ದೊರೆಯು ತ್ತದೆ. 900ಕ್ಕೂ ಹೆಚ್ಚಿನ ಪುಟಗಳ ಈ ಬೃಹತ್ ಕಾವ್ಯ ಸಂಪುಟಕ್ಕೆ 24 ಪುಟಗಳ ಮುನ್ನುಡಿಯನ್ನು ಡಾ.ಟಿ.ಯಲ್ಲಪ್ಪ ಅವರು ಬರೆದಿದ್ದು, ಆ ಮುನ್ನುಡಿಯ ಮೊದಲ ಅಧ್ಯಾಯವನ್ನು ಇಲ್ಲಿ ನೀಡಲಾಗಿದೆ.

ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ನಾ. ಮೊಗಸಾಲೆಯವರು ತಮ್ಮ ವೃತ್ತಿ ಧರ್ಮಕ್ಕೆ ಅನುಗುಣವಾಗಿ ಅದೆಷ್ಟೋ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಪ್ರವೃತ್ತಿಯಿಂದ ಕವಿಯಾಗಿರುವ ಅವರು ಬರೆದಿರುವ ಕವಿತೆಗಳಲ್ಲೂ ಅಪಾರವಾದ ಚಿಕಿತ್ಸಕ ಗುಣವಿದೆ. ವೈದ್ಯವೃತ್ತಿ ಹಾಗೂ ಕಾವ್ಯ ಪ್ರವೃತ್ತಿ ಎರಡೂ ಕೂಡಾ ಸಾಮಾಜಿಕ ಸ್ವಾಸ್ಥ್ಯಕ್ಕೆ ಬೇಕಾದ ಮೂಲ ಅಗತ್ಯಗಳೆ.

1974ರಲ್ಲಿ ಪ್ರಕಟವಾದ ಅವರ ‘ವರ್ತಮಾನದ ಮುಖಗಳು’ ಕವಿತಾ ಸಂಕಲನದಿಂದ ಹಿಡಿದು 2014ರಲ್ಲಿ ಪ್ರಕಟ ಕಂಡ ಅವರ ‘ದೇವರು ಮತ್ತೆ ಮತ್ತೆ’ ಕವಿತಾ ಸಂಕಲನದವರೆಗೆ ಸುಮಾರು ನಾಲ್ಕುವರೆ ದಶಕಗಳಿಗೂ ಮಿಕ್ಕ ಈ ಸುದೀರ್ಘ ಅವಧಿಯಲ್ಲಿ – ಹನ್ನೊಂದು ಕವಿತಾ ಸಂಕಲನ ಗಳನ್ನು ಹಾಗೂ 2003 ರಲ್ಲಿ ಪ್ರಕಟವಾದ ‘ಅರವತ್ತರ ತೇರು’ ಎಂಬ ಸಮಗ್ರ ಕಾವ್ಯದಂತಹ ಸಂಪುಟವನ್ನೂ ಹಾಗೆಯೇ ಪೂರ್ವೋತ್ತರ: 1, 2 ಎಂಬ ಅವರ ಈ ವರೆಗಿನ ಕಾವ್ಯ ಸಂಪುಟಗಳನ್ನು ಹೊರತುಪಡಿಸಿದರೆ – ಈಗ ‘ಸಮಗ್ರ ಕಾವ್ಯ’ ಪ್ರಕಟಣೆ ಸಿದ್ಧವಾಗಿದೆ.

ಈ ನಲವತ್ತೈದು ಐವತ್ತು ವರ್ಷಗಳ ಸುದೀರ್ಘ ಸಾಹಿತ್ಯ ಯಾನದಲ್ಲಿ ಮೊಗಸಾಲೆಯವರು ಕವಿಯಾಗಿ ತಮ್ಮ ಅಸ್ತಿತ್ವವನ್ನು ಸಾರಸ್ವತ ಲೋಕದಲ್ಲಿ ಸ್ಥಾಪಿಸಿ ಕೊಂಡಷ್ಟೇ ಶ್ರದ್ಧೆಯಿಂದ, ಕಥೆಗಾರರಾಗಿ, ಕಾದಂಬರಿಕಾರರಾಗಿ, ‘ಕಾಂತಾವರದ ಕನ್ನಡ ಸಂಘ’ ಹಾಗೂ ‘ಅಲ್ಲಮಪ್ರಭು ಪೀಠ’ಗಳ ಸಂಸ್ಥಾಪಕರಾಗಿ, ಒಬ್ಬ ಸಂಘಟನಾಕಾರನಾಗಿ ತಮ್ಮ ಪ್ರತಿಭೆ ಹಾಗೂ ಸೃಜನಶೀಲತೆಗಳನ್ನು ಧಾರೆ ಎರೆದುಕೊಂಡದ್ದರ ಫಲವಾಗಿ, ಈ ಎಲ್ಲಾ ಕ್ಷೇತ್ರಗಳಲ್ಲೂ ಅವರು ಸಾಕಷ್ಟು ಸಾಧನೆ ಹಾಗೂ ಕೀರ್ತಿ ಸಂಪಾದನೆಯನ್ನು ಮಾಡಿದ್ದರೂ, ಮೊಗಸಾಲೆಯವರ ಸಮಗ್ರ ಪ್ರತಿಭೆಯ ಮೂಲ ಸೆಲೆ ಅತ್ಯಂತ ಪ್ರಜ್ವಲವಾಗಿ ತನ್ನ ಸೂಕ್ಷ್ಮವಾದ ಅಭಿವ್ಯಕ್ತಿಯನ್ನು ಪಡೆದುಕೊಂಡಿರುವುದು ಅವರ ಕಾವ್ಯದಲ್ಲೇ ಎಂಬುದನ್ನು ಅಲ್ಲಗಳೆಯಲಾಗದು.

ಕನ್ನಡ ಸಾರಸ್ವತಲೋಕ ಅವರನ್ನು ಕಾದಂಬರಿಕಾರರಾಗಿ, ಸಂಘಟನಾಕಾರರಾಗಿ ಗುರುತಿಸಿದಷ್ಟು ಅವರ ಕಾವ್ಯಪ್ರತಿೆಯನ್ನು ವಿಮರ್ಶಾಲೋಕವೂ ಗುರುತಿಸುವಲ್ಲಿ ಸೋತಿದೆ. ಕವಿಯ ಒಂದು ಬಾರಿ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಮತ್ತು ಹತ್ತಾರು ಖಾಸಗಿ ಪ್ರಶಸ್ತಿಗಳಿಗೆ ಭಾಜನರಗಿದ್ದರೂ, ಕುವೆಂಪು, ಬೇಂದ್ರೆ, ಕಣವಿ, ಜಿಎಸ್‌ಎಸ್ ಇತ್ಯಾದಿ ಕವಿಗಳು ಕಾವ್ಯ ಪ್ರತಿಪಾದಿಸಿದ ಜೀವಪರತೆ ಸಾಮಾಜಿಕ ಕಳಕಳಿಗಳಿಗೆ ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲದ ಕಾವ್ಯವನ್ನು ಮೊಗಸಾಲೆಯವರು ರಚಿಸಿದ್ದರೂ, ನಮ್ಮಲ್ಲಿರುವ ಪ್ರಾದೇಶಿಕ, ಜಾತಿ ಹಾಗೂ ವಿಶ್ವವಿದ್ಯಾಲಯಗಳ ಅಕಾಡೆಮಿಕ್ ಸೋಗಲಾಡಿತನದ ರಾಜಕಾರಣಗಳಿಂದಾಗಿ ಮೊಗಸಾಲೆಯವರ ಕಾವ್ಯ- ಪಠ್ಯಪುಸ್ತಕಗಳ ಒಳಗೆ ಪ್ರವೇಶ ಪಡೆಯಲಾರದ ಅಸ್ಪಶ್ಯತೆಗೆ ಒಳಗಾದದ್ದು ಕೂಡಾ ಪ್ರತಿಭಾವಂತ ನಾದ ಕವಿಯೊಬ್ಬನನ್ನು ಮೂಲೆಗುಂಪು ಮಾಡಿಬಿಡುವ ನಮ್ಮ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ರಾಜಕಾರಣದ ಬಲಿಪಶುವಿ ನಂತೆ ಮೊಗಸಾಲೆ ಹಾಗೂ ಅವರ ಕಾವ್ಯ ಇರುವುದು ಈ ಕಾಲಮಾನದ ಸಾಹಿತ್ಯ ರಾಜಕಾರಣದ ಅತ್ಯಂತ ದುರಂತ ಸಂಗತಿ
ಎಂದೆನ್ನಿಸದೆ ಇರಲಾಗದು.

ಹಾಗಾಗಿ ಮೊಗಸಾಲೆಯವರ ಮಾನವೀಯ ಅಂತಃಕರಣ ತುಂಬಿದ ಕವಿತೆ ಹೆಚ್ಚು ಜನರನ್ನು ತಲುಪದೆ ಉಳಿದ ಕಾರಣಗಳಲ್ಲಿ ಇದೂ ಒಂದೆನ್ನಿಸುತ್ತದೆ. ನವ್ಯ ಕಾವ್ಯ ತನ್ನ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗಲೇ, ತನ್ನ ಕಾವ್ಯರಚನೆಗೆ ತೊಡಗಿದ ಮೊಗಸಾಲೆಯವರ ಕಾವ್ಯವನ್ನು ಚಳವಳಿಗಳ ಪ್ರಭಾವ ಪ್ರೇರಣೆಗಳ ಹಿನ್ನೆಲೆಯಲ್ಲಿ ಗುರುತಿಸುವ ಪ್ರಯತ್ನವನ್ನೂ ಮಾಡಿರುವುದುಂಟು. ಹಾಗೆ ನೋಡಿದರೆ, ಅವರೇ ಸ್ಪಷ್ಟಪಡಿಸಿರುವ ಹಾಗೆ ಅವರು ಯಾವುದೇ ಚಳವಳಿಗಳ ಸೈದ್ಧಾಂತಿಕ ಬದ್ಧತೆಗಳಿಗೆ ಒಳಗಾಗದೇ ತಮ್ಮದೇ
ಆದ ಒಂದು ವ್ಯಕ್ತಿ ವಿಶಿಷ್ಟವಾದ ಅಭಿವ್ಯಕ್ತಿ ಮಾರ್ಗವನ್ನು ಕಂಡುಕೊಂಡು ಅದರಲ್ಲಿ ಯಶಸ್ವಿಯಾದವರೆಂದು ಅವರ
ಕಾವ್ಯವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದವರಿಗೆ ತಿಳಿಯದೆ ಇರುವ ಸಂಗತಿಯಲ್ಲ.

‘ಕಾವ್ಯ ಪ್ರಕಾರದಲ್ಲಿ ನಾನು, ನವೋದಯಕ್ಕೆ ಮೊದಲು ಅಂಟಿಕೊಂಡು ಆಮೇಲೆ ನವ್ಯಕ್ಕೆ ಜಿಗಿದರೂ, ನನ್ನ ಒಳಗೆ ನವ್ಯದ ತಾಕಲಾಟಕ್ಕಿಂತಲೂ ನವೋದಯ ರೊಮ್ಯಾಂಟಿಕ್ ಸಂವೇದನೆಯೇ ಹೆಚ್ಚು ಒತ್ತು ಕೊಡುತ್ತಿದೆಯೆಂದು ಸುಬ್ರಾಯ ಚೊಕ್ಕಾಡಿ ಯಂತಹ ವಿಮರ್ಶಕರು ವಿಶ್ಲೇಷಿಸಿದ್ದಾರೆ. ನಿಜ ಹೇಳಬೇಕೆಂದ ನಾನು ಯಾವ ಬದ್ಧತೆಗೂ ಒಳಗಾಗದೆ, ಎಲ್ಲ ಸಾಹಿತ್ಯ ಚಳವಳಿ ಗಳಿಗೆ ಹೇಗೋ ಹಾಗೆಯೇ ಚಾರಿತ್ರಿಕ – ಸಾಂಸ್ಕೃತಿಕ ಒತ್ತಡಗಳನ್ನು ಗೌರವಿಸುತ್ತಾ ಬಂದವನು. ಸಾಹಿತ್ಯ ಸಂವೇದನೆಯ ಪರಂಪರೆ ಮತ್ತು ಹೊಸತನದೊಂದಿಗೆ ಸದಾ ನೀರಂತರತೆಯನ್ನು, ಚಲನಶೀಲತೆಯನ್ನು ಕಾಪಾಡಿಕೊಳ್ಳಬೇಕೆಂಬುದೇ ನನ್ನ ನಿಲುವು’ ಎಂಬ ಮಾತುಗಳು ಮೊಗಸಾಲೆಯವರು ಸುಬ್ರಾಯ ಚೊಕ್ಕಾಡಿಯವರ ವಿಮರ್ಶೆಗೆ ಕೊಟ್ಟ ಸ್ಪಷ್ಟಿಕರಣ ಮಾತ್ರವಾಗಿರದೆ ಇವು
ಮೊಗಸಾಲೆಯವರು ತಮ್ಮ ಕಾವ್ಯ ಮಾರ್ಗದ ಬಗ್ಗೆ ಸ್ಪಷ್ಟಪಡಿಸಿರುವ ಸ್ಪಷ್ಟಿಕರಣವೂ ಆಗಿದೆ.

ವಾಚ್ಯದಿಂದ ಧ್ವನಿಪೂರ್ಣತೆಯೆಡೆಗೆ ಈ ನಾಲ್ಕೂವರೆ ದಶಕಗಳ ಸುದೀರ್ಘ ಅವಧಿಯ ಮೊಗಸಾಲೆಯವರ ಕಾವ್ಯದ ಸ್ವರೂಪ ವನ್ನು (ಅದರ ಭೌತಿಕ ಹಾಗೂ ಬೌದ್ಧಿಕ ಆಯಾಮಗಳಿಂದ) ಗಮನಿಸಿದಾಗಲೂ ಅದು ವ್ಯಕ್ತದಿಂದ ಅವ್ಯಕ್ತಕ್ಕೆ, ಸರಳತೆಯಿಂದ – ಸಂಕೀರ್ಣತೆಗೆ, ವಾಚ್ಯದಿಂದ ಧ್ವನಿಪೂರ್ಣತೆಯೆಡೆಗೆ ಸಾಗಿ ಬಂದಿದೆ.

ಅವರ ಮೊದಲ ಸಂಕಲನದ ಶೀರ್ಷಿಕೆಗೆ ಅನುಗುಣವಾಗಿಯೇ ಅದು ‘ವರ್ತಮಾನದ ಮುಖಗಳನ್ನು’ ಹಿಡಿಯಲು ಪ್ರಯತ್ನಿಸಿದೆ. ತನ್ನ ಕಾಲಮಾನದ ವಾಸ್ತವಗಳಿಗೆ ಕನ್ನಡಿ ಹಿಡಿಯುವ ಕೆಲಸವನ್ನು ಮಾಡಿದ್ದಾರೆ. ‘ಸ್ವಂತಕ್ಕೆ ಸ್ವಂತಾವತಾರ’ ಸಂಕಲನದ ವೇಳೆಗೆ ಬಹಿರಂಗದಿಂದ – ಅಂತರಂಗ ವೀಕ್ಷಣೆಗೆ ತೊಡಗುವ ಅವರ ಅಂತರ್ಮುಖತೆ ನಿಚ್ಚಳವಾಗಿ ಗೋಚರಿಸುತ್ತದೆ.

ಅಂತರಂಗ ನಿವೇದನೆಯ ರೂಪದ ಕವಿತೆಗಳು ಹೆಚ್ಚಿವೆ. 1999 ರ ವೇಳೆಗೆ ಪ್ರಕಟವಾದ ಅವರ ‘ನೆಲದ ನೆರಳು’ ಕವಿತಾ ಸಂಕಲನದ ವೇಳೆಗೆ ಮೊಗಸಾಲೆಯವರ ಅಭಿವ್ಯಕ್ತಿ ಕ್ರಮ ವಾಚ್ಯತೆಯಿಂದ ಬಿಡಿಸಿಕೊಂಡು ಕಾವ್ಯ ಧ್ವನಿಯನ್ನು – ರೂಪಾತ್ಮಕವಾಗಿ ಹಿಡಿಯುವ ಕಸುಬುಗಾರಿಕೆಯಲ್ಲಿ ತೊಡಗುವುದನ್ನು ಕಾಣಬಹುದಾಗಿದೆ. 2003ರಲ್ಲಿ ಪ್ರಕಟವಾದ ಅವರ ‘ಇದಲ್ಲ ಇದಲ್ಲ’
ಸಂಕಲನದ ವೇಳೆಗೆ ನವ್ಯಶೈಲಿಯನ್ನು ರಾಚನಿಕತೆಯಲ್ಲಿ ಅಳವಡಿಸಿಕೊಂಡಂತೆ ಕಂಡರೂ ಈ ಸಂಕಲನದ ತಾತ್ವಿಕತೆಯಲ್ಲಿ ಆದಿ ಶಂಕರಾಚಾರ್ಯರ ನೇತಿ-ನೇತಿ, ಅಲ್ಲಮನ ಬೆಡಗಿನ ವಚನಗಳ ಮಾದರಿ ಕವಿತೆಯ ಶಿಲ್ಪ ಹಾಗೂ ಅವು ಪ್ರತಿಪಾದಿಸುವ ತಾತ್ವಿಕತೆಯಲ್ಲಿ ಕೂಡಿಕೊಂಡಿರುವುದು ಸ್ಪಷ್ಟವಾಗುತ್ತದೆ.

2006ರ ವೇಳೆಗೆ ಪ್ರಕಟವಾದ ಅವರ ‘ಇಹಪರದ ಕೊಳ’ ಸಂಕಲನದ ವೇಳೆಗೆ ಅಲ್ಲಮ, ಬುದ್ಧ, ಜೆನ್ ಇಂತಹ ತಾತ್ವಿಕತೆಗಳೂ ಅವರ ಚಿಂತನೆಯಲ್ಲಿ ಮೈಗೂಡಿಕೊಂಡು, ಲೌಕಿಕತೆಯಿಂದ – ಅಧ್ಯಾತ್ಮಿಕತೆಯೆಡೆಗೆ ಹೊರಡುವಂತಹ ಅಧ್ಯಾತ್ಮಿಕ ಕುತೂಹಲ – ಜೀವನ ಮೀಮಾಂಸೆಗೆ ಹೊರತಾಗದ ಹಲವು ಮಹಾನ್ ಚಿಂತಕರ ಸೈದ್ಧಾಂತಿಕತೆಯ ಮರುಶೋಧಕ್ಕೆ ತೊಡಗುವಂತಹ – ತಾತ್ವಿಕತೆ ಮತ್ತು ಪ್ರತಿಮಾತ್ಮಕ ಅಭಿವ್ಯಕ್ತಿಯನ್ನು ಅವರ ಕವಿತೆ ಕಂಡುಕೊಳ್ಳುತ್ತದೆ. 2010ರ ವೇಳೆಗೆ ಪ್ರಕಟವಾದ ಅವರ ‘ಕಾಮನೆಯ ಬೆಡಗು’ ಕೃತಿಯ ಕವಿತೆಗಳನ್ನು ಗಮನಿಸಿದರೆ ಅವರ ಲೋಕ ಗ್ರಹಿಕೆ ಹಾಗೂ ಕಾವ್ಯದ ಅಭಿವ್ಯಕ್ತಿಯ ಕ್ರಮದಲ್ಲಿ ಆದ ದೊಡ್ಡ ಪಲ್ಲಟವನ್ನು (ಆಶಯ ಹಾಗೂ ಅಭಿವ್ಯಕ್ತಿಗಳಿಗೆ ಸಂಬಂಧಿಸಿದಂತೆ) ಗಮನಿಸಲೇಬೇಕು. ಈ ಸಂಕಲನದ ಉಪಶೀರ್ಷಿಕೆ ಯಾಗಿ ಅವರು ಕೊಡುವ ಒಂದು ಟ್ಯಾಗ್‌ಲೈನ್ ‘ಜನ್ಮವೆನ್ನುವುದು ಕಣ್ಣ ಕಾಮನೆ ಮತ್ತು ಶಬ್ದಲೀಲೆಗಳ ನಡುವಣ ಎಲ್ಲ ಜಗತ್ತು’
ಎಂಬುದೂ ಇದನ್ನೇ ಸ್ಪಷ್ಟಪಡಿಸುತ್ತದೆ – ಶಬ್ದಗಳು ಲೀಲೆಯನ್ನು ಮೆರೆಸುವ ವಾಹಕಗಳಾಗುವಂತೆ, ಅವನ್ನು ದುಡಿಸಿಕೊಳ್ಳಬಲ್ಲ ಶಬ್ದ ಗಾರುಡಿಗತೆಯ ಕಡೆಗಿನ ತಮ್ಮ ಗಮನವನ್ನು ಧ್ಯಾನಶೀಲವಾಗಿಸುವ ಪ್ರಯತ್ನದಲ್ಲಿ ತಮ್ಮ ಗಮನವನ್ನು ಕೇಂದ್ರೀ ಕರಿಸಿದ್ದನ್ನು ಈ ಸಂಕಲನದ ಕವಿತೆಗಳು ಸಾಕ್ಷೀಕರಿಸುತ್ತವೆ.

ಈ ಸಂಕಲನದ ಕುರಿತು ಕವಿ ಸ್ಪಷ್ಟಪಡಿಸುವ ಮಾತುಗಳಲ್ಲೂ – ಕವಿಯ ಕಾವ್ಯದ ಬಗೆಗಿನ ತಮ್ಮ ದಾರ್ಶನಿಕತೆಯಲ್ಲಿ ಆದ ಬದಲಾವಣೆಯನ್ನು ಕಾಣಬಹುದು. ‘ಕಾವ್ಯ ಅನ್ನುವುದು ನಮ್ಮ ಎಲ್ಲ ಪಂಚೇಂದ್ರಿಯಗಳನ್ನು ಒಳಗೊಂಡ ಒಂದು ಕಾಣ್ಕೆ. ಅದನ್ನು ಅನುಭವಿಸುವುದು ಎಂದರೆ ಒಂದರ್ಥದಲ್ಲಿ ನಮ್ಮ ಪಂಚೇಂದ್ರಿಯಗಳಲ್ಲಿ ನಾವು ನಮ್ಮನ್ನು ಮತ್ತೆ ಕಂಡುಕೊಳ್ಳು ವುದೇ ಆಗಿದೆ. ಈ ಹಿನ್ನೆಲೆಯಲ್ಲಿ ನಾವು ಈ ತನಕ ಕಾವ್ಯ ಎಂದರೆ ಏನೆಂದು ಪರಿಭಾವಿಸಿದ್ದೇವೆಯೋ ಅದು ಕಾವ್ಯವೇ ಎಂದು ಒಪ್ಪಿಕೊಂಡರೂ, ಆ ಒಪ್ಪಿಕೊಂಡದ್ದನ್ನು ಮೀರುವ ಪುಟ್ಟ ಪ್ರಯತ್ನ ಈ ಕಾಮನೆಯ ಬೆಡಗು.

ಕಾಮನೆ ಎನ್ನುವುದು ಕೇವಲ ಒಂದು ಇಂದ್ರಿಯ ಜನ್ಯ ‘ಸುಖ’ ಅಥವಾ ‘ದುಃಖ’ ಅಲ್ಲ. ಎಲ್ಲ ಇಂದ್ರಿಯಗಳೂ ತಂತಮ್ಮ ಸ್ವಭಾವವನ್ನು ಅನುಭವಿಸುವ ಸ್ಥಿತಿ.’ 2014ರ ವೇಳೆಗೆ ಪ್ರಕಟವಾದ ಅವರ ‘ದೇವರು ಮತ್ತೆ ಮತ್ತೆ’ ಸಂಕಲನದ ವೇಳೆಗೆ ಅವರ ಕಾವ್ಯದ ಸೈದ್ಧಾಂತಿಕತೆ, ತಾತ್ವಿಕತೆ ಅತ್ಯಂತ ಸಂಕೀರ್ಣವೂ ಅಮೂರ್ತವೂ ಆದ ಅಧ್ಯಾತ್ಯ, ಅನುಭಾವದ ಶೋಧದಂತೆ. ವಚನಕಾರರ ತಾತ್ವಿಕತೆಯನ್ನು, ಅಲ್ಲಮನ ಬೆಡಗನ್ನು ದೈವದ ಅಸ್ತಿತ್ವವನ್ನು ಎಂದೂ ಸಾಂಸ್ಥಿಕವಾದ ಧರ್ಮಗಳು ಹುಟ್ಟು ಹಾಕಿರುವ ಮೂಲದಲ್ಲಿ ಗ್ರಹಿಸದೆ, ಅತ್ಯಂತ ಮಾನವೀಯ ನೆಲೆಯಲ್ಲಿ ಕಂಡುಕೊಳ್ಳಲು ನಡೆಸಿದ ಪ್ರಯತ್ನದ ಫಲವೆಂಬಂತೆ ಈ
ಸಂಕಲನವಿದೆ.

ಈ ಸಂಕಲನದ ತಾತ್ವಿಕತೆ ಮತ್ತು ದೇವರ ಅಸ್ತಿತ್ವದ ಬಗೆಗಿನ ಶೋಧ ಇತ್ಯಾದಿಯನ್ನು ಕುರಿತು ಓದುಗನು ಕೇಳಿಕೊಳ್ಳಬಹುದಾದ ಪ್ರಶ್ನೆಗಳಿಗೆ ಉತ್ತರ ಎಂಬತಿರುವ ಕವಿ ಮೊಗಸಾಲೆಯವರು ಈ ಸಂಕಲನದ ಬಗ್ಗೆ ಆಡಿರುವ ‘ಇದು ಕಾವ್ಯವೋ ಹೌದೋ ಅಲ್ಲವೋ, ಇದರಲ್ಲಿ ಇರುವುದು ಅನುಭವವೋ.. ಅನುಭಾವವೋ, ಇವು ಶರಣರ ವಚನಗಳ, ಅದರಲ್ಲೂ ಅಲ್ಲಮನ ಬೆಡಗಿನ ವಚನಗಳ ಮುಂದುವರಿದ ಭಾಗವೋ ಅಥವಾ ಇಂಥ ತಾತ್ವಿಕತೆ ಎನ್ನುವುದು ಅನುಭವಿಸಿದ ಹಾಗೆ ಕಲ್ಪಿಸಿಕೊಂಡದ್ದೋ (ಮುಖವಾಡವೊ) ಇತ್ಯಾದಿ ಪ್ರಶ್ನೆಗಳು ಈ ಸಂಗ್ರಹವನ್ನು ಕೈಗೆತ್ತಿಕೊಂಡ ಕೆಲವರನ್ನು ಕಾಡಬಹುದು.

ಅದನ್ನು ಹೇಗೆ ಬೇಕಾದರೂ ಅರ್ಥೈಸಿಕೊಳ್ಳುವ ಹಕ್ಕು ಓದುಗರಿಗೆ ಇದೆ.’ ಶಬ್ದಾರ್ಥ ಸಹಿತವಾದ ಕಾವ್ಯದಲ್ಲಿ ತಾನು ಮಾತನ್ನು ಬಳಸುವ ಸಂದರ್ಭದಲ್ಲಿ – ಮೊಗಸಾಲೆ ಅವರು ವಾಗರ್ಥಕ್ಕೆ ಅನುಸರಿಯಾಗಿ ಅದು ಅರ್ಥವನ್ನೇ ಸ್ಫುರಿಸಬೇಕೆಂದು ಉದ್ದೇಶ ಪೂರ್ವಕವಾಗಿ ಬಳಸುವುದಿಲ್ಲವೆಂದು – ಅದು ತನಗೆ ತಾನೇ ಕರಂಡಕದೊಳಗೆ ಹೂತು ಕುಳಿತ ಚಿನ್ನದ ಹಾಗೆ ಇರುವುದೆಂದೂ –
ಪ್ರತೀ ಮಾತಿಗೂ ಮುಚ್ಚಳ ತೆಗೆದೇ ಕರಂಡಕದೊಳಗಣ ಚಿನ್ನವನ್ನು ಪಡೆಯಬೇಕೆಂದೂ, ಮುಚ್ಚಳವನ್ನು ತೆಗೆಯಲಾಗದೆ ಕವಿಯನ್ನು ಬೈದುಕೊಂಡರೆ ಅದು ಸಹೃದಯನದೇ ತಪ್ಪೆಂದೂ ಕಾವ್ಯ ಗ್ರಹಿಕೆಯಲ್ಲಿ ಓದುಗನ ಪಾತ್ರವನ್ನು ಅವರು ಸ್ಪಷ್ಟಪಡಿಸುತ್ತಾರೆ.

ಕಾವ್ಯ ಅನ್ನುವುದು ನಮ್ಮ ಎಲ್ಲ ಪಂಚೇಂದ್ರಿಯಗಳನ್ನು ಒಳಗೊಂಡ ಒಂದು ಕಾಣ್ಕೆ. ಅದನ್ನು ಅನುಭವಿಸುವುದು ಎಂದರೆ ಒಂದರ್ಥದಲ್ಲಿ ನಮ್ಮ ಪಂಚೇಂದ್ರಿಯಗಳಲ್ಲಿ ನಾವು ನಮ್ಮನ್ನು ಮತ್ತೆ ಕಂಡುಕೊಳ್ಳುವುದೇ ಆಗಿದೆ. – ನಾ. ಮೊಗಸಾಲೆ

ಡಾ. ನಾ. ಮೊಗಸಾಲೆಯವರು ಕನ್ನಡ ಕಾವ್ಯಲೋಕದ ಮುಂಚೂಣಿಯಲ್ಲಿದ್ದುಅರ್ಥಪೂರ್ಣವಾದ, ಸಮರ್ಥವಾದ
ಮತ್ತು ಅನುಭವಗಳನ್ನು ಅಭಿವ್ಯಕ್ತಪಡಿಸಲು ಹೊಸ ದಾರಿಗಳನ್ನು ಹುಡುಕಿಕೊಳ್ಳಲು ತಡಕಾಡುತ್ತಿರುವ ಬೆರಳೆಣಿಕೆಯ ಕವಿಗಳಲ್ಲಿ ಒಬ್ಬರು. ಅವರೊಬ್ಬ ಸಮರ್ಥ ಕಾದಂಬರಿಕಾರರಾಗಿ ಮತ್ತು ಕತೆಗಾರರಾಗಿ ಹೆಸರು ಮಾಡಿದ್ದಾರೆ. ಆದರೆ, ಅವರ ಹೆಚ್ಚಿನ ಒಲವು ಮತ್ತು ಹೊಸ ದಾರಿಯ ಹುಡುಕಾಟ ಕಾವ್ಯದಲ್ಲಿಯೇ ಇದೆ. – ಮಾಧವ ಕುಲಕರ್ಣಿ