Saturday, 23rd November 2024

ಮನಸ್ಸಿಗೂ ಒಂದು ಮಾಸ್ಕ್ !

ಶ್ರೀರಂಜನಿ ಅಡಿಗ

ಮನಸ್ಸು ಯಾವತ್ತೂ ತಡೆ ಒಡೆದ ಅಣೆಕಟ್ಟಿನ ನದಿಯಂತೆ ಸಿಕ್ಕಲೆಲ್ಲಾ ಪ್ರವಹಿಸುವ ನದಿಯಂತೆ ಚಂಚಲ. ಕೆಲವೊಮ್ಮೆ ಎಂದೆಂದಿಗೂ ಬದಲಿಸಲು ಆಗದೇ ಇರುವಂಥ ಚೌಕಟ್ಟನ್ನೂ ಹಾಕಿ ನಮ್ಮನ್ನು ಮರೆಸುತ್ತದೆ. ಮನಸ್ಸಿನ ಗುಣವನ್ನು
ಅಳೆಯಲಾಗದು, ಅದು ಸೀಮಾತೀತ.

ಮನುಷ್ಯನಿಗೊಂದು ವಿಚಿತ್ರ ಮನೋವ್ಯಾಪಾರ. ಗಮನಿಸಿದ್ದಿರಬಹುದು; ಮುಖತಃ ಭೇಟಿಯಾಗದೇ ಇದ್ದರೂ, ಬೇರೆ ವಿಧಾನ ದಲ್ಲಿ ಪರಿಚಿತರಾಗಿರುವವರ ಬಗ್ಗೆೆ ನಾವು ನಮ್ಮದೇ ಆದ ಏನೇನೋ ಕಲ್ಪನೆಗಳನ್ನು ಹೊಂದಿಸಿಕೊಂಡು ಬಿಟ್ಟಿರುತ್ತೇವೆ.
ಮುಂದೆ ಅವರ ಭೇಟಿಯಾದಾಗ ನಮ್ಮ ಕಲ್ಪನೆಗಳೆಲ್ಲಾ ಸುಳ್ಳು ಎಂದು ಗೊತ್ತಾದರೆ ಸುತಾರಂ ಅದನ್ನು ನೆಚ್ಚಲು ಮನ ಮಾಡುವುದಿಲ್ಲ.

ಒಮ್ಮೆ ಹೀಗಾಯಿತು. ಊರಿಗೆ ಹೋದಾಗ, ಅಮ್ಮನೊಡನೆ ಸಂಜೆ ಮನೆ ಎದುರಿನ ಶಾಲೆ ಜಗುಲಿಯಲ್ಲಿ ಕೂತು ಹರಟುತ್ತಿದ್ದೆ.
ಆಗ ಮಹಿಳೆಯೊಬ್ಬರು ಬಂದು ಒಂದೈದು ನಿಮಿಷ ಮಾತನಾಡುತ್ತಾ ನಿಂತರು. (ನನಗೆ ಅವರ ಪರಿಚಯ ಅಷ್ಟಾಗಿ ಸಾಲದು) ಮಾತು ಮುಗಿಸಿ ಹೊರಡುವಾಗ ಅವರು ನಮ್ಮ ಅಮ್ಮನ ಬಳಿ ‘ನೀವು ಯಾರು?’ಎಂಬ ಒಂದು ಪ್ರಶ್ನೆ ಕೇಳಿ ಪರಿಚಯಕ್ಕೆ ವಿಚಿತ್ರ ಕೊನೆಯೊಂದನ್ನು ನೀಡಿದರು. ಅವರು ಅತ್ತ ಹೋಗುತ್ತಲೇ -‘ಕಂಡ್ಯಾ ಅವರನ್ನು? ನಿನ್ನೆಯಷ್ಟೆ ನಮ್ಮನೆಯಲ್ಲಿ ಗಂಡ ಮಕ್ಕಳೊಡನೆ ಬಂದು ಕಾಫಿ ಕುಡಿದುಕೊಂಡು ಹೋಗಿದ್ದರು!’ ಅಂದು ಅಚ್ಚರಿಯ ಮೂರ್ತಿಯಾದಳು.

ಅವರ್ಯಾರೆಂದು ಕೇಳಿದಕ್ಕೆ ‘ಅವರಾ? ….. ಅಂತ, ಪ್ರಸಿದ್ಧ ಸಾಹಿತಿ’. ಕೇಳಿ ಅವಳಿಗಿಂತ ಹೆಚ್ಚಿನ ಅಚ್ಚರಿಯನ್ನು ನಾನು ಆತುಕೊಂಡೆ. ಅವರ ಅದೆಷ್ಟೋ ಬರಹಗಳನ್ನು ಓದಿ ಅವರ ಬಗ್ಗೆ ಉನ್ನತ ಭಾವನೆಗಳನ್ನು ಹೊಂದಿದ್ದೆ. ಆದರೆ ಈ ಘಟನೆಯ ನಂತರ ಆ ಭಾವನೆಗಲ್ಲಾ ಆವಿಯಾಗಿ ಶೂನ್ಯ ಸೃಷ್ಟಿಯಾಯಿತು. ಮುಂದೆ ಪತ್ರಿಕೆಯಲ್ಲಿ ಅವರ ಸುಲಲಿತ ಲೇಖನಗಳನ್ನೆಷ್ಟೇ ಓದಿದರೂ, ಆ ಘಟನೆಯೇ ಮತ್ತೆ ಮತ್ತೆ ಮರುಕಳಿಸಿ ಅದರ ಘನತೆಯನ್ನು ನುಂಗಲಾರಭಿಸಿತು.

ಕ್ರಿಯಾಶೀಲತೆಯನ್ನು ವ್ಯಕ್ತಿತ್ವದೊಡನೆ ಹೋಲಿಸಕೂಡದೆಂದು ನನ್ನನ್ನೇ ತಿದ್ದುಕೊಳ್ಳಲು ಪ್ರಯತ್ನಿಸಿದರೂ ನಾನೇ ಸೋತೆ. ಇದು ಸರಿಯಲ್ಲ ಎಂದು ಮನಸ್ಸನ್ನು ಮತ್ತೆ ಮತ್ತೆ ರಮಿಸಿದರೂ ಸಾಧ್ಯ ಆಗಲೇ ಇಲ್ಲ, ಆಗುತ್ತಲೂ ಇಲ್ಲ. ಅನೇಕ ಬಾರಿ ಪೇಪರಿ ನಲ್ಲಿಯೋ, ಸೋಷಿಯಲ್ ಮೀಡಿಯಾಗಳಲ್ಲೋ ಆಗಾಗ ರಾರಾಜಿಸುತ್ತಿರುವವರು ಪ್ರತಿಭಾವಂತರೆಂಬ ಭಾವನೆ ಆವರಿಸಿ ಕೊಂಡಿರುತ್ತದೆ. ಕಾರ್ಯಕ್ರಮದ ಫೋಟೋಗಳಲ್ಲಿ ಸದರಿ ಕಾರ್ಯಕ್ರಮಕ್ಕೆ ತಮ್ಮ ಕಾಣ್ಕೆ ಕೊಡದೇನೇ ಮುಂದಿನ ಸಾಲಿನಲ್ಲಿ ನಿಂತು ಭರ್ಜರಿಯಾಗಿ ಫೋಟೋಕ್ಕೆ ಪೋಸುಕೊಡುವವರು ಎಷ್ಟು ಜನ ಬೇಕು? ಆದರೆ ನಿಜವಾದ ಸಂಘಟನೆಯ ಹೊಣೆಯನ್ನು ನಿಷ್ಕಪಟಿಯಾಗಿ, ಪ್ರಾಮಾಣಿಕವಾಗಿ ಹೊಣೆ ಹೊತ್ತವರು ಇನ್ನ್ಯಾರೋ ಆಗಿದ್ದು, ಅವರು ತೆರೆಹಿಂದೆ ಓಡಾಡುತ್ತಾ, ಮೂಲೆ ಯಲ್ಲೆಲ್ಲೋ ಕುಳಿತುಕೊಂಡಿರುವ ಸಂಭವವೂ ಇಲ್ಲದಿಲ್ಲ.

ಇಂಥವರಿಗೆ ಪ್ರಚಾರದ ಹಂಗಿರುವುದಿಲ್ಲ. ಆದರೆ ಹೊರಗಿನಿಂದ ಕಾಣುವವರಿಗೆ ಮುನ್ನೆಲೆಯಲ್ಲಿ ಇರುವವರದ್ದೇ ಸಮಸ್ತ ಜವಾಬ್ದಾರಿ ಅನ್ನಿಸಿ ಬಿಡುತ್ತದೆ. ಅಂಥವರಿಗೇ ಮತ್ತೆ ಮತ್ತೆ ಅವಕಾಶಗಳು ಅರಸಿಬರುತ್ತವೆ, ಅಷ್ಟೇ ವೇಗವಾಗಿ ಪ್ರಸಿದ್ಧಿಯ ಉತ್ತುಂಗಕ್ಕೆ ಏರುವ ಅವಕಾಶಗಳೂ ಸಿಗುವುದೂ ಕೂಡಾ ಇದೇ ಕಾರಣಕ್ಕೆ. ಕಣ್ಣೆದುರಿಗೆ ಕಾಣುವುದೇ ಸತ್ಯವೆಂದು ನಂಬುವ ಮನಸ್ಸಿನ ಹುಚ್ಚಾಟಕ್ಕೆ ಕಡಿವಾಣವಿಲ್ಲ.

ಬಟ್ಟೆ ನೋಡಿ ಅಂತಸ್ತು ನಿರ್ಧಾರ ಮನಮೋಹಕ, ದುಬಾರಿ ಮತ್ತು ಬಣ್ಣ ಬಣ್ಣದ ಉಡುಗೆ ತೊಡುಗೆಗಳನ್ನು ತೊಟ್ಟವರ ಅಂತಸ್ತನ್ನು ಲೆಕ್ಕ ಹಾಕುವುದು ಮನಸ್ಸಿನ ಇನ್ನೊಂದು ಹುಡುಗಾಟ. ಸದಾ ಆಕರ್ಷಣೀಯವಾದ ಬಟ್ಟೆಗಳನ್ನು ತೊಡುವ ನಟನಟಿಯರನ್ನು ಸೌಧ, ಬಂಗಲೆಯಲ್ಲಿಯೇ ಕಲ್ಪಿಸಿಕೊಳ್ಳುತ್ತೇವೆಯೋ ಹೊರತು ಅವರೊಂದು ಬಾಡಿಗೆ ಮನೆಯಲ್ಲಿರುವ ಬಗ್ಗೆ ಆಲೋಚನೆಯನ್ನೂ ಕೂಡಾ ಮಾಡಲಾರೆವು. ಧನಿಕರಾಗಿದ್ದರೂ, ಬಟ್ಟೆಬರೆಗಳ ನಿರ್ಮೋಹಿಗಳಾಗಿದ್ದವರ ಬಗ್ಗೆ ‘ಓ? ಅವನೋ, ಮಹಾಜುಗ್ಗ. ಅವನ ಬಟ್ಟೆ ನೋಡು, ನಯಾಪೈಸೆ ಬಿಚ್ಚುವುದಿಲ್ಲ.

ಹೋಗುವಾಗ ತೆಗೆದುಕೊಂಡು ಹೋಗುತ್ತಾನೇನು?’ ಎಂದು ಬಹುಬೇಗ ನಿರ್ಧಾರ ಪ್ರಕಟಿಸುವ ಚಾಳಿ ನಮ್ಮಲ್ಲಿ ಹಲವರಿಗೆ ಇದೆ.
ಪ್ರಥಮ ಬಾರಿ ನೋಡಿದವರ ಬಗ್ಗೆ ಕೂಡಾ ‘ಅವರು ಜೋರು, ಪಾಪ, ದಡ್ಡ’ ಎಂದು ಹಣೆಪಟ್ಟಿ ಕಟ್ಟುವ ಚತುರತೆ ಕೂಡ ಮನಸ್ಸಿಗಿದೆ. ಅದೆಷ್ಟೋ ಬಾರಿ ಸತ್ಯಕ್ಕಿಂತ ಜಾಸ್ತಿ ಸುಳ್ಳೇ ಇರಬಹುದು. ಮುಂದೆ ಅದು ಬದಲಾಯಿಸಲು ಸಾಧ್ಯವೇ ಆಗದಂತಹ ಭ್ರಮೆಗೆ ಒಳಗಾಗುವುದೂ ಕೂಡಾ ಮನಸ್ಸಿನ ಪ್ರಕ್ರಿಯೆ.

ಮುಂದೆ ಬದಲಾಯಿಸುವ ಅವಕಾಶ ಸಿಕ್ಕರೂ ಮೊದಲು ಮೂಡಿದ ಭಾವವೇ ಬಲವಾಗಿ ಬದಲಾಯಿಸದಂತೆ ಮನಸ್ಸು ಒರಟು ತನ ತೋರುತ್ತದೆ. ಕೊನೆಗೆ ಆವತ್ತು ‘ಅವರು ಹೀಗೆ ಅಂದಿದ್ದರು, ಹೀಗೆ ಮಾಡಿದ್ದರು’ ಎಂದು ಕೊಂಕಿನ ಎಳೆಯನ್ನು ಎಳೆದು ಸಮಾಧಾನ ಪಡುವುದೇ ಮನಸ್ಸಿಗೆ ಹಿತವಾಗಿ ಕಾಣುವುದು.

ಹೀಗೆ ದಿನನಿತ್ಯದ ಬದುಕಿನಲ್ಲಿ ಅದೆಷ್ಟೋ – ಸಣ್ಣದಾದರೂ – ಘಟನೆಗಳಲ್ಲಿ ಒಬ್ಬರನ್ನು ನಿರ್ದೇಶಿಸುವ, ಗುಣಾವಗುಣಗಳನ್ನು
ನಿರ್ಧರಿಸುವ ಮನಸ್ಸು ಮರ್ಕಟವಲ್ಲದೆ ಮತ್ತೇನು? ಮನಸ್ಸು ಯಾವತ್ತೂ ತಡೆ ಒಡೆದ ಅಣೆಕಟ್ಟಿನ ನದಿಯಂತೆ ಸಿಕ್ಕಲೆಲ್ಲಾ
ಪ್ರವಹಿಸುವ ನದಿಯಂತೆ ಚಂಚಲ. ಕೆಲವೊಮ್ಮೆ ಎಂದೆಂದಿಗೂ ಬದಲಿಸಲು ಆಗದೇ ಇರುವಂಥ ಚೌಕಟ್ಟನ್ನೂ ಹಾಕಿ ನಮ್ಮನ್ನು
ಮರೆಸುತ್ತದೆ. ಮನಸ್ಸಿನ ಗುಣವನ್ನು ಅಳೆಯಲಾಗದು, ಅದು ಸೀಮಾತೀತ. ಆದರೆ ಅದನ್ನು ಅಂಕುಶಕ್ಕೆ ಒಳಪಡಿಸುವ ಅಸ್ತ್ರವೂ
ನಮ್ಮಲ್ಲಿದೆ. ಅದು ವಿವೇಕವೆಂಬ ಜಾಗೃತಿ. ಆದರೆ ಅದನ್ನು ಗುರುತಿಸಲು, ಪ್ರಯೋಗಿಸಲು ನಾವೇ ಅಸಮರ್ಥರಾಗುತ್ತೇವೆ,
ಹಿಂಜರಿಯುತ್ತೇವೆ, ಇಲ್ಲ ಬೇಕಂತಲೇ ನಿರ್ಲಕ್ಷ್ಯ ವಹಿಸುತ್ತೇವೆ. ಹೀಗಾಗಬಾರದಲ್ಲವೆ!