ಹೈದರಾಬಾದ್: ಟಾಲಿವುಡ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಮತ್ತು ನ್ಯಾಷನಲ್ ಕ್ರಶ್, ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ‘ಪುಷ್ಪ 2’ (Pushpa 2) ಬಿಡುಗಡೆಗೆ ಸಜ್ಜಾಗಿದೆ. ಡಿ. 5ರಂದು ವಿಶ್ವಾದ್ಯಂತ ದಾಖಲೆಯ ಸಂಖ್ಯೆಯ ಥಿಯೇಟರ್‌ಗಳಲ್ಲಿ ‘ಪುಷ್ಪ 2’ ರಿಲೀಸ್ ಆಗಲಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಬಿಡುವಿಲ್ಲದೆ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ದೇಶದ ವಿವಿಧ ಭಾಗಗಳಿಗೆ ತೆರಳಿ ಪ್ರಮೋಷನ್ ನಡೆಸುತ್ತಿದೆ. ಈ ಮಧ್ಯೆ ಅಲ್ಲು ಅರ್ಜುನ್ ತಮ್ಮ ಅಭಿಮಾನಿಗಳನ್ನು ‘ಆರ್ಮಿ’ (Army) ಎಂದು ಸಂಬೋಧಿಸಿದ್ದು, ವಿವಾದ ಹುಟ್ಟು ಹಾಕಿದೆ. ಇದರ ವಿರುದ್ಧ ಹೈದರಾಬಾದ್‌ನಲ್ಲಿ ದೂರು ದಾಖಲಿಸಲಾಗಿದೆ.
ಇತ್ತೀಚೆಗೆ ‘ಪುಷ್ಪ 2’ ತಂಡ ಕೇರಳದ ಕೊಚ್ಚಿಯಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ‘ಪುಷ್ಪ 2’ ಚಿತ್ರದ ನಾಯಕ ಅಲ್ಲು ಅರ್ಜುನ್, ನಾಯಕಿ ರಶ್ಮಿಕಾ ಸೇರಿದಂತೆ ಪ್ರಮುಖರು ಹಾಜರಿದ್ದರು. ತಮ್ಮ ನೆಚ್ಚಿನ ತಾರೆಗಳನ್ನು ನೋಡಲು ಸಾವಿರಾರು ಮಂದಿ ನೆರೆದಿದ್ದರು. ಅದರದಲ್ಲಿಯೂ ಅಲ್ಲು ಅರ್ಜುನ್ ಅವರಿಗೆ ಕೇರಳದಲ್ಲಿಯೂ ಅನೇಕ ಮಂದಿ ಅಭಿಮಾನಿಗಳಿದ್ದು, ಅವರಿಗಾಗಿ ಬೃಹತ್ ಸಂಖ್ಯೆಯಲ್ಲಿ ಆಗಮಿಸಿದ್ದರು. ಇದರಿಂದ ರೋಮಾಂಚಿತರಾಗಿದ್ದ ಅಲ್ಲು ಅರ್ಜುನ್ ತಮ್ಮ ಫ್ಯಾನ್ಸ್ ಅನ್ನು ಆರ್ಮಿ ಎಂದು ಕರೆದಿದ್ದರು. ಇದೀಗ ಈ ಹೇಳಿಕೆ ವಿರುದ್ಧ ದೂರು ದಾಖಲಿಸಲಾಗಿದೆ.
ದೂರಿನಲ್ಲಿ ಏನಿದೆ?
ಹೈದರಾಬಾದ್‌ನ ಜವಹಾರ್ ನಗರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗ್ರೀನ್ ಪೀಸ್ ಎನ್‌ವೋರ್ನ್‌ಮೆಂಟ್ & ವಾಟರ್ ಹಾರ್ವೆಸ್ಟಿಂಗ್ ಫೌಂಡೇಷನ್‌ನ ಅಧ್ಯಕ್ಷ ಶ್ರೀನಿವಾಸ್ ಎನ್ನುವವರು ಈ ದೂರನ್ನು ದಾಖಲಿಸಿದ್ದಾರೆ. ʼʼಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ವಿರುದ್ಧ ದೂರು ದಾಖಲಿಸಿದ್ದೇವೆ ಮತ್ತು ತಮ್ಮ ಅಭಿಮಾನಿಗಳನ್ನು ಆರ್ಮಿ ಎಂದು ಕರೆಯುವುದನ್ನು ನಿಲ್ಲಿಸಲು ಅವರಲ್ಲಿ ಮನವಿ ಮಾಡುತ್ತಿದ್ದೇವೆ. ಆರ್ಮಿ ಎನ್ನುವುದು ಅತ್ಯಂತ ಗೌರವಯುತ ಹುದ್ದೆ, ಅವರು ದೇಶವನ್ನು ರಕ್ಷಿಸುವ ಮಹೋನ್ನತ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ನಿಮ್ಮ ಅಭಿಮಾನಿಗಳನ್ನು ಆ ಹೆಸರಿನಿಂದ ಕರೆಯಬೇಡಿ. ಅದರ ಬದಲಾಗಿ ಬೇರೆ ಪದಗಳನ್ನು ಬಳಸಿʼʼ ಎಂದು ಹೇಳಿದ್ದಾರೆ.
ಅಲ್ಲು ಅರ್ಜುನ್ ಹೇಳಿದ್ದೇನು?
ಅಲ್ಲು ಅರ್ಜುನ್ ಅವರನ್ನು ಕೇರಳದಲ್ಲಿ ʼಮಲ್ಲು ಅರ್ಜುನ್ʼ ಎಂದೇ ಕರೆಯಲಾಗುತ್ತದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ʼʼನಾನ್ಯಾಕೆ ನನ್ನ ಅಭಿಮಾನಿಗಳನ್ನು ಆರ್ಮಿ ಎಂದು ಕರೆಯುತ್ತೇನೆಂದು ನಿಮಗೆ ಗೊತ್ತೆ? ಇದಕ್ಕೆ ಕಾರಣ ಕೇರಳದ ಫ್ಯಾನ್ಸ್. ನೀವು ಈ ಟ್ರಂಡ್ ಹುಟ್ಟು ಹಾಕಿದವರು ಮತ್ತು ನಾನು ನಿಮ್ಮಿಂದ ಸ್ಫೂರ್ತಿ ಪಡೆದಿದ್ದೇನೆ. ಇಷ್ಟೆಲ್ಲ ಅಭಿಮಾನ ತೋರಿದ್ದಕ್ಕಾಗಿ ಧನ್ಯವದಗಳುʼʼ ಎಂದು ಅಲ್ಲು ಅರ್ಜುನ್ ಹೇಳಿದ್ದರು. ಸದ್ಯ ದೂರಿಗೆ ಸಂಬಂಧಿಸಿದಂತೆ ಅವರು ಇನ್ನೂ ಪ್ರತಿಕ್ರಿಯಿಸಿಲ್ಲ.
ಸುಕುಮಾರ್ ನಿರ್ದೇಶನದ ʼಪುಷ್ಪ 2ʼ ಚಿತ್ರ ಬಹು ಕೋಟಿ ರೂ. ವೆಚ್ಚದಲ್ಲಿ ತಯಾರಾಗಿದೆ. ಫಹದ್ ಫಾಸಿಲ್, ಡಾಲಿ ಧನಂಜಯ್, ತಾರಕ್ ಪೊನ್ನಪ್ಪ, ಸುನೀಲ್, ರಾವ್ ರಮೇಶ್, ಪ್ರಕಾಶ್ ರಾಜ್ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡತಿ ಶ್ರೀಲೀಲಾ ಐಟಂ ಸಾಂಗ್‌ನಲ್ಲಿ ಅಲ್ಲು ಅರ್ಜುನ್ ಜತೆ ಮೈ ಬಳಿಕಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Allu Arjun: ಸೂಪರ್‌ಸ್ಟಾರ್ ಅಲ್ಲು ಅರ್ಜುನ್‌ನನ್ನು ಭೇಟಿಯಾಗಲು ಇಲ್ಲಿದೆ ಸುವರ್ಣಾವಕಾಶ