Friday, 27th December 2024

Rahul Gandhi: ಭಾರತದ ಆರ್ಥಿಕತೆಗೆ ಹೊಸ ಚಿಂತನೆಯ ಅಗತ್ಯವಿದೆ; ಕೇಂದ್ರದ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

Rahul Gandhi

ಹೊಸದಿಲ್ಲಿ: ʼʼಭಾರತದ ಜಿಡಿಪಿ (Gross Domestic Product) 2 ವರ್ಷಗಳ ಕನಿಷ್ಠ ದರ ಶೇ. 5.4ಕ್ಕೆ ಕುಸಿದಿದೆʼʼ ಎಂದು ಲೋಕಸಭೆಯ ವಿಪಕ್ಷ ನಾಯಕ, ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ʼʼರೈತರು, ಕಾರ್ಮಿಕರು, ಮಧ್ಯಮ ವರ್ಗ ಮತ್ತು ಬಡವರು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದು, ಶತಕೋಟ್ಯಾಧಿಪತಿಗಳಿಗೆ ಮಾತ್ರ ಎಲ್ಲ ಸೌಲಭ್ಯ ದೊರೆಯುತ್ತಿದ್ದರೆ ಭಾರತೀಯ ಆರ್ಥಿಕತೆಯು ಪ್ರಗತಿ ಸಾಧಿಸಲು ಸಾಧ್ಯವಿಲ್ಲʼʼ ಎಂದು ಅವರು ಹೇಳಿದ್ದಾರೆ.

“ಭಾರತದ ಜಿಡಿಪಿ ಬೆಳವಣಿಗೆ ದರವು 2 ವರ್ಷಗಳಲ್ಲಿ ಕನಿಷ್ಠ ಶೇ. 5.4ಕ್ಕೆ ಇಳಿದಿದೆʼʼ ಎಂದು ಅವರು ಎಕ್ಸ್ (ಟ್ವಿಟರ್) ನಲ್ಲಿ ಬರೆದಿದ್ದಾರೆ. ಚಿಲ್ಲರೆ ಹಣದುಬ್ಬರವು ಶೇ. 6.21ಕ್ಕೆ ಏರಿದೆ. ಆಲೂಗಡ್ಡೆ ಮತ್ತು ಈರುಳ್ಳಿ ಬೆಲೆಗಳು ಸುಮಾರು ಶೇ. 50ರಷ್ಟು ಹೆಚ್ಚಾಗಿದೆ ಮತ್ತು ರೂಪಾಯಿ ಮೌಲ್ಯ 84.50ಕ್ಕೆ ಇಳಿದಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

“ಪರಿಸ್ಥಿತಿ ಎಷ್ಟು ವಿಕೋಪಕ್ಕೆ ತೆರಳಿದೆ ಎನ್ನುವುದನ್ನು ನೋಡಿ: ಚಿಲ್ಲರೆ ಹಣದುಬ್ಬರವು 14 ತಿಂಗಳ ಗರಿಷ್ಠ ಶೇ. 6.21ಕ್ಕೆ ಏರಿದೆ. ಕಳೆದ ವರ್ಷದ ಅಕ್ಟೋಬರ್‌ಗೆ ಹೋಲಿಸಿದರೆ ಈ ವರ್ಷ ಆಲೂಗಡ್ಡೆ ಮತ್ತು ಈರುಳ್ಳಿಯ ಬೆಲೆ ಸುಮಾರು ಶೇ. 50ರಷ್ಟು ಹೆಚ್ಚಾಗಿದೆ. ರೂಪಾಯಿ ತನ್ನ ಕನಿಷ್ಠ ಮಟ್ಟವಾದ 84.50ಕ್ಕೆ ತಲುಪಿದೆ. ನಿರುದ್ಯೋಗ ಮಟ್ಟವು ಈಗಾಗಲೇ 45 ವರ್ಷಗಳ ದಾಖಲೆಯನ್ನು ಮುರಿದಿದೆ” ಎಂದು ರಾಹುಲ್ ಹೇಳಿದ್ದಾರೆ.

ಕಳೆದ 5 ವರ್ಷಗಳಲ್ಲಿ ಕಾರ್ಮಿಕರು, ಉದ್ಯೋಗಿಗಳು ಮತ್ತು ಚಿಕ್ಕ ಉದ್ಯಮಿಗಳ ಆದಾಯ ಗಣನೀಯವಾಗಿ ಕುಸಿದಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಆದಾಯ ಕಡಿಮೆಯಾದ ಕಾರಣ ಬೇಡಿಕೆ ಕುಸಿದಿದೆ. 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಕಾರುಗಳ ಮಾರಾಟ 2018-19ರಲ್ಲಿ ಶೇ. 80ರಿಂದ 50ಕ್ಕಿಂತ ಕಡಿಮೆಯಾಗಿದೆ ಎಂದು ಅವರು ಹೇಳಿದ್ದಾರೆ.

“ಮನೆಗಳ ಮಾರಾಟ ಕಳೆದ ವರ್ಷ ಶೇ. 38ರಿಂದ ಸುಮಾರು ಶೇ. 22ಕ್ಕೆ ಇಳಿದಿದೆ. ಎಫ್‌ಎಂಸಿಜಿ (Fast-Moving Consumer Goods) ಉತ್ಪನ್ನಗಳಿಗೆ ಬೇಡಿಕೆ ಈಗಾಗಲೇ ಕುಸಿಯುತ್ತಿದೆ. ಕಳೆದ 10 ವರ್ಷಗಳಲ್ಲಿ ಕಾರ್ಪೊರೇಟ್ ತೆರಿಗೆಯ ಪಾಲು ಶೇ. 7ರಷ್ಟು ಕಡಿಮೆಯಾಗಿದೆ. ಆದರೆ ಆದಾಯ ತೆರಿಗೆ ಶೇ. 11ರಷ್ಟು ಹೆಚ್ಚಾಗಿದೆ. ಜಿಎಸ್‌ಟಿಯಿಂದಾಗಿ ಆರ್ಥಿಕತೆಯಲ್ಲಿ ಉತ್ಪಾದನೆಯ ಪಾಲು ಕೇವಲ ಶೇ. 13ಕ್ಕೆ ಇಳಿದಿದೆ. ಇದು 50 ವರ್ಷಗಳಲ್ಲೇ ಕನಿಷ್ಠ. ಇಂತಹ ಪರಿಸ್ಥಿತಿಯಲ್ಲಿ, ಹೊಸ ಉದ್ಯೋಗಾವಕಾಶಗಳು ಹೇಗೆ ಸೃಷ್ಟಿಯಾಗುತ್ತವೆ?” ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. “ಅದಕ್ಕಾಗಿಯೇ ಭಾರತದ ಆರ್ಥಿಕತೆಗೆ ಹೊಸ ಚಿಂತನೆಯ ಅಗತ್ಯವಿದೆ. ಆಗ ಮಾತ್ರ ನಮ್ಮ ಆರ್ಥಿಕತೆಯ ಚಕ್ರವು ಮುಂದುವರಿಯುತ್ತದೆ” ಎಂದು ಕಾಂಗ್ರೆಸ್ ನಾಯಕ ಅಭಿಪ್ರಾಯ ಪಟ್ಟಿದ್ದಾರೆ.

ಕಳೆದ ಜುಲೈ-ಸೆಪ್ಟೆಂಬರ್‌ ಅವಧಿಯ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ. 5.4ಕ್ಕೆ ಇಳಿಕೆಯಾಗಿದೆ ಎಂದು ನ್ಯಾಶನಲ್‌ ಸ್ಟಾಟಿಸ್ಟಿಕ್ಸ್‌ ಆಫೀಸ್‌ನ ವರದಿ ತಿಳಿಸಿದೆ. ಶೇ. 6.5ರ ಜಿಡಿಪಿಯನ್ನು ನಿರೀಕ್ಷಿಸಲಾಗಿತ್ತು. ಕಳೆದ ಏಪ್ರಿಲ್‌-ಜೂನ್‌ ಅವಧಿಯಲ್ಲಿ ಜಿಡಿಪಿ ಶೇ. 6.7ರಷ್ಟಿತ್ತು. 2023ರ ಜುಲೈ-ಸೆಪ್ಟೆಂಬರ್‌ನಲ್ಲಿ ಶೇ. 8.1ರಷ್ಟಿತ್ತು.

ಈ ಸುದ್ದಿಯನ್ನೂ ಓದಿ: New Rule: ನಕಲಿ ಒಟಿಪಿಗೆ ಬೀಳಲಿದೆ ತಡೆ, ಕ್ರೆಡಿಟ್‌ ಕಾರ್ಡ್‌ ಪಾಯಿಂಟ್‌ಗೆ ಕತ್ತರಿ; ಡಿಸೆಂಬರ್‌ನಲ್ಲಿ ಏನೆಲ್ಲ ಬದಲಾವಣೆ?