ಹಾಸನ: ಟಯರ್ ಸ್ಫೋಟಗೊಂಡಿದ್ದರಿಂದ ಪೊಲೀಸ್ ಜೀಪ್ ಪಲ್ಟಿಯಾಗಿ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಮೃತಪಟ್ಟಿರುವ ಘಟನೆ (IPS officer Dies) ಹಾಸನದಲ್ಲಿ ನಡೆದಿದೆ. ಮೃತ ಅಧಿಕಾರಿಯನ್ನು ಮಧ್ಯಪ್ರದೇಶ ಮೂಲದ ಹರ್ಷಬರ್ಧನ್ ಎಂದು ಗುರುತಿಸಲಾಗಿದೆ.
ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯಿಂದ (ಕೆಪಿಎ) ಹಾಸನ ಜಿಲ್ಲಾ ಎಸ್‌ಪಿ ಕಚೇರಿಯಲ್ಲಿ ವರದಿ ಮಾಡಿಕೊಳ್ಳಲು ಹರ್ಷವರ್ಧನ್ ಭಾನುವಾರ ಸಂಜೆ ಬರುತ್ತಿದ್ದ ವೇಳೆ ಕಿತ್ತಾನೆ ಗಡಿ ಭಾಗದಲ್ಲಿ ಅಪಘಾತ ಸಂಭವಿಸಿದೆ. ಹರ್ಷಬರ್ಧನ್ ಅವರು ಹಾಸನ ಜಿಲ್ಲೆಗೆ ನಿಯೋಜನೆಗೊಂಡಿದ್ದರು. ಹೊಳೆನರಸೀಪುರ ಕಡೆಯಿಂದ ಜೀಪ್‌ನಲ್ಲಿ ಹಾಸನ ನಗರಕ್ಕೆ ಬರುತ್ತಿದ್ದಾಗ, ಇನ್ನೇನು ಕೆಲವೇ ನಿಮಿಷಗಳಲ್ಲಿ ಹಾಸನ ತಲುಪಬೇಕು ಎನ್ನುವಷ್ಟರಲ್ಲಿ ಟಯರ್ ಸ್ಫೋಟಗೊಂಡು, ಜೀಪ್ ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ಪಲ್ಟಿಯಾಗಿದೆ.
ಪಲ್ಟಿಯಾದ ರಭಸಕ್ಕೆ ಜೀಪ್ ನಜ್ಜುಗುಜ್ಜಾಗಿದ್ದು, ಐಪಿಎಸ್ ಅಧಿಕಾರಿ ತಲೆಗೆ ತೀವ್ರ ಪೆಟ್ಟಾಗಿ, ರಕ್ತಸ್ರಾವವಾಗಿತ್ತು. ಅಪಘಾತದಲ್ಲಿ ಚಾಲಕ ಮಂಜೇಗೌಡ ಎಂಬವರಿಗೂ ಗಾಯಗಳಾಗಿವೆ. ಸ್ಥಳೀಯರು ಕೂಡಲೇ ಅಧಿಕಾರಿ ಮತ್ತು ಚಾಲಕನನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಐಪಿಎಸ್ ಅಧಿಕಾರಿ ಮೃತಪಟ್ಟಿದ್ದಾರೆ.
ಈ ಸುದ್ದಿಯನ್ನೂ ಓದಿ | Viral Video: ಟ್ರಕ್ ಏರಿ ಯುಪಿಯಿಂದ ಬಿಹಾರಕ್ಕೆ ಬಂದ ಬೃಹತ್ ಹೆಬ್ಬಾವು! ವಿಡಿಯೊ ನೋಡಿ
ಗೆಳೆಯನ ಜತೆ ಹೆಂಡತಿ, ನಾದಿನಿ ಸಲುಗೆ; ಪ್ರಶ್ನಿಸಿದ ಗಂಡನನ್ನು ಕಡಗದಿಂದ ಗುದ್ದಿ ಕೊಲೆ!
ಬೆಂಗಳೂರು: ಪತ್ನಿಯೊಂದಿಗೆ ಫೋನ್‌ನಲ್ಲಿ ಮಾತನಾಡುವುದನ್ನು ಪ್ರಶ್ನಿಸಿದ ಗಂಡನನ್ನು ಕಡಗದಿಂದ ಮನಸೋ ಇಚ್ಛೆ ಗುದ್ದಿ ಕೊಲೆಗೈದಿದ್ದ ಇಬ್ಬರು ಆರೋಪಿಗಳನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಭಿಷೇಕ್ (36) ಎಂಬಾತನ ಮೇಲೆ ಹಲ್ಲೆಗೈದು ಸಾವಿಗೆ ಕಾರಣರಾಗಿದ್ದ ಕಾರ್ತಿಕ್ (27, ಚೇತನ್ ಕುಮಾರ್ ಎನ್. ಜಿ (33) ಬಂಧಿತ ಆರೋಪಿಗಳು.
ಅಭಿಷೇಕ್ ಹಾಗೂ ಆತನ ಸಹೋದರ ಅವಿನಾಶ್, ಹಾಸನ ಜಿಲ್ಲೆಯ ಹಿರಿಸಾವೆ ಮೂಲದ ಸಹೋದರಿಯರನ್ನು ವಿವಾಹವಾಗಿದ್ದರು. ಇತ್ತೀಚೆಗೆ ಸಹೋದರಿಯರಿಬ್ಬರಿಗೂ ಪರಿಚಿತನಾಗಿದ್ದ ಆರೋಪಿ ಕಾರ್ತಿಕ್, ಮನೆಗೆ ಬರುವುದು, ಫೋನ್‌ನಲ್ಲಿ ಸದಾ ಮಾತನಾಡುವುದನ್ನು ಆರಂಭಿಸಿದ್ದ. ಆರು ತಿಂಗಳ ಹಿಂದೆ ಈ ವಿಚಾರ ತಿಳಿದ ಸಹೋದರರಿಬ್ಬರು ಬುದ್ಧಿವಾದ ಹೇಳಿದಾಗ ಇಬ್ಬರ ಪತ್ನಿಯರೂ ಪತಿಯರಿಂದ ದೂರವಾಗಿದ್ದರು.
ನವೆಂಬರ್ 27ರಂದು ರಾತ್ರಿ 8 ಗಂಟೆ ಸುಮಾರಿಗೆ ಬ್ಯಾಡರಹಳ್ಳಿಯ ಅನುಪಮಾ ಸ್ಕೂಲ್ ಬಳಿ ಆರೋಪಿ ಕಾರ್ತಿಕ್‌ನನ್ನು ಭೇಟಿಯಾಗಿದ್ದ ಅಭಿಷೇಕ್, ತನ್ನ ಹೆಂಡತಿ ಹಾಗೂ ಸಹೋದರನ ಪತ್ನಿಯೊಂದಿಗೆ ಸಲುಗೆ ಮುಂದುವರಿಸದಂತೆ ಕಾರ್ತಿಕ್‌ಗೆ ತಿಳಿಸಿದ್ದ. ಆ ಸಮಯದಲ್ಲಿ ಕಾರ್ತಿಕ್ ಜತೆಗಿದ್ದ ಪತ್ನಿ ಮತ್ತು ನಾದಿನಿ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿತ್ತು. ಆರೋಪಿ ಕಾರ್ತಿಕ್ ಹಾಗೂ ಆತನ ಸಹಚರ ಚೇತನ್ ಕುಮಾರ್, ಅಭಿಷೇಕ್ ಮೇಲೆ ಕೈ ಕಡಗದಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ವಿಷಯ ತಿಳಿದು ಗಲಾಟೆ ಬಿಡಿಸಲು ಹೋದ ಸಹೋದರ ಅವಿನಾಶ್ ಮೇಲೆಯೂ ಆರೋಪಿಗಳು ಹಲ್ಲೆ ಮಾಡಿದ್ದರು.
ಇಬ್ಬರ ಬಂಧನ
ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಅಭಿಷೇಕ್‌ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮುಂಜಾನೆ ಅಭಿಷೇಕ್ ಮೃತಪಟ್ಟಿದ್ದಾನೆ. ಆರೋಪಿಗಳ ವಿರುದ್ಧ ಸಹೋದರ ಅವಿನಾಶ್ ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಬ್ಯಾಡರಹಳ್ಳಿ ಠಾಣೆ ಪೊಲೀಸರು ಆರೋಪಿಗಳಾದ ಕಾರ್ತಿಕ್ ಹಾಗೂ ಚೇತನ್ ಕುಮಾರ್‌ನನ್ನು ಬಂಧಿಸಿರುವುದಾಗಿ ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Earthquake: ಪಶ್ಚಿಮಘಟ್ಟ ಪ್ರದೇಶದಲ್ಲಿ ಕಂಪಿಸಿದ ಭೂಮಿ; ಸ್ಥಳೀಯರಲ್ಲಿ ಆತಂಕ