Wednesday, 4th December 2024

CM Siddaramaiah: ಬಾಣಂತಿಯರ ಸಾವಿನ ತನಿಖೆಗೆ ತಜ್ಞರ ಸಮಿತಿ ನೇಮಕ

CM Siddaramaiah

ಬೆಂಗಳೂರು: ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ (Hospitals) ಸಂಭವಿಸಿದ ಬಾಣಂತಿಯರ ಸಾವಿನ (Postpartum death) ಪ್ರಕರಣಗಳ ತನಿಖೆಗೆ ತಜ್ಞರ ಸಮಿತಿಯನ್ನು ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ (CM Siddaramaiah) ಅವರು ತಿಳಿಸಿದ್ದಾರೆ.

ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಸಂಭವಿಸಿರುವ ಬಾಣಂತಿಯರ ಸಾವಿನ ಪ್ರಕರಣಗಳ ತನಿಖೆಗೆ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚಿಸಿ, ವಾರದೊಳಗೆ ವರದಿ ಪಡೆಯಲಾಗುವುದು. ಔಷಧ ನಿಯಂತ್ರಣ ಕಾಯ್ದೆಯನ್ನು ಇನ್ನಷ್ಟು ಬಿಗಿಗೊಳಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಕೂಡ ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ ನಾಲ್ವರು ಬಾಣಂತಿಯರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಬಾಣಂತಿಯರ ಕುಟುಂಬಕ್ಕೆ ರಾಜ್ಯ ಸರ್ಕಾರ ₹ 2 ಲಕ್ಷ ಪರಿಹಾರ ಘೋಷಿಸಿದೆ. ಅಲ್ಲದೇ, ಸಾವಿಗೆ ಕಾರಣವಾದ ಔಷಧ ಪೂರೈಸಿದ ಕಂಪನಿಯಿಂದಲೂ ಪರಿಹಾರ ವಸೂಲಿ ಮಾಡಿ, ಮೃತರ ಕುಟುಂಬಕ್ಕೆ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಏಡ್ಸ್‌ ಸೋಂಕು ಇಳಿಕೆ

ರಾಜ್ಯದಲ್ಲಿ ಏಡ್ಸ್ ನಿಯಂತ್ರಣಕ್ಕೆ ಬರುತ್ತಿದ್ದು, ಸೋಂಕಿತರ ಸಂಖ್ಯೆಯು ಇಳಿಕೆಯಾಗುತ್ತಿದೆ. 2014ರಲ್ಲಿ ಒಟ್ಟಾರೆ ತಪಾಸಣೆಯ ಶೇ.1.77 ರಷ್ಟು ಇದ್ದ ಸೋಂಕಿನ ಪ್ರಮಾಣ, 2024-25 ರಲ್ಲಿ ಶೇ.0.33 ರಷ್ಟು ಇಳಿಕೆಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.

ನಗರದ ದೇವರಾಜ ಅರಸು ಟ್ರಕ್‌ ಟರ್ಮಿನಲ್‌ನಲ್ಲಿ ನಡೆದ ವಿಶ್ವ ಏಡ್ಸ್ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಮನುಕುಲವನ್ನು ಕಾಡುತ್ತಿರುವ ಏಡ್ಸ್‌ ರೋಗದ ವಿರುದ್ಧ ಹೋರಾಡಲು ಮೊದಲ ಹೆಜ್ಜೆಯೇ ಜಾಗೃತಿ ಮೂಡಿಸುವುದಾಗಿದೆ. ಏಡ್ಸ್‌ ಬಗ್ಗೆ ತಿಳವಳಿಕೆ, ಶಿಕ್ಷಣ ನೀಡುವ ಜೊತೆಗೆ ಏಡ್ಸ್‌ ಬಾಧಿತರನ್ನು ದೂರವಿಡುವ ಅವೈಜ್ಞಾನಿಕ ಮಾದರಿಗಳನ್ನು ಬಿಡಬೇಕು ಎಂದರು.

ವೈದ್ಯಕೀಯ ಸಂಶೋಧನೆ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಹೆಚ್‌ಐವಿ ಎಂದರೆ ಭಯಪಡಬೇಕಿಲ್ಲ. ಏಡ್ಸ್‌ ರೋಗದ ಸಾವಿನ ಭಯದಿಂದ ಹೊರಬರಲು, ರೋಗವನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ಚಿಕಿತ್ಸೆಗಳಿವೆ. ರಾಜ್ಯದಲ್ಲಿ ಏಡ್ಸ್‌ ಹರಡುವಿಕೆ ನಿಯಂತ್ರಿಸುವುದು ಮತ್ತು ಸಾವಿನ ಪ್ರಮಾಣವನ್ನು ಶೂನ್ಯಕ್ಕೆ ತರುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ರಾಜ್ಯದಲ್ಲಿ ಹೆಚ್‌ಐವಿ ವೈರಸ್‌ ಪರೀಕ್ಷೆಗಳು ಹೆಚ್ಚೆಚ್ಚು ನಡೆಯುತ್ತಿದ್ದು, ರೋಗ ಹರಡುವಿಕೆ ಮತ್ತು ಸಾವಿನ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ರಾಜ್ಯ ಸರ್ಕಾರವು ಹೆಚ್‌ಐವಿ ಸಂತ್ರಸ್ತರಿಗೆ ಎಲ್ಲಾ ರೀತಿಯ ನೆರವು ನೀಡುತ್ತಿದೆ. ಮುಂಜಾಗ್ರತ ಕ್ರಮಗಳು, ಔಷಧಿಗಳ ಸರಬರಾಜಿನಲ್ಲಿ ಯಾವುದೇ ರಾಜಿಯಿಲ್ಲದೆ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಎಳನೀರು ಆರೋಗ್ಯಕ್ಕೆ ಹಾನಿಕಾರಕವೇ ?